ಫ್ಯಾಕ್ಟ್ಚೆಕ್: ಮುಸ್ಲಿಮರು ಪಿಸ್ತೂಲುಗಳನ್ನು ತುಪ್ಪದ ಡಬ್ಬದಲ್ಲಿ ಬಚ್ಚಿಟ್ಟಿದ್ದಾರೆ ಎಂದು ಸುಳ್ಳು ಸುದ್ದಿ ಹಂಚಿಕೆ
ಮುಸ್ಲಿಮರು ಪಿಸ್ತೂಲುಗಳನ್ನು ತುಪ್ಪದ ಡಬ್ಬದಲ್ಲಿ ಬಚ್ಚಿಟ್ಟಿದ್ದಾರೆ ಎಂದು ಸುಳ್ಳು ಸುದ್ದಿ ಹಂಚಿಕೆ
Claim :
ತುಪ್ಪದ ಡಬ್ಬದಲ್ಲಿ ಪಿಸ್ತೂಲುಗಳನ್ನು ಬಚ್ಚಿಟ್ಟಿದ್ದ ಮುಸ್ಲಿಮರನ್ನು ಪೊಲೀಸರು ಬಂಧಿಸಿದ್ದಾರೆFact :
2019ರ ಹಳೆಯ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಪಿಸ್ತೂಲ್ಗಳನ್ನು ಸಾಗಾಟ ಮಾಡುತ್ತಿದ್ದವರು ಮುಸ್ಲಿಮರಲ್ಲ, ಹಿಂದೂಗಳು
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಆ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ತುಪ್ಪದ ಡಬ್ಬಗಳಲ್ಲಿ ಕೆಲವರು ಪಿಸ್ತೂಲ್ನ್ನು ತೆಗೆಯುವುದನ್ನು ನಾವು ನೋಡಬಹುದು. ಪಿಸ್ತೂಲು ತೆಗೆದ ಮುಸ್ಲಿಂ ವ್ಯಕ್ತಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ
ಡಿಸಂಬರ್ 05, 2024ರಂದು ʼಶ್ರೀಹಸ್ತೀನಿʼ ಎಂಬ ಎಕ್ಸ್ ಖಾತೆದಾರರು ವಿಡಿಯೋವನ್ನು ಹಂಚಿಕೊಂಡು ʼಈ ಶಾಂತಿ ದೂತರು ಮುಸ್ಲಿಂ ಧರ್ಮದವರು ಕಾಫಿರರನ್ನ ( ಹಿಂದುಗಳನ್ನು) ಹೊಡೆಯಲಿಕ್ಕೆ ಯಾವ ತರಹದ ಆಯುಧಗಳನ್ನು ತರುತ್ತಿದ್ದಾರೆ ನೋಡಿ, ಸರಿಯಾದ ಸಮಯಕ್ಕೆ ಪೊಲೀಸರು ಹಿಡಿಯುತ್ತಾರೆ ಇಲ್ಲದಿದ್ದರೆ. ಇದು ಎಲ್ಲಿಯ ವಿಡಿಯೋ ಎಂಬುದರ ಮಾಹಿತಿ ಇಲ್ಲʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವಿಡಿಯೋವಿನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು.
