ಫ್ಯಾಕ್ಟ್ಚೆಕ್ : ಕಲ್ಲಂಗಡಿ ಹಣ್ಣಿನೊಳಗೆ ಕಾಣುವ ಬಿರುಕು, ಕೀಟನಾಶಕದಿಂದ ಆಗಿದ್ದಲ್ಲ!
ಸಂಶೋಧನೆಗಳು, ಹ್ಯಾಲೊ ಹಾರ್ಟ್ ಎಂದು ಕರೆಸಿಕೊಳ್ಳುವ ಹಣ್ಣಿನ ಬಿರುಕು ಅಸಮರ್ಪಕ ಪರಾಗ ಸ್ಪರ್ಶ ಮತ್ತು ಇತರೆ ನೈಸರ್ಗಿಕ ಕಾರಣಗಳಿಂದ ಆಗಿರಬಹುದು ಎಂದು ಹೇಳುತ್ತವೆ.
Claim :
ಕಲ್ಲಂಗಡಿ ಹಣ್ಣಿನೊಳಗೆ ಕಾಣಿಸುವ ಬಿರುಕು, ಕೀಟನಾಶಕ ಇರುವುದನ್ನು ಸೂಚಿಸುತ್ತದೆ ಮತ್ತು ಇದರಿಂದ ಕ್ಯಾನ್ಸರ್ ಉಂಟಾಗಬಹುದು.Fact :
ಕಲ್ಲಂಗಡಿ ಹಣ್ಣಿನೊಳಗೆ ಬಿರುಕು ಉಂಟಾಗುವುದಕ್ಕೆ ಪರಾಗಕ್ರಿಯೆಯಲ್ಲಿ ಆದ ವ್ಯತ್ಯಾಸ ಮತ್ತು ಪರಿಸರ ಕಾರಣವೇ ಹೊರತು ಕೀಟನಾಕಶವಲ್ಲ
ಫೇಸ್ಬುಕ್ನ ಪೋಸ್ಟ್ವೊಂದು, ಕತ್ತರಿಸಿದ ಕಲ್ಲಂಗಡಿ ಹಣ್ಣಿನೊಳಗೆ ಬಿರುಕು ಇರುವುದು ಕಂಡರೆ, ತಿನ್ನಬೇಡಿ, ಅಪಾಯಕಾರಿ ಎಂದು ಎಚ್ಚರಿಸಿದೆ. ಪೋಸ್ಟ್ನ ಅಡಿ ಶೀರ್ಷಿಕೆಯಲ್ಲಿ ನೀವು ಕಲ್ಲಂಗಡಿ ಹಣ್ಣನ್ನು ಕತ್ತರಿಸಿದಾಗ ಈ ರೀತಿ ಬಿರುಕುಗಳಿದ್ದಲ್ಲಿ, ತಿನ್ನಬೇಡಿ. ಮೊದಲ ಕಮೆಂಟ್ನಲ್ಲಿ ಲಿಂಕ್ ಇದೆ" ಎಂದು ಪ್ರತಿಪಾದಿಸಲಾಗಿದೆ.
ಇದೇ ರೀತಿ ಪ್ರತಿಪಾದಿಸಿರುವ ಫೇಸ್ಬುಕ್ ಪೋಸ್ಟ್ ಇಲ್ಲಿ ಮತ್ತು ಇಲ್ಲಿ ಓದಬಹುದು.
ಇನ್ನು ಕೆಲವು ಪೋಸ್ಟ್ಗಳು ಇಲ್ಲಿವೆ.
ಕಮೆಂಟ್ನಲ್ಲಿರುವ ಲಿಂಕ್, ಎಲ್ಕುಕಿ.ಕಾಂನಲ್ಲಿ ಪ್ರಕಟವಾಗಿರುವ ಲೇಖನಕ್ಕೆ ಕರೆದೊಯ್ಯುತ್ತವೆ. ಲೇಖನವೂ ಈ ಫೇಸ್ಬುಕ್ ಪೋಸ್ಟ್ನಂತೆ ಪ್ರತಿಪಾದಿಸಿದೆ. ಕಲ್ಲಂಗಡಿ ಹಣ್ಣು ಪ್ರಾಥಮಿಕವಾಗಿ ನೀರಿನ ಅಂಶವನ್ನು ಹೊಂದಿರುತ್ತದೆ ಮತ್ತು ಮೂತ್ರವರ್ಧಕ ಅಂಶಗಳಿವೆ. ಕಲ್ಲಂಗಡಿ ಹಣ್ಣು ಅದ್ಭುತ, ಆದರೆ ಕೆಲವೊಮ್ಮೆ ನಿಜಕ್ಕೂ ಲಾಭದಾಯಕವಲ್ಲದ ಉದಾಹರಣೆಗಳೂ ಇವೆ. ಅಚ್ಚರಿ ಎನಿಸಿದರೂ ನಿಜ. ಕಲ್ಲಂಗಡಿ ಸೇವನೆಯಿಂದ ಆರೋಗ್ಯಕ್ಕೆ ಹಾನಿ ಉಂಟಾದ ಉದಾಹರಣೆಗಳೂ ಇವೆ. ಹಣ್ಣಿನ ಬಗ್ಗೆ ಸರಿಯಾದ ತಿಳಿದುಕೊಳ್ಳುವುದು, ತಾಜಾ ಆಗಿರುವುದನ್ನು ಖಚಿತಪಡಿಸಿಕೊಳ್ಳುವುದರಿಂದ, ಯಾವುದೇ ರೀತಿಯ ಅಸಹಜತೆ ಕಂಡು ಬಂದರೆ ಹಣ್ಣನ್ನು ಸೇವಿಸದೆ, ಇರುವುದೇ ಉತ್ತಮ.
