ಫ್ಯಾಕ್ಟ್ಚೆಕ್: ವಕ್ಫ್ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಜಮೀರ್ ಅಹಮದ್ಗೆ ರೈತರು ಥಳಿಸಿಲ್ಲ
ವಕ್ಫ್ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಜಮೀರ್ ಅಹಮದ್ಗೆ ರೈತರು ಥಳಿಸಿಲ್ಲ
Claim :
ವಕ್ಫ್ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಜಮೀರ್ ಅಹಮದ್ಗೆ ರೈತರು ಥಳಿಸಿದ್ದಾರೆFact :
ವೈರಲ್ ಆದ ವಿಡಿಯೋ 2020ರಲ್ಲಿ, ಸಿಎಎ ಕುರಿತು ಬಳ್ಳಾರಿಯಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದ್ದು
ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ವಿಜಯಪುರ ಜಿಲ್ಲೆಯ ರೈತರ ಜಮೀನು ಒಡೆತನಕ್ಕೆ ಹಕ್ಕು ಮಂಡಿಸಿದ ನಂತರ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಮಾತಿನ ಯುದ್ದವೇ ನಡೆಯುತ್ತಿದೆ. ಇದೀಗ ರಾಜ್ಯಾದ್ಯಂತ ವಕ್ಫ್ ವಿವಾದ ತಾರಕಕ್ಕೇರುತ್ತಿದೆ. ರಾಜ್ಯದಲ್ಲಿರುವ ರೈತ ಜಮೀನು, ಮಠಗಳ ಆಸ್ತಿ ಹಾಗೂ ಶಿಕ್ಷಣ ಸಂಸ್ಥೆಗಳ ಜಾಗಗಳನ್ನು ಅಕ್ರಮವಾಗಿ ರಾಜ್ಯ ಸರ್ಕಾರ ದೊಚಿಕೊಳ್ಳುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ವಕ್ಫ್ ವಿಚಾರದಲ್ಲಿ ಸಚಿವ ಜಮೀರ್ ಅಹಮದ್ರ ಅಶ್ವಮೇಧ ಕುದುರೆಯನ್ನು ಕಲಬುರಗಿ, ಬೀದರ್ ಹಾಗೂ ಇತರ ಜಿಲ್ಲೆಗಳಲ್ಲಿ ಯಾರೂ ತಡೆಯಲು ಪ್ರಯತ್ನಿಸಿಲ್ಲ ಆದರೆ ನಾನು ವಿಜಯಪುರದಲ್ಲಿ ತಡೆದಿದ್ದೇನೆ ಎಂದ ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ ಬೆನ್ನಲ್ಲೆ ರಾಜ್ಯದ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ರನ್ನು ರೈತರು ಥಳಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ 1.32 ನಿಮಿಷಗಳ ವೀಡಿಯೊವೊಂದು ವೈರಲ್ ಆಗುತ್ತಿದೆ. ಈ ವೀಡಿಯೊವನ್ನು ನೋಡುವುದಾದರೆ, ಜಮೀರ್ ಅಹಮದ್ರನ್ನು ನೆರೆದಿದ್ದ ಜನರ ಗುಂಪೊಂದು ತಳ್ಳಾಟ ನಡೆಸುವಾಗ ಜಮೀರ್ ಅಹ್ಮದ್ ಖಾನ್ನನ್ನು ಪೊಲೀಸರು ವಶಕ್ಕೆ ಪಡೆಯುತ್ತಿರುವಂತೆ ಕಾಣುತ್ತಿದೆ.
