ಫ್ಯಾಕ್ಟ್ಚೆಕ್: ರಾಷ್ಟ್ರಪತಿ ಭವನದಲ್ಲಿ ಈಗಾಗಲೇ ಹಲವಾರು ವಿವಾಹಗಳು ನಡೆದಿವೆ
ರಾಷ್ಟ್ರಪತಿ ಭವನದಲ್ಲಿ ಈಗಾಗಲೇ ಹಲವಾರು ವಿವಾಹಗಳು ನಡೆದಿವೆ

Claim :
ಮೊಟ್ಟ ಮೊದಲ ಬಾರಿಗೆ ರಾಷ್ಟ್ರಪತಿ ಭವನದಲ್ಲಿ ವಿವಾಹವನ್ನು ಆಯೋಜಿಸಲಾಗಿದೆFact :
ಈ ಹಿಂದೆಯೂ ಕೂಡ ರಾಷ್ಟ್ರಪತಿ ಭವನದಲ್ಲಿ ಹಲವಾರು ವಿವಾಹಗಳು ನಡೆದಿವೆ
ಭಾರತದ ರಾಷ್ಟ್ರಪತಿಗಳ ಅಧಿಕೃತ ನಿವಾಸವಾದ ರಾಷ್ಟ್ರಪತಿ ಭವನವು ದೇಶದ ಅತ್ಯಂತ ಮಹತ್ವದ ವಾಸ್ತುಶಿಲ್ಪದ ಹೆಗ್ಗುರುತುಗಳಲ್ಲಿ ಒಂದಾಗಿದೆ. ಸರ್ ಎಡ್ವಿನ್ ಲುಟ್ಯೆನ್ಸ್ ವಿನ್ಯಾಸಗೊಳಿಸಿದ ಈ ವಿಸ್ತಾರವಾದ ಎಸ್ಟೇಟ್ 300 ಎಕರೆಗಳನ್ನು ಒಳಗೊಂಡಿದೆ, ಮುಖ್ಯ ಕಟ್ಟಡವು 200,000 ಚದರ ಅಡಿಗಳಿಗಿಂತ ಹೆಚ್ಚು ವಿಸ್ತರಿಸಿದೆ ಮತ್ತು ನಾಲ್ಕು ಮಹಡಿಗಳಲ್ಲಿ 340 ಕೊಠಡಿಗಳನ್ನು ಹೊಂದಿದೆ. ಹಾಗೂ ಇಟಲಿಯ ಕ್ವಿರಿನಲ್ ಅರಮನೆಯ ನಂತರ, ಇದು ವಿಶ್ವದಾದ್ಯಂತ ಯಾವುದೇ ರಾಷ್ಟ್ರದ ಮುಖ್ಯಸ್ಥರ ಎರಡನೇ ಅತಿದೊಡ್ಡ ನಿವಾಸವಾಗಿದೆ.
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ರಾಷ್ಟ್ರಪತಿ ಭವನವು ಇತಿಹಾಸದಲ್ಲಿ ಮೊದಲ ಬಾರಿಗೆ ವಿವಾಹವನ್ನು ಆಯೋಜಿಸಲಿದೆ ಎಂಬ ಶೀರ್ಷಿಕೆಯೊಂದಿಗೆ ವರದಿಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿಯೊಂದು ಹರಿದಾಡುತ್ತಿದೆ. ರಾಷ್ಟ್ರಪತಿ ಭವನದ ಭದ್ರತಾ ವಿಭಾಗದಲ್ಲಿ ವೈಯಕ್ತಿಕ ಭದ್ರತಾ ಅಧಿಕಾರಿ ಆಗಿ ಕಾರ್ಯನಿರ್ವಹಿಸುತ್ತಿರುವ ಪೂನಂ ಗುಪ್ತಾ ಅವರ ವಿವಾಹವು ಫೆಬ್ರವರಿ 12, 2025ರಂದು ರಾಷ್ಟ್ರಪತಿ ಭವನದಲ್ಲಿ ಅದ್ದೂರಿಯಾಗಿ ನಡೆಯಿತು ಮತ್ತು ರಾಷ್ಟ್ರಪತಿ ದೌಪದಿ ಮುರ್ಮು ಅವರು ಈ ಅವಕಾಶವನ್ನು ವಿಶೇಷವಾಗಿ ಒದಗಿಸಿದರು ಎಂದು ವರದಿ ಮಾಡಲಾಗಿದೆ.
