ಫ್ಯಾಕ್ಟ್‌ಚೆಕ್: ವ್ಯಕ್ತಿಯೊಬ್ಬ ತನ್ನ ಬೆರಳನ್ನು ಕತ್ತರಿಸಿಕೊಳ್ಳುತ್ತಿರುವ ದೃಶ್ಯ ಕಂಡುಬಂದಿದ್ದು ಕರ್ನಾಟಕದಲ್ಲಿಯಲ್ಲ ಬದಲಿಗೆ ಮಹಾರಾಷ್ಟ್ರದಲ್ಲಿ
ವ್ಯಕ್ತಿಯೊಬ್ಬ ತನ್ನ ಬೆರಳನ್ನು ಕತ್ತರಿಸಿಕೊಳ್ಳುತ್ತಿರುವ ದೃಶ್ಯ ಕಂಡುಬಂದಿದ್ದು ಕರ್ನಾಟಕದಲ್ಲಿಯಲ್ಲ ಬದಲಿಗೆ ಮಹಾರಾಷ್ಟ್ರದಲ್ಲಿ
ಕಾಂಗ್ರೇಸ್ ಪಕ್ಷಕ್ಕೆ ಮತಚಲಾಯಿಸಿ ದೊಡ್ಡ ತಪ್ಪು ಮಾಡಿದ್ದೇನೆ ಎಂಬ ಕಾರಣಕ್ಕೆ ಕರ್ನಾಟಕದಲ್ಲಿನ ವ್ಯಕ್ತಿಯೊಬ್ಬ ತನ್ನ ಬೆರಳನ್ನು ಕತ್ತರಿಸಿಕೊಂಡದ್ದಾನೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕರ್ನಾಟಕದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನೋಡಿ ಕೋಪಗೊಂಡ ವ್ಯಕ್ತಿ ಏನು ಮಾಡಿದ್ದಾನೆ ನೀವೇ ನೋಡಿ "ವೀಡಿಯೋವನ್ನು ನೋಡಿದರೆ ನಿಮಗೆ ನಡಕ ಶುರುವಾಗುತ್ತದೆ. ಬಿಟ್ಟಿ ಆಮೀಶಗಳಿಗೆ ಆಶಿಸಿ ಬಿಜೆಪಿಗೆ ಮತಚಲಾಯಿಸದೆ ಕಾಂಗ್ರೇಸ್‌ಗೆ ಮತ ಹಾಕಿದ್ದೇನೆ. ಇದು ನನ್ನ ಜೀವನದಲ್ಲಿ ನಾನು ಮಾಡಿರುವಂತಹ ದೊಡ್ಡ ತಪ್ಪು. ಆದ್ದರಿಂದ, ನಾನು ನನ್ನ ಬೆರಳನ್ನೇ ಕತ್ತರಿಸಿ ಕೊಳ್ಳುತ್ತಿದ್ದೇನೆ" ಎಂಬ ಶೀರ್ಷಿಕೆಯನ್ನೊಳಗೊಂಡ ವೀಡಿಯೋವೊಂದು ಇದೀಗ ವೈರಲ್ ಆಗಿದೆ.
ಫ್ಯಾಕ್ಟ್ ಚೆಕ್
ವೈರಲ್ ಆದ ವೀಡಿಯೋ ಅಥವಾ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಕೈ ಬೆರಳನ್ನು ಕಡಿದುಕೊಳ್ಳುತ್ತಿರುವ ವ್ಯಕ್ತಿ ಮೂಲತಃ ಮಹಾರಾಷ್ಟ್ರದವರು. ಕೈ ಬೆರಳನ್ನು ಕಡಿದುಕೊಳ್ಳುತ್ತಿರುವ ವ್ಯಕ್ತಿಯ ಸಹೋದರ ಮತ್ತು ಸಹೋದರನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರಿಂದ ಯಾವುದೇ ಸಕಾರಾತ್ಮಕವಾದ ಪ್ರತಿಕ್ರಿಯೆ ಸಿಗದ ಕಾರಣ ಆತ ಪೊಲೀಸರ ವರ್ತನೆಯನ್ನು ವಿರೋಧಿಸಿ ವ್ಯಕ್ತಿಯೊಬ್ಬರು ತಮ್ಮ ಬೆರಳನ್ನು ಕತ್ತರಿಸಿಕೊಂಡಿದ್ದಾರೆ.
ವೀಡಿಯೋವನ್ನು ಕೂಲಂಕುಷವಾಗಿ ಗಮನಿಸಿದರೆ ಆ ವ್ಯಕ್ತಿ ಮರಾಠಿಯಲ್ಲಿ ಮಾತನಾಡುತ್ತಿದ್ದನ್ನು ನೋಡಬಹುದು. ಕನ್ನಡದಲ್ಲಿ ಆತ ಮಾತನಾಡುತ್ತಿಲ್ಲ.
