ಫ್ಯಾಕ್ಟ್‌ವೆಕ್: ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ರಸ್ತೆಗಳೆಲ್ಲಾ ಬೀಚ್‌ಗಳಂತಾಗಿದೆ ಎಂದು ಹಳೆಯ ವಿಡಿಯೋ ಹಂಚಿಕೆ
ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ರಸ್ತೆಗಳೆಲ್ಲಾ ಬೀಚ್‌ಗಳಂತಾಗಿದೆ ಎಂದು ಹಳೆಯ ವಿಡಿಯೋ ಹಂಚಿಕೆ
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ಚಂಡಮಾರುತ ಉಂಟಾಗಿರುವ ಹಿನ್ನೆಲೆ ರಾಜ್ಯದಲ್ಲಿಯೂ ಭೀತಿ ಎದುರಾಗಿದೆ. ಕಳೆದ ಒಂದು ವಾರದಿಂದ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳು ಜಲಾವೃತವಾಗಿದೆ. ಸಂಚಾರ ಅಸ್ತವ್ಯಸ್ತವಾಗಿದೆ. ಸಾಕಷ್ಟು ಪ್ರದೇಶಗಳು ಜಲಾವೃತಗೊಂಡಿರುವುದರಿಂದ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಸಂತ್ರಸ್ತರ ರಕ್ಷಣೆಗಿಳಿದಿದೆ. ಜನರನ್ನು ಸ್ಥಳಾಂತರಿಸಲು ದೋಣಿಗಳನ್ನು ಬಳಸುವ ಪರಿಸ್ಥತಿ ಎದುರಾಗಿದೆ. ಬೆಂಗಳೂರು ನಗರದಲ್ಲಿ ಆರೆಂಜ್ ಅಲರ್ಟ್‌ನ್ನು ಘೋಷಿಸಿರುವ ಬೆನ್ನಲೆ ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರಿನ ರಸ್ತೆಗಳು ಬೀಬ್‌ಗಳಂತಾಗಿವೆ ಎಂಬ ಸುದ್ದಿ ಹರಿದಾಡುತ್ತಿದೆ.
ಅಕ್ಟೋಬರ್ 17,2024ರಂದು ʼಹರಿ ಮೋದಿ ಕಾ ಪರಿವಾರ್ʼ ಎಂಬ ಎಕ್ಸ್ ಖಾತೆಯಲ್ಲಿ "ಬೆಂಗಳೂರಿನ ಮೊಟ್ಟಮೊದಲ ಬೀಚ್ ಉದ್ಘಾಟನೆಗೊಂಡಿದೆ. ಬೆಂಗಳೂರಿನ ಪ್ರಜೆಗಳು ಈ ರಮಣೀಯ ಬೀಚಿಗೆ ಭೇಟಿ ನೀಡಬೇಕಾಗಿ ಸವಿನಯ ವಿನಂತಿ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಅಕ್ಟೋಬರ್ 22,2024ರಂದು ʼಸುದ್ದಿ ಟೈಮ್ಸ್ʼ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ʼಬ್ರಾಂಡ್ ಬೆಂಗಳೂರು ಅಲ್ಲ ಬ್ಯಾಡ್ ಬೆಂಗಳೂರು #banglore #rain #bbmp" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮಳೆಯಿಂದಾಗಿ ರಸ್ತೆಗಳೆಲ್ಲಾ ಕೆರೆಗಳಂತಾಗಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ
ʼಇಲ್ಲಿ ನೋಡಿ ಬೆಂಗಳೂರಿನ ಬೀಚ್ʼ, ʼಬ್ರಾಂಡ್ ಬೆಂಗಳೂರುʼ,ʼಬನ್ನಿ ಫ್ರೆಂಡ್ಸ್ ಬೆಂಗಳೂರು ಬೀಚ್ ನೋಡಿಕೊಂಡು ಬರೋಣʼ ಎಂಬ ವಿವಿಧ ಶೀರ್ಷಿಕೆಯೊಂದಿಗೆ ಸಾಕಷ್ಟು ಸಾಮಾಜಿಕ ಮಾಧ್ಯಮದ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಇತ್ತೀಚಿಗೆ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಸಂಬಂಧಿಸಿದಲ್ಲ, ಈ ವಿಡಿಯೋ 2022ರದ್ದು.
ವೈರಲ್ ಆದ ವಿಡಿಯೋಗೆ ಸಂಬಂಧಿಸಿದ ಕೆಲವು ಕೀವರ್ಡ್‌ಗಳನ್ನು ಉಪಯೋಗಿಸಿ ಗೂಗಲ್‌ನಲ್ಲಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಈ ಸುದ್ದಿಗೆ ಸಂಬಂಧಿಸಿದ ಯಾವುದೇ ಅಧಿಕೃತ ಮಾಹಿತಿ ಅಥವಾ ವರದಿಗಳು ಲಭ್ಯವಾಗಿಲ್ಲ. ನಂತರ ನಾವು ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ವೈರಲ್ ಆದ ವಿಡಿಯೋವಿನಲ್ಲಿರುವ ಕೆಲವು ಕೀಫ್ರೇಮ್‌ಗಳನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್‌ನಲ್ಲಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಸೆಪ್ಟಂಬರ್ 5, 2022ರಂದು ʼಲಕ್ಷ್ಮೀ ಪ್ರಸನ್ನ ಚಾನೆಲ್ʼ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ "Bellandur ORR after yesterday's rainfall - Bangalore Situation after Rain" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಸೆಪ್ಟಂಬರ್ 5,2022 ರಂದು ʼಸನ್ ಟಿವಿʼ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ "இது பெங்களூரு நகரமா? அல்லது கடலா? - சாலையில் எழும்பிய பெரிய அலையால் தடுமாறிய இருசக்கர வாகன ஓட்டிகள்" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದೆವು. "ಇದು ಬೆಂಗಳೂರು ನಗರವೋ ಅಥವಾ ಕೆರೆಯೋ? ಬೆಂಗಳೂರಿನ ಬೆಳ್ಳಂದೂರಿನಲ್ಲಿ ಜಲಾವೃತ, ರಸ್ತೆಯಲ್ಲಿ ಅಲೆಗಳನ್ನು ನೋಡಬಹುದು" ಎಂದು ಪೋಸ್ಟ್ ಮಾಡಿದ್ದಾರೆ.
