ಫ್ಯಾಕ್ಟ್ಚೆಕ್: ಬೆಂಗಳೂರಿನಲ್ಲಿ ನಾಯಿ ಮಾಂಸ ಮಾರಾಟ ಮಾಡಲಾಗುತ್ತಿದೆಯೇ?
ಬೆಂಗಳೂರಿನಲ್ಲಿ ನಾಯಿ ಮಾಂಸ ಮಾರಾಟ ಮಾಡಲಾಗುತ್ತಿದೆಯೇ?
Claim :
ಮಾಂಸ ವ್ಯಾಪಾರಿ ಅಬ್ದುಲ್ ರಜಾಕ್ ರಾಜಸ್ಥಾನದಿಂದ ಬೆಂಗಳೂರಿಗೆ ತಂಡ ಕುರಿ ಮಾಂಸದೊಂದಿಗೆ ನಾಯಿ ಮಾಂಸವಿನ್ನು ಬೆರೆಸಿದ್ದಾನೆ.Fact :
ರೈಲಿನಲ್ಲಿ ತಂದಂತಹ ಮಾಂಸ ನಾಯಿ ಮಾಂಸವಲ್ಲ ಬದಲಿಗೆ ಕುರಿ ಮಾಂಸ ಎಂದು ಆಹಾರ ಸುರಕ್ಷತಾ ಇಲಾಖೆ ಸ್ಪಷ್ಟಪಡಿಸಿದೆ
ಜುಲೈ 26, 2024ರಂದು ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಮಾಂಸ ಸರಬರಾಜು ಮಾಡುವ ವ್ಯಾಪಾರಿ ಅಬ್ದುಲ್ ರಜಾಕ್ ಕುರಿ ಮಾಂಸದೊಂದಿಗೆ ನಾಯಿ ಮಾಂಸವನ್ನು ಬೆರೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಬೆಂಗಳೂರಿನ ಮೆಜೆಸ್ಟಿಕ್ನಲ್ಲಿರುವ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ರಜಾಕ್ ಮತ್ತು ಪುನೀತ್ ತಂಡದ ನಡುವೆ ಮಾತಿನ ಚಕಮಕಿ ನಡೆಯಿತು.
ಜುಲೈ 26, 2024ನೇ ರಾತ್ರಿ ರೈಲಿನಲ್ಲಿ ಜೈಪುರದಿಂದ ಬಾಕ್ಸ್ ಗಳಲ್ಲಿ ಲೋಡ್ ಮಾಡಲಾದ ಸುಮಾರು ಮೂರು ಟನ್ ತೂಕದ ಮಾಂಸ ಬೆಂಗಳೂರಿಗೆ ಸಾಗಿಸಲಾಗಿದ್ದು, ಈ ವೇಳೆ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಕೆಲವು ಹಿಂದೂಪರ ಕಾರ್ಯಕರ್ತರು ಅದರಲ್ಲಿ ನಾಯಿ ಮಾಂಸ ಎಂದು ಆರೋಪಿಸಿದ್ದರು. ಈ ನಡುವೆ ಕಾಟನ್ಪೇಟೆ ಹಾಗೂ ಉಪ್ಪಾರಪೇಟೆ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸಿ ಪುನೀತ್ ಕೆರೆಹಳ್ಳಿ ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ.
ಈ ಆರೋಪ ಕೇಳಿಬಂದ ನಂತರ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಪಾರ್ಸೆಲ್ಗಳಲ್ಲಿ ಪತ್ತೆಯಾದ ಪ್ರಾಣಿಗಳ ಮಾಂಸದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದರು. ಲ್ಯಾಬ್ ವರದಿ ಬಂದ ನಂತರ ವರದಿ ಆಧರಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಕಮಿಷನರೇಟ್ ತಿಳಿಸಿತು.
‘ನಗರಕ್ಕೆ ಬಂದ ಜೈಪುರ–ಮೈಸೂರು ಎಕ್ಸ್ಪ್ರೆಸ್ ರೈಲಿನಲ್ಲಿ 120 ಬಾಕ್ಸ್ಗಳಲ್ಲಿ 4,500 ಕೆ.ಜಿಯಷ್ಟು ನಾಯಿಯ ಮಾಂಸ ತರಲಾಗಿದೆ. ಇದನ್ನು ಅಬ್ದುಲ್ ರಜಾಕ್ ಮಾಲೀಕತ್ವದ ಮಾಂಸದ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಪ್ರತಿನಿತ್ಯ ರೈಲಿನಲ್ಲಿ ನೂರಾರು ಬಾಕ್ಸ್ನಲ್ಲಿ ಮಾಂಸವನ್ನು ತರಲಾಗುತ್ತಿದೆ’ ಎಂದು ಪುನೀತ್ ಕೆರೆಹಳ್ಳಿ ಆರೋಪಿಸಿದರು. ಅದಾದ ಮೇಲೆ ಸ್ಥಳಕ್ಕೆ ಉದ್ಯಮಿ ಅಬ್ದುಲ್ ರಜಾಕ್ ಬಂದಾಗ ವಾಗ್ವಾದ ಮತ್ತಷ್ಟು ತೀವ್ರಗೊಂಡಿತ್ತು.
