ಫ್ಯಾಕ್ಟ್ಚೆಕ್: ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ರನ್ನು ಕೊಂದ ವ್ಯಕ್ತಿ ಹಿಂದೂ, ಮುಸ್ಲಿಮನಲ್ಲ
ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ರನ್ನು ಕೊಂದ ವ್ಯಕ್ತಿ ಹಿಂದೂ, ಮುಸ್ಲಿಮನಲ್ಲ

Claim :
ಹಿಮಾನಿ ನರ್ವಾಲ್ ಅವರ ಕೊಲೆ ಪ್ರಕರಣದಲ್ಲಿ ಮುಸಲ್ಮಾನರ ಕೈವಾಡವಿದೆFact :
ಬಂಧಿತ ಆರೋಪಿಯ ಹೆಸರು ಸಚಿನ್ ಆತ ಹಿಂದೂ ಸಮುದಾಯಕ್ಕೆ ಸೇರಿದವನಾಗಿದ್ದಾನೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಭಾರತ್ ಜೊಡೋ ಯಾತ್ರೆಯಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದ ಹಿಮಾನಿ ನರ್ವಾಲ್ ಹತ್ಯೆಯಿಂದ ಹರಿಯಾಣ ರಾಜಕೀಯ ಬಿಸಿಯಾಗುತ್ತಿದೆ. ಹರಿಯಾಣ ಕಾಂಗ್ರೆಸ್ ಕಾರ್ಯಕರ್ತೆ 22 ವರ್ಷದ ಹಿಮಾನಿ ನರ್ವಾಲ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ಪೊಸ್ಟ್ಗಳು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇವರ ಶವವು ಹರಿಯಾಣದ ರೋಹ್ಟಕ್-ದೆಹಲಿ ಹೆದ್ದಾರಿಯಲ್ಲಿರುವ ಸಂಪ್ಲಾ ಬಸ್ ನಿಲ್ದಾಣದ ಬಳಿ ಸೂಟ್ಕೇಸ್ನಲ್ಲಿ ಪತ್ತೆಯಾಗಿತ್ತು. ಸದ್ಯ ವೈರಲ್ ಆಗುತ್ತಿರುವ ಪೊಸ್ಟ್ನಲ್ಲಿ ಹಿಮಾನಿ ನರ್ವಾಲ್ ಅವರನ್ನು ಮುಸ್ಲಿಮರು ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮಾರ್ಚ್ 02, 2025ರಂದು ಫೇಸ್ಬುಕ್ ಖಾತೆದಾರರೊಬ್ಬರು ʼರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆಯಲ್ಲಿ ಭಾಗವಹಿಸಿದ್ದ ಹರ್ಯಾಣದ ಕಾಂಗ್ರೆಸ್ ಮುಖಂಡೆ ಹಿಮಾನಿ ನರ್ವಾಲ್ ಕೊಲೆಗೈಯಲ್ಪಟ್ಟಿದ್ದಾರೆ. ಹಿಮಾನಿಯನ್ನು ಕೊಂದ ಕೊಲೆಗಾರ ಶವವನ್ನು ಸೂಟ್ಕೇಸ್ನಲ್ಲಿ ಹಾಕಿ ಬಸ್ಸ್ಟ್ಯಾಂಡ್ ಬಳಿ ಬಿಸಾಕಿ ಹೋಗಿದ್ದಾನೆ, ಹರ್ಯಾಣ ಸರ್ಕಾರ ಹಿಮಾನಿ ಕುಟುಂಬಕ್ಕೆ ನ್ಯಾಯ ಒದಗಿಸಲಿ. ಅಂತಿಮ ನಮನಗಳು.ʼ ಎಂಬ ಶೀರ್ಷಿಕೆಯೊಂದಿಗೆ ರಾಹುಲ್ ಗಾಂಧಿಯೊಂದಿಗೆ ಹಿಮಾನಿಯವರ ಚಿತ್ರವನ್ನು ಹಂಚಿಕೊಂಡಿದ್ದಾರೆ
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು
