ಫ್ಯಾಕ್ಟ್ಚೆಕ್ : ಚಂದ್ರನ ಮೇಲೆ ಇಸ್ರೋ ಲೊಗೊ ಮತ್ತು ರಾಷ್ಟ್ರೀಯ ಲಾಂಛನ ಇರುವ ಗುರುತು ನಕಲಿ
ಇಸ್ರೋ ಲೋಗೊ ಮತ್ತು ರಾಷ್ಟ್ರ ಲಾಂಛನ ಇರುವ ಎಡಿಟ್ ಮಾಡಿದ ಚಿತ್ರವನ್ನು ಹಂಚಿಕೊಳ್ಳಲಾಗಿದೆ ಎಂದು ಸ್ಪಷ್ಟ. ಇದು ಸುಳ್ಳು.
Claim :
ಚಂದ್ರನ ಮೇಲೆ ರೋವರ್ನಿಂದ ಚಲನೆಯಿಂದ ಮೂಡಿದ ಇಸ್ರೋ ಲೊಗೊ ಮತ್ತು ರಾಷ್ಟ್ರೀಯ ಲಾಂಛನದ ಫೋಟೊFact :
ಇಸ್ರೋ ಲೊಗೊ ಮತ್ತು ರಾಷ್ಟ್ರೀಯ ಲಾಂಛನ ಬಳಸಿ ಕಲಾವಿದರೊಬ್ಬರು ಫೋಟೋಶಾಪ್ ಮಾಡಿ ಸಿದ್ಧಪಡಿಸಿದ ಫೋಟೊ
ಆಗಸ್ಟ್ 23ರಂದು ಇಸ್ರೋದ ಚಂದ್ರಯಾನ-3ರ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದ ಹಿನ್ನೆಲೆಯಲ್ಲಿ ಇಸ್ರೋದ ಲೋಗೋ ಮತ್ತು ಭಾರತದ ರಾಷ್ಟ್ರೀಯ ಲಾಂಛನವು ಚಂದ್ರನ ಮೇಲೆ ಮೂಡಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚಂದ್ರಯಾನ -3 ನೌಕೆಯ ಟೈರ್ಗಳಿಂದಾಗಿ ಚಂದ್ರನ ಮೇಲೆ ಈ ಗುರುತು ಮೂಡಿಸಿದೆ ಎಂದು ಪ್ರತಿಪಾದಿಸಲಾಗಿದೆ. ನೆಟಿಜನ್ಗಳು, ರೋವರ್ನ ಟೈರ್ನಲ್ಲಿರುವ ಲಾಂಛನದ ಗುರುತುಗಳು ಚಂದ್ರನ ಮೇಲೆ ಶಾಶ್ವತವಾಗಿ ಮೂಡಿರುವ ಫೋಟೋ" ಎಂಬ ಅಡಿ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಫ್ಯಾಕ್ಟ್ಚೆಕ್
ಹೀಗೆ ಹಂಚಿಕೊಂಡ ಚಿತ್ರದಲ್ಲಿ ಎಡ ಕೆಳ ತುದಿಯಲ್ಲಿ ನಮಗೆ 'ಕೃಷ್ಣಾಂಶು ಗರ್ಗ್' ಎಂಬ ಹೆಸರು ಕಂಡಿತು. ಈ ಸುಳಿವು ಆಧರಿಸಿ, ಸೋಷಿಯಲ್ ಮೀಡಿಯಾದಲ್ಲಿ ಹೆಸರನ್ನು ಹುಡುಕಿದೆವು. ಇನ್ಸ್ಟಾಗ್ರಾಮ್ನಲ್ಲಿ ಕೃಷ್ಣಾಂಶ ಅವರ ಪ್ರೊಫೈಲ್ ಸಿಕ್ಕಿತು. ವೈರಲ್ ಆಗಿರುವ ಚಿತ್ರವನ್ನೇ ಅವರ ಸ್ಟೋರಿ ಹೈಲೈಟ್ನಲ್ಲಿ ಹಂಚಿಕೊಳ್ಳಲಾಗಿತ್ತು. ಇದು ಚಂದ್ರಯಾನ -3 ಚಂದ್ರನ ಮೇಲೆ ಇಳಿಯುವುದಕ್ಕೂ ಮೊದಲೇ ಹಂಚಿಕೊಳ್ಳಲಾಗಿದ್ದನ್ನು ಗುರುತಿಸಿದೆವು. ಚಿತ್ರದಲ್ಲೇ ಚಂದ್ರಯಾನ-3 ಚಂದ್ರನ ಮೇಲೆ ಇಳಿಯಲಿರುವ ಕೌಂಟ್ಡೌನ್ ಕೂಡ ಇರುವುದನ್ನು ಗುರುತಿಸಬಹುದು.
ಕೃಷ್ಣಾಂಶು ಗರ್ಗ್ ಈ ಚಿತ್ರವನ್ನು ಪೋಸ್ಟ್ ಕೂಡ ಮಾಡಿದ್ದು, ವೈರಲ್ ಆಗಿರುವ ಚಿತ್ರವೂ ಒಂದು ಸೃಜನಶೀಲ ಕೃತಿ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಅನೇಕರು ಇದನ್ನು 'ನಿಜವಾದ ಮುದ್ರೆ' ಎಂದು ತಪ್ಪಾಗಿ ಪ್ರತಿಪಾದಿಸಿದ್ದಾರೆ ಎಂದು ಹೇಳಿದ್ದಾರೆ. ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವ ಕೌಂಟ್ಡೌನ್ ಹಿನ್ನೆಲೆಯಲ್ಲಿ ಈ ಚಿತ್ರವನ್ನು ವಿನ್ಯಾಸ ಮಾಡಿದ್ದಾಗಿಯೂ ವಿವರಿಸಿದ್ದಾರೆ.
ಈ ವರದಿ ಬರೆಯುವ ಹೊತ್ತಿನವರೆಗೆ ಇಸ್ರೋ ಇಂತಹ ಯಾವುದೇ ಚಿತ್ರವನ್ನು ಹಂಚಿಕೊಂಡಿಲ್ಲ ಎಂಬುದನ್ನು ಖಚಿತಪಡಿಸಿಕೊಂಡೆವು. ವರದಿಗಳ ಪ್ರಕಾರ ಚಂದ್ರಯಾನ-3ರ ರೋವರ್ ಪ್ರಗ್ಯಾನ್, ಇಸ್ರೋ ಮತ್ತು ರಾಷ್ಟ್ರ ಲಾಂಛನದ ಮುದ್ರೆಗಳನ್ನು ಚಂದ್ರನ ಮೇಲೆ ದಾಖಲಿಸಲಿವೆ ಎಂದೇ ಹೇಳುತ್ತಿವೆ. ಆಧರೆ ಇಸ್ರೋ ಯಾವುದೇ ರೀತಿಯಲ್ಲಿ ಈ ವಾದವನ್ನು ದೃಢಪಡಿಸಿಲ್ಲ.
ಹಾಗಾಗಿ, ಇಸ್ರೋ ಲೋಗೊ ಮತ್ತು ರಾಷ್ಟ್ರ ಲಾಂಛನ ಇರುವ ಎಡಿಟ್ ಮಾಡಿದ ಚಿತ್ರವನ್ನು ಹಂಚಿಕೊಳ್ಳಲಾಗಿದೆ ಎಂದು ಸ್ಪಷ್ಟ. ಇದು ಸುಳ್ಳು.