ವೈರಲ್ ಆದ ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು
ನವಂಬರ್ 08, 2024ರಂದು "ಕರ್ನಾಟಕ ಅಡಿಕೆ, ತೆಂಗು, ಕಾಫಿ, ಭತ್ತ, ಶುಂಠಿ ಇತ್ತಯಾದಿ ಬೆಳೆಗಾರರು" ಎಂಬ ಫೇಸ್ಬುಕ್ ಗ್ರೂಪ್ನಲ್ಲಿ ʼನಾಗರಾಜ್ ಕಮ್ಮಾರ್ʼ ಎಂಬ ಫೇಸ್ಬುಕ್ ಖಾತೆದಾರ "ಧರ್ಮವು ಕುಸಿದಾಗ, ಅಧರ್ಮ ತಾಂಡವ ನೃತ್ಯ ಮಾಡುತ್ತಿದ್ದರೇ....ಪ್ರತಿಯೊಬ್ಬ ಭಾರತೀಯ ಅರ್ಜುನ ಆಗಲೇಬೇಕು. ಏಕೆಂದರೆ ನಮಗೆ ಸಾರಥಿಯಾಗಿ ಇರುವ ವ್ಯಕ್ತಿ ಬೇರಾರೂ ಅಲ್ಲ. ಶ್ರೀ ಕೃಷ್ಣನೇ ನಮಗೆ ಮಾರ್ಗ ತೋರುವ ಸಾರಥಿಯಾಗಿರುವಾಗ ಧರ್ಮಕ್ಕಾಗಿ ಯುದ್ಧ ಅನಿವಾರ್ಯ. ಜಮೀರ್ ಪರ್ ಜಮೀನ್" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ
ನವಂಬರ್ 08, 2024ರಂದು ಅನಿತಾ ಚಂದ್ರಾ ಎಂಬ ಎಕ್ಸ್ ಖಾತೆದಾರರು "ಕೊನೆಗೂ ಬಿತ್ತು ಜಮೀರ್ ಗೆ ಧರ್ಮದೇಟು, ರೈತರ ಆಸ್ತಿ ದೇಶದ ಸಂಪತ್ತು ಇವರ ಅಪ್ಪನ ಮನೆ ಆಸ್ತಿ ಅಂದ್ಕೊಂಡಿದ್ದ ತಿರ್ಬೋಕಿಗಳಿಗೆ ಇನ್ಮೇಲಾದ್ರೂ ಬುದ್ದಿ ಬರ್ಬೇಕು" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ಕಾಣಬಹುದು.
ಮತ್ತೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡು "ರೈತರ ಏಟು ಹೇಗಿರುತ್ತೆ ಅಂತ ಜಮೀನು ಕಳ್ಳ ಜಮೀರನಿಗೆ ಇವತ್ ಗೊತ್ತಾಯಿತು..." ಎಂಬ ಶೀರ್ಷಿಕೆಯೊಂದಿಗೆ ಜಮೀರ್ ಅಹಮದ್ರ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ವಿಡಿಯೋ 2020ರದ್ದು ಸಿಎಎ ಸಂಬಂಧಿಸಿ ಬಳ್ಳಾರಿಯಲ್ಲಿ ನಡೆದ ಪ್ರತಿಭಟನೆಯದ್ದು.
ನಾವು ವೈರಲ್ ಆದ ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ಕೆಲವು ಪ್ರಮುಖ ಕೀವರ್ಡ್ಗಳನ್ನು ಬಳಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಯಾವುದೇ ವರದಿಗಳು ಸಿಗಲಿಲ್ಲ. ನಾವು ವಿಡಿಯೋವಿನಲ್ಲಿ ಕಂಡುಬರುವ ಕೆಲವು ಪ್ರಮುಖ ಕೀಫ್ರೇಮ್ಗಲನ್ನು ಉಪಯೋಗಿಸಿ ಹುಡುಕಾಟ ನಡೆಸಿದಾಗ ನಮಗೆ ಕೆಲವು ಮಾಧ್ಯಮ ವರದಿಗಳು ಲಭ್ಯವಾದವು.
