ಫ್ಯಾಕ್ಟ್ಚೆಕ್: ಹೊಸ ಲುಕ್ನಲ್ಲಿ ಅಂಬಾಸಿಡರ್ ಕಾರ್ ಬರಲಿದೆ ಎಂದು ಆಸ್ಟನ್ ಮಾರ್ಟಿಲ್ ಲಗೊಂಡಾ ಕಂಪನಿಯ ಕಾರನ್ನು ಹಂಚಿಕೆ
ಹೊಸ ಲುಕ್ನಲ್ಲಿ ಅಂಬಾಸಿಡರ್ ಕಾರ್ ಬರಲಿದೆ ಎಂದು ಆಸ್ಟನ್ ಮಾರ್ಟಿಲ್ ಲಗೊಂಡಾ ಕಂಪನಿಯ ಕಾರನ್ನು ಹಂಚಿಕೆ

Claim :
ಹೊಸ ಅವತಾರದಲ್ಲಿ ಅಂಬಾಸಿಡರ್ ಕಾರು ಬರಲಿದೆFact :
ವೈರಲ್ ಚಿತ್ರದಲ್ಲಿರುವ ಕಾರು ಅಂಬಾಸಿಡರ್ ಅಲ್ಲ; 'ಆಸ್ಟನ್ ಮಾರ್ಟಿಲ್ ಲಗೊಂಡಾ' ಕಾನ್ಸೆಪ್ಟ್ ಕಾರು
ಅಂಬಾಸಿಡರ್ ಕಾರು ಈಗಿನ ಪೀಳಿಗೆಗೆ ಈ ಕಾರಿನ ಬಗ್ಗೆ ಅಷ್ಟು ಗೊತ್ತಿಲ್ಲ. ಆದರೆ ಇದು ಒಂದು ಕಾಲದಲ್ಲಿ ಮಾರುಕಟ್ಟೆಯ ರಾಜ, ರಾಯಭಾರಿ ಐಕಾನ್ ಆಗಿತ್ತು ಈ ಕಾರು. ರಾಜಕಾರಣಿ ಎಂದರೆ ಅಂಬಾಸಿಡರ್ ಕಾರನ್ನು ಖಂಡಿತ ಬಳಸಬೇಕು ಎಂಬಂತಾಗಿತ್ತು. ಕಾರು ಅಷ್ಟೊಂದು ಜನಪ್ರಿಯತೆ ಗಳಿಸಿತ್ತು. ಪ್ರಸ್ತುತ ರಾಜಕಾರಣಿಗಳು ವಿವಿಧ ರೀತಿಯ ಕಾರುಗಳನ್ನು ಬಳಸುತ್ತಿದ್ದಾರೆ. ಆದರೆ ಒಂದು ಕಾಲದಲ್ಲಿ ಎಲ್ಲರೂ ಅಂಬಾಸಿಡರ್ ಅನ್ನು ಬಳಸುತ್ತಿದ್ದರು. ಅಂಬಾಸಿಡರ್ ಕಾರುಗಳು 1957 ರಿಂದ 2014 ರವರೆಗೆ ತನ್ನ ಅಸ್ತಿತ್ವ ಹೊಂದಿತ್ತು. ಹಿಂದೂಸ್ತಾನ್ ಮೋಟಾರ್ಸ್ ಕಂಪನಿಯು ಉತ್ಪಾದಿಸುವ ಈ ಕಾರುಗಳು ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನವೀಕರಿಸಲ್ಪಟ್ಟಿಲ್ಲ ಮತ್ತು ಆದ್ದರಿಂದ ಅವುಗಳ ಮಾರಾಟವು ತೀವ್ರವಾಗಿ ಕಡಿಮೆಯಾಯಿತು.
