ಫ್ಯಾಕ್ಟ್ ಚೆಕ್ : ಆರ್‍ಬಿಐ ಮಾಜಿ ಗವರ್ನರ್ ಮೋದಿ ಟೀಕಿಸಿದ್ದಾರೆ ಎನ್ನಲಾದ ಹೇಳಿಕೆ ಸುಳ್ಳು
ರಘುರಾಮ್ ರಾಜನ್ ಅವರು ಮೋದಿಯವರನ್ನು ಟೀಕಿಸಿ ಯಾವುದೇ ಹೇಳಿಕೆ ನೀಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹಾಗಾಗಿ ಈ ಪ್ರತಿಪಾದನೆ ತಪ್ಪು.
ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಮ್ ರಾಜನ್, ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವ ಮೊದಲೂ ಪ್ರಗತಿಯ ಹಾದಿಯಲ್ಲಿತ್ತು ಎಂದು ಹೇಳಿದ್ದಾರೆ ಎನ್ನಲಾದ ಪೋಸ್ಟ್‌ವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಘುರಾಮ್ ರಾಜನ್ ಮೋದಿಯವರನ್ನು ಗುರಿಯಾಗಿಸಿ ಟೀಕಿಸಿದ್ದು, ಭಾರತ ಮೋದಿಯವರು ಅಧಿಕಾರಕ್ಕೆ ಬರುವುದಕ್ಕೂ ಮೊದಲು ಆಡಳಿತ ನಡೆಸಿದ ಸರ್ಕಾರಗಳ ಅವಧಿಯಲ್ಲಿ ಹಲವು ಸಾಧನೆಗಳನ್ನುಮಾಡಿದೆ. ಆದರೆ ನಾಗರಿಕರು ಎಲ್ಲ ಪ್ರಗತಿಯೂ ಮೋದಿಯವರಿಂದ ಆಗಿದ್ದು ಎಂದು ತಪ್ಪಾಗಿ ಬಿಂಬಿಸುತ್ತಿದ್ದಾರೆ. ಮೋದಿ ಪ್ರಧಾನಿಯಾಗುವುದಕ್ಕೂ ಮುನ್ನ 70 ವರ್ಷಗಳಿಂದಲೂ ಅದ್ಭುತ ಪ್ರಗತಿಯನ್ನು ಕಾಣುತ್ತಿದೆ ಎಂದು ವೈರಲ್ ಆಗಿರುವ ಪೋಸ್ಟ್ ಹೇಳುತ್ತದೆ.
ವೈರಲ್ ಪೋಸ್ಟ್‌ನಲ್ಲಿರುವ ಕೆಲಸ ಸಾಲು ಹೀಗಿವೆ: " ಆದರೂ ಕಳೆದ ನಾಲ್ಕು ವರ್ಷಗಳಿಂದ ಮೋದಿಯವರಿಂದಾಗಿಯೇ ಎಲ್ಲವೂ ಸಾಧ್ಯವಾಗಿದ್ದು ಎಂದು ಕೆಲವರು ನಂಬಿದ್ದಾರೆ ಅಥವಾ ನಂಬಲು ಯತ್ನಿಸುತ್ತಿದ್ದಾರೆ. ಆಧರೆ ವಾಸ್ತವದಲ್ಲಿ ಮೋದಿಯವರು ಭಾರತವನ್ನು 4 ವರ್ಷಗಳಲ್ಲಿ 40 ವರ್ಷ ಹಿಂದಕ್ಕೆ ಒಯ್ದಿದ್ದಾರೆ."
ಫ್ಯಾಕ್ಟ್ ಚೆಕ್
ರಘುರಾಮ್ ರಾಜನ್ ಅವರ ಹೇಳಿಕೆಯನ್ನು ದೃಢಪಡಿಸುವ ಯಾವುದೇ ವರದಿ ಅಥವಾ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಿಲ್ಲ.
ರಘುರಾಮ್ ರಾಜನ್ ಅವರ ಲಿಂಕ್ಡ್‌ಇನ್ ತಾಣದಲ್ಲಿ ಸಕ್ರಿಯವಾಗಿದ್ದು, ಅಲ್ಲೂ ಈ ರೀತಿಯ ಹೇಳಿಕೆ ಪ್ರಕಟವಾಗಿಲ್ಲ. ವೈರಲ್ ಮೆಸೇಜ್‌ನಲ್ಲಿರುವ ಸಾಲುಗಳನ್ನು ಹೋಲುವ ಯಾವುದೇ ಮೆಸೇಜ್ ಪ್ರಕಟವಾಗಿಲ್ಲ.
ಅಲ್ಲದೆ ಈ ವೈರಲ್ ಮೆಸೇಜ್‌ನಲ್ಲಿರುವ ಮಾಹಿತಿಯೂ ಅಸಮರ್ಪಕವಾಗಿದೆ. ಉದಾಹರಣೆಗೆ ಆರ್‍ಬಿಐನ ಮಾಜಿ ಚೇರ್ಮನ್ ಎಂದಿದೆ. ಆದರೆ ರಘುರಾಮ್ ರಾಜನ್ ಅವರು ಆರ್‍ಬಿಐ ಗವರ್ನರ್ ಆಗಿದ್ದರು. ಚೇರ್ಮನ್ ಅಲ್ಲ. ಆರ್‍ಬಿಐನಲ್ಲಿ ಚೇರ್ಮನ್ ಎಂಬ ಸ್ಥಾನವೇ ಇರಲಿಲ್ಲ.
ಇನ್ನೊಂದು ಉದಾಹರಣೆ, ಮೋದಿ ಕೇವಲ ನಾಲ್ಕು ವರ್ಷ ಸೇವೆ ಸಲ್ಲಿಸಿದ್ದರು ಎಂದಿದೆ. ವಾಸ್ತವದಲ್ಲಿ 9 ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ರಘುರಾಮ್ ರಾಜನ್ ಅವರು ಮೋದಿಯವರನ್ನು ಟೀಕಿಸಿ ಯಾವುದೇ ಹೇಳಿಕೆ ನೀಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹಾಗಾಗಿ ಈ ಪ್ರತಿಪಾದನೆ ತಪ್ಪು.