ಫ್ಯಾಕ್ಟ್‌ಚೆಕ್: ಕರ್ನಾಟಕ ಸರ್ಕಾರ ನ್ಯಾಯಬೆಲೆ ಅಂಗಡಿಯಲ್ಲಿ ಗ್ರಾಹಕರಿಗೆ ಪ್ಲಾಸ್ಟಿಕ್ ಅಕ್ಕಿ ನೀಡುತ್ತಿದೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ
ಕರ್ನಾಟಕ ಸರ್ಕಾರ ನ್ಯಾಯಬೆಲೆ ಅಂಗಡಿಯಲ್ಲಿ ಗ್ರಾಹಕರಿಗೆ ಪ್ಲಾಸ್ಟಿಕ್ ಅಕ್ಕಿ ನೀಡುತ್ತಿದೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ
ಆಹಾರದಲ್ಲಿ ಕಲಬೆರಕೆ ಹಾವಳಿ ಹೆಚ್ಚಾಗಿದ್ದು, ಗುಣಮಟ್ಟದ ಪದಾರ್ಥಗಳಿಗಾಗಿ ಜನರು ಹುಡುಕಾಟ ನಡೆಸಬೇಕಾದ ಸ್ಥಿತಿ ಎದುರಾಗಿದೆ. ಮಾರ್ಕೆಟ್‌ನಲ್ಲಿ ಪ್ಲಾಸ್ಟಿಕ್ ಅಕ್ಕಿ , ಕಲಬೆರಕೆ ಆಹಾರ ಇವುಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ ಮಾರ್ಕೆಟ್‌ನಲ್ಲಿ ಸಿಗುವ ಆಹಾರಗಳು ನಕಲಿಯೋ, ಅಸಲಿಯೋ ಎಂದು ಕಂಡು ಹಿಡಿಯೋದು ನಮ್ಮ ಮುಂದಿರುವ ದೊಡ್ಡ ಸವಾಲು.
ಇತ್ತೀಚಿಗೆ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಸಿಮೆಂಟ್‌ನಲ್ಲಿ ಮಾಡಿದ ನಕಲಿ ಬೆಳ್ಳುಳ್ಳಿ ಸದ್ದು ಮಾಡಿತ್ತು. ಬೆಳ್ಳುಳ್ಳಿಯಿಂದ ಲಾಭ ಪಡೆಯಲು ಕೆಲವರು ನಕಲಿ ಬೆಳ್ಳುಳ್ಳಿ ಮಾರಾಟ ಮಾಡಿ ಸಿಕ್ಕಿ ಬಿದ್ದಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿತ್ತು. ಈ ಪೈಕಿ ಬಿಪಿಎಲ್ ಕಾರ್ಡ್‌ದಾರರಿಗೆ ಪ್ರತಿ ವ್ಯಕ್ತಿಗೆ ಹತ್ತು ಕೆ.ಜಿ. ಅಕ್ಕಿ ಉಚಿತವಾಗಿ ವಿತರಿಸುವ ಅನ್ನಭಾಗ್ಯ ಯೋಜನೆಯೂ ಒಂದು. ಆದರೆ, ಇತ್ತೀಚೆಗೆ ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗುತ್ತಿರುವ ಅಕ್ಕಿ ಬಗ್ಗೆ ಕೆಲವರು ಆತಂಕ ವ್ಯಕ್ತಪಡಿಸಿದ್ದರು. ಅದೇನಂದ್ರೆ, ರೇಷನ್ ಅಂಗಡಿಗಳಲ್ಲಿ ವಿತರಿಸಲಾಗುತ್ತಿರುವ ಅಕ್ಕಿಯು ಸಾಮಾನ್ಯ ಅಕ್ಕಿಯಂತೆ ನೀರಿನಲ್ಲಿ ಮುಳುಗದೆ, ತೇಲುತ್ತಿದೆ. ಇದು ಪ್ಲಾಸ್ಟಿಕ್ ಅಕ್ಕಿ ಇರಬಹಹುದು ಎಂದು ಹಲವರು ಪಡಿತರ ಅಕ್ಕಿಯನ್ನು ತಿನ್ನುವುದಕ್ಕೂ ಭಯ ಪಟ್ಟಿರುವ ಘಟನೆಗಳು ನಡೆದಿವೆ. ಇದರ ನಡುವೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಪ್ಲಾಸ್ಟಿಕ್ ಅಕ್ಕಿಯ ಬಗ್ಗೆ ವಿಡಿಯೋವೊಂದು ಹರಿದಾಡುತ್ತಿದೆ.
ಸಂಪೂರ್ಣ ವಾರ್ತೆ ಎಂಬ ಯೂಟ್ಯೂಬ್ ಖಾತೆದಾರ ಆಗಸ್ಟ್ 14,2024ರಂದು "ಬಂತೋ ಬಂತೋ plastic Rice ನಮ್ಮ್ ಮನೆಗೆ ಎಚ್ಚರ ವಹಿಸಿ ! ಕ್ಯಾನ್ಸರ ಪಕ್ಕಾ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋವಿನಲ್ಲಿ ಕರ್ನಾಟಕ ಸರ್ಕಾರ ಪ್ಲಾಸ್ಟಿಕ್ ಅಕ್ಕಿಯನ್ನ ವಿತರಿಸುತ್ತಿದೆ, ಈ ಆಹಾರವನ್ನು ತಿನ್ನುವ ಮೊದಲು ಎಚ್ಚರವಹಿಸಿ. ಭ್ರಷ್ಟ ಅಧಿಕಾರಿಗಳು ಬಡವರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಹೇಳುವುದನ್ನು ನಾವು ಈ ವಿಡಿಯೋವಿನಲ್ಲಿ ನೋಡಬಹುದು.
ಈ ವಿಡಿಯೋವಿಗೆ ಕ್ಯಾಪ್ಷನ್ ಆಗಿ "ವೀಕ್ಷರೇ ಇವತ್ತು ಪ್ಲಾಸ್ಟಿಕ್ ಅಕ್ಕಿಯಿಂದ ಆದ ಅನುಭವ ನಮಗಾದ ಅನುಭವ ನಿಮ್ಮ ಮುಂದೆ ನೋಡಿ ಅತೀ ಹೆಚ್ಚು ಜನರಿಗೆ ತಲುಪಿಸಿ. ಈ ರೀತಿ ನಿಮಗೂ ಅನುಭವ ಅಗಿದೇನ ಹಾಗಿದ್ದಲ್ಲಿ ನಮ್ಮ್ ಜೊತೆಗೆ ನಿಮ್ಮ ಅನಿಸಿಕೆ ಹಂಚಿಕೊಳ್ಳಿ 9611129411 ಎಂದು ದೂರವಾಣಿ ಸಂಖ್ಯೆಯೊಂದನ್ನು ನೀಡಿದ್ದಾರೆ.
ಇದೇ ವಿಡಿಯೋವನ್ನು ವಾಟ್ಸಾಪ್ ಬಳಕೆದಾರರೂ ಸಹ ತಮ್ಮ ವಾಟ್ಸಾಪ್ ಗುಂಪುಗಳಲ್ಲಿ " ಪಡಿತರ ವ್ಯವಸ್ಥೆಯಲ್ಲಿ ವಿತರಿಸಲಾಗುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿದೆ" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಕರ್ನಾಟಕ ಸರ್ಕಾರ ವಿತರಿಸಿದ ಅಕ್ಕಿಯಲ್ಲಿ, ಅಕ್ಕಿಯಂತೆ ದಪ್ಪವಾಗಿ ಕಾಣುವ ಅಕ್ಕಿ ಪ್ಲಾಸ್ಟಿಕ್ ಅಕ್ಕಿಯಲ್ಲಿ. ಆ ಅಕ್ಕಿ ಸಾರವರ್ಧಿತ ಅಕ್ಕಿ ಕಾಳುಗಳು.
ಸಾರವರ್ಧಿಕ ಅಕ್ಕಿ (fortified kernels) ಎಂದರೇನು?