ಮಾರ್ಚ್ 3, 2025ರಂದು ಮತ್ತೊಂದು ಫೇಸ್ಬುಕ್ ಖಾತೆಯಲ್ಲಿ ʼಕಾಂಗ್ರೆಸ್ನವರಿಂದಲೇ ಕೊಲೆ ಎಂದು ಆರೋಪಿಸಿದ ತಾಯಿ ಚಂಡೀಗಢ: ಹರ್ಯಾಣದ ಯುವ ಕಾಂಗ್ರೆಸ್ ಕಾರ್ಯಕರ್ತೆಯ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ನ ಕೆಲವರ ಕೈವಾಡ ಇದೆ ಎಂದು ಆಕೆಯ ತಾಯಿ ಆರೋಪಿಸಿದ ಬೆನ್ನಿಗೆ ಹರ್ಯಾಣ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಪುರಸಭೆ ಚುನಾವಣೆಗೆ ಒಂದು ದಿನ ಮೊದಲು ಹರ್ಯಾಣದ ರೋಹ್ಟಕ್ ಜಿಲ್ಲೆಯ ಸಂಪ್ಲಾ ಬಸ್ ನಿಲ್ದಾಣದ ಬಳಿ ಸೂಟ್ಕೇಸ್ನಲ್ಲಿ ಹಿಮಾನಿ ನರ್ವಾಲ್ ಎಂಬ 22ರ ಹರೆಯದ ಯುವತಿಯ ಶವ ಪತ್ತೆಯಾಗಿತ್ತು.ಹಿಮಾನಿ ನರ್ವಾಲ್, ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿ ಗಮನ ಸೆಳೆದಿದ್ದರು. ಪಕ್ಷದಲ್ಲಿ ಈ ಯುವತಿ ಕ್ಷಿಪ್ರವಾಗಿ ಮೇಲಕ್ಕೇರುತ್ತಿರುವುದು ಕಾಂಗ್ರೆಸ್ನ ಕೆಲವರಿಗೆ ನುಂಗಲಾರದ ಬಿಸಿ ತುಪ್ಪದಂತಾಗಿತ್ತುʼ ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ.
ನ್ಯೂಸ್ ಪುತ್ತೂರು ಎಂಬ ವೆಬ್ಸೈಟ್ನಲ್ಲಿ ʼಸೂಟ್ಕೇಸ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಶವ ಪತ್ತೆ ಪ್ರಕರಣ : ಓರ್ವ ಆರೋಪಿ ಸೆರೆ ʼ ಎಂಬ ಹೆಡ್ಲೈನ್ನೊಂದಿಗೆ ವರದಿ ಮಾಡಿರುವುದನ್ನು ನಾವಿಲ್ಲಿ ನೋಡಬಹುದು. ವರದಿಯಲ್ಲಿ ʼಹರ್ಯಾಣದ ಯುವ ಕಾಂಗ್ರೆಸ್ ಕಾರ್ಯಕರ್ತೆಯ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಕೆಲವರ ಕೈವಾಡ ಇದೆ ಎಂದು ಆಕೆಯ ತಾಯಿ ಆರೋಪಿಸಿದ ಬೆನ್ನಿಗೆ ಹರ್ಯಾಣ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಪುರಸಭೆ ಚುನಾವಣೆಗೆ ಒಂದು ದಿನ ಮೊದಲು ಹರ್ಯಾಣದ ರೋಹ್ಮಕ್ ಜಿಲ್ಲೆಯ ಸಂಜ್ಞಾ ಬಸ್ ನಿಲ್ದಾಣದ ಬಳಿ ಸೂಟ್ಕೇಸ್ನಲ್ಲಿ ಹಿಮಾನಿ ನರ್ವಾಲ್ ಎಂಬ 22ರ ಹರೆಯದ ಯುವತಿಯ ಶವ ಪತ್ತೆಯಾಗಿತ್ತು. ಹಿಮಾನಿ ನರ್ವಾಲ್, ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿ ಗಮನ ಸೆಳೆದಿದ್ದರು. ಪಕ್ಷದಲ್ಲಿ ಈ ಯುವತಿ ಕ್ಷಿಪ್ರವಾಗಿ ಮೇಲಕ್ಕೇರುತ್ತಿರುವುದು ಕಾಂಗ್ರೆಸ್ನ ಕೆಲವರಿಗೆ ನುಂಗಲಾರದ ಬಿಸಿ ತುಪ್ಪದಂತಾಗಿತ್ತು. ಹೀಗಾಗಿ ಅವರೇ ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಹಿಮಾನಿಯ ತಾಯಿ ನಿನ್ನ ಆರೋಪಿಸಿದ್ದರು. ಈ ಹತ್ಯಾ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದು, ಕಾಂಗ್ರೆಸ್ ನಾಯಕರು ಉನ್ನತ ತನಿಖೆಗೆ ಆಗ್ರಹಿಸಿದ್ದಾರೆ.ʼ ಎಂದು ಬರೆಯಲಾಗಿದೆ.