ಕನ್ನಡ ಮಾಧ್ಯಮ ಸಂಸ್ಥೆ ನ್ಯೂಸ್18 ಕನ್ನಡ ವೆಬ್ಸೈಟ್ನಲ್ಲಿ ʼMarriage at Rashtrapati Bhavan: ರಾಷ್ಟ್ರಪತಿ ಭವನದಲ್ಲಿ 'ಮಾಂಗಲ್ಯಂ ತಂತುನಾನೇನ'! ದ್ರೌಪದಿ ಮುರ್ಮು ಸಮ್ಮುಖದಲ್ಲಿ ಮದುವೆ ಆಗೋರು ಯಾರು ಗೊತ್ತಾ?ʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಲಾಗಿದೆ. ವರದಿಯಲ್ಲಿ ʼದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರಪತಿ ಭವನ, ಮದುವೆ ಸಮಾರಂಭವೊಂದಕ್ಕೆ ಸಜ್ಜಾಗುತ್ತಿದೆ. ರಾಷ್ಟ್ರಪತಿ ಭವನವು ಭಾರತದ ರಾಷ್ಟ್ರಪತಿಗಳ ಅಧಿಕೃತ ನಿವಾಸ. ವಿದೇಶಿ ರಾಷ್ಟ್ರಗಳ ಮುಖ್ಯಸ್ಥರು ಅಧಿಕೃತ ಭೇಟಿಗೆ ದೇಶಕ್ಕೆ ಬಂದಾಗ ರಾಷ್ಟ್ರಪತಿ ಭವನದಲ್ಲಿ ತಂಗುತ್ತಾರೆ. ಆದರೆ, ರಾಷ್ಟ್ರಪತಿ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿಯ ಮದುವೆಯನ್ನು ರಾಷ್ಟ್ರಪತಿ ಭವನದ ವ್ಯಾಪ್ತಿಯಲ್ಲೇ ನಡೆಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮತಿ ನೀಡಿದ್ದಾರೆ. ಅದರಂತೆ ಫೆ.12ರಂದು ರಾಷ್ಟ್ರಪತಿ ಭವನದ ಆವರಣದಲ್ಲಿ ವಿವಾಹ ಸಮಾರಂಭ ನಡೆಯಲಿದೆʼ ಎಂದು ವರದಿ ಮಾಡಲಾಗಿದೆ
ವೈರಲ್ ಆದ ಸುದ್ದಿಯ ಸ್ಕ್ರೀನ್ಶಾಟ್ನ್ನು ನಾವಿಲ್ಲಿ ನೋಡಬಹುದು.
ʼಪಬ್ಲಿಕ್ ಟಿವಿʼ ವೆಬ್ಸೈಟ್ನಲ್ಲಿ ಇದೇ ಮೊದಲಬಾರಿಗೆ ಮದುವೆ ಸಮಾರಂಭಕ್ಕೆ ಸಜ್ಜಾಗುತ್ತಿದೆ ರಾಷ್ಟ್ರಪತಿ ಭವನ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಲಾಗಿದೆ. ವರದಿಯಲ್ಲಿ ʼರಾಷ್ಟ್ರಪತಿ ಭವನದಲ್ಲಿ ಮೊದಲ ಬಾರಿ ಮದುವೆ ಸಮಾರಂಭಕ್ಕೆ ಸಜ್ಜಾಗುತ್ತಿದೆ. ರಾಷ್ಟ್ರಪತಿ ಭವನದ ಪಿಎಸ್ಓ ಆಗಿರುವ ಸಿಆರ್ಪಿಎಫ್ ಅಸಿಸ್ಟಂಟ್ ಕಮಾಂಡೆಂಟ್ ಪೂನಂ ಗುಪ್ತಾಗೆ ಇಂತಹ ಅದೃಷ್ಟ ಒಲಿದು ಬಂದಿದೆ. ಫೆಬ್ರವರಿ 12ರಂದು ನಡೆಯುವ ಮದ್ವೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ವಿಶೇಷ ಅನುಮತಿ ನೀಡಿದ್ದಾರೆʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಲಾಗಿದೆ
ʼಟಿವಿ9 ಕನ್ನಡʼ ವೆಬ್ಸೈಟ್ನಲ್ಲಿ ʼಮೊದಲ ಬಾರಿಗೆ ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿದೆ ಮದುವೆ, ವಧು-ವರ ಯಾರು?ʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಲಾಗಿದೆ ವರದಿಯಲ್ಲಿ ʼದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರಪತಿ ಭವನದಲ್ಲಿ ವಿವಾಹವನ್ನು ಆಯೋಜಿಸಲಾಗುತ್ತಿದೆ., ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿರುವ ಮೊದಲ ಮದುವೆಯಿದು. ಪೂನಂ ಗುಪ್ತಾ ಅವರ ವಿವಾಹ ಸಮಾರಂಭದಲ್ಲಿ ಆಪ್ತ ಕುಟುಂಬ ಸದಸ್ಯರು ಮಾತ್ರ ಭಾಗವಹಿಸಲಿದ್ದಾರೆ. ಪೂನಂ ಗುಪ್ತಾ ಅವರ ವಿವಾಹವನ್ನು ರಾಷ್ಟ್ರಪತಿ ಭವನದಲ್ಲಿರುವ ಮದರ್ ತೆರೇಸಾ ಕಾಂಪ್ಲೆಕ್ಸ್ನಲ್ಲಿ ಆಯೋಜಿಸಲಾಗಿದೆ. 70 ವರ್ಷಗಳಿಗೂ ಹೆಚ್ಚು ಕಾಲ, ರಾಷ್ಟ್ರಪತಿ ಭವನವು ಭಾರತದ ಪ್ರಜಾಪ್ರಭುತ್ವ, ಆಡಳಿತ ಮತ್ತು ಶ್ರೀಮಂತ ಪರಂಪರೆಯ ಸಂಕೇತವಾಗಿದೆ. ಈ ಬೃಹತ್ ಸಂಕೀರ್ಣವು ಭಾರತದ ರಾಷ್ಟ್ರಪತಿಗಳ ಅಧಿಕೃತ ನಿವಾಸವಾಗಿದ್ದು, ಅಲ್ಲಿ ಸರ್ಕಾರಿ ಕಾರ್ಯಕ್ರಮಗಳು ನಡೆಯುತ್ತವೆ ಮತ್ತು ಅನೇಕ ಜಾಗತಿಕ ಗಣ್ಯರನ್ನು ಸ್ವಾಗತಿಸಲಾಗುತ್ತದೆ. ಆದಾಗ್ಯೂ, ಇದಕ್ಕೆ ಮೊದಲು ಇಲ್ಲಿ ಯಾವುದೇ ವಿವಾಹ ಸಮಾರಂಭ ನಡೆದಿರಲಿಲ್ಲʼ ಎಂದು ವರದಿ ಮಾಡಲಾಗಿದೆ.
ʼಈದಿನ.ಕಾಂʼ ಎಂಬ ವೆಬ್ಸೈಟ್ನಲ್ಲೂ ಸಹ ʼಮೊದಲ ಬಾರಿಗೆ ರಾಷ್ಟ್ರಪತಿ ಭವನದಲ್ಲಿ ಮದುವೆ: ಸಮಾರಂಭಕ್ಕೆ ಬ್ರೌಪದಿ ಮುರ್ಮು ಅನುಮತಿʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಲಾಗಿದೆ. ವರದಿಯಲ್ಲಿ ʼರಾಷ್ಟ್ರಪತಿ ಭವನ ಇದೇ ಮೊದಲ ಬಾರಿ ಮದುವೆ ಸಮಾರಂಭಕ್ಕೆ ಸಜ್ಜಾಗುತ್ತಿದೆ. ರಾಷ್ಟ್ರಪತಿ ಭವನದ ಪಿಎಸ್ಓ ಅಧಿಕಾರಿಯಾಗಿರುವ ಸಿಆರ್ಪಿಎಫ್ ಅಸಿಸ್ಟಂಟ್ ಕಮಾಂಡೆಂಟ್ ಪೂನಂ ಗುಪ್ತಾ ತಾವು ನಿರ್ವಹಿಸುವ ಕಚೇರಿಯ ಸಭಾಂಗಣದಲ್ಲಿ ವಿವಾಹವಾಗುತ್ತಿದ್ದಾರೆ. ಇಲ್ಲಿನ ಮದರ್ ಥೆರೆಸಾ ಕ್ರೌನ್ ಕಾಂಪ್ಲೆಕ್ಸ್ನಲ್ಲಿ ಫೆಬ್ರವರಿ 12ರಂದು ನಡೆಯುವ ಮದುವೆಗೆ ರಾಷ್ಟ್ರಪತಿ ದೌಪದಿ ಮುರ್ಮು ವಿಶೇಷ ಅನುಮತಿ ನೀಡಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಸಿಆರ್ಪಿಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಅವನೀಶ್ ಜೊತೆ ಪೂನಂ ಗುಪ್ತಾ ಮದುವೆ ನಿಗದಿ ಆಗಿದೆ. ಮದುವೆಯಲ್ಲಿ ಸಂಬಂಧಿಕರು, ಸ್ನೇಹಿತರು ಪಾಲ್ಗೊಳ್ಳುವ ನಿರೀಕ್ಷೆಯಿದೆʼ ಎಂದು ವರದಿ ಮಾಡಿಲಾಗಿದೆ.
