ಫ್ಯಾಕ್ಟ್ಚೆಕ್: ಕರ್ನಾಟಕ 2025-26ನೇ ಬಜೆಟ್ನಲ್ಲಿ ಸಿದ್ದರಾಮಯ್ಯನವರು ಶಿಕ್ಷಕರ ಹುದ್ದೆಗಳ ಭರ್ತಿಗೆ ಆದ್ಯತೆ ನೀಡಿದ್ದಾರೆ
ಕರ್ನಾಟಕ 2025-26ನೇ ಬಜೆಟ್ನಲ್ಲಿ ಸಿದ್ದರಾಮಯ್ಯನವರು ಶಿಕ್ಷಕರ ಹುದ್ದೆಗಳ ಭರ್ತಿಗೆ ಆದ್ಯತೆ ನೀಡಿದ್ದಾರೆ

Claim :
ಸಿಎಂ ಸಿದ್ದರಾಮಯ್ಯನವರು ಕರ್ನಾಟಕ 2025-26ನೇ ಬಜೆಟ್ನಲ್ಲಿ ಶಿಕ್ಷಕರ ಹುದ್ದೆಗಳ ಭರ್ತಿಗೆ ಆದ್ಯತೆ ನೀಡಿಲ್ಲFact :
ಸಿಎಂ ಸಿದ್ದರಾಮಯ್ಯನವರು ತಮ್ಮ 2025-26ನೇ ಬಜೆಟ್ನಲ್ಲಿ ಶಿಕ್ಷಕರ ಹುದ್ದೆಗಳ ಭರ್ತಿಗೆ ಆದ್ಯತೆ ನೀಡಿದ್ದಾರೆ
ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮಾರ್ಚ್ 7, ಶುಕ್ರವಾರ ತಮ್ಮ ದಾಖಲೆಯ 16ನೇ ಬಜೆಟ್ ಮಂಡಿಸಿದ್ದಾರೆ. ವಿಧಾನಸಭೆಯಲ್ಲಿ ಅವರು, 2025-26ನೇ ಸಾಲಿನ ಆಯವ್ಯಯವನ್ನು ಮಂಡಿಸಿದ್ದು, ಈ ಬಾರಿ ಸಿಲಿಕಾನ್ ಸಿಟಿ, ರಾಜ್ಯ ರಾಜಧಾನಿ ಬೆಂಗಳೂರಿಗೆ ದುಪ್ಪಟ್ಟು ಅನುದಾನವನ್ನು ಘೋಷಣೆ ಮಾಡಿದ್ದಾರೆ. ಬರೋಬ್ಬರಿ 4.09 ಲಕ್ಷ ಕೋಟಿ ಮೌಲ್ಯದ ಬಜೆಟ್ ಅನ್ನು ಮಂಡಿಸಿದ್ದಾರೆ. ಇದರಲ್ಲಿ 1.15 ಲಕ್ಷ ಕೋಟಿ ರೂ.ಗಳನ್ನು ಸಾಲ ಮಾಡಿದೆ. ಗ್ಯಾರಂಟಿ ಯೋಜನೆಗಳಿಗೆ ಅನುದಾನ ನೀಡುವ ಜೊತೆಗೆ ಬಹುದೊಡ್ಡದಲ್ಲದಿದ್ದರೂ ಸಣ್ಣ ಪುಟ್ಟ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವನ್ನು ಹಂಚಿಕೆ ಮಾಡಿದ್ದಾರೆ. ಈ ಪೈಕಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಎಲ್ಲರ ಕಣ್ಣಿಗೆ ಕಾಣುವಂತೆ ಭರಪೂರ ಅನುದಾನವನ್ನು ಕೊಟ್ಟಿದ್ದಾರೆ. ಆಡಳಿತರೂಢ ಕಾಂಗ್ರೆಸ್ ಪಕ್ಷ ಇದೊಂದು ಉತ್ತಮವಾದ ಬಜೆಟ್ ಎಂದಿದ್ದು, ವಿಪಕ್ಷ ಬಿಜೆಪಿ ಬಜೆಟ್ ಕುರಿತು ಟೀಕೆಯನ್ನು ಮಾಡಿದೆ. ಹೀಗಾಗಿ 2025-26ನೇ ಸಾಲಿನ ಬಜೆಟ್ ಸಾರ್ವಜನಿಕ ವಲಯದಲ್ಲೂ ಚರ್ಚೆಯನ್ನು ಹುಟ್ಟುಹಾಕಿದೆ.