ವೈರಲ್ ಆದ ಪೊಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು
ಮತ್ತೊಂದು ಪೊಸ್ಟ್ನಲ್ಲಿ ʼಹರ್ಯಾಣದ ರೋಹ್ತಾಕ್ ನಲ್ಲಿ ಸೂಟ್ ಕೇಸ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತ ಹಿಮಾನಿ ನರ್ವಾಲ್ ಶವ ಪತ್ತೆ. 'ಪಕ್ಷದ ಜನರು ಇದರ ಹಿಂದೆ ಇರಬಹುದು' ಎಂದು ಕುಟುಂಬ ಹೇಳುತ್ತಾರೆ. ರಾಹುಲ್ ಗಾಂಧಿಯವರ 'ಭಾರತ್ ಜೋಡೋ ಯಾತ್ರೆ'ಯಲ್ಲಿ ಹಿಮಾನಿಯನ್ನೂ ಸೇರಿಸಲಾಗಿತ್ತು.ʼ ಎಂಬ ಶೀರ್ಷಿಕೆಯೊಂದಿಗೆ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರುಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಹಿಮಾನಿ ನರ್ವಾಲ್ ಕೊಲೆ ಪ್ರಕರಣದಲ್ಲಿ ಮುಸಲ್ಮಾನರ ಕೈವಾಡವಿದೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ, ಬಂಧಿತ ಆರೋಪಿಯ ಹೆಸರು ಸಚಿನ್, ಆತ ಹಿಂದೂ ಸಮುದಾಯಕ್ಕೆ ಸೇರಿದವನು.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್ನಲ್ಲಿ ವೈರಲ್ ಆದ ಸುದ್ದಿಗೆ ಸಂಬಂಧಿಸಿದ ಕೆಲವು ಪ್ರಮುಖ ಕೀವರ್ಡ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಡದಲ್ಲಿ ನಮಗೆ, ನ್ಯೂಸ್ ಫಸ್ಟ್ ಕನ್ನಡ ವೆಬ್ಸೈಟ್ನಲ್ಲಿ ʼಕಾಂಗ್ರೆಸ್ ನಾಯಕಿ ಹಿಮಾನಿ ನಾರ್ವಲ್ ಕೇಸ್ಗೆ ಬಿಗ್ ಟ್ವಿಸ್ಟ್. ಭಯಾನಕ ಸತ್ಯ ಬಿಚ್ಚಿಟ್ಟ ಹಂತಕ; ಹೇಳಿದ್ದೇನು?ʼ ಎಂಬ ಹೆಡ್ಲೈನ್ನೊಂದಿಗೆ ವರದಿ ಮಾಡಿರುವುದನ್ನು ನಾವಿಲ್ಲಿ ನೋಡಬಹುದು. ವರದಿಯಲ್ಲಿ ʼಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆಪ್ತೆ ಹಿಮಾನಿ ನಾರ್ವಲ್ ಮೃತದೇಹ ಸೂಟ್ಕೇಸ್ನಲ್ಲಿ ಪತ್ತೆಯಾಗಿದ್ದು ಇಡೀ ದೇಶದಲ್ಲಿ ಸಂಚಲನ ಮೂಡಿಸಿತ್ತು. ಹಿಮಾನಿ ತಾಯಿ, ಕುಟುಂಬಸ್ಥರು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಹತ್ಯೆ ನಡೆದ 2 ದಿನದಲ್ಲಿ ಸೂಟ್ಕೇಸ್ ಬೆನ್ನತ್ತಿದ ಪೊಲೀಸರು ದೆಹಲಿಯಲ್ಲಿ ಆರೋಪಿಯ ಸುಳಿವು ಪತ್ತೆ ಹಚ್ಚಿದ್ದರು. ಬಂಧಿಸಿದ ಬಳಿಕ ಆರೋಪಿ ಸಚಿನ್ ಪೊಲೀಸರ ವಿಚಾರಣೆಯ ವೇಳೆ ಹತ್ಯೆಯ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಹಿಮಾನಿ ನಾರ್ವಲ್ ತಾಯಿ ಕಾಂಗ್ರೆಸ್ ಪಕ್ಷದಲ್ಲೇ ಯಾರೋ ನನ್ನ ಮಗಳನ್ನು ಹತ್ಯೆ ಮಾಡಿರಬೇಕು ಎಂದು ಹೇಳಿಕೆ ನೀಡಿದ್ದರು. ಆದರೆ ಲವ್ ಅಫೇರ್, ಹಣಕ್ಕಾಗಿ ನಡೆದ ಬ್ಲಾಕ್ ಮೇಲ್ನಿಂದ ಹತ್ಯೆ ನಡೆದಿರುವುದು ಆರೋಪಿಯ ತಪ್ಪೊಪ್ಪಿಗೆಯಿಂದ ಬಯಲಾಗಿದೆʼ ಎಂದು ವರದಿ ಮಾಡಲಾಗಿದೆ.
3 ಮಾರ್ಚ್ 2025 ರಂದು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ವರದಿಯೊಂದು ಕಂಡುಬಂದಿದ್ದು, ಅದರಲ್ಲಿ ಹರಿಯಾಣ ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಅವರನ್ನು ವೈರ್ಡ್ ಮೊಬೈಲ್ ಚಾರ್ಜರ್ ನಿಂದ ಕತ್ತುಹಿಸುಕಿ ಕೊಲೆ ಮಾಡಿದ ನಂತರ, ಮೃತದೇಹವನ್ನು ಕಪ್ಪು ಸೂಟ್ ಕೇಸ್ನಲ್ಲಿ ಹಾಕಿ ಸೂಟ್ಕೇಸ್ನ್ನು ಆರೋಪಿ ಸಚಿನ್ ಹೊತ್ತುಕೊಂಡು ಹೋಗುತ್ತಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯಗಳನ್ನು ಅಧಿಕಾರಿಗಳು ಸೋಮವಾರ ಬಿಡುಗಡೆ ಮಾಡಿದ್ದಾರೆ. ಸೋಮವಾರದಂದು ಸಚಿನ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಸಚಿನ್ ಮತ್ತು ಹಿಮಾನಿ ನಡುವಿನ ಹಣಕಾಸಿನ ವಿಷಯಗಳು ಕೊಲೆಯ ಹಿಂದಿನ ಉದ್ದೇಶ ಆಗಿರಬಹುದು ಎಂದು ಪೊಲೀಸರು ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಮಾರ್ಚ್ 3ರಂದು ಹಿಂದೂಸ್ಥಾನ್ ಟೈಮ್ಸ್ ವೆಬ್ಸೈಟ್ನಲ್ಲಿ ʼCops make shocking revelation in Congress worker Himani Narwal's murder caseʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿದ್ದಾರೆ. ವರದಿಯಲ್ಲಿ ʼಶವ ಪತ್ತೆಯಾಗುತ್ತಿದ್ದಂತೆ, ಪೊಲೀಸರು ಜರ್ಜರ್ ಜಿಲ್ಲೆಯ ಮೊಬೈಲ್ ಫೋನ್ ಅಂಗಡಿ ಮಾಲೀಕ ಸಚಿನ್, ನರ್ವಾಲ್ರನ್ನು ಕೊಲೆ ಆರೋಪಿ ಎಂದು