ಡಿಸಂಬರ್ 06, 2024ರಂದು ಎಕ್ಸ್ ಖಾತೆದಾರರೊಬ್ಬರು "RSS member was apprehended with live weapons and ammunition, being transported to Sambhal to ignite communal violence. Will the UP government invoke NSA against him? Or NSA is reserved for innocent Sikhs only?" ಎಂಬ ಶೀರ್ಷಿಕೆಯನ್ನೀಡಿ ವಿಡಿಯೋವನ್ನು ಹಂಚಿಕೊಂಡಿದ್ದರು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಕೋಮು ಹಿಂಸಾಚಾರವನ್ನು ಪ್ರಚೋದಿಸಲು ಸಂಭಾಲ್ಗೆ ಸಾಗಿಸುತ್ತಿದ್ದ ಆರ್ಎಸ್ಎಸ್ ಸದಸ್ಯನನ್ನು ಜೀವಂತ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳೊಂದಿಗೆ ಬಂಧಿಸಲಾಯಿತು. ಯುಪಿ ಸರ್ಕಾರವು ಅವರ ವಿರುದ್ಧ ಎನ್ಎಸ್ಎಯನ್ನು ಹೇರುತ್ತದೆಯೇ? ಅಥವಾ NSA ಅಮಾಯಕ ಸಿಖ್ಖರಿಗೆ ಮಾತ್ರ ಮೀಸಲಾಗಿದೆಯೇ?ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಡಿಸಂಬರ್ 07, 2024ರಂದು ʼವೈರಲ್ ಫಿಕ್ಸಿʼ ಎಂಬ ಯೂಟ್ಯೂಬ್ ಖಾತೆ ವಿಡಿಯೋವನ್ನು ಹಂಚಿಕೊಂಡು ʼदेशी घी के डिब्बों में हो रही अवैध हथियारों की तस्करी।ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಮತ್ತಷ್ಟು ವಿಡಿಯೋಗಳನ್ನು ನೀವಿಲ್ಲಿ, ಇಲ್ಲಿ ನೋಡಬಹುದು.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. 2019ರ ಹಳೆಯ ವಿಡಿಯೋವನ್ನು ಇತ್ತೀಚಿನದ್ದು ಎಂದು ಹಂಚಿಕೊಳ್ಳಲಾಗುತ್ತಿದೆ. ಜೊತೆಗೆ ಪಿಸ್ತೂಲ್ಗಳನ್ನು ಸಾಗಾಟ ಮಾಡುತ್ತಿದ್ದವರು ಮುಸ್ಲಿಮರಲ್ಲ, ಅವರು ಹಿಂದೂಗಳು.
ನಾವು ವೈರಲ್ ಆದ ವಿಡಿಯೋವಿನಲ್ಲಿರುವ ನಿಜಾಂಶವನ್ನು ತಿಳಿಯಲು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಇಮೇಜ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಸೆಪ್ಟಂಬರ್ 27, 2019ರಂದು ʼನ್ಯೂಸ್ ನೇಷನ್ʼ ಎಂಬ ಯೂಟ್ಯೂಬ್ ಖಾತೆಯಲ್ಲಿ ʼDelhi Police Seizes 26 Pistols Hidden In Plastic Cans Of Gheeʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ʼದೆಹಲಿ ಪೊಲೀಸ್ ಅಧಿಕಾರಿಗಳು ತುಪ್ಪದ ಪ್ಲಾಸ್ಟಿಕ್ ಕ್ಯಾನ್ಗಳಲ್ಲಿ ದಪ್ಪ ಪದರಗಳ ಕೆಳಗೆ ಬಚ್ಚಿಟ್ಟಿದ್ದ 26 ಪಿಸ್ತೂಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಪೂರ್ವ ದೆಹಲಿಯ ಗಾಜಿಪುರ ರಸ್ತೆಯಲ್ಲಿ ಕಾರಿನಲ್ಲಿದ್ದ ಶಸ್ತ್ರಾಸ್ತ್ರವನ್ನು ಮತ್ತು ಇಬ್ಬರು ಶಸ್ತ್ರಾಸ್ತ್ರ ವ್ಯಾಪಾರಿಗಳಿಂದ ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆʼ ಎಂದು ವರದಿ ಮಾಡಲಾಗಿದೆ.