ಜನವರಿ 13, 2020ರಂದು ʼಉದಯವಾಣಿʼ ವೆಬ್ಸೈಟ್ನಲ್ಲಿ ʼಬಳ್ಳಾರಿಗೆ ಆಗಮಿಸಿದ ಜಮೀರ್ ಅಹಮದ್; ವಶಕ್ಕೆ ಪಡೆದ ಪೊಲೀಸರುʼ ಎಂಬ ಶೀರ್ಷಿಕೆಯೊಂದಿಗೆ ವರದೊಂದು ಪ್ರಕಟಿಸಿರುವುದನ್ನು ನಾವು ಕಂಡಿಕೊಂಡೆವು. ವರದಿಯಲ್ಲಿ ʼಸೋಮಶೇಖರ ರೆಡ್ಡಿ ಮನೆ ಎದುರು ಧರಣಿ ಮಾಡಲು ಬಂದಿದ್ದ ಜಮೀರ್ ಅಹ್ಮದ್ರನ್ನು ಬಳ್ಳಾರಿ ಹೊರವಲಯದ ಬೈಪಾಸ್ ರಸ್ತೆ ಬಳಿ ಪೊಲೀಸರು ಬಂಧಿಸಿದರು. ಶಾಸಕ ಸೋಮಶೇಖರ ರೆಡ್ಡಿ ಪ್ರಚೋದನಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ಜಮೀರ್ ಅಹ್ಮದ್ ಅವರು ಶಾಸಕ ಸೊಮಶೇಖರ ರೆಡ್ಡಿಯವರು ಕ್ಷಮೆ ಯಾಚಿಸಬೇಕು. ಅವರನ್ನು ಪೊಲೀಸರು ಬಂಧಿಸಬೇಕು ಎಂದು ವರದಿಯಾಗಿರುವುದನ್ನು ನಾವು ಕಂಡುಕೊಂಡೆವು.
ಜನವರಿ 13, 2020ರಂದು ʼವಿಜಯ ಕರ್ನಾಟಕʼ ವೆಬ್ಸೈಟ್ನಲ್ಲಿ ಪ್ರಟಿಸಿದ್ದ ವರದಿಯ ಪ್ರಕಾರ, ‘‘ಶಾಸಕ ಸೋಮಶೇಖರ ರೆಡ್ಡಿ ಮನೆ ಮುಂದೆ ಪ್ರತಿಭಟನೆ ನಡೆಸಲು ನಗರ ಪ್ರವೇಶ ಮಾಡುತ್ತಿದ್ದ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ರನ್ನು ಬಳ್ಳಾರಿಯ ಹೊರವಲಯದಲ್ಲಿ ಪೊಲೀಸರು ವಶಕ್ಕೆ ಪಡೆದರು. ಮುಂಜಾಗ್ರತಾ ಕ್ರಮವಾಗಿ ಶಾಸಕ ಸೋಮಶೇಖರ್ ರೆಡ್ಡಿ ಮನೆಗೆ ಬೀಗಿ ಭದ್ರತೆ ಕೈಗೊಳ್ಳಲಾಗಿತ್ತು. ಜನವರಿ 03, 2020ರಂದು ಬಳ್ಳಾರಿಯಲ್ಲಿ ಸಿಎಎ ಪರ ಪ್ರತಿಭಟನೆಯಲ್ಲಿ ಮಾತನಾಡಿದ್ದ ಸೋಮಶೇಖರ್ ರೆಡ್ಡಿ, ನೀವು ಶೇ. 17ರಷ್ಟು ಮಾತ್ರವಿದ್ದು, ಶೇ. 80ರಷ್ಟು ನಾವು ಇದ್ದೇವೆ. ನಾವು ತಿರುಗಿಬಿದ್ದರೆ ನಿಮ್ಮ ಪರಿಸ್ಥಿತಿ ಏನಾಗಬೇಕು ಎಂಬುದನ್ನು ಊಹಿಸಿಕೊಳ್ಳಿ. ಹಿಂದೂಗಳನ್ನು ಕೆಣಕಲು ಬರಬೇಡಿ ಎಂದು ಮುಸ್ಲಿಂ ಸಮುದಾಯದವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದರು’’ ಎಂದು ವರದಿಯಾಗಿದೆ.