ಇಂಡಿಯಾ.ಕಾಂ ವೆಬ್‌ಸೈಟ್‌ನಲ್ಲೂ ಸೆಪ್ಟಂಬರ್ 2022ರಂದು "Bengaluru Rains: Downpour Drowns India's Silicon Valley | 10 Must See Photos Here" ಎಂಬ ಶೀರ್ಷಿಕೆಯೊಂದಿಗೆ ಬೆಂಗಳೂರು ಮಳೆಗೆ ಸಂಬಂಧಿಸಿದ ಕೆಲವು ಚಿತ್ರಗಳನ್ನು ಹಂಚಿಕೊಂಡಿರುವುದನ್ನು ನಾವು ನೋಡಬಹುದು.
ಕನ್ನಡ ಮಾಧ್ಯಮ ಸಂಸ್ಥೆಗಳಲ್ಲಿ ಒಂದಾದ ಸುವರ್ಣ ನ್ಯೂಸ್ ಯೂಟ್ಯೂಬ್ ಚಾನೆಲ್‌ನಲ್ಲಿ "ಬೆಳ್ಳಂದೂರಿನಲ್ಲಿ ಉಕ್ಕಿ ಹರಿಯುತ್ತಿರುವ ಪ್ರವಾಹ; ಡ್ರೋಣ್ ಕಣ್ಣಲ್ಲಿ ಇಕೋ ಸ್ಪೇಸ್ ಮುಳುಗಡೆ ದೃಶ್ಯ" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ವರದಿಯಲ್ಲಿ 24 ವರ್ಷಗಳ ನಂತರ ಬೆಂಗಳೂರಿನಲ್ಲಿ ಧಾರಾಕಾರವಾದ ಮಳೆಯಾಗಿದೆ. ಬೆಂಗಳೂರಿನ ಬೆಳ್ಳಂದೂರಿನಲ್ಲಿ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ಪ್ರವಾಹದಂತೆ ಉಕ್ಕಿ ಹರಿಯುತ್ತಿದೆ ಎಂದು ವರದಿಯಾಗಿದೆ.
ವಿಸ್ತಾರ ನ್ಯೂಸ್ ವೆಬ್‌ಸೈಟ್‌ನಲ್ಲಿ "ಬಿಗಡಾಯಿಸಿದ ಬೆಳ್ಳಂದೂರು, ಮುಳುಗಿದ ರಸ್ತೆಗಳು, ಶಾಲೆಗಳಿಗೆ ರಜೆ" ಎಂಬ ಹೆಡ್‌ಲೈನ್‌ನೊಂದಿಗೆ ವರದಿಯಾಗಿದೆ. ವರದಿಯಲ್ಲಿ "ರಾಜಧಾನಿಯ ಜನಜೀವನವನ್ನು ಮಹಾಮಳೆ ದುರ್ಭರಗೊಳಿಸಿದೆ. ಬೆಳ್ಳದೂರು ಕೆರೆ ಕೋಡಿ ಒಡೆದು ಹರಿಯುತ್ತಿದ್ದು, ಸುತ್ತಮುತ್ತಲಿನ ಲೇಔಟ್‌ಗಳು ಜಲದಿಗ್ಬಂಧನಕ್ಕೆ ಒಳಗಾಗಿವೆ. ಸರ್ಜಾಪುರ ರಸ್ತೆ ಮುಳುಗಡೆಯಾಗಿ ಟ್ರಾಫಿಕ್ ನಿಲುಗಡೆ ಸ್ಥಿತಿಗೆ ಬಂದಿದ್ದು, ಹಲವಾರು ಕಡೆ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬೆಳ್ಳಂದೂರು ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದೆ. ಬೆಳ್ಳಂದೂರು ಇಕೋ ಸ್ಪೇಸ್ ಬಳಿ ಪರಿಸ್ಥಿತಿ ಮತ್ತಷ್ಟು ಭಯಾನಕವಾಗಿದ್ದು, ಪ್ರತಿ ಗಂಟೆಗೂ ನೀರಿನ ಮಟ್ಟ ಏರುತ್ತಿದೆ. ಸುತ್ತಲಿನ ಕೆರೆ ನೀರು ಕೋಡಿ ಒಡೆದು ನೀರು ಹೊರಗೆ ಸುರಿಯುತ್ತಿದೆ. ಎಂದು ವರದಿಯಾಗಿರುವುದನ್ನು ನೋಡಬಹುದು
ಹೀಗಾಗಿ ವೈರಲ್ ಆದ ವಿಡಿಯೋ ಇತ್ತೀಚಿಗೆ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಸಂಬಂಧಿಸಿದಲ್ಲ. ವೈರಲ್ ಆದ ವಿಡಿಯೋ ಸೆಪ್ಟಂಬರ್, 2022ರಲ್ಲಿ ಬೆಂಗಳೂರಿನ ಬೆಳ್ಳಂದೂರು ಭಾಗದಲ್ಲಿ ಸುರಿದ ಮಳೆಗೆ ಸಂಬಂಧಿಸಿದ್ದು ಎಂದು ಸಾಭೀತಾಗಿದೆ.