ಕೊನೆಗೆ ಕಂಪನಿ 2014ರಲ್ಲಿ ಕಾರಿನ ಉತ್ಪಾದನೆಯನ್ನೇ ಸ್ಥಗಿತಗೊಳಿಸಿತ್ತು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಂಬಾಸಿಡರ್ ಈಗಾಗಲೇ ತಮ್ಮ ಹೊಸ ಕಾರು ಉತ್ಪನ್ನಗಳನ್ನು ಬಿಡುಗಡೆ ಮಾಡಲಿದೆ ಎಂದು ಹೊಸ ಕಾರಿನ ಕೆಲವು ಫೊಟೋಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಫೆಬ್ರವರಿ 02, 2025ರಂದು ಇನ್ಸ್ಟಾಗ್ರಾಮ್ ಖಾತೆದಾರರರೊಬ್ಬರು ಹಳೆಯ ಅಂಬಾಸಿಡರ್ ಕಾರು ಮತ್ತು ಮಾರುಕಟ್ಟೆಗೆ ಬಂದಂತಹ ಹೊಸ ಲುಕ್ನಲ್ಲಿರುವ ಅಂಬಾಸಿಡರ್ ಕಾರ್ ಫೋಟೋವನ್ನು ಹಂಚಿಕೊಂಡು ಚಿತ್ರಕ್ಕೆ ʼಒಂದು ಕಾಲದಲ್ಲಿ ಹಳ್ಳಿಯಿಂದ ಸಿಟಿಯವರೆದೂ ಧೂಳೆಬ್ಬಿಸಿದಂತ ಅಂಬಾಸಿಡರ್ ಕಾರು ಮತ್ತೆ ಮಾರುಕಟ್ಟೆಗೆ ಹೊಸ ಲುಕ್ನಲ್ಲಿ ಎಂಟ್ರಿ ಕೊಡಲಿದೆʼ ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿರುವುದನ್ನು ನೋಡಬಹುದು
ವೈರಲ್ ಆದ ಪೋಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು.
ಕನ್ನಡ ಇನ್ಫಾರ್ಮೇಶನ್ ಎಂಬ ಫೇಸ್ಬುಕ್ ಖಾತೆದಾರರೊಬ್ಬರು ಹಳೆಯ ಮತ್ತು ಹೊಸ ಅಂಬಾಸಿಡರ್ ಕಾರ್ ಎನ್ನಲಾದ ಫೋಟೋಗಳನ್ನು ಹಂಚಕೊಂಡು ʼವಿದೇಶಿ ಕಂಪನಿಗಳು ಬಾಗಿಲು ಹಾಕುವ ಸಮಯ ಬಂದೇ ಬಿಡ್ತು. ನಮ್ಮ ಅಂಬಾಸಿಡರ್ ಕಾರು ಹೊಸ ಡಿಸೈನ್ನಲ್ಲಿ ಬರುತ್ತಿದೆ. ಇನ್ಮೇಲಿಂದ ರೋಡಲ್ಲಿ ನಮ್ಮದೇ ಹವಾʼ ಎಂಬ ಶೀರ್ಷಿಕೆಯನ್ನೀಡಿ ಪೋಸ್ಟ್ ಮಾಡಿದ್ದಾರೆ.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೈರಲ್ ಆದ ಚಿತ್ರದಲ್ಲಿ ಹೊಸ ಲುಕ್ನಲ್ಲಿ ಇರುವ ಕಾರು ಅಂಬಾಸಿಡರ್ ಅಲ್ಲ, 'ಆಸ್ಟನ್ ಮಾರ್ಟಿಲ್ ಲಗೊಂಡಾ' ಕಾನ್ಸೆಪ್ಟ್ ಕಾರು.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್ನಲ್ಲಿ ವೈರಲ್ ಆದ ಚಿತ್ರವನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಇಮೇಜ್ ರಿಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಚಿತ್ರದಲ್ಲಿ ಕಾರಿನ ನಂಬರ್ ಪ್ಲೇಟ್ನ ಮೇಲೆ ʼLAGONDAʼ ಎಂದು ಬರೆದಿರುವುದನ್ನು ನಾವು ಕಂಡುಕೊಂಡೆವು. ಹಾಗೆ ಕಂಪನಿಯ ಲೋಗೋವನ್ನು ಸಹ ನಾವು ನೋಡಬಹುದು.
