ಫ್ಯಾಕ್ಟ್‌ಚೆಕ್: ಭಾರತ ಸರ್ಕಾರ ಭಾರತೀಯರ ಖಾತೆಗಳಿಗೆ 5000ರೂ ಜಮಾ ಮಾಡುತ್ತಿಲ್ಲ
ಭಾರತ ಸರ್ಕಾರ ಭಾರತೀಯರ ಖಾತೆಗಳಿಗೆ 5000ರೂ ಜಮಾ ಮಾಡುತ್ತಿಲ್ಲ
ಇತ್ತೀಚಿಗೆ ಕರ್ನಾಟಕದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಬೆಂಗಳೂರಿನಲ್ಲಿ ನಗರದಲ್ಲಿ ಸೈಬರ್ ವಂಚಕರ ಹಾವಳಿ ಮಿತಿ ಮೀರಿದ್ದು, ಪ್ರತಿ ವರ್ಷ ಹತ್ತು ಸಾವಿರಕ್ಕು ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಸೈಬರ್ ವಂಚಕರ ಬಲೆಗೆ ಬಿದ್ದು ಜನರು ಕೋಟ್ಯಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಬೆಂಗಳೂರು ನಗರ ಪೊಲೀಸರು ಹಂಚಿಕೊಂಡ ಮಾಹಿತಿ ಪ್ರಕಾರ, ಕಳೆದ ಎಂಟು ತಿಂಗಳಲ್ಲಿ, ಆಗಸ್ಟ್ 31ರವರೆಗೆ 12,356 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ಪ್ರತಿದಿನ 50ಕ್ಕೂ ಹೆಚ್ಚು ಸೈಬರ್ ಅಪರಾಧದ ಪ್ರಕರಣಗಳು ದಾಖಲಾಗುತ್ತಿವೆ. ಇಲ್ಲಿಯವರೆಗೆ 1,242 ಕೋಟಿ ರೂಪಾಯಿಗಳು ವಂಚಕರ ವಶವಾಗಿದೆ. ಇಂಟರ್‌ನೆಟ್ ಮತ್ತು ತಂತ್ರಜ್ಞಾನದ ಸುರಕ್ಷಿತ ಬಳಕೆಯ ಕುರಿತು ಐಟಿ-ಬಿಟಿ ಕಂಪನಿಗಳು, ಸರ್ಕಾರ, ಪೊಲೀಸ್ ಇಲಾಖೆ- ಯಾರು ಎಷ್ಟೇ ಎಚ್ಚರಿಕೆ ವಹಿಸಿದರೂ ತಡೆಗಟ್ಟುವುದು, ನಿಯಂತ್ರಿಸುವುದು ದಿನದಿಂದ ದಿನಕ್ಕೆ ಸವಾಲಾಗುತ್ತಿದೆ. ವಂಚಕರು ಸಾಮಾಜಿಕ ಮಾಧ್ಯಮಗಳನ್ನೇ ಗುರಿಯಾಗಿಸಿಕೊಂಡು ಜನರ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ದೋಚುತ್ತಿದ್ದಾರೆ. ವಾಟ್ಸ್‌ಪ್ ಗ್ರೂಪ್‌ಗಳಲ್ಲಿ ಬರುವ ಸಂದೇಶಗಳನ್ನು ನಂಬಿ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳುವುದು ಅಥವಾ ಲಿಂಕ್‌ಗಳನ್ನು ಕ್ಲಿಕ್ ಮಾಡುವುದರಿಂದ ಜನರ ಹಣವನ್ನು ಲೂಟಿ ಮಾಡುತ್ತಿದ್ದಾರೆ.