ವೀಡಿಯೋವಿನಲ್ಲಿ ಬರುವ ಪ್ರಮುಖ ಪ್ರೇಮ್‌ಗಳನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ ನಮಗೆ ತಿಳಿದು ಬಂದಿದ್ದು, ಬೆರಳನ್ನು ಕಡಿದು ಕೊಳ್ಳುತ್ತಿರುವ ಘಟನೆ ನಡೆದಿದ್ದು ಮಹಾರಾಷ್ಟದ ಸತಾರಾ ಜಿಲ್ಲೆಯ ಫಾಲ್ತಾನ್ ಗ್ರಾಮದಲ್ಲಿಯೆಂದು.
ಆಗಸ್ಟ್ 19, 2023 ರಂದು ಇಂಡಿಯಾ ಟುಡೇ ಪ್ರಕಟಿಸಿದ ವರದಿಯ ಪ್ರಕಾರ, ವೀಡಿಯೋದಲ್ಲಿ ಕಾಣಿಸುತ್ತಿರುವ ವ್ಯಕ್ತಿ 43 ವರ್ಷದ ಧನಂಜಯ್ ನಾನವರೆ ಎನ್ನುವವರು. ತನ್ನ ಅಣ್ಣ ಮತ್ತು ಅತ್ತಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿರುವ ವ್ಯಕ್ತಿಗಳ ಮೇಲೆ ಪೋಲೀಸರು ಕ್ರಮ ಕೈಗೊಂಡಿಲ್ಲ. ಆದ್ದರಿಂದ ಕ್ರಮ ಕೈಗೊಳ್ಳುವವರೆಗೆ ಪ್ರತಿವಾರ ದೇಹದಲ್ಲಿನ ಒಂದೊಂದು ಅಂಗಾಂಗವನ್ನು ಕತ್ತರಿಸಿಕೊಳ್ಳಿತ್ತೇನೆ ಎಂದು ಪೊಲೀಸರಿಗೆ ಬೆದರಿಕೆ ಹಾಕಿದ್ದಾನೆ.
ಈ ಘಟನೆ ನಡೆದ ನಂತರ ಪೊಲೀಸರು ಧನಂಜಯ್‌ನನ್ನು ಬಂಧಿಸಿ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ಪ್ರಕಾರ , ಊರಿನಲ್ಲಿರುವ ಕೆಲವರು ನೀಡುವ ಕಿರುಕುಳದಿಂದ ತನ್ನ ಸೋದರ ಮತ್ತು ಆತನ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಅಷ್ಟೇ ಅಲ್ಲ ಆತ್ಮಹತ್ಯೆ ಪತ್ರದಲ್ಲಿ ಹಣಕ್ಕಾಗಿ ಕಿರುಕುಳ ನೀಡುತ್ತಿರುವವರ ಹೆಸರನ್ನೂ ಸಹ ತನ್ನ ಅಣ್ಣ ಮತ್ತು ಅತ್ತಿಗೆ ನಮೂದಿಸಿದ್ದಾರೆ. ದಿನಗಳು ಕಳೆದರೂ ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣದ ಕಾರಣ, ತನಿಖಾ ಸಂಸ್ಥೆಗಳು ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಪ್ರತಿವಾರ ದೇಹದ ಒಂದು ಭಾಗವನ್ನು ಕತ್ತರಿಸಿ ಉಪ ಮುಖ್ಯಮಂತ್ರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾನೆ.
ತಮಿಳುನಾಡು ಚುನಾವಣೆಯ ಸಂದರ್ಭದಲ್ಲಿಯೂ ಕೆಲವೊಂದಷ್ಟು ಫ್ಯಾಕ್ಟ್ ಚೆಕ್ ಸಂಸ್ಥೆಗಳು ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ವೈರಲ್ ಆದ ಸುದ್ದಿ ಸುಳ್ಳೆಂದು ಖಚಿತಪಡಿಸಿವೆ.
ಹೀಗಾಗಿ ವೈರಲ್ ಆಗುತ್ತಿರುವ ಸುದ್ದಿ ಮತ್ತು ವೀಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ಸುದ್ದಿ ಸುಳ್ಳು. ಕೈ ಬೆರಳನ್ನು ಕಡಿದುಕೊಳ್ಳುತ್ತಿರುವ ವ್ಯಕ್ತಿ ಕರ್ನಾಟಕದವನಲ್ಲ ಬದಲಿಗೆ ಆದ ಮಹಾರಾಷ್ಟ್ರದವರು.