ಫ್ಯಾಕ್ಟ್ಚೆಕ್ : ಶ್ರಾವಣದಲ್ಲಿ ರಾಹುಲ್ಗಾಂಧಿ ಮಾಂಸಾಹಾರ ಸೇವಿಸಿದ್ದು ಎನ್ನುವ ವಿಡಿಯೋ ಹಳೆಯದು
ರಾಹುಲ್ ಗಾಂಧಿಯವರು ಮಾಂಸಾಹಾರ ಸೇವಿಸುತ್ತಿರುವ ವಿಡಿಯೋ ಶ್ರಾವಣ ಮಾಸದ್ದು ಎಂದು ಪ್ರತಿಪಾದಿಸಿರುವುದು ತಪ್ಪು.
Claim :
ಶ್ರಾವಣ ಮಾಸದಲ್ಲಿ ರಾಹುಲ್ ಗಾಂಧಿ ಮಾಂಸಾಹಾರ ಸೇವನೆFact :
2023ರ ಏಪ್ರಿಲ್ ವಿಡಿಯೋವನ್ನು ಇತ್ತೀಚಿನದ್ದು ಎನ್ನಲಾಗಿದೆ
ರಾಹುಲ್ಗಾಂಧಿ ವ್ಯಕ್ತಿಯೊಬ್ಬರ ಜೊತೆ ಕೂತು ರೋಟಿ ಹಾಗೂ ಮಾಂಸಾಹಾರದ ಕರಿಯನ್ನು ಸೇವಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ, ರಾಹುಲ್ಗಾಂಧಿ ದತ್ತಾತ್ರೇಯ ಬ್ರಾಹ್ಮಣನಾದರೂ ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸುತ್ತಿದ್ದಾರೆ ಎನ್ನಲಾಗಿದೆ.
ವಿಡಿಯೋದಲ್ಲಿ ಹಿಂದಿ ಭಾಷೆಯನ್ನು ಬಳಸಲಾಗಿದ್ದು, ಅಲ್ಲಿ ಹೀಗೆ ಹೇಳಲಾಗಿದೆ: ಶ್ರಾವಣದ ಪವಿತ್ರ ಮಾಸದಲ್ಲಿ, ತಮ್ಮನ್ನು ತಾವು ದತ್ತಾತ್ರೇಯ ಬ್ರಾಹ್ಮಣ ಎಂದು ಹೇಳಿಕೊಳ್ಳುವ @rahulgandhi ಲೆಗ್ ಪೀಸ್ ತಿನ್ನುತ್ತಿದ್ದಾರೆ"
ಈ ವಿಡಿಯೋ ಟ್ವಿಟರ್ ಮತ್ತು ಫೇಸ್ಬುಕ್ನಲ್ಲಿ ಶೇರ್ ಆಗಿದೆ.
ಫ್ಯಾಕ್ಟ್ಚೆಕ್
ರಾಹುಲ್ ಗಾಂಧಿ ಮಾಂಸಾಹಾರ ಸೇವಿಸುತ್ತಿರುವ ವಿಡಿಯೋ ವಾಸ್ತವದಲ್ಲಿ ಶ್ರಾವಣ ಮಾಸದಲ್ಲ. 2023ರ ಏಪ್ರಿಲ್ 22ರದ್ದು.
ವಿಡಿಯೋದ ಕೀಫ್ರೇಮ್ಗಳನ್ನು ಹಾಗೂ Rahul Gandhi eating ಕೀ ವರ್ಡ್ಗಳನ್ನು ಬಳಸಿ ಹುಡುಕಾಡಿದಾಗ ರಾಹುಲ್ ಗಾಂಧಿಯವರ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ 2023ರ ಏಪ್ರಿಲ್ 22ರಂದು ಈ ವಿಡಿಯೋ ಪ್ರಕಟವಾಗಿದ್ದು ತಿಳಿಯಿತು. ವಿಡಿಯೋಕ್ಕೆ ನೀಡಿದ ಶೀರ್ಷಿಷಕೆ, "ದಿಲ್ಲಿಯಲ್ಲಿ ಚೋಲೆ ಬಟುರೆ ಮತ್ತು ಪ್ರೀತಿಯ ಶರಬತ್ |ರಾಹುಲ್ ಗಾಂಧಿ| ಕುನಾಲ್ ವಿಜಯ್ಕರ್ ಜೊತೆಗೆ ಮಾತುಕತೆ"
ಖಾನೆ ಮೆ ಕ್ಯಾ ಹೈ ಯೂಟ್ಯೂಬ್ ಚಾನೆಲ್ನಲ್ಲೂ, "ದಿಲ್ಲಿಯ ಚೋಲೆ ಬಟುರೆ, ಕಬಾಬ್ ಮತ್ತು ರಾಹುಲ್ ಗಾಂಧಿಯೊಂದಿ ಚಟ್ಪಟಾ ಮಾತು | ಖಾನೆ ಮೆ ಕ್ಯಾ ಹೈ" ಶೀರ್ಷಿಕೆಯೊಂದಿಗೆ ವಿಡಿಯೋ ಪ್ರಕಟವಾಗಿದೆ. ವಿವರಗಳ ಭಾಗದಲ್ಲಿ, "ರಾಹುಲ್ ಗಾಂಧಿಯೊಂದಿಗೆ ಎಕ್ಸ್ಕ್ಲೂಸಿವ್ ಸಂದರ್ಶನ| ಕುನಾಲ್ ವಿಜಯ್ಕರ್" ಎಂದು ಬರೆಯಲಾಗಿದೆ.