ಎಫ್‌ಎಸ್‌ಎಸ್‌ಎಐ ಸೂಚಿಸಿದ ಮಾನದಂಡಗಳ ಪ್ರಕಾರ, ಕಟಾವು ಮಾಡಿ ಸಿದ್ದಪಡಿಸಿರುವ ಸಾಮಾನ್ಯ ಅಕ್ಕಿಯನ್ನು ಪುಡಿ ಮಾಡಿ ಅದಕ್ಕೆ ಕಬ್ಬಿಣ, ವಿಟಮಿನ್ ಮತ್ತು ಫೋಲಿಕ್ ಆಮ್ಲ ಸೇರಿಸುವ ಮೂಲಕ ಬಲವರ್ಧಿತ ಅಕ್ಕಿ ಕಾಳುಗಳನ್ನು ತಯಾರಿಸಲಾಗುತ್ತದೆ. ಈ ರೀತಿ ತಯಾರಿಸಿದ ಸಾರವರ್ಧಿತ ಅಕ್ಕಿಯನ್ನು ಪ್ರತಿ 100 ಕೆಜಿಗೆ 1 ಕೆಜಿಯಂತೆ ಸೇರಿಸಲಾಗುತ್ತದೆ. ಇದರಲ್ಲಿ ಕಬ್ಬಿಣ, ವಿಟಮಿನ್ ಮತ್ತು ಫೋಲಿಕ್ ಆಮ್ಲದಂತಹ ಸೂಕ್ಷ್ಮ ಪೋಷಕಾಂಶಗಳು ಸಮೃದ್ಧವಾಗಿವೆ. ಕಬ್ಬಿಣ ರಕ್ತಹೀನತೆಯನ್ನು ತಡೆಗಟ್ಟುವಲ್ಲಿ ಸಹಕಾರಿಯಾದರೆ, ಫೋಲಿಕ್ ಆಮ್ಲ ರಕ್ತವನ್ನು ಉತ್ಪಾದಿಸಲು ನೆರವಾಗುತ್ತದೆ. ವಿಟಮಿನ್ ಬಿ-12 ನರಮಂಡಲದ ನಿರ್ವಹಣೆಗೆ ಸಹಕಾರಿಯಾಗಿದೆ.
ವೈರಲ್ ಅದ ಸುದ್ದಿಯಲ್ಲಿನ ಸತ್ಯಾಂಶವನ್ನು ತಿಳಿಯಲು ನಾವು ಕೆಲವು ಕೀವರ್ಡ್‌ಗಳ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಆಗಸ್ಟ್ 26,2024ರಂದು ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ DIPR Karnataka ಫೇಸ್‌ಬುಕ್ ಖಾತೆಯಲ್ಲಿ ಸಾರವರ್ಧಿತ ಅಕ್ಕಿಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು. ಹಂಚಿಕೊಂಡಿರುವ ಫೋಟೋದೊಂದಿಗೆ ಶೀರ್ಷಿಕೆಯಾಗಿ ಅನ್ನಭಾಗ್ಯದ ಪಡಿತರ ಅಕ್ಕಿಯಲ್ಲಿ ಸ್ವಲ್ಪ ಪ್ರಮಾಣದ ಅಕ್ಕಿ ನೀರಿನಲ್ಲಿ ಮುಳುಗದೆ ನೀರಿನಲ್ಲಿ ತೇಲುತ್ತಿರುವುದನ್ನು ಕಂಡು ಅದು ಪ್ಲಾಸ್ಟಿಕ್ ಅಕ್ಕಿ ಎಂದು ಜನ ಗೊಂದಲಕ್ಕೆ ಈಡಾಗಿರುವುದು ವರದಿಯಾಗಿದೆ. ಆದರೆ ಇದು ಆತಂಕ ಪಡುವ ಸಂಗತಿಯಲ್ಲ.
ನಿಮ್ಮ ಮನೆಗೆ ತಂದ ಅನ್ನಭಾಗ್ಯದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿಯಂತಹ ಕಾಳುಗಳು ಇದ್ದಲ್ಲಿ ಆತಂಕ ಪಡದಿರಿ ಮತ್ತು ಅದನ್ನು ಎಸೆಯದಿರಿ. ಏಕೆಂದರೆ ಅದು ಪ್ಲಾಸ್ಟಿಕ್ ಅಕ್ಕಿಯಲ್ಲ, ನಿಮ್ಮ ಆರೋಗ್ಯವನ್ನು ಉತ್ತಮವಾಗಿಸುವ ಪೌಷ್ಠಿಕಾಂಶವುಳ್ಳ ಸಾರವರ್ಧಿತ ಅಕ್ಕಿ.
ಕೇಂದ್ರ ಸರ್ಕಾರದ ಸಚಿವಾಲಯದ ಮಾರ್ಗಸೂಚಿಯಂತೆ ಪ್ರತಿ 1 ಕೆ.ಜಿ. ಅಕ್ಕಿಗೆ 10 ಗ್ರಾಂ. ನಷ್ಟು ಸಾರವರ್ಧಿತ ಅಕ್ಕಿಯನ್ನು ಬೆರೆಸಲಾಗುತ್ತದೆ. ಇದು ವ್ಯಕ್ತಿಯ ಆರೋಗ್ಯಕ್ಕೆ ಅಗತ್ಯವಾದ ಜೀವಸತ್ವಗಳು, ಸೂಕ್ಷ್ಮ ಪೋಷಕಾಂಶಗಳಾದ ಕಬ್ಬಿಣಾಂಶ, ಫೋಲಿಕ್ ಆಮ್ಲ ಮತ್ತು ವಿಟಮಿನ್ ಬಿ ಯನ್ನು ಒದಗಿಸುತ್ತದೆ.