ನಮಗೆ ಸಿಕ್ಕಂತಹ ವಿಡಿಯೋವಿನ ಆಧಾರದ ಮೇಲೆ ನಾವು ಕೆಲವು ಪ್ರಮುಖ ಕೀವರ್ಡ್ಗಳನ್ನು ಬಳಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ʼಹಿಂದೂಸ್ತಾನ್ ಟೈಮ್ಸ್ʼ ವರದಿಯೊಂದು ಕಂಡುಬಂದಿತು. ಸೆಪ್ಟಂಬರ್ 2019ರಲ್ಲಿ ಹಂಚಿಕೊಂಡಿದ್ದ ಈ ವರದಿಯಲ್ಲಿ ʼ26 pistols hidden in ghee recovered from arms dealersʼ ಎಂಬ ಹೆಡ್ಲೈನ್ನೊಂಡಿಗೆ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವರದಿಯಲ್ಲಿ ʼಪ್ಲಾಸ್ಟಿಕ್ ಕ್ಯಾನ್ಗಳಲ್ಲಿ ತುಪ್ಪದ ದಪ್ಪ ಪದರಗಳ ಕೆಳಗೆ ಬಚ್ಚಿಟ್ಟಿದ್ದ 26 ಪಿಸ್ತೂಲ್ಗಳನ್ನು ಕಾರಿನಿಂದ ವಶಪಡಿಸಿಕೊಳ್ಳಲಾಗಿದೆ ಮತ್ತು ಇಬ್ಬರು ಶಸ್ತ್ರಾಸ್ತ್ರ ವ್ಯಾಪಾರಿಗಳನ್ನು ಪೂರ್ವ ದೆಹಲಿಯ ಗಾಜಿಪುರ ರಸ್ತೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಬಂಧಿತ ವ್ಯಕ್ತಿಗಳಾದ ಜಿತೇಂದರ್ ಮತ್ತು ಅವರ ಸೋದರ ಮಾವ ರಾಜ್ ಬಹದ್ದೂರ್ ಮಧ್ಯಪ್ರದೇಶದಿಂದ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಿ ದೆಹಲಿ-ಎನ್ಸಿಆರ್ನಲ್ಲಿ ಅಪರಾಧಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸ್ ಉಪಆಯುಕ್ತ (ವಿಶೇಷ ಸೆಲ್) ಪ್ರಮೋದ್ ಸಿಂಗ್ ಕುಶ್ವಾಹ್ ಹೇಳಿದ್ದಾರೆ. "32 ಬೋರ್ ಪಿಸ್ತೂಲ್ಗಳನ್ನು ರೂ8,000-12,000 ಕ್ಕೆ ಖರೀದಿಸಿ, ಅವುಗಳನ್ನು ದೆಹಲಿ-NCR ನಲ್ಲಿ R25,000-30,000 ಗೆ ಮಾರಾಟ ಮಾಡುತ್ತಾರೆ" ಎಂದು DCP ಹೇಳಿದರು. ದೆಹಲಿ ಪೊಲೀಸ್ನ ಅಪರಾಧ ವಿಭಾಗವು ಇತರ ಇಬ್ಬರು ಶಂಕಿತರಿಂದ ಕಾರ್ಬೈನ್ ಮತ್ತು 40 ಸೆಮಿ-ಆಟೋಮಿಕ್ ಪಿಸ್ತೂಲ್ಗಳನ್ನು ವಶಪಡಿಸಿಕೊಂಡ ಅದೇ ಸಮಯದಲ್ಲಿ ಬಂದಿಸಿದ್ದಾರೆ. ಎಂದು ವರದಿಯಾಗಿದೆ.
ಎನ್ಡಿಟಿವಿ ವರದಿಯನ್ನಿ ನೀವಿಲ್ಲಿ ನೋಡಬಹುದು. ಈ ಪ್ರಕರಣಕ್ಕೆ ಸಂಬಂಧಿಸಿದ ಹಲವು ವರದಿಗಳು ನಮಗೆ ಲಭ್ಯವಾಯಿತು. ಇಲ್ಲಿಯೂ ಸಹ ಪಿಸ್ತೂಲ್ನೊಂದಿಗೆ ಸಿಕ್ಕಿ ಬಿದ್ದ ವ್ಯಕ್ತಿಗಳು ಮುಸ್ಲಿಮರು ಎಲ್ಲಿಯೂ ಸಮೂದಿಸಲಾಗಿಲ್ಲ. ʼದೆಹಲಿ ತಕ್ʼ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ʼDELHI में SMUGGLING, GHEE के डिब्बों में PISTOLʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ದೆಹಲಿಯಲ್ಲಿ ತುಪ್ಪದ ಡಬ್ಬಗಳಲ್ಲಿ ಪಿಸ್ತೂಲ್ಗಳನ್ನು ಕಳ್ಳಸಾಗಣೆʼ ಎಂಬ ಶೀರ್ಷಿಕೆಯೊಂದಿಗಿರುವ ವಿಡಿಯೋವಿನಲ್ಲಿ ಸಿಕ್ಕಿಬಿದ್ದವರ ಹೆಸರು ಜಿತೇಂದ್ರ ಜೀತು ಮತ್ತು ರಾಜ್ ಬಹದ್ದೂರ್ ಎಂದು ವಿಡಿಯೋದಲ್ಲಿ ಹೇಳಲಾಗಿದೆ.
ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ಸಾಭೀತಾಗಿದೆ. ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. 2019ರ ಹಳೆಯ ವಿಡಿಯೋವನ್ನು ಇತ್ತೀಚಿನದ್ದು ಎಂದು ಹಂಚಿಕೊಳ್ಳಲಾಗುತ್ತಿದೆ. ಜೊತೆಗೆ ಪಿಸ್ತೂಲ್ಗಳನ್ನು ಸಾಗಾಟ ಮಾಡುತ್ತಿದ್ದವರು ಮುಸ್ಲಿಮರಲ್ಲ, ಅವರು ಹಿಂದೂಗಳು.