ಇದೇ ಸುದ್ದಿಯನ್ನು ಆಧಾರವಾಗಿಟ್ಟುಕೊಂಡು ಬಲಪಂಧೀಯ ಯೂಟ್ಯೂಬ್ ಚಾನೆಲ್ ಆದ ಟಿವಿ ವಿಕ್ರಮ ಕೋಮು ದ್ವೇಷವನ್ನು ಪ್ರಚೋದಿಸುವ ಸುದ್ದಿಯನ್ನು ಪ್ರಸಾರ ಮಾಡಿತ್ತು. ಮುಸ್ಲೀಂ ವ್ಯಾಪಾರಿಗಳು ನಾಯಿ ಮಾಂಸವನ್ನು ತಿನ್ನುಸಿ ಜನರನ್ನು ಮೋಸ ಮಾಡುತ್ತಿದ್ದಾರೆ ಎಂದು ನಿರೂಪಣೆಯೊಂದಿಗೆ ಕಾರ್ಯಕ್ರಮವನ್ನು ರೂಪಿಸಿದ್ದರು. ಅಷ್ಟೇ ಅಲ್ಲ ಈ ಕೃತ್ಯಕ್ಕೆ ಮುಸ್ಲೀಮರೇ ಕಾರಣವೆಂದೂ ಸಹ ಪ್ರಸಾರ ಮಾಡಿದ್ದರು.
ಟಿವಿ ವಿಕ್ರಮ ನಿರೂಪಕಿ "ಇಷ್ಟು ದಿನ ರಾಜ್ಯದಲ್ಲಿ ಗೋವುಗಳು ಮಾತ್ರ ಸೇಫ್ ಅಲ್ಲ ಅಂದುಕೊಂಡಿದೆವು, ಆದರೆ ಈಗ ಗೊತ್ತಾಗುತ್ತಿದೆ ನಮ್ಮ ರಾಜ್ಯದಲ್ಲಿ ನಾಯಿಗಳು ಸಹ ಸೇಫ್ ಅಲ್ಲ ಎಂದು. ಅಷ್ಟೇ ಅಲ್ಲ ಅಬ್ದುಲ್ ರಜಾಕ್ ಮತ್ತು ತನ್ನ ತಂಡದವರು ಬೀದಿ ನಾಯಿಗಳು ಖಾಲಿಯಾದ ಮೇಲೆ ಮನೆಯಲ್ಲಿರುವ ಸಾಕು ನಾಯಿಗಳನ್ನೂ ಸಹ ಕದ್ದು ನಾಯಿ ಮಾಂಸವನ್ನು ಮಾರಾಟ ಮಾಡಬಹುದು" ಎಂದು ನೂರೂಪಣೆ ಮಾಡಿದ್ದರು.
https://www.youtube.com/@tvvikrama
ಇದೇ ಸುದ್ದಿಯನ್ನು ಕೆಲವು ಪ್ರಮುಖ ಮಾಧ್ಯಮ ಚಾನೆಲ್ ಕೂಡ ಪ್ರಸಾರ ಮಾಡಿತ್ತು.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ರೈಲಿನಲ್ಲಿ ತಂದಂತಹ ಮಾಂಸ ನಾಯಿ ಮಾಂಸವಲ್ಲ ಬದಲಿಗೆ ಕುರಿ ಮಾಂಸ ಎಂದು ಆಹಾರ ಸುರಕ್ಷತಾ ಇಲಾಖೆ ಸ್ಪಷ್ಟಪಡಿಸಿದೆ
ಕರ್ನಾಟಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಪಾರ್ಸೆಲ್ಗಳಲ್ಲಿ ಪತ್ತೆಯಾದ ಪ್ರಾಣಿಗಳ ಮಾಂಸದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿದ್ದರು. ಈ ಸಂಬಂಧಕ್ಕೆ ಸಂಬಂಧ ಪ್ರಯೋಗಾಲಯದಿಂದ ವರದಿ ಬಂದಿದ್ದು, ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದು ನಾಯಿ ಮಾಂಸ ಅಲ್ಲ, ಅದು ಮೇಕೆಯ ಮಾಂಸ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಸ್ಪಷ್ಟಪಡಿಸಿದರು.