ಸೋಷಿಯಲ್ ಮೀಡಿಯಾ ಪೋಸ್ಟ್ ಮತ್ತು ಬ್ಲಾಗ್ಗಳು ಕಲ್ಲಂಗಡಿ ಹಣ್ಣಿನೊಳಗೆ ಬಿರುಕು ಇದ್ದಲ್ಲಿ, ಅಂತಹ ಹಣ್ಣಿನ ಸೇವನೆಯಿಂದಾಗಿ ದೇಹದೊಳಗೆ ಗಡ್ಡೆಗಳು ಉಂಟಾಗಬಹುದು ಎಂದು ಪ್ರತಿಪಾದಿಸಿವೆ.
ಫ್ಯಾಕ್ಟ್ಚೆಕ್
ಈ ಪ್ರತಿಪಾದನೆ ತಪ್ಪು. ಬಿರುಕಿಗೆ ನೈಸರ್ಗಿಕ ಕಾರಣಗಳಿರಬಹುದು ಅಥವಾ ಹಣ್ಣಿನಲ್ಲಿ ಲೋಪವಿರಬಹುದು.
ಕಲ್ಲಂಗಡಿ ಹಣ್ಣಿನಲ್ಲಿ ಬಿರುಕು ಇರುವುದಕ್ಕೆ ಸಂಬಂಧಿಸಿದ ಕೀ ವರ್ಡ್ ಬಳಸಿ ಹುಡುಕಾಟ ನಡೆಸಿದಾಗ ನಮಗೆ ಹಲವು ಲೇಖನಗಳು ದೊರೆತವು. ಈ ಲೇಖನಗಳಲ್ಲಿ ಅಸಮರ್ಪಕ ಪರಾಗ ಸ್ಪರ್ಶದ ಪ್ರಕ್ರಿಯೆಯಿಂದಾಗಿ ಬಿರುಕು ಉಂಟಾಗಿರಬಹುದು ಎಂದು ಲೇಖನಗಳು ವಿವರಿಸಿದ್ದವು. ಕಲ್ಲಂಗಡಿ ಹಣ್ಣಿನ ಈ ರೀತಿಯ ಬಿರುಕನ್ನು ಹ್ಯಾಲೊ ಹಾರ್ಟ್, ಟೊಳ್ಳು ಹೃದಯ ಎಂದೂ ಕರೆಯಲಾಗುತ್ತದೆ.
ಡೆಲಾವೇರ್ ವಿವಿಯ ಸಂಶೋಧಕರ ಪ್ರಕಾರ ಅಸಮರ್ಪಕ ಪರಾಗ ಕ್ರಿಯೆ ಹ್ಯಾಲೊ ಹಾರ್ಟ್ ಉಂಟು ಮಾಡುತ್ತದೆ. ಅಂದರೆ ಗಿಡದಿಂದ ಗಿಡಕ್ಕೆ ಹಾರುವ ಜೇನು ಹುಳು, ಕೀಟಗಳು ಅಥವಾ ಮಕರಂದ ಹೀರುವ ಕೀಟಗಳು ಸೂಕ್ತ ಪ್ರಮಾಣದಲ್ಲಿ ಪರಾಗ ಕಣಗಳನ್ನು ಪೂರೈಸದೆ ಇರುವುದರಿಂದ ಪರಾಗ ಸ್ಪರ್ಶ ಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗಿರಬಹುದು. ಪರಾಗ ಕ್ರಿಯೆಯ ನಡೆಯುವ ಸಮಯದಲ್ಲಿ ವಾತಾವರಣದ ಉಷ್ಣಾಂಶದಲ್ಲಿ ವ್ಯತ್ಯಾಸ ಉಂಟಾಗಿದ್ದು ಈ ವ್ಯತ್ಯಾಸ ಉಂಟಾಗುವುದಕ್ಕೆ ಕಾರಣವಾಗಿರಬಹುದು, ಏಕೆಂದರೆ ಕಡಿಮೆ ಉಷ್ಣಾಂಶವಿದ್ದಾಗ ಅಥವಾ ತೇವಾಂಶವಿರುವ ವಾತಾವರಣದಲ್ಲಿ ಕೀಟಗಳು ಕಡಿಮೆ ಸಕ್ರಿಯವಾಗಿರುತ್ತವೆ.