ಇತ್ತೀಚಿಗೆ ವಾಟ್ಸ್‌ಪ್‌ನಲ್ಲಿ ʼಭಾರತ ಸರ್ಕಾರವು ಎಲ್ಲಾ ಭಾರತೀಯರ ಖಾತೆಗಳಿಗೆ 5000ರೂ ಜಮಾ ಮಾಡುತ್ತಿದೆ. ನೀವು ಈ ಸೌಲಭ್ಯವನ್ನು ಪಡೆಯಲು ಪೋಸ್ಟರ್‌ನಲ್ಲಿ ಕಾಣುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಐದು ಸಾವಿರ ರೂ ಪಡೆದುಕೊಳ್ಳಿ ಎಂಬ ಕ್ಯಾಪ್ಷನ್‌ನೊಂದಿಗೆ ಪೊಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಚಿತ್ರವನ್ನು ಗಮನಿಸಿದರೆ, ಕ್ಯಾಷ್ ವಾಲೆಟ್ ಎಂಬ ಖಾತೆಯಿಂದ ಈ ಸುದ್ದಿಯನ್ನು ಹಂಚಿಕೊಳ್ಳಲಾಗಿದೆ ಎಂಬುದನ್ನು ನಾವು ನೋಡಬಹುದು. ಹಾಗೆ ಈ ಚಿತ್ರದಲ್ಲಿ ಫೋನ್ ಪೇ ಲೋಗೋ ಜೊತೆಗೆ https://cashzoneofferzz.dev/PAYM/index.html ಎಂಬ ಲಿಂಕ್‌ನ್ನು ಹಂಚಿಕೊಂಡು ಈ ಲಿಂಕ್‌ನ್ನು ಕ್ಲಿಕ್ ಮಾಡುವ ಮೂಲಕ ಹಣವನ್ನು ಪಡೆದುಕೊಳ್ಳಿ ಎಂದು ಬರೆಯಲಾಗಿದೆ. ಹಾಗೆ ಈ ಚಿತ್ರದಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅಚರ ಚಿತ್ರವಿರುವುದನ್ನು ನಾವು ಕಾಣಬಹುದು.
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಭಾರತ ಸರ್ಕಾರ ಭಾರತೀಯರಿಗೆ ಐದು ಸಾವಿರ ರೂಪಾಯಿ ನೀಡುತ್ತಿದೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ.
ನಾವು ವೈರಲ್ ಆದ ಸುದ್ದಿಯಲ್ಲಿನ ಸತ್ಯಾಂಶವನ್ನು ತಿಳಿಯಲು ಪೊಸ್ಟ್‌ರ್‌ನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಆದರೆ ನಮಗೆ ಈ ಪೋಸ್ಟರ್ ಸಂಬಂಧಿಸಿದ ಯಾವುದೇ ಮಾಹಿತಿ ಸಿಗಲಿಲ್ಲ. ನಂತರ ನಾವು ಕೆಲವು ಪ್ರಮುಖ ಕೀ ವರ್ಡ್‌ಗಳನ್ನು ಬಳಸಿ ಹುಡುಕಾಟ ನಡೆಸಿದೆವು. ಇಲ್ಲಿಯೂ ನಮಗೆ ಯಾವುದೇ ಮಾಹಿತಿ ಸಿಗಲಿಲ್ಲ.
ನಂತರ ನಾವು ವಾಟ್ಸ್‌ಪ್‌ನಲ್ಲಿ ಹಂಚಿಕೊಂಡಿದ್ದ ಲಿಂಕ್‌ನ ಮೂಲಕ ಮಾಹಿತಿಯನ್ನು ಕಲೆಹಾಕಬಹುದೆಂದು ವೆಬ್‌ಸೈಟ್ ಮೇಲೆ ಕ್ಲಿಕ್ ಮಾಡಿದೆವು. ವಾಟ್ಸ್‌ಪ್‌ನಲ್ಲಿ ಹಂಚಿಕೊಂಡಿದ್ದ ಲಿಂಕ್‌ನ್ನು ಕ್ಲಿಕ್ ಮಾಡಿದಗ ನಮಗೆ ಈ ವೆಬ್‌ಸೈಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯಿರುವ ಚಿತ್ರದೊಂದಿಗೆ ಮಲಯಾಳಂನಲ್ಲಿ "ഭാരത് ജൻ ധന് യോജനയിലൂടെ എല്ലാ പൊതുജനങ്ങളും. ₹5000 എല്ലാവർക്കും സൗജന്യ അക്കൗണ്ട്. നിങ്ങളുടെ അക്കൗണ്ടിലെത്താൻ കാർഡ് സ്ക്രാച്ച് ചെയ്യുക" ಎಂದು ಬರೆದಿರುವುದನ್ನು ನಾವು ಕಂಡುಕೊಂಡೆವು.
