ಫ್ಯಾಕ್ಟ್ ಚೆಕ್: ಭಾರತದ ಎಲ್ಲಾ ಮೊಬೈಲ್ ಸೇವಾ ಗ್ರಾಹಕರಿಗೆ ಬಿಜೆಪಿ ಸರ್ಕಾರವು ಉಚಿತ ರೀಚಾರ್ಜ್‌ನ್ನು ಒದಗಿಸುತ್ತಿದೆ ಎಂಬ ಸುಳ್ಳು ಸುದ್ದಿಯ ಮೂಲಕ ಗ್ರಾಹಕರನ್ನು ವಂಚಿಸುತ್ತಿದೆ
ಭಾರತದ ಎಲ್ಲಾ ಮೊಬೈಲ್ ಸೇವಾ ಗ್ರಾಹಕರಿಗೆ ಬಿಜೆಪಿ ಸರ್ಕಾರವು ಉಚಿತ ರೀಚಾರ್ಜ್‌ನ್ನು ಒದಗಿಸುತ್ತಿದೆ ಎಂಬ ಸುಳ್ಳು ಸುದ್ದಿಯ ಮೂಲಕ ಗ್ರಾಹಕರನ್ನು ವಂಚಿಸುತ್ತಿದೆ
2024ರಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಗೂ ಮುನ್ನ ಭಾರತೀಯ ಜನತಾ ಪಕ್ಷವು ಎಲ್ಲಾ ಭಾರತೀಯ ಮೊಬೈಲ್ ಸೇವಾ ಗ್ರಾಹಕರಿಗೆ ಮೂರು ತಿಂಗಳ ಉಚಿತ ರೀಚಾರ್ಜ್‌ನ್ನು ಕೊಡುತ್ತಿದೆ ಎಂಬ ಸಂದೇಶ ಸಾಮಾಜಿಕ ಮಾಧ್ಯಮವಾದ WhatsApp ನಲ್ಲಿ ಹರಿದಾಡುತ್ತಿದೆ. ಈ ಸಂದೇಶದ ಕೊನೆಯಲ್ಲಿ ಒಂದು ವೆಬ್‌ಸೈಟ್‌ನ ಲಿಂಕನ್ನು ಸಹ ನೀಡಲಾಗಿದೆ.
2024ರ ಚುನಾವಣೆಯಲ್ಲಿ ಮತದಾರರನ್ನು ಆಕರ್ಷಿಸಲು ಮತ್ತು ಬಿಜೆಪಿಗೆ ಮತ ಹಾಕಬೇಕೆಂಬ ನಿಟ್ಟಿನಿಂದ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಎಲ್ಲಾ ಮೊಬೈಲ್ ಬಳಕೆದಾರರಿಗೆ 3 ತಿಂಗಳು ಉಚಿತ ರೀಚಾರ್ಜ್‌ನ್ನು ನೀಡುತ್ತಿದೆ ಎಂಬ ಸಂದೇಶವು ಸಾಮಾಜಿಕಜಾಲತಾಣದಲ್ಲಿ ಹರಿದಾಡುತ್ತಿದೆ. ಉಚಿತ ರೀಚಾರ್ಜ್ ಪಡೆಯಲು ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ ಸೌಲಭ್ಯ ಪಡೆಯಲು ಕೊನೆಯ ದಿನಾಂಕ 16 ನವೆಂಬರ್ 2023 ಎಂದು ಬರೆದುಕೊಂಡಿದ್ದಾರೆ.
ಫ್ಯಾಕ್ಟ್‌ಚೆಕ್
ಕೇಂದ್ರ ಸರ್ಕಾರವಾಗಲಿ, ಬಿಜೆಪಿ ಸರ್ಕಾರವಾಗಲಿ ಭಾರತೀಯ ಮೊಬೈಲ್ ಸೇವಾ ಗ್ರಾಹಕರಿಗೆ ಮೂರು ತಿಂಗಳವರೆಗೆ ಉಚಿತ ರೀಚಾರ್ಜ್ ಅನ್ನು ಒದಗಿಸುವ ಕುರಿತು ಯಾವುದೇ ಪ್ರಕಟಣೆಯನ್ನು ನೀಡಿಲ್ಲ. ಪ್ರಕಟನೆಗೊಂಡ ಸುದ್ದಿ ಸುಳ್ಳು.
ಸುದ್ದಿಯ ಸತ್ಯಾಸತ್ಯತೆಗಾಗಿ ನಾವು "ಬಿಜೆಪಿ ಫ್ರೀ ರೀಚಾರ್ಜ್ ಯೋಜನಾ" ಎಂಬ ಕೀವರ್ಡ್‌ನ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟ ನಡೆಸಿದಾಗ ನಮಗೆ ಯಾವುದೇ ರೀತಿಯ ವರದಿಗಳು ಸಿಗಲಿಲ್ಲ. ಕನಿಷ್ಟಪಕ್ಷ ಬಿಜೆಪಿಯ ಅಧಿಕೃತ ಪುಟದಲ್ಲಿ ನಮಗೆ ಏನಾದರೂ ಸುದ್ದಿ ಸಿಗಬಹುದಾ ಎಂದು ಹುಡುಕಿದಾಗ ಯಾವುದೇ ಫಲಿತಾಂಶ ನಮಗೆ ಸಿಗಲಿಲ್ಲ.
