ಫ್ಯಾಕ್ಟ್ಚೆಕ್: ಪೊಲೀಸರಿಂದ ಬಂಧನಕ್ಕೊಳಗಾಗುವ ಭೀತಿಯಿಂದ ಕಿರಣ್ ಸಾವನಪ್ಪಿಲ್ಲ
ಪೊಲೀಸರಿಂದ ಬಂಧನಕ್ಕೊಳಗಾಗುವ ಭೀತಿಯಿಂದ ಕಿರಣ್ ಸಾವನಪ್ಪಿಲ್ಲ
Claim :
ಬಂಧನ ಭೀತಿಯಿಂದ ಗ್ರಾಮ ತೊರೆದಿದ್ದ ಯುವಕ ಕಿರಣ್ ಮಿದುಳಿಗೆ ಪಾರ್ಶ್ವವಾಯು ಹೊಡೆದು ಮೃತಪಟ್ಟಿದ್ದಾನೆFact :
ನಾಗಮಂಗಲದ ಗಲಭೆಗೆ ಸಂಬಂಧಿಸಿದ A1 ಆರೋಪಿ ಕಿರಣ್ ಕುಮಾರ್ ಹೆಸರನ್ನು ಮೃತಪಟ್ಟಿರುವ ವ್ಯಕ್ತಿಗೆ ಹೋಲಿಸಲಾಗಿದೆ
ಇತ್ತೀಚಿಗೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ಮಂಡ್ಯ ಸರ್ಕಲ್ ಮಾರ್ಗವಾಗಿ ತೆರಳುತ್ತಿದ್ದಾಗ ಯಾ ಅಲ್ಲಾ ಮಸೀದಿ ಮತ್ತು ದುರ್ಗಾ ಮುಂಭಾಗದ ರಸ್ತೆಯಲ್ಲಿ ಅನ್ಯಕೋಮಿಯ ಯುವಕರು ಮೆರವಣಿಗೆಗೆ ತಡೆಯೊಡ್ಡಿ, ಮಸೀದಿ ಮುಂದೆ ಡಿಜೆ ಸೌಂಡ್ಸ್, ತಮಟೆ, ಡೊಳ್ಳು ಬಾರಿಸದಂತೆ ಜಗಳ ಮಾಡಿದ್ದರು. ಇದೇ ವೇಳೆ ಎರಡೂ ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿತ್ತು. ಹಿಂದೂಗಳು ಮತ್ತು ಅನ್ಯಕೋಮಿನ ಯುವಕರ ನಡುವೆ ಮಾತಿನ ಸಮರ, ತಳ್ಳಾಟ ನೂಕಾಟ ನಡೆದಿತ್ತು. ಅಷ್ಟೇ ಅಲ್ಲ ಸಿಕ್ಕ ಸಿಕ್ಕ ವಾಹನಗಳ ಮೇಲೆ, ಅಂಗಡಿಗಳ ಮೇಲೆ ದಾಳಿ ನಡೆಸಿದ್ದರು. ಈ ಗಲಭೆಯಲ್ಲಿ ಗುಜುರಿ ಅಂಗಡಿಯೊಂದಕ್ಕೆ ಬೆಂಕಿಯನ್ನೂ ಸಹ ಹಚ್ಚಿದ್ದರು. ಬೆಂಕಿ ಹಚ್ಚಿದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಜೊತೆಗೆ ಈ ಗಲಾಟೆಯನ್ನು ನಿಯಂತ್ರಿಸಲು ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಿಗೊಳಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಕೆಲವು ಕನ್ನಡ ಪ್ರಮುಖ ಮಾಧ್ಯಮ ಸಂಸ್ಥೆಗಳು ಈ ಸುದ್ದಿಗೆ ಕುರಿತ ವರದಿಗಳನ್ನು ಮಾಡಿವೆ. " ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 52 ಆರೋಪಿಗಳ ಬಂಧಿಸಲಾಗಿದೆ. ಕೆಲವರು ಬಂಧನದ ಭೀತಿಯಿಂದ ಯುವಕರು ಊರು ಬಿಟ್ಟು ಓಡಿಹೊಗಿದ್ದಾರೆ. ಬಂಧನ ಭೀತಿಯಲ್ಲಿ ಗ್ರಾಮ ತೊರೆದಿದ್ದ 23 ವರ್ಷದ ಕಿರಣ್ ಎಂಬ ಯುವಕನೋರ್ವ ಬ್ರೈನ್ ಸ್ಟ್ರೋಕ್ನಿಂದ ಸಾವನ್ನಪ್ಪಿದ್ದಾನೆ. ಕಿರಣ್ ತಂದೆ ಕುಮಾರ್ರನ್ನು ಪೊಲೀಸರು ಬಂಧಿಸಿದ್ದಾರೆ. ತಂದೆಯ ಬಂಧನದಿಂದ ಅತಿಯಾದ ಆತಂಕ ಮತ್ತು ಒತ್ತಡಕ್ಕೆ ಒಳಗಾಗಿ ಕಿರಣ್ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ" ಎಂದು ನ್ಯೂಸ್18, ಟಿವಿ9 ಕನ್ನಡ,ಕನ್ನಡ ಪ್ರಭ, ಸುವರ್ಣ ನ್ಯೂಸ್, ಮಹಾನಾಯಕ ಮಾಧ್ಯಮ ಸಂಸ್ಥೆಗಳು ವರದಿ ಮಾಡಿರುವುದನ್ನು ನಾವು ನೋಡಬಹುದು.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಓದುಗರನ್ನು ತಪ್ಪುದಾರಿಗೆ ಎಳೆಯುವ ಕೆಲಸ ಮಾಡುತ್ತಿದೆ. ನಾಗಮಂಗಲದ ಗಲಭೆಗೆ ಸಂಬಂಧಿಸಿದ A1 ಆರೋಪಿ ಕಿರಣ್ ಕುಮಾರ್ ಎನ್ನುವ ವ್ಯಕ್ತಿಯ ಹೆಸರನ್ನು ಮೃತಪಟ್ಟಿರುವ ವ್ಯಕ್ತಿಗೆ ಹೋಲಿಸಿ ಸಾಮಾಜಿಕ ಬಳಕೆದಾರರನ್ನು ಕೆಲವು ಮಾಧ್ಯಮ ಸಂಸ್ಥೆಗಳು ತಪ್ಪುದಾರಿಗೆ ಎಳೆಯುವ ಕೆಲಸವನ್ನು ಮಾಡುತ್ತಿದೆ.
ನಾವು ವೈರಲ್ ಆದ ಸುದ್ದಿಯ ಕುರಿತು ಮಂಡ್ಯ ಜಿಲ್ಲೆಯಲ್ಲಿ ನಡೆದ ಗಣೇಶನ ವಿಸರ್ಜನೆ ಸಂಬಂಧಿಸಿದ ಕೆಲವು ಕೀವರ್ಡ್ಗಳ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಸೆಪ್ಟಂಬರ್ 21,2024ರಂದು ಮಂಡ್ಯ ಜಿಲ್ಲಾ ಪೊಲೀಸರ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಮೃತ ಯುವಕ ಕಿರಣ್ಗೆ ಸಂಬಂಧಿಸಿದ ಪೊಸ್ಟ್ವೊಂದು ಕಂಡುಬಂದಿತು. ಪೋಸ್ಟ್ಗೆ ಶೀರ್ಷಿಕೆಯಾಗಿ "ಸಾಮಾಜಿಕ ಜಾಲತಾಣಗಳಲ್ಲಿ ಸಾಮಾಜದ ಸ್ವಾಸ್ಥ್ಯ ಹಾಳು ಮಾಡುವಂತಹ ಯಾವುದೇ ಸುಳ್ಳು ಸುದ್ದಿ ಹರಡಬಾರದು, ಸುಳ್ಳು ಸುದ್ದಿ ಹರಡುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಇರಲಿ ಎಚ್ಚರ" ಎಂದು ಬರೆದು ಹಂಚಿಕೊಳ್ಳಲಾಗಿದೆ. ಹಾಗೆ ಹಂಚಿಕೊಂಡ ಪೊಸ್ಟ್ನಲ್ಲಿ ಮೊದಲು ವೈರಲ್ ಆದ ಸುದ್ದಿಯನ್ನು ಹಂಚಿಕೊಂಡು ಆ ಪೊಸ್ಟ್ಗೆ ಪೊಲೀಸರು ಸ್ಪಷ್ಟನೆಯನ್ನು ನೀಡಿದ್ದಾರೆ.