ಇದರ ನಡುವೆ ಬಿಜೆಪಿಯ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರರವರು ಇನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ʼಶಿಕ್ಷಣ ತರಬೇತಿ ಪಡೆದು ಉದ್ಯೋಗಕ್ಕಾಗಿ ಕಾದು ಕುಳಿತಿರುವ ಶಿಕ್ಷಕ ಸಮುದಾಯವನ್ನು ಸಂಪೂರ್ಣ ನಿರಾಸೆಗೊಳಿಸುವ ಮೂಲಕ ಶಿಕ್ಷಣ ಕ್ಷೇತ್ರವನ್ನು ಗಟ್ಟಿಗೊಳಿಸುವಲ್ಲಿ ತನ್ನ ನಿರಾಸಕ್ತಿಯನ್ನು ಮುಖ್ಯಮಂತ್ರಿ ಬಜೆಟ್ ಮೂಲಕ ತೋರಿಸಿದ್ದಾರೆ. ಕೆಳ ಮಧ್ಯಮ ವರ್ಗಗಳ ಅಭ್ಯುದಯ ಕೇಂದ್ರೀಕರಿಸುವ ಯಾವ ಯೋಜನೆಯೂ ಇಲ್ಲ. ವಸತಿ ಸಮಸ್ಯೆ ನೀಗಿಸಲು ಈ ಬಜೆಟ್ನಲ್ಲಿ ಯಾವುದೇ ಯೋಜನೆ ಪ್ರಕಟಿಸಿಲ್ಲದಿರುವುದು ಈ ಸರ್ಕಾರ ಕೇವಲ ಬಡವರ ವಿರೋಧಿ ಅಷ್ಟೇ ಅಲ್ಲ, ಮಧ್ಯಮ ಹಾಗೂ ಕೆಳವರ್ಗಗಳ ವಿರೋಧಿ ಎನ್ನುವುದನ್ನು ಮುಖ್ಯಮಂತ್ರಿಗಳು ಬಜೆಟ್ನಲ್ಲಿ ತೋರಿಸಿದ್ದಾರೆʼ ಎಂಬ ಶೀರ್ಷಿಕೆಯೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಹುದ್ದೆಗಳ ಭರ್ತಿಯನ್ನು ರಾಜ್ಯ ಸರ್ಕಾರ ಈ ಬಾರಿಯ ಬಜೆಟ್ನಲ್ಲಿ ಘೋಷಣೆ ಮಾಡಿಲ್ಲ ಎಂಬ ಅರ್ಥ ಬರುವಂತೆ ಪೋಸ್ಟನ್ನು ಮಾಡಿದ್ದಾರೆ.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು.

ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಸಿಎಂ ಸಿದ್ದರಾಮಯ್ಯನವರು ತಮ್ಮ 2025-26ನೇ ಬಜೆಟ್ನಲ್ಲಿ ಶಿಕ್ಷಕರ ಹುದ್ದೆಗಳ ಭರ್ತಿಗೆ ಆದ್ಯತೆ ನೀಡಿದ್ದಾರೆ.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್ನಲ್ಲಿ ಕರ್ನಾಟಕ ಬಜೆಟ್ 2025-2026 ಎಂಬ ಕೀವರ್ಡ್ನಿಂದ ಹುಡುಕಾಟ ನಡೆಸಿದಾಗ ಕರ್ನಾಟಕ ಬಜೆಟ್ 2025-26 ಪಿಡಿಎಫ್ ಪ್ರತಿಯೊಂದು ದೊರೆಯಿತು. ಇದರಲ್ಲಿ ʼಯಾವ್ಯಾವ ಯೋಜನೆ ಅಥವಾ ವಲಯಕ್ಕೆ ಎಷ್ಟೆಷ್ಟು ಹಣ ನೀಡಲಾಗಿದೆ ಎನ್ನುವ ವಿವರವನ್ನು ನಾವೀ ಪಿಡಿಎಫ್ ಪ್ರತಿಯಲ್ಲಿ ನೋಡಬಹುದು.