ರಾಜಸ್ಥಾನದಿಂದ ಪ್ರತಿವಾರ ಅಥವಾ 15 ದಿನಕ್ಕೊಮ್ಮೆ ಮಾಂಸ ತಂದು ಮಾರಾಟ ಮಾಡುವುದು ಕೆಲವರ ಕೆಲಸ. ಆದರೆ, ಯಾರೋ ಹೋಗಿ ಅದು ನಾಯಿ ಮಾಂಸ ಅಂತಾ ಹೇಳಿ, ಅನಾವಶ್ಯಕವಾಗಿ ಆರೋಪ ಮಾಡಿ, ಗಲಾಟೆ ಮಾಡಿದ್ದಾರೆ. ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಯವರು ಮಾಂಸವನ್ನು ಹೈದರಾಬಾದ್ನಲ್ಲಿರುವ ರಾಷ್ಟ್ರೀಯ ಪ್ರಯೋಗಾಲಯಕ್ಕೆ ಕಳಿಸಿದ್ದಾರೆ. ಪ್ರಯೋಗಾಲಯದಿಂದ ವರದಿ ಬಂದಿದ್ದು, ಅದು ನಾಯಿ ಮಾಂಸ ಅಲ್ಲ, ಮೇಕೆ ಮಾಂಸವೆಂಬುದಾಗಿ ಸಾಭೀತಾಗಿದೆ. ಯಾರೇ ಆಗಲಿ ಅನಾವಶ್ಯಕವಾಗಿ, ದುರುದ್ದೇಶದಿಂದ ಗಲಾಟೆ ಮಾಡಲು ಮುಂದಾದರೆ ಸುಮ್ಮನೆ ಇರಲಾಗುವುದಿಲ್ಲ. ಈ ಪ್ರಕರಣಕ್ಕೆ ಸಂಬಂಧೀಸಿ ಪೊಲೀಸರು ಸೂಕ್ತ ಕ್ರಮವನ್ನು ಕೈಗೊಳ್ಳುತ್ತಾರೆ ಎಂದು ಹಿಂದೂ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ ಬಂಧನವನ್ನು ಸಚಿವರಾದ ಜಿ. ಪರಮೇಶ್ವರ ಸಮರ್ಥಿಸಿಕೊಂಡರು.
ಮಾಂಸದ ಸ್ಯಾಂಪಲ್ ಟೆಸ್ಟಿಂಗ್ ವರದಿಯನ್ನು ಆಹಾರ ಇಲಾಖೆಯು ಪ್ರಕಟಿಸಿದ್ದು, ಅದು ನಾಯಿ ಮಾಂಸ ಅಲ್ಲ, ಶಿರೋಹಿ ತಳಿಯ ಕುರಿ ಮಾಂಸ ಎಂಬುದನ್ನು ವರದಿಯಲ್ಲಿ ಬಹಿರಂಗ ಪಡಿಸಲಾಗಿದೆ. ಹೀಗಾಗಿ ಬೆಂಗಳೂರಿಗರು ಇನ್ನು ನಿಶ್ಚಿಂತೆಯಿಂದ ಇರಬಹುದು. ಆಧಾರರಹಿತ ವದಂತಿಗಳಿಗೆ ಕಿವಿಗೊಡಬೇಡಿ. ಅಧಿಕೃತವಾಗಿ ಇದು ಕುರಿ ಮಾಂಸ ಎಂಬುದು ದೃಢಪಟ್ಟಿದೆ. ತಪ್ಪು ಮಾಹಿತಿ ಹರಡುವುದನ್ನು ತಡೆಯುವಲ್ಲಿ ನಿಮ್ಮ ಸಹಕಾರ ಅತ್ಯಗತ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಎಕ್ಸ್ನಲ್ಲಿ ತಿಳಿಸಿದ್ದಾರೆ.
Following recent media reports alleging the transportation of mutton and other animal meat from Rajasthan to Bengaluru via train, we committed to thoroughly investigating this matter through scientific verification. To ensure accuracy, we sent a total of 84 parcels to the… pic.twitter.com/NzWsAqzJS0
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) July 31, 2024
ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ಸಾಭೀತಾಗಿದೆ. ರೈಲಿನಲ್ಲಿ ಸಾಗಿಸಿದ ಮಾಂಸ ನಾಯಿ ಮಾಂಸವಲ್ಲ ಬದಲಿಗೆ ಕುರಿ ಮಾಂಸ ಎಂದು ಆಹಾರ ಸುರಕ್ಷತಾ ಇಲಾಖೆ ಸ್ಪಷ್ಟಪಡಿಸಿದೆ.