ನಾವು ಕನ್ನಡಕ್ಕೆ ಅನುವಾದಿಸಿದಾಗ ́ಭಾರತ್ ಜನ್ ಧನ್ ಯೋಜನೆ ಮೂಲಕ ಎಲ್ಲಾ ಸಾರ್ವಜನಿಕರಿಗೆ ₹5000 ಉಚಿತವಾಗಿ ನಿಮ್ಮ ಖಾತೆಗಳಲ್ಲಿ ಜಮಾ ಮಾಡುತ್ತಾರೆ. ಈ ಸೌಲಭ್ಯವನ್ನು ಪಡೆಯಲು ನೀವು ಕಾರ್ಡ್ ಅನ್ನು ಸ್ಕ್ರ್ಯಾಚ್ ಮಾಡಿʼ ಎಂದಿರುವುದನ್ನು ನಾವು ಕಾಣಬಹುದು. ವೆಬ್‌ಸೈಟ್‌ನ್ನು ಪರಿಶೀಲಿಸಿದರೆ ನಮಗೆ ತಿಳಿಯುವುದೇನೆಂದರೆ ಯುಆರ್‌ಎಲ್ https://cashzoneofferzz.dev/PAYM/index.html ನಕಲಿಯದ್ದು ಎಂದು ಸ್ಪಷ್ಟವಾಗುತ್ತದೆ.
ಈ ಸೌಲಭ್ಯವನ್ನು ಪಡೆಯಲು ವೆಬ್‌ಸೈಟ್ ಕೆಳಗೆ ಸ್ಕ್ರಾಚ್ ಮಾಡಿ, ಅಲ್ಲಿ ನಿಮಗೆ ಸ್ಕ್ರಾಚ್ ಬಟನ್ ಸಿಗುತ್ತದೆ ಸ್ಕ್ರಾಚ್ ಮಾಡಿ ಬಹುಮಾನವನ್ನು ಗೆಲ್ಲಿ ಎಂದಿತ್ತು. ಹಾಗೆ ನೀವು ಗೆದ್ದಂತಹ ಬಣವನ್ನು ಪಡೆಯಲು ಇನ್ನೊಂದು ಬಟನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಿಮ್ಮ ವಿವರಗಳನ್ನು ನೀಡಿ ಎಂದಿತ್ತು.
ನಾವು ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಪೋನ್‌ಪೇ ಅಪ್ಲಿಕೇಶನ್‌ಗೆ ಲಿಂಕ್ ಮಾಡಲಾಗಿತ್ತು. ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಅಲ್ಲಿ ನಮಗೆ ಸ್ಕ್ರಾಚ್ ಕಾರ್ಡ್ ಅಥವಾ ಹಣವನ್ನು ಖಾತೆಗೆ ವರ್ಗಾಯಿಸಲು ಯಾವುದೇ ಆಯ್ಕೆ ಅಲ್ಲಿ ಕಾಣಲಿಲ್ಲ. ಬದಲಿಗೆಗೆ ನಾವೇ ಹಣ ಪಾವತಿಸುವ ಲಿಂಕ್‌ನ್ನು ಈ ಪೇಜ್‌ಗೆ ಸೇರಿಸಲಾಗಿದೆ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ʼವಿಕಾಸ್ ಎಂಟರ್ ಪ್ರೈಸಸ್ʼ ಎಂಬ ಖಾತೆಗೆ ಹಣ ವರ್ಗಾವಣೆಯಾಗುತ್ತಿರುವುದನ್ನು ನಾವು ನೋಡಬಹುದು.
ಹೀಗಾಗಿ ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಭಾರತ ಸರ್ಕಾರ ಭಾರತೀಯರಿಗೆ ಐದು ಸಾವಿರ ರೂಪಾಯಿ ನೀಡುತ್ತಿದೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ಲಿಂಕ್ ಆರ್ಥಿಕ ವಂಚನೆಗೆ ಗುರಿಯಾಗಿಸುವ ಲಿಂಕ್ ಎಂದು ಸಾಭೀತಾಗಿದೆ