ಈ ಸಾರವರ್ಧಿತ ಅಕ್ಕಿಯು ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸುತ್ತದೆ ಮತ್ತು ರಕ್ತಹೀನತೆ, ಅಪೌಷ್ಟಿಕತೆಯನ್ನು ಹೋಗಲಾಡಿಸುತ್ತದೆ. ಪ್ರಯೋಗಾಲಯದಿಂದ ಪರೀಕ್ಷೆಗೆ ಒಳಪಟ್ಟ ಸಾರವರ್ಧಿತ ಅಕ್ಕಿಯನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಬಳಕೆಗೆ ಯೋಗ್ಯವಾದ ಪೌಷ್ಠಿಕಾಂಶಭರಿತವಾದ ಅಕ್ಕಿ ಎಂದು ಪರಿಗಣಿಸಲಾಗಿರುತ್ತದೆ ಎಂದು ಬರೆದು ಹಂಚಿಕೊಂಡಿದ್ದಾರೆ
ಮತ್ತಷ್ಟು ಮಾಹಿತಿಗಾಗಿ ಹುಡುಕಾಡಿದಾಗ ನಮಗೆ ಸಾರವರ್ಧಿತ ಅಕ್ಕಿಯ ಬಗ್ಗೆ ಕನ್ನಡ ಮಾಧ್ಯಮ ಸಂಸ್ಥೆಗಳು ಮಾಡಿರುವಂತಹ ಕೆಲವು ವರದಿಗಳು ಕಂಡುಬಂದವು. ಒನ್ ಇಂಡಿಯಾ ಕನ್ನಡ ಎಂಬ ವೆಬ್‌ಸೈಟ್‌ನಲ್ಲಿ ವರದಿಯಲ್ಲಿ ʼನಿಮ್ಮ ಮನೆಗೆ ತಂದ ಅನ್ನಭಾಗ್ಯದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿಯಂತಹ ಕಾಳುಗಳು ಇದ್ದಲ್ಲಿ ಆತಂಕ ಪಡದಿರಿ ಮತ್ತು ಅದನ್ನು ಎಸೆಯದಿರಿ. ಏಕೆಂದರೆ ಅದು ಪ್ಲಾಸ್ಟಿಕ್ ಅಕ್ಕಿಯಲ್ಲ, ನಿಮ್ಮ ಆರೋಗ್ಯವನ್ನು ಉತ್ತಮವಾಗಿಸುವ ಪೌಷ್ಠಿಕಾಂಶವುಳ್ಳ ಸಾರವರ್ಧಿತ ಅಕ್ಕಿʼ ಎಂದು ಗೊಂದಲಗಳಿಗೆ ತೆರೆ ಎಳೆದಿರುವುದನ್ನು ನಾವು ವರದಿಯಲ್ಲಿ ನೋಡಬಹುದು.
ವಿಜಯ ಟೈಮ್ಸ್‌ನಲ್ಲಿ ಜುಲೈ 30,2023 ರಂದು "It's not plastic rice, it's nutritious, enriched grains! | ಅದು ಪ್ಲಾಸ್ಟಿಕ್ ಅಕ್ಕಿ ಅಲ್ಲ!" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ನೋಡಬಹುದು
ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೋದಲ್ಲಿ ಕಾಣಿಸುವ ಹಾಗೆ, ಕರ್ನಾಟಕ ಸರ್ಕಾರ ವಿತರಿಸಿದ ಅಕ್ಕಿಯಲ್ಲಿ, ಅಕ್ಕಿಯಂತೆ ದಪ್ಪವಾಗಿ ಕಾಣುವ ಅಕ್ಕಿ ಪ್ಲಾಸ್ಟಿಕ್ ಅಕ್ಕಿಯಲ್ಲಿ. ಆ ಅಕ್ಕಿ ಸಾರವರ್ಧಿತ ಅಕ್ಕಿ ಕಾಳುಗಳು.