ಫ್ಯಾಕ್ಟ್ಚೆಕ್: ನವ ವಿವಾಹಿತ ಜೋಡಿ ನೋಡಿದ್ದು ಭಾರತ-ಪಾಕ್ ಪಂದ್ಯವನ್ನಲ್ಲ
ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ಪಂದ್ಯ ನೋಡಲು ಬಂದ ನವ ದಂಪತಿಗಳು ಎಂಬ ಪ್ರತಿಪಾದನೆ ಸುಳ್ಳು.
Claim :
ಕ್ರಿಕೆಟ್ ಪ್ರಿಯ ನವ ವಿವಾಹಿತ ದಂಪತಿ ಭಾರತ ಮತ್ತು ಪಾಕಿಸ್ತಾನದ ಪಂದ್ಯವನ್ನು ವೀಕ್ಷಿಸಿದರುFact :
ನವ ವಿವಾಹಿತ ದಂಪತಿಗಳು ಪಾಕಿಸ್ತಾನ ಮತ್ತು ನೇಪಾಳದ ನಡುವಿನ ಪಂದ್ಯವನ್ನು ವೀಕ್ಷಿಸಿದ್ದರು.
ನವ ವಿವಾಹಿತ ದಂಪತಿಯ ಫೋಟೋವೊಂದು ವೈರಲ್ ಆಗಿದ್ದು, ಏಷ್ಯಾ ಕಪ್ 2023ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ರೋಚಕ ಪಂದ್ಯವನ್ನು ನೋಡಲು, ಮದುವೆಯ ಮನೆಯಿಂದ ಸೀದಾ ಸ್ಟೇಡಿಯಂಗೆ ಬಂದಿದ್ದರು ಎಂದು ಪ್ರತಿಪಾದಿಸಿದೆ.
ಎಕ್ಸ್ (ಈ ಮೊದಲು ಎಕ್ಸ್), ಫೇಸ್ಬುಕ್, ಇನ್ಸ್ಟಾಗ್ರಾಮ್ನಲ್ಲಿ ಈ ಫೋಟೋ ವೈರಲ್ ಆಗಿದ್ದು, ಎಲ್ಲ ಕಡೆಯೂ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನೋಡಲು ಬಂದ ನವ ವಧು-ವರರು ಎಂದೇ ಪ್ರತಿಪಾದಿಸಲಾಗಿದೆ.
ಕಾಶ್ಮೀರ ಡಿಸ್ಪ್ಯಾಚ್ ಎಂಬ ಪತ್ರಿಕೆಯೂ, "ಭಾರತ ಮತ್ತು ಪಾಕಿಸ್ತಾನ ಪಂದ್ಯದ ಹುಚ್ಚು, ಶ್ರೀಲಂಕಾದ ಪಲ್ಲೆಕೆಲೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಬದ್ಧವೈರಿಗಳ ಅಮೋಘ ಪಂದ್ಯ ನೋಡಲು ಬಂದ ನವ ವಧು-ವರರು" ಎಂದು ಫೇಸ್ಬುಕ್ನಲ್ಲಿ ಫೋಟೋ ಹಂಚಿಕೊಂಡಿದೆ.
ಫ್ಯಾಕ್ಟ್ ಚೆಕ್
ವೈರಲ್ ಆಗಿರುವ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ ಯೂಟ್ಯೂಬ್ನಲ್ಲಿ ಪ್ರಕಟವಾದ ವಿಡಿಯೋ ಲಿಂಕ್ ನಮಗೆ ದೊರೆಯಿತು. ಅದರ ಪ್ರಕಾರ ಶ್ರೀಲಂಕಾದ ಪಲ್ಲೆಕೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಪಂದ್ಯ, ಅಂದರೆ ಸೆಪ್ಟೆಂಬರ್ 2ರಂದು ನಡೆದ ಪಂದ್ಯಕ್ಕಿಂತ 1 ದಿನ ಮೊದಲೇ ಈ ವಿಡಿಯೋ ಪ್ರಕಟವಾಗಿತ್ತು. ಈ ವಿಡಿಯೋ ಅಡಿ ಶೀರ್ಷಿಕೆಯಲ್ಲಿ, "ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂ ನಡೆಯಲ್ಲಿ ನಡೆಯುತ್ತಿರುವ ಪಾಕಿಸ್ತಾನ ಮತ್ತು ನೇಪಾಳ ನಡುವಿನ ರೋಚಕ ಪಂದ್ಯ ನೋಡಲು ಬಂದ ನವ ದಂಪತಿಗಳು' ಎಂದು ಬರೆಯಲಾಗಿದೆ.
ಪಾಕಿಸ್ತಾನದ ಪತ್ರಿಕೆ ಮಿನಿಟ್ ಮಿರ್.ಕಾಂ.ಪಾಕ್ ಸೆಪ್ಟೆಂಬರ್ 1ರಂದು ಒಂದು ಸುದ್ದಿಯನ್ನು ಪ್ರಕಟಿಸಿದ್ದು, ಇದರಲ್ಲಿ ಪಾಕಿಸ್ತಾನದ ಸ್ಟಾರ್ ಬ್ಯಾಟ್ಸಮನ್ ಬಾಬರ್ ಅಝಾಮ್ ಅಭಿಮಾನಿಗಳಾದ ನವ ದಂಪತಿ, ಮುಲ್ತಾನಿನ ರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯ ನೋಡಲು ಬಂದಿದ್ದರು ಎಂದು ವರದಿ ಮಾಡಿದೆ.
ವರದಿಯಲ್ಲಿ ಯಾವ ದೇಶಗಳ ನಡುವಿನ ಪಂದ್ಯ ಎಂದು ಉಲ್ಲೇಖಿಸದಿದ್ದರೂ, ಈ ವರದಿ ಪ್ರಕಟವಾದ ಹಿಂದಿನ ದಿನಾಂಕ, ಅಂದರೆ ಆಗಸ್ಟ್ 31ರಂದು ಪಾಕಿಸ್ತಾನ ಮತ್ತು ನೇಪಾಳ ನಡುವೆ ಪಂದ್ಯ ನಡೆದಿತ್ತು ಎಂಬುದನ್ನು ಗಮನಿಸಬಹುದು.
ಕ್ರಿಕೆಟ್ ಇನ್ ಬ್ಲಡ್ ಎಂಬ ಯೂಟ್ಯೂಬ್ ಚಾನೆಲ್ ನವದಂಪತಿಗಳ ವಿಡಿಯೋ ತುಣುಕನ್ನು ಆಗಸ್ಟ್ 31ರಂದೇ ಪ್ರಕಟಿಸಿದೆ.
ಥ್ರಿಲ್ ಪಾಕಿಸ್ತಾನ ಎಂಬ ಯೂಟ್ಯೂಬ್ ಚಾನೆಲ್ ನವ ದಂಪತಿಗಳ 1.19 ನಿಮಿಷಗಳ ವಿಡಿಯೋವನ್ನು ಸೆಪ್ಟೆಂಬರ್1 ರಂದು ಪ್ರಕಟಿಸಿದೆ. ವಿಡಿಯೋದಲ್ಲಿರುವ ಹಿನ್ನೆಲೆ ಧ್ವನಿಯು ಮುಲ್ತಾನ್ನಲ್ಲಿ ನಡೆಯುತ್ತಿರುವ ಪಾಕಿಸ್ತಾನ ಮತ್ತು ನೇಪಾಳ ಪಂದ್ಯ ನೋಡಲು ಬಂದಿದ್ದಾರೆ ಎಂದು ವಿವರಣೆ ನೀಡಿದೆ.
ಹಾಗಾಗಿ ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ಪಂದ್ಯ ನೋಡಲು ಬಂದ ನವ ದಂಪತಿಗಳು ಎಂಬ ಪ್ರತಿಪಾದನೆ ಸುಳ್ಳು.