ಪ್ರಕಟಣೆಯಲ್ಲಿರುವ ಲಿಂಕ್‌ನ್ನು ಪರಿಶೀಲಿಸಿದೆವು. ಬಿಜೆಪಿಯ ಅಧಿಕೃತ ವೆಬ್‌ಸೈಟ್ ಐಡಿ www.bjp.org , ಆದರೆ ಪ್ರಕಟಣೆಯಲ್ಲಿರುವ ವೆಬ್‌ಸೈಟ್ ಐಡಿಯೇ ವಿಭಿನ್ನವಾಗಿತ್ತು. ಆದಾಗ್ಯೂ, ರೀಚಾರ್ಜ್ ಆಫರ್ ಸಂದೇಶದೊಂದಿಗಿರುವ ವೆಬ್‌ಸೈಟ್‌ನ URL ಮೇಲೆ ಕ್ಲಿಕ್ ಮಾಡಿದಾಗ ಅದು ಬಿಜೆಪಿಯ ಅಧಿಕೃತ ವೆಬ್‌ಸೈಟ್‌ಗೆ ಕೊಂಡೊಯ್ಯಲಿಲ್ಲ. ಪ್ರಕಟಣೆಯಲ್ಲಿದ್ದ ವೆಬ್‌ಸೈಟ್ https://www.bjp.org@bjp2024.crazyoffer.xyz ಮೇಲೆ ಕ್ಲಿಕ್ ಮಾಡಿದೆವು. ವೆಬ್‌ಸೈಟ್‌ನಲ್ಲಿದ್ದ ಬಿಜೆಪಿಯ ಪೋಸ್ಟ್‌ರನ್ನು ಫೋಟೋಶಾಪ್ ಮಾಡಲಾಗಿತ್ತು. ಇಷ್ಟೇ ಅಲ್ಲ ಪ್ರಕಟಣೆಯಲ್ಲಿ ಬಂದಂತಹ ವೆಬ್‌ಸೈಟ್‌ನ ಡೋಮೈನ್ ಭಾರತದ್ದಲ್ಲ. ಹರಿದಾಡುತ್ತಿರುವ ಪ್ರಕಟಣೆಯಲ್ಲಿರುವ ವೆಬ್‌ಸೈಟ್‌ನ ಡೊಮೇನ್ ಅಮೆರಿಕಾ ದೇಶದ್ದು.
ಇಂತಹ ತಪ್ಪು ಸಂದೇಶಗಳಿಂದ ಡೇಟಾ ಕಳ್ಳತನವಾಗುವ ಸಾಧ್ಯತೆಗಳಿದೆ ಮತ್ತು ನಮ್ಮ ಖಾಸಗಿ ಮಾಹಿತಿಗಳು ದುರುಪಯೋಗಗೊಳ್ಳ ಬಹುದು. ಇಂತಹ ಮೋಸದ ಸಂದೇಶಗಳಿಂದ ಎಚ್ಚರಿಕೆ. ಯಾರಿಗೂ ಇಂತಹ ಮೆಸೇಜ್‌ಗಳನ್ನು ಕಳುಹಿಸಬೇಡಿ ಎಂದು ಪ್ರೆಸ್ ಬ್ಯೂರೋ ಆಫ್ ಇನ್ಫಾರ್ಮೇಶನ್ PIB ಸೂಚಿಸಲಾಗಿದೆ. ಪ್ರೆಸ್ ಬ್ಯೂರೋ ಆಫ್ ಇನ್ಫಾರ್ಮೇಶನ್ ತನ್ನ ಅಧಿಕೃತ X ಖಾತೆಯಲ್ಲಿ ಈ ಕುರಿತು ಪ್ರಕಟಣೆಯನ್ನು ಹೊರಡಿಸಿದೆ. ಬಿಜೆಪಿ ಸರ್ಕಾರ ಯಾವುದೇ ರೀತಿಯ ಪ್ರಕಟಣೆಯನ್ನು ಹೊರಡಿಸಿಲ್ಲ, ಎಲ್ಲಾಕಡೆ ಹರಿದಾಡುತ್ತಿರುವ ಸುದ್ದಿ ಸುಳ್ಳು. ಸಾರ್ವಜನಿಕರು ಎಚ್ಚರದಿಂದಿರ ಬೇಕು ಎಂದು ಪ್ರಕಟಣೆಯನ್ನು ಹೊರಡಿಸಿದೆ.
ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸಂದೇಶ ತಪ್ಪು. ಬಿಜೆಪಿ ಸರ್ಕಾರವು ಯಾವುದೇ ರೀತಿಯ ಉಚಿತ ರೀಚಾರ್ಜ್‌ನ್ನು ಒದಗಿಸುತ್ತಿಲ್ಲ.