ಗುರುತಿಸಿ ಬಂಧಿಸಿದರು. ಸಾಮಾಜಿಕ ಮಾಧ್ಯಮಗಳ ಮೂಲಕ ಸಂಪರ್ಕ ಹೊಂದಿದ ನಂತರ ಸಚಿನ್ ಮತ್ತು ನರ್ವಾಲ್ ಸುಮಾರು 18 ತಿಂಗಳಿನಿಂದ ಪರಸ್ಪರ ಪರಿಚಿತರಾಗಿದ್ದರು. ರೋಹ್ಟಕ್ನ ವಿಜಯ್ ನಗರ ಪ್ರದೇಶದಲ್ಲಿರುವ ಅವರ ನಿವಾಸಕ್ಕೆ ಅವರು ಆಗಾಗ್ಗೆ ಭೇಟಿ ನೀಡುತ್ತಿದ್ದರು. ಫೆಬ್ರವರಿ 27 ರಂದು ಸಚಿನ್ ನರ್ವಾಲ್ ಅವರ ಮನೆಗೆ ಭೇಟಿ ನೀಡಿದಾಗ, ಹಣಕಾಸಿನ ವಿಷಯವಾಗಿ ಜಗಳ ನಡೆದಾಗ, ಆ ಕ್ಷಣದ ಸಿಟ್ಟಿನಲ್ಲಿ, ಮೊಬೈಲ್ ಫೋನ್ ಚಾರ್ಜರ್ ಕೇಬಲ್ ಬಳಸಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದನು. ನಂತರ ಆಕೆಯ ಆಭರಣಗಳು, ಲ್ಯಾಪ್ಟಾಪ್ ಮತ್ತು ಮೊಬೈಲ್ ಫೋನ್ ತೆಗೆದುಕೊಂಡು, ಆಕೆಯ ಶವವನ್ನು ಸೂಟ್ಕೇಸ್ನಲ್ಲಿ ಇರಿಸಿ, ಸಂಪ್ಲಾ ಬಸ್ ನಿಲ್ದಾಣದ ಬಳಿ ಎಸೆದಿದ್ದನುʼ ಎಂದು ಪೊಲೀಸರು ವಿವರಣೆಯನ್ನು ನೀಡಿದ್ದಾರೆ, ಎಂದು ವರದಿಯಾಗಿದೆ
ಮಾರ್ಚ್, 4, 2025ರಂದು ʼಜಾಗರಣ್ʼ ಎಂಬ ವೆಬ್ಸೈಟ್ನಲ್ಲಿ ʼकौन है Himani Narwal का हत्यारोपी सचिन? दूसरी जाति में शादी, घर में बना पड़ोसी; मां ने किए चौंकाने वाले खुलासेʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿದ್ದಾರೆ. ವರದಿಯಲ್ಲಿ ʼಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಹಿಮಾನಿ ರಾಹುಲ್ ಗಾಂಧಿಯವರ ಕೈ ಹಿಡಿದು ನಡೆದರು, ಇದರಿಂದಾಗಿ ಅವರು ಸುದ್ದಿಗೆ ಬಂದರು. ಆಕೆಯ ಕೊಲೆಯ ಆರೋಪದ ಮೇಲೆ ಪೊಲೀಸರು ಯಾವ ಕಾಂಗ್ರೆಸ್ ಕಾರ್ಯಕರ್ತರನ್ನೂ ಬಂಧಿಸಲಿಲ್ಲ, ಬದಲಾಗಿ ಆತನ ಸ್ನೇಹಿತ ಸಚಿನ್ನನ್ನು ಬಂಧಿಸಿದ್ದಾರೆ. ರೋಹ್ಟಕ್ ಪೊಲೀಸರು ಜಜ್ಜರ್ ಜಿಲ್ಲೆಯ ಖೈರ್ಪುರ ಗ್ರಾಮದ ನಿವಾಸಿ ಸಚಿನ್ ಅವರನ್ನು ದೆಹಲಿಯ ಮುಂಡ್ಕಾದಿಂದ ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಹಣದ ವ್ಯವಹಾರಕ್ಕೆ ಸಂಬಂಧಿಸಿದ ಜಗಳದಲ್ಲಿ ಹಿಮಾನಿ ಕೊಲೆಯಾಗಿದ್ದಾರೆ. ಸಚಿನ್ರನ್ನು