ನಾವು ಪಿಡಿಎಫ್ನಲ್ಲಿರುವ ಶಾಲಾ ಶಿಕ್ಷಣ ಭಾಗದಲ್ಲಿರುವ 48ನೇ ಪುಟ, 119ನೇ ಅಂಶದಲ್ಲಿ ʼಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 5,267 ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡಲಾಗುವುದು. ಮುಂದುವರೆದು, ಇಲಾಖೆಯಲ್ಲಿ ಇನ್ನೂ ಖಾಲಿ ಇರುವ ಶಿಕ್ಷಕರ ಹುದ್ದೆಯನ್ನು ತರ್ಕಬದ್ಧಗೊಳಿಸಿ 5,000 ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸಲಾಗುವುದುʼ ಎಂದು ಉಲ್ಲೇಖಿಸಿರುವುದನ್ನು ನಾವಿಲ್ಲಿ ನೋಡಬಹುದು

49ನೇ ಪುಟ, 123 ಮತ್ತು 124ನೇ ಅಂಶವನ್ನು ಪರಿಶೀಲಿಸಿದಾಗ ʼಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಇಂಜಿನಿಯರಿಂಗ್ ಕಾಲೇಜುಗಳು ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಖಾಲಿ ಇರುವ ಸುಮಾರು 2000 ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸಲಾಗುವುದುʼ ಮತ್ತು ʼರಾಜ್ಯದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ಪದವಿ ಕಾಲೇಜುಗಳಿಗೆ ಒಟ್ಟಾರೆ 275 ಕೋಟಿ ರೂ ವೆಚ್ಚದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದುʼ ಎಂಬ ಅಂಶವನ್ನು ಉಲ್ಲೇಖಿಸಿರುವುದನ್ನು ನಾವಿಲ್ಲಿ ನೋಡಬಹುದು.

ಕರ್ನಾಟಕ ವಾರ್ತೆ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ʼನವ ಕರ್ನಾಟಕ ಬಜೆಟ್ 2025-26ನಲ್ಲಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 5,267 ಶಿಕ್ಷಕರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಶಿಕ್ಷಣ ಇಲಾಖೆಯಲ್ಲಿರುವ ಶಿಕ್ಷಕರ ಹುದ್ದೆಗಳನ್ನು ತರ್ಕಬದ್ಧಗೊಳಿಸಿ ಇನ್ನೂ 5 ಸಾವಿರ ಹುದ್ದೆ ಭರ್ತಿಗೆ ಕ್ರಮ ವಹಿಸಲಾಗುವುದು ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ವೊಂದನ್ನು ಹಂಚಿಕೊಂಡಿರುವುದನ್ನು ನೋಡಬಹುದು.
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್- ಕರ್ನಾಟಕ ಎಂಬ ಫೇಸ್ಬುಕ್ ಖಾತೆಯಲ್ಲಿ ʼಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 5267 ಶಿಕ್ಷಕರ ಹುದ್ದೆಗಳ ಭರ್ತಿ. #ನಮ್ಮಬಜೆಟ್2025 #NammaBudget2025ʼ ಎಂಬ ಶೀರ್ಷಿಕೆಯನ್ನೀಡಿ ಪೊಸ್ಟ್ವೊಂದನ್ನು ಹಂಚಿಕೊಂಡಿರುವುದನ್ನು ನೋಡಬಹುದು.
ಟಿವಿ5 ಕನ್ನಡ ಎಂಬ ಯೂಟ್ಯೂಬ್ ಚಾನೆಲ್ನಲ್ಲಿʼ Karnataka State Budget 2025: ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಿಕ್ಕಿದ್ದೇನು..?ʼ ಎಂಬ ಶೀರ್ಷಿಕೆಯೊಂದಿಗೆ ಸಿದ್ದರಾಮಯ್ಯನವರು ಬಜೆಟ್ ಮಂಡಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ನಾನು ಗೌರಿ.ಕಾಂ ಎಂಬ ವೆಬ್ಸೈಟ್ನಲ್ಲಿ ʼKarnataka Budget 2025-26 | ಶಿಕ್ಷಣ ಕ್ಷೇತ್ರದ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನಾವಿಲ್ಲಿ ನೋಡಬಹುದು. ವರದಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2025-26ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಡಿರುವ ಘೋಷಣೆಗಳನ್ನು ನೋಡಬಹುದು.
ಸಾಕಷ್ಟು ಕನ್ನಡ ಮಾಧ್ಯಮದ ವೆಬ್ಸೈಟ್ಗಳು ಕರ್ನಾಟಕ ಬಜೆಟ್ 2025-26ನೇ ಬಜೆಟ್ನಲ್ಲಿ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಡಿರುವ ಘೋಷಣೆಗಳನ್ನು ವರದಿ ಮಾಡಿರುವುದನ್ನು ನಾವಿಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಸಿಎಂ ಸಿದ್ದರಾಮಯ್ಯನವರು ತಮ್ಮ 2025-26ನೇ ಬಜೆಟ್ನಲ್ಲಿ ಶಿಕ್ಷಕರ ಹುದ್ದೆಗಳ ಭರ್ತಿಗೆ ಆದ್ಯತೆ ನೀಡಿದ್ದರೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರವರ ಆರೋಪವು ರಾಜಕೀಯ ಪ್ರೇರಿತವೆಂದು ಸ್ಪಷ್ಟವಾಗಿದೆ.