ಹ್ಯಾಲೋ ಹಾರ್ಟ್ ಯಾವುದೇ ರೀತಿಯ ರೋಗವಲ್ಲ. ಅದು ಕೇವಲ ಪರಾಗ ಪ್ರಕ್ರಿಯೆಯ ಸಮಸ್ಯೆಯಷ್ಟೆ. ಒಂದು ವೇಳೆ ಕಲ್ಲಂಗಡಿ ಹಣ್ಣು ಈ ರೀತಿಯ ಸಮಸ್ಯೆಗೆ ಗುರಿಯಾಗಿದ್ದರೂ ಹಣ್ಣನ್ನು ಸೇವಿಸಬಹುದು ಎಂದು ತಜ್ಞರು ಹೇಳುತ್ತದೆ. ವಾಸ್ತವದಲ್ಲಿ ಈ ರೀತಿಯ ಹಣ್ಣು ಪರಾಗ ಪ್ರಕ್ರಿಯೆ ಪೂರ್ಣಗೊಂಡ ಹಣ್ಣಿಗಿಂತ ಹೆಚ್ಚು ಸಿಹಿಯಾಗಿರಲು ಸಾಧ್ಯವಿದೆ, ಏಕೆಂದರೆ ಹಣ್ಣಿನ ತಿರುಳಿನಲ್ಲಿ ನೈಸರ್ಗಿಕ ಸಿಹಿ ಹೆಚ್ಚಿನ ಪ್ರಮಾಣದಲ್ಲಿ ಶೇಖರಗೊಂಡಿರುತ್ತದೆ.
ವಾಟರ್ಮೆಲನ್.ಆರ್ಗ್, ಅಮೆರಿಕದ ಕಲ್ಲಂಗಡಿ ಹಣ್ಣಿನ ಕೃಷಿ ಉತ್ತೇಜಿಸುವ ರಾಷ್ಟ್ರೀಯ ಮಂಡಳಿಯಾಗಿದ್ದು, ಇದರ ಪ್ರಕಾರ ತೀವ್ರ ಚಳಿ ಅಥವಾ ಬಿಸಿಗಾಳಿಯ ವಾತಾವರಣದಲ್ಲಿ ಕಲ್ಲಂಗಡಿ ಹಣ್ಣಿನ ತಿರುಳಿನಲ್ಲಿ ಬಿರುಕು ಕಾಣಿಸುತ್ತದೆ. ಇದನ್ನೇ ಹ್ಯಾಲೊ ಹಾರ್ಟ್ ಎಂದು ಕರೆಯಲಾಗುತ್ತದೆ. ಇಂತಹ ಹಣ್ಣನ್ನು ಸೇವಿಸುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ಹೆಚ್ಚು ಸಿಹಿಯಾಗಿರುತ್ತವೆ ಎಂದು ವಿವರಿಸಿದೆ.
ಪಿಎಚ್ವೈಎಸ್.ಆರ್ಗ್ ಡೆಲಾವೇರ್ ವಿವಿಯ ಗಾರ್ಡನ್ ಜಾನ್ಸನ್ 2014ರಲ್ಲಿ ಪರಾಗ ಸ್ಪರ್ಶಕಗಳ ಅಂತರ ಕುರಿತು ಅಧ್ಯಯನ ನಡೆಸಿದ್ದು, ಪರಾಗ ಮೂಲಗಳಿಂದಾಗ ಉಂಟಾಗುವ ಹೆಚ್ಚಿನ ಅಂತರವು ಹ್ಯಾಲೋ ಹಾರ್ಟ್ ಸೃಷ್ಟಿಸುತ್ತದೆ. ಇದರಿಂದಾಗಿ ತಿರುಳಿನ ಸಾಂದ್ರತೆಯೂ ಕಡಿಮೆಯಾಗುತ್ತದೆ ಎಂಬುದನ್ನು ಗುರುತಿಸಿದ್ದರು.
ಕೀಟನಾಶಕಗಳ ಬಳಕೆಯಿಂದಾಗಿ ಕಲ್ಲಂಗಡಿ ಹಣ್ಣಿನಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷಿ ಇಲ್ಲ. ಬದಲಿಗೆ ಸಂಶೋಧನೆಗಳು, ಹ್ಯಾಲೊ ಹಾರ್ಟ್ ಎಂದು ಕರೆಸಿಕೊಳ್ಳುವ ಹಣ್ಣಿನ ಬಿರುಕು ಅಸಮರ್ಪಕ ಪರಾಗ ಸ್ಪರ್ಶ ಮತ್ತು ಇತರೆ ನೈಸರ್ಗಿಕ ಕಾರಣಗಳಿಂದ ಆಗಿರಬಹುದು ಎಂದು ಹೇಳುತ್ತವೆ. ಹಾಗಾಗಿ ಈ ಪ್ರತಿಪಾದನೆ ಸುಳ್ಳು.