ಪ್ರಮುಖ ಸುದ್ದಿ ಮಾಧ್ಯಮಗಳಾದ ನ್ಯೂಸ್1st ಕನ್ನಡ, ನವ ಸಮಾಜ.ಕಾಂ, ಪವರ್ ಟಿವಿ ನ್ಯೂಸ್, ನಿಖರ ನ್ಯೂಸ್, ಸಿಎನ್ಬಿಸಿ-ಟಿವಿ18 , ಇಂಡಿಯಾ ಟುಡೇ, ದಿ ಮಿಂಟ್ , ಡೆಕ್ಕನ್ ಹೆರಾಲ್ಡ್ ಗಳ ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಮತ್ತು ವರದಿಗಳ ಪ್ರಕಾರ, ರಾಷ್ಟ್ರಪತಿ ಭವನವು ಫೆಬ್ರವರಿ 12, 2025 ರಂದು ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ವಿವಾಹವನ್ನು ಆಯೋಜಿಸಿತ್ತು ಎಂದು ವರದಿ ಮಾಡಲಾಗಿದೆ.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಮಾಧ್ಯಮದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಸರ್ಕಾರದ ಸತ್ಯ ಪರಿಶೀಲನಾ ವಿಭಾಗವಾದ ಪಿಐಬಿ ಫ್ಯಾಕ್ಟ್ ಚೆಕ್ ತನ್ನ ಎಕ್ಸ್ ಖಾತೆಯಲ್ಲಿ ʼಈ ಹಿಂದೆಯೂ ಕೂಡ ರಾಷ್ಟ್ರಪತಿ ಭವನದಲ್ಲಿ ವಿವಾಹಗಳು ನಡೆದಿವೆʼ ಎಂಬುದನ್ನು ಸ್ಪಷ್ಟ ಪಡಿಸಿದೆ.
ರಾಷ್ಟ್ರಪತಿ ಭವನದ ಅಧಿಕೃತ ವೆಬ್ಸೈಟ್ನ್ನು ಪರಿಶೀಲಿಸಿದರೆ, ಎಲ್ಲಿಯೂ ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿರುವ ಮೊದಲ ಮದುವೆ ಎಂದು ಉಲ್ಲೇಖಿಸಿ ಮಾಧ್ಯಮ ಹೇಳಿಕೆ ಪ್ರಕಟಿಸಿರುವುದು ಕಂಡು ಬಂದಿಲ್ಲ. ಇದರ ಜೊತೆಗೆ ಮದುವೆಯ ಕುರಿತು ಯಾವುದೇ ಮಾಹಿತಿಯೂ ಕಂಡು ಬಂದಿಲ್ಲ.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ʼರಾಷ್ಟ್ರಪತಿ ಭವನದಲ್ಲಿ ನಡೆದ ಮೊಟ್ಟ ಮೊದಲ ಮದುವೆ/ First ever wedding in Rastrapathi Bhavanʼ ಎಂಬ ಕೀವರ್ಡ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಫೆಬ್ರವರಿ 12, 2025ರಂದು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋದ ಫ್ಯಾಕ್ಟ್ಚೆಕ್ ಘಟಕವು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ವೈರಲ್ ಆದ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ರಾಷ್ಟ್ರಪತಿ ಭವನ ಹಲವು ಮದುವೆಗಳಿಗೆ ಸಾಕ್ಷಿಯಾಗಿದೆ. ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿರುವುದು ಇದೇ ಮೊದಲ ಮದುವೆಯಲ್ಲ ಎಂದು ಪೊಸ್ಟ್ ಮಾಡಿರುವುದನ್ನು ನೋಡಬಹುದು.