ಇದನ್ನೇ ನಾವು ಸುಳಿವಾಗಿ ಬಳಸಿಕೊಂಡು ಗೂಗಲ್ನಲ್ಲಿ ʼಲಗೋಂಡʼ ಎಂಬ ಕೀವರ್ಡ್ ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ASTIN MARTINS.COM ಎಂಬ ವೆಬ್ಸೈಟ್ನಲ್ಲಿ ವೈರಲ್ ಆದ ಕಾರಿನ ಕೆಲವು ಫೋಟೋಗಳು ಕಂಡುಬಂದವು. ಈ ವೆಬ್ಸೈಟ್ನಲ್ಲಿ ʼಲಗೊಂಡಾ ಕಾನ್ಸೆಪ್ಟ್ LUV (2009). 2008 ರಲ್ಲಿ, AML ಕಂಪನಿಯು ಮೋಟಾರ್ ಕಾರುಗಳ ನಿರ್ಮಾಣವನ್ನು ಪ್ರಾರಂಭಿಸಿದ 100 ನೇ ವಾರ್ಷಿಕೋತ್ಸವವನ್ನು ಆಚರಿಸಲು ಲಗೊಂಡಾ ಬ್ರ್ಯಾಂಡ್ ಅನ್ನು ಮರು-ಪ್ರಾರಂಭಿಸುವ ಉದ್ದೇಶವನ್ನು ಹೊಂದಿದೆ ಎಂದು ಘೋಷಿಸಿತು. 2009 ರ ಜಿನೀವಾ ಮೋಟಾರ್ ಶೋನ ಮೊದಲ ದಿನ, ಆಸ್ಟನ್ ಮಾರ್ಟಿನ್ ವಿನ್ಯಾಸ ನಿರ್ದೇಶಕ ಮಾರೆಕ್ ರೀಚ್ಮನ್ ಕಾರಿನ ಕವರ್ನ್ನು ತೆಗೆದಾಗ, ನೋಡುಗರು ಆಶ್ಚರ್ಯಚಕಿತರಾಗಿದ್ದರು. 2009 ರ ಲಗೊಂಡಾ ಕಾನ್ಸೆಪ್ಟ್ ಕಾರಿನ ವಿವರವಾದ ವಿವರಣೆಯ ಬಗ್ಗೆ ಬಹಳ ಕಡಿಮೆ ತಿಳಿದಿರಲಿಲ್ಲ, ಅದು ಮರ್ಸಿಡಿಸ್ GL ರನ್ನಿಂಗ್ ಗೇರ್ ಅನ್ನು ಆಧರಿಸಿದೆ ಮತ್ತು ಆಸ್ಟನ್ ಮಾರ್ಟಿನ್ V12 ನಿಂದ ಚಾಲಿತವಾಗಿದೆ ಎಂದು ಹೇಳಲಾಗಿದೆ (ಅದು!). ಈ ಪರಿಕಲ್ಪನೆಯ ಹಿಂದಿನ ಆಲೋಚನೆಯೆಂದರೆ ಪ್ರಪಂಚದಾದ್ಯಂತದ ಉದಯೋನ್ಮುಖ ಮಾರುಕಟ್ಟೆಗಳು ಮತ್ತು ಪ್ರದೇಶಗಳಿಗೆ, ವಿಶೇಷವಾಗಿ ರಷ್ಯಾ, ಮಧ್ಯಪ್ರಾಚ್ಯ, ದಕ್ಷಿಣ ಅಮೆರಿಕಾ, ಭಾರತ ಮತ್ತು ಚೀನಾದಲ್ಲಿನ ಉದಯೋನ್ಮುಖ ಮಾರುಕಟ್ಟೆಗಳಿಗೆ ಕಾರ್ಯಕ್ಷಮತೆಯ ಐಷಾರಾಮಿಯನ್ನು ತರುವುದು. ಈ ಪರಿಕಲ್ಪನೆಯನ್ನು ಪೂರ್ಣ ಆಫ್-ರೋಡರ್ ಎಂದು ಕರೆಯುವುದು ಸರಿಯಲ್ಲ ಏಕೆಂದರೆ ಇದನ್ನು 4 ವೀಲ್ ಡ್ರೈವ್ ಮತ್ತು ಕಳಪೆ ಗುಣಮಟ್ಟದ ರಸ್ತೆಗಳಿಗೆ ಹೆಚ್ಚುವರಿ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಐಷಾರಾಮಿ ಕಾರ್ಯಕ್ಷಮತೆಯ ವಾಹನವಾಗಿ ವಿನ್ಯಾಸಗೊಳಿಸಲಾಗಿದೆ. ಆ ಸಮಯದಲ್ಲಿ ಪತ್ರಿಕಾ ಪ್ರಕಟಣೆಯು ಐಕಾನಿಕ್ ಮಾರ್ಕ್ನ ಮರಳುವಿಕೆಯನ್ನು ಹೆಮ್ಮೆಯಿಂದ ಘೋಷಿಸಿತು ಮತ್ತು ಉತ್ಪಾದನೆಗೆ ಹೋಗುವ ಉದ್ದೇಶವು ಬಲವಾದ ಸಾಧ್ಯತೆಯಾಗಿತ್ತು ಎಂದು ನನಗೆ ಖಚಿತವಾಗಿದೆʼ ಎಂಬು ವರದಿ ಮಾಡಿರುವುದನ್ನು ನಾವಿಲ್ಲಿ ನೋಡಬಹುದು
ಇನ್ನು ಅಂಬಾಸಿಡರ್ ಕಾರು ಮತ್ತೆ ಬಿಡುಗಡೆಯಾಗಲಿದೆಯೇ ಎಂಬುದನ್ನು ತಿಳಿಯಲು ಗೂಗಲ್ನಲ್ಲಿ ಸರ್ಚ್ ಮಾಡಿದಾಗ, ಈ ಬಗೆಗಿನ ಇತ್ತೀಚಿನ ಯಾವ ಸುದ್ದಿಯೂ ಲಭ್ಯವಾಗಿಲ್ಲ.