"ಈ ದಿನ ಬ್ರೇನ್ ಸ್ಟ್ರೋಕ್ನಿಂದ ಮೃತ ಪಟ್ಟಿರುವ ವ್ಯಕ್ತಿ ಕಿರಣ್ ಬಿನ್ ಕುಮಾರ್ (23 ವರ್ಷ) ಬದರಿಕೊಪ್ಪಲು ಗ್ರಾಮದವರು ನಾಗಮಂಗಲ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿರುವುದಿಲ್ಲ. ನಾಗಮಂಗಲ ಗಲಭೆ ಪ್ರಕರಣದ A1 ಆರೋಪಿ ಕಿರಣ್ ಕುಮಾರ್ ಎಸ್ ಬಿನ್ ಶ್ರೀನಿವಾಸ್ 26 ವರ್ಷ ಬದರಿಕೊಪ್ಪಲು ಗ್ರಾಮದವರು ದಸ್ತಗಿರಿಯಾಗಿ ಮಂಡ್ಯ ಕಾರಗೃಹದಲ್ಲಿ ನ್ಯಾಯಂಗ ಬಂಧನದಲ್ಲಿರುತ್ತಾರೆ. ಈ ರೀತಿ ನಿಖರವಾದ ಮಾಹಿತಿ ತಿಳಿಯದೆ ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದ ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವಂತಹ ಸುಳ್ಳು ಸುದ್ದಿಯನ್ನು ವೈರಲ್ ಮಾಡುವವರ ವಿರುದ್ದ ಸೂಕ್ತ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು" ಎಂದು ಪೊಸ್ಟ್ ಮಾಡಿರುವುದನ್ನು ನಾವು ನೋಡಬಹುದು.
ಸೆಪ್ಟಂಬರ್ 21,2024ರಂದು ಈದಿನ ಎಂಬ ಕನ್ನಡ ವೆಬ್ಸೈಟ್ನಲ್ಲಿ "ನಾಗಮಂಡಲ ಗಲಭೆ ಪ್ರಕರಣ| ಬಂಧನಕ್ಕೆ ಹೆದರಿ ಗ್ರಾಮ ತೊರೆದಿದ್ದ ಯುವಕ ʼಬ್ರೈನ್ ಸ್ಟ್ರೋಕ್ʼನಿಂದ ಸಾವು ವದಂತಿ; ಪೊಲೀಸರ ಸ್ಪಷ್ಟನೆ" ಎಂಬ ಹೆಡ್ಲೈನ್ನೊಂದಿಗೆ ವರದಿಯಾಗಿರುವುದನ್ನು ನಾವು ಕಂಡುಕೊಂಡೆವು. ವೈರಲ್ ಆದ ವರದಿಯನ್ನು ಅಲ್ಲಗಳೆದಿರುವ ಪೊಲೀಸರು, "ಬ್ರೆನ್ ಸ್ಟೋಕ್ನಿಂದ ಸಾವನ್ನಪ್ಪಿರುವ ಯುವಕ ಕಿರಣ್, ಗಲಭ ಪ್ರಕರಣದಲ್ಲಿ ಆರೋಪಿಯಲ್ಲ. ಗಲಭೆ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದದ್ದು ಕಿರಣ್ ಕುಮಾರ್ ಎಸ್ ಎಂಬಾತ. ಆತನನ್ನು ಬಂಧಿಸಲಾಗಿದೆ. ಆತನನ್ನು ಮಂಡ್ಯದ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಸಾವನ್ನಪ್ಪಿರುವ ಕಿರಣ್ ಗೂ ಗಲಭೆ ಪ್ರಕರಣಕ್ಕೂ ಸಂಬಂಧವಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ" ಎಂದು ವರದಿ ಮಾಡಲಾಗಿದೆ.
ಹೀಗಾಗಿ ವೈರಲ್ ಆದ ಸುದ್ದಿ ಓದುಗರನ್ನು ತಪ್ಪುದಾರಿಗೆ ಎಳೆಯುವ ಕೆಲಸ ಮಾಡುತ್ತಿದೆ. ನಾಗಮಂಗಲದ ಗಲಭೆಗೆ ಸಂಬಂಧಿಸಿದ A1 ಆರೋಪಿ ಕಿರಣ್ ಕುಮಾರ್ ಎನ್ನುವ ವ್ಯಕ್ತಿಯ ಹೆಸರನ್ನು ಮೃತಪಟ್ಟಿರುವ ವ್ಯಕ್ತಿಗೆ ಹೋಲಿಸಿ ಸಾಮಾಜಿಕ ಬಳಕೆದಾರರನ್ನು ಕೆಲವು ಮಾಧ್ಯಮ ಸಂಸ್ಥೆಗಳು ತಪ್ಪುದಾರಿಗೆ ಎಳೆಯುವ ಕೆಲಸವನ್ನು ಮಾಡುತ್ತಿದೆ.