ಮತ್ತಷ್ಟು ಮಾಹಿತಿಯನ್ನು ತಿಳಿಯಲು ನಾವು ʼರಾಷ್ಟ್ರಪತಿ ಭವನದ ಅಧಿಕೃತ ಆನ್ಲೈನ್ ಡಿಜಿಟಲ್ ಫೋಟೋ ಲೈಬ್ರರಿʼಯಲ್ಲಿ 2015ರಿಂದ ಈವರೆಗೆ ರಾಷ್ಟ್ರಪತಿ ಭವನದಲ್ಲಿ ನಡೆದ ವಿವಾಹದ ಫೋಟೋಗಳಿಗಾಗಿ ನಾವು ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿದ್ದ ಆರಕ್ಷತೆಯ ಮೂರು ಫೋಟೋ ಆಲ್ಬಮ್ಗಳು ಕಂಡುಬಂದವು. ಈ ಕಾರ್ಯಕ್ರಮಗಳಲ್ಲಿ ರಾಷ್ಟ್ರಪತಿಗಳು ಮತ್ತು ರಾಷ್ಟ್ರಪತಿ ಭವನದ ಸಿಬ್ಬಂದಿಯ ಕುಟುಂಬಗಳು ಭಾಗವಹಿಸಿದ್ದವು, ಮಾಜಿ ರಾಷ್ಟ್ರಪತಿಗಳಾದ ರಾಮ್ ನಾಥ್ ಕೋವಿಂದ್ ಮತ್ತು ಪ್ರಣಬ್ ಮುಖರ್ಜಿ ಅವರ ಕೆಲವು ಕಾರ್ಯಕ್ರಮಗಳಲ್ಲಿ ಹಾಜರಿದ್ದರು. ಅಕ್ಟೋಬರ್ 2016 ರಲ್ಲಿ ಮತ್ತು ಏಪ್ರಿಲ್ 2017 ರಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆದ ವಿವಾಹಗಳಲ್ಲಿ ದಿವಂಗತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಭಾಗವಹಿಸಿದ್ದ ಫೋಟೋಗಳನ್ನು ನೀವಿಲ್ಲಿ ನೋಡಬಹುದು. ಫೆಬ್ರವರಿ 2018 ರಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆದ ಮದುವೆಯಲ್ಲಿ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಭಾಗವಹಿಸಿದ್ದ ಫೋಟೋಗಳನ್ನು ನೀಲ್ಲಿ ನೋಡಬಹುದು.
ಫೆಬ್ರವರಿ 12, 2025 ರಂದು ರಾಷ್ಟ್ರಪತಿ ಭವನದಲ್ಲಿ ವಿವಾಹವಾದ ಪೂನಂ ಗುಪ್ತಾ, 2023ರಲ್ಲಿ ನಡೆದ 74ನೇ ಗಣರಾಜ್ಯೋತ್ಸವದ ಪರೇಡ್ನಲ್ಲಿ ಮಹಿಳಾ CRPF ತುಕಡಿಯನ್ನು ಮುನ್ನಡೆಸಿದರು. ಅವರ ಪತಿ ಅವನೀಶ್ ಕುಮಾರ್ ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ CRPF ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ತವ್ಯ ನಿರ್ವಹಣೆಯಲ್ಲಿ ಪೂನಂ ಗುಪ್ತಾರವರ ಸಮರ್ಪಣೆಯನ್ನು ಗುರುತಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ರಾಷ್ಟ್ರಪತಿ ಭವನದಲ್ಲಿ ಮದುವೆಗೆ ಅನುಮತಿ ನೀಡಿದರು.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಮಾಧ್ಯಮದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ರಾಷ್ಟ್ರಪತಿ ಭವನದಲ್ಲಿ ಸಿಆರ್ಪಿಎಫ್ ಸಹಾಯಕ ಕಮಾಂಡೆಂಟ್ ಪೂನಂ ಗುಪ್ತಾ ಅವರ ವಿವಾಹವು ಇದೇ ಮೊದಲಲ್ಲ, ಈ ಹಿಂದೆಯೂ ಹಲವಾರು ವಿವಾಹಗಳು ನಡೆದಿವೆ.