ಮೇ 28,2022ರಂದು ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ʼAmbassador car all set to make a comeback! Hindustan Motors confirms developmentʼ ಎಂಬ ಹೆಡ್ಲೈನ್ನೊಂಡಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ʼಮುಂದಿನ ಎರಡು ವರ್ಷಗಳಲ್ಲಿ ಹೊಸ ಅವತಾರದಲ್ಲಿ ಅಂಬಾಸಿಡರ್ ಮತ್ತೆ ಮಾರುಕಟ್ಟೆಗೆ ಬರಲಿದೆ. ಸಿಕೆ ಬಿರ್ಲಾ ಗ್ರೂಪ್ನ ಸಹವರ್ತಿ ಕಂಪನಿಯಾದ ಹಿಂದೂಸ್ತಾನ್ ಮೋಟಾರ್ ಫೈನಾನ್ಸಿಯಲ್ ಕಾರ್ಪೊರೇಷನ್ ಆಫ್ ಇಂಡಿಯಾ (HMFCI) ಹೊಸ ಎಂಜಿನ್ ಮತ್ತು ವಿನ್ಯಾಸದೊಂದಿಗೆ ಅಂಬಾಸಿಡರ್ ಅನ್ನು ಪರಿಚಯಿಸಲಿದೆ. 2024 ರಲ್ಲಿ ಬಿಡುಗಡೆಯಾಗಲಿರುವ ಹೊಸ 'ಆಂಬಿ'ಯ ಎಂಜಿನ್ ಮತ್ತು ವಿನ್ಯಾಸದ ಮೇಲೆ ಹಿಂದೂಸ್ತಾನ್ ಮೋಟಾರ್ಸ್ ಮತ್ತು ಪಿಯುಗಿಯೊ ಕಾರ್ಯನಿರ್ವಹಿಸುತ್ತಿವೆʼ ಎಂದು ಅಂಬಾಸಿಡರ್ ಕಾರನ್ನು ತಯಾರಿಸುತ್ತಿದ್ದ ಹಿಂದೂಸ್ಥಾನ್ ಮೋಟಾರ್ಸ್ನ ನಿರ್ದೇಶಕರು ಹೇಳಿರುವುದಾಗಿ ವರದಿ ಮಾಡಿದ್ದಾರೆ.
ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ನಾವು ಹಿಂದ್ ಮೋಟಾರ್ಸ್ನ ಅಧಿಕೃತ ವೆಬ್ಸೈಟ್ನಲ್ಲಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿನ ನಮಗೆ ಯಾವುದೇ ಮಾಹಿತಿ ಸಿಗಲಿಲ್ಲ.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೈರಲ್ ಆದ ಚಿತ್ರದಲ್ಲಿ ಹೊಸ ಲುಕ್ನಲ್ಲಿ ಇರುವ ಕಾರು ಅಂಬಾಸಿಡರ್ ಅಲ್ಲ, 'ಆಸ್ಟನ್ ಮಾರ್ಟಿಲ್ ಲಗೊಂಡಾ' ಕಾನ್ಸೆಪ್ಟ್ ಕಾರು.