ಮೂರು ದಿನಗಳ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ರಸ್ತೆಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸಚಿನ್ ಸೂಟ್ಕೇಸ್ನ್ನು ಹೊತ್ತುಕೊಂಡು ಹೋಗುತ್ತಿರುವುದು ಸೆರೆಯಾಗಿದೆʼ ಎಂದು ವರದಿಯಾಗಿದೆ
ಲೈವ್ ಮಿಂಟ್ ವೆಬ್ಸೈಟ್ನಲ್ಲಿ ʼHimani Narwal murder: Shocking details emerge - ‘Friend’ strangled Congress worker, took her jewellery, laptop, scooterʼ ಎಂದು ವರದಿಯಾಗಿದೆ. ವರದಿಯ ಪ್ರಕಾರ ʼಫೆಬ್ರವರಿ 27 ರಂದು ಸಚಿನ್ ನರ್ವಾಲ್ ಅವರ ಮನೆಗೆ ಭೇಟಿ ನೀಡಿದಾಗ, ಹಣಕಾಸಿನ ವಿಷಯವಾಗಿ ಜಗಳ ನಡೆದಿತ್ತು. ಆ ಕ್ಷಣದ ಸಿಟ್ಟಿನಲ್ಲಿ, ಮೊಬೈಲ್ ಫೋನ್ ಚಾರ್ಜರ್ ಕೇಬಲ್ ಬಳಸಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದನು. ನಂತರ ಆಕೆಯ ಆಭರಣಗಳು, ಲ್ಯಾಪ್ಟಾಪ್ ಮತ್ತು ಮೊಬೈಲ್ ಫೋನ್ ತೆಗೆದುಕೊಂಡು, ಆಕೆಯ ಶವವನ್ನು ಸೂಟ್ಕೇಸ್ನಲ್ಲಿ ಇರಿಸಿ, ಸಂಪ್ಲಾ ಬಸ್ ನಿಲ್ದಾಣದ ಬಳಿ ಎಸೆದಿದ್ದನು. ಅಷ್ಟೇ ಅಲ್ಲ, ಸಚಿನ್ ಅವರ ತಂದೆ ದೇವೇಂದರ್ ಎಂದು ಗುರುತಿಸಿದ್ದು, ಅವರಿಗೆ ಘಟನೆಯ ಬಗ್ಗೆ ತಿಳಿದಿರಲಿಲ್ಲ. ಸಚಿನ್ ವಿವಾಹಿತರಾಗಿದ್ದು, ಇಬ್ಬರು ಮಕ್ಕಳಿದ್ದಾರೆ ಮತ್ತು ಅವರ ಪೋಷಕರಿಂದ ಪ್ರತ್ಯೇಕವಾಗಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆʼ ಎಂದು ವರದಿಯಾಗಿದೆ.
ಇದರಿಂದ ತಿಳಿಯುವುದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಹರಿಯಾಣ ಕಾಂಗ್ರೆಸ್ ನಾಯಕಿ ಹಿಮಾನಿ ನರ್ವಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಲೆ ಮಾಡಿದ ವ್ಯಕ್ತಿ ಮುಸ್ಲಿಂ ಕಾಂಗ್ರೆಸ್ ಕಾರ್ಯಕರ್ತ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಬಂಧಿತ ಆರೋಪಿಯ ಹೆಸರು ಸಚಿನ್ ಎಂದಾಗಿದ್ದು, ಆತ ಹಿಂದೂ ಸಮುದಾಯಕ್ಕೆ ಸೇರಿದವನಾಗಿದ್ದಾನೆ