ಮುಂದುವರೆದು, "ಬೀದಿ ಬದಿ ತಿನ್ನುವುದು ನಿಜಕ್ಕೂ ಅದ್ಭುತವಾದ ಅನುಭವ. ಆದರೆ ಈ ಬಾರಿಯ ಅನುಭವ ಅದಕ್ಕಿಂತ ಮಿಗಿಲು. ಹೌದು, ರಾಹುಲ್ ಗಾಂಧಿಯವರೊಂದಿಗೆ ಕಾಲ ಕಳೆಯುವ ಖುಷಿ ಮತ್ತು ಗೌರವ ನಮಗೆ ಸಿಕ್ಕಿತು. ಇನ್ನು ರಾಹುಲ್ ಆಹಾರ ಸವಿಯುವ ರೀತಿಯ ನಿಜಕ್ಕೂ ಯಾವುದೇ ಆಹಾರ ಪ್ರಿಯರಿಗೆ ಸ್ಪರ್ಧೆ ಒಡ್ಡುವಂತಿತ್ತು. ನಾವು ದೆಹಲಿಯಲ್ಲಿದ್ದುದರಿಂದ, ಎಲ್ಲರೂ ತಪ್ಪದೇ ಸವಿಯುವ ಗೋಲ್ ಗಪ್ಪ, ಚೋಲೆ ಬಟುರೆ, ತಂದೂರಿ ಚಿಕನ್, ಕೆಬಾಬ್ ಮತ್ತು ಮೊಹಬ್ಬತ್ ಕ ಶರಬತ್ ಸವಿದೆವು" ಎಂದು ಬರೆಯಲಾಗಿದೆ.
ಈ ಮೂಲ ವಿಡಿಯೋ ಈ 20 ನಿಮಿಷ 29 ಸೆಕೆಂಡ್ಗಳ ಅವಧಿಯದ್ದ. ಇದರಲ್ಲಿ ರಾಹುಲ್ಗಾಂಧಿ ತರಹೇವಾರಿ ಆಹಾರ ಖಾದ್ಯಗಳನ್ನು, ಕಾರ್ಯಕ್ರಮ ನಿರೂಪಕ ಕುನಾಲ್ ಜೊತೆಗೆ ಸವಿಯುವ ದೃಶ್ಯಗಳಿವೆ. ಈ ವಿಡಿಯೋದ 12.43 ನಿಮಿಷದಿಂದ 13.29ರವರೆಗಿನ ಭಾಗವನ್ನು ತೆಗೆದುಕೊಂಡು ವೈರಲ್ ಮಾಡಲಾಗಿದೆ.
ಮಾನಹಾನಿ ಪ್ರಕರಣದಲ್ಲಿ ಲೋಕಸಭಾ ಸದಸ್ಯತ್ವ ಕಳೆದುಕೊಂಡ ಬಳಿಕ ರಾಹುಲ್ ಗಾಂಧಿ ದೆಹಲಿಯ ಬೀದಿಗಳಲ್ಲಿ ಸುತ್ತಾಡುತ್ತಿದ್ದರು ಎಂದು ವರದಿ ಮಾಡಿದ ಟೈಮ್ಸ್ ಆಫ್ ಇಂಡಿಯಾದ ಲೇಖನವೊಂದನ್ನು ನಮ್ಮ ಗಮನಕ್ಕೆ ಬಂತು. ಗಾಂಧಿ ಕುಡಿ, ಹಳೆಯ ದೆಹಲಿಯ ಮಾಟಿಯಾ ಮಾರ್ಕೆಟ್, ಸ್ಥಳೀಯ ಅಂಗಡಿಗಳಿಗೆ ಭೇಟಿ ನೀಡಿ, ಅಲ್ಲಿನ ಚಾಟ್ ಮತ್ತು ಇತರೆ ಆಹಾರ ಖಾದ್ಯಗಳನ್ನು ಸವಿದರು ಎಂದು ವರದಿ ಮಾಡಲಾಗಿದೆ.
ರಾಹುಲ್ಗಾಂಧಿ ಈ ಓಡಾಟಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳನ್ನು ಹಿಂದುಸ್ತಾನ್ ಟೈಮ್ಸ್ ಪತ್ರಿಕೆ ಕೂಡ ಪ್ರಕಟಿಸಿದೆ.
ಎಲ್ಲ ಕಡೆಗಳಲ್ಲೂ ವಿಡಿಯೋ 2023ರ ಏಪ್ರಿಲ್ ತಿಂಗಳಿನದ್ದು ಎಂದೇ ದಾಖಲಿಸಲಾಗಿದೆ. ಈ ವರ್ಷ ಅಧಿಕ ಮಾಸವಿರುವುದರಿಂದ ಶ್ರಾವಣ ಮಾಸವು ಜುಲೈ 4ರಿಂದ ಆರಂಭವಾಗಿ ಆಗಸ್ಟ್ 31ಕ್ಕೆ ಕೊನೆಯಾಗುತ್ತದೆ. ಹಾಗಾಗಿ ರಾಹುಲ್ ಗಾಂಧಿಯವರು ಮಾಂಸಾಹಾರ ಸೇವಿಸುತ್ತಿರುವ ವಿಡಿಯೋ ಶ್ರಾವಣ ಮಾಸದ್ದು ಎಂದು ಪ್ರತಿಪಾದಿಸಿರುವುದು ತಪ್ಪು.