ಜನವರಿ 13, 2020ರಂದು ʼಟಿವಿ9 ಕನ್ನಡʼ ಯೂಟ್ಯೂಬ್ ಚಾನೆಲ್ನಲ್ಲಿ "Zameer Ahmed Khan Detained By Ballari Cops For Trying To Stage Protest Against Somashekar Reddy" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದರು. ಶಿರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಸೋಮಶೇಖರ್ ಮನೆಮುಂದೆ ಜಮೀರ್ ಧರಣಿ ವಿಚಾರ - ಜಮೀರ್ ಅಹ್ಮದ್ ಖಾನ್ರನ್ನ ವಶಕ್ಕೆ ಪಡೆದ ಪೊಲೀಸರು - ಪ್ರತಿಭಟನೆ ನಡೆಸಲು ತೆರಳುತ್ತಿದ್ದಾಗ ವಶಕ್ಕೆ ಪಡೆದ ಖಾಕಿ - ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಬಳ್ಳಾರಿ ಖಾಕಿ ವಶಕ್ಕೆʼ ಶೀರ್ಷಿಕೆಯೊಂದಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಜನವರಿ 13, 2020ರಂದು ʼಟಿವಿ5 ಕನ್ನಡʼ ಯೂಟ್ಯೂಬ್ ಚಾನೆಲಲ್ನಲ್ಲಿ ʼಪೊಲೀಸರ ವಶಕ್ಕೆ ಜಮೀರ್ ಅಹಮದ್ʼ ಎಂಬ ಶೀರ್ಷಿಕೆಯಡಿ ವೀಡಿಯೊವನ್ನು ಹಂಚಿಕೊಳ್ಳಲಾಗಿತ್ತು. ಸಿಎಎ ಕುರಿತಂತೆ ಮುಸ್ಲಿಮರ ವಿರುದ್ಧ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಅವರ ಬಳ್ಳಾರಿ ಮನೆ ಎದುರು ಜಮೀರ್ ಅವರು ಪ್ರತಿಭಟನೆಗೆ ಮುಂದಾಗಿದ್ದು, ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.
́ಸುವರ್ಣ ನ್ಯೂಸ್́ ಯೂಟ್ಯೂಬ್ ಚಾನೆಲ್ನಲ್ಲಿ ‘Zameer Ahmed Khan Detained By Ballari Cops For Trying To Stage Protest Against Somashekar Reddy’ ಶೀರ್ಷಿಕೆಯಡಿ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ನೋಡಬಹುದು.
́ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್́ ವೆಬ್ಸೈಟ್ನಲ್ಲಿ ʼCops detain MLA Zameer ahead of protest in Ballariʼ ಎಂಬ ಶೀರ್ಷಿಕೆಯಡಿ ವರದಿ ಮಾಡಿರುವುದನ್ನು ನಾವು ಕಾಣಬಹುದು ಶಾಸಕ ಸೋಮಸೇಖರ್ ರೆಡ್ಡಿ ಹೇಳಿಕೆಗೆ ಸಂಬಂಧಿಸಿದಂತೆ ಸೋಮಶೇಖರ್ ರೆಡ್ಡಿ ಅವರ ಮನೆಮುಂದೆ ಮಾಜಿ ಸಚಿವ ಜಮೀರ್ ಅಹಮ್ಮದ್ ಬೆಂಬಲಿಗರು ಪ್ರತಿಭಟನೆ ನಡೆಸಲು ಮುಂದಾದಾಗ ವಶಕ್ಕೆ ಪಡೆದ ಪೊಲೀಸರು ವರದಿಯಾಗಿರುವುದನ್ನು ಕಾಣಬಹುದು.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರೆಲ್ ಆದ ವಿಡಿಯೋ ಇತ್ತೀಚಿನದಲ್ಲ. 2020ರಲ್ಲಿ ಸಿಎಎ ವಿರುದ್ದ ಹೋರಾಟಕ್ಕೆ ಸಂಬಂಧಿಸಿ ಬಳ್ಳಾರಿಯಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದ್ದು.