ಫ್ಯಾಕ್ಟ್‌ಚೆಕ್‌: ಜಮೀನು ಪಹಣಿಯ ದಾಖಲೆಯಲ್ಲಿ ವಕ್ಫ್ ಹೆಸರು ನಮೂದಾಗಿರುವುದಕ್ಕೆ ರೈತ ಆತ್ಮಹತ್ಯೆ ಮಾಡಿಕೊಂಡಿಲ್ಲ

ಜಮೀನು ಪಹಣಿಯ ದಾಖಲೆಯಲ್ಲಿ ವಕ್ಫ್ ಹೆಸರು ನಮೂದಾಗಿರುವುದಕ್ಕೆ ರೈತ ಆತ್ಮಹತ್ಯೆ ಮಾಡಿಕೊಂಡಿಲ್ಲ

Update: 2024-11-09 04:00 GMT

Haveri farmer commits suicide

ಇತ್ತೀಚಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಾವೇರಿಯ ರೈತರೊಬ್ಬರು ತನ್ನ ಜಮೀನಿನ ಪಹಣಿಯಲ್ಲಿ ‘ವಕ್ಫ್’ ಹೆಸರು ನಮೂದಾಗಿರುವುದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ʼಚಲವಾಡಿ ನಾರಾಯಣಸ್ವಾಮಿʼ ಎಂಬ ಎಕ್ಸ್‌ ಖಾತೆದಾರ ತನ್ನ ಖಾತೆಯಲ್ಲಿ ಕನ್ನಡ ದುನಿಯಾ ಹಂಚಿಕೊಂಡಿದ್ದ ವರದಿಯ ಸ್ಕ್ರೀನ್‌ಶಾಟ್‌ನೊಂದಿಗೆ ʼಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ಸೇರಿರುವುದರಿಂದ ಹಾವೇರಿ ಜಿಲ್ಲೆಯ ಹರನಗಿ ಗ್ರಾಮದ ರೈತ ರುದ್ರಪ್ಪ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ತಲುಪಿರುವುದು ಅತೀವ ಕಳವಳಕಾರಿ ವಿಷಯವಾಗಿದೆ. @INCKarnataka ಸರ್ಕಾರದ ಜನವಿರೋಧಿ ನೀತಿಗಳು ಮತ್ತು ರಾಜಕೀಯ ತುಷ್ಟೀಕರಣದ ಪರಿಣಾಮ ಅನ್ನದಾತರು ಬೆದರಿಹೋದರು. ಇದೇ ಕಾರಣದಿಂದ ನಮ್ಮ‌ ರೈತರು ತಮ್ಮ ಜೀವವನ್ನೇ ಕಳೆದುಕೊಳ್ಳುವ ಸ್ಥಿತಿಗೆ ಬಂದಿರುವುದು ದುರಂತವೇ ಸರಿ. ನಾಡಿನ ರೈತ ಬಂಧುಗಳು ಭಯಪಡುವ ಅಗತ್ಯವಿಲ್ಲ. @BJP4Karnataka ರೈತರ ಹಕ್ಕಿನ ಒಂದು ಇಂಚು ಜಾಗವನ್ನು ಕೂಡ ಕಿತ್ತೊಯ್ಯಲು ಬಿಡುವುದಿಲ್ಲ. ಈ ದುರ್ಭಾಗ್ಯಕರ ಘಟನೆಗೆ @siddaramaiah ಸರ್ಕಾರವೇ ಹೊಣೆ ಹೊರುತ್ತದೆ. ಈ ಕೂಡಲೇ ಮೃತ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ನಾನು ಆಗ್ರಹಿಸುತ್ತೆನೆ" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ವೈರಲ್‌ ಆದ ಸುದ್ದಿಯ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. 

ವೈರಲ್‌ ಆದ ಸುದ್ದಿಯ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.


ನವಂಬರ್‌ 07, 2024ರಂದು ಪಬ್ಲಿಕ್‌ ಟಿವಿ ವೆಬ್‌ಸೈಟ್‌ನಲ್ಲಿ ʼವಕ್ಫ್ ವಿವಾದಕ್ಕೆ ಬೇಸತ್ತು ಯುವ ರೈತ ಆತ್ಮಹತ್ಯೆʼ ಎಂಬ ಶೀರ್ಷಿಕೆಯೊಂದಿಗೆ ವರದಿಯನ್ನು ಹಂಚಿಕೊಂಡಿದ್ದಾರೆ. ವರದಿಯಲ್ಲಿ ʼಹರನಗಿ ಗ್ರಾಮದ ನಿವಾಸಿ ರುದ್ರಪ್ಪ 2022ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಹಾನಗಲ್ ತಾಲ್ಲೂಕಿನ ಅಲ್ಲಾಪುರ ಗ್ರಾಮದಲ್ಲಿ 1964ರಲ್ಲಿ 4 ಎಕರೆ 36 ಗುಂಟೆ ಜಮೀನು ಖರೀದಿ ಮಾಡಿದ್ದ ಜಮೀನಿನಲ್ಲಿ ಚೆನ್ನಪ್ಪ ಮತ್ತು ಮಗ ರುದ್ರಪ್ಪ ಉಳುಮೆ ಮಾಡಿಕೊಂಡು ಬರುತ್ತಿದ್ದರು. ಯಾವುದೇ ನೋಟಿಸ್ ನೀಡದೇ ರೈತರಿಂದ ಜಮೀನನ್ನು ವಕ್ಫ್ ಬೋರ್ಡ್ ವಶಪಡಿಸಿಕೊಂಡಿದ್ದರಿಂದ ನೊಂದ ಚೆನ್ನಪ್ಪನ ಮಗ ರುದ್ರಪ್ಪ 2022ರ ಜನವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆʼ ಎಂದು ವರದಿಯಾಗಿದೆ.

ನವಂಬರ್‌ 07, 2024ರಂದು ʼಕನ್ನಡ ನ್ಯೂಸ್‌ನೌʼ ಎಂಬ ವೆಬ್‌ಸೈಟ್‌ನಲ್ಲಿ ಬ್ರೇಕಿಂಗ್‌: ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದು : ಹಾವೇರಿಯಲ್ಲಿ ರೈತ ಆತ್ಮಹತ್ಯೆ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿದೆ. ವರದಿಯಲ್ಲಿ 8 ವರ್ಷಗಳ ಹಿಂದೆ 4 ಎಕರೆ ಹೊಲದ ಜಮೀನಿನ ಪಹಣಿಯಲ್ಲಿ ವಕ್ಫ್ ಎಂಬ ಹೆಸರು ಬಂದಿರುವುದಕ್ಕೆ ಮಾನಸಿಕವಾಗಿ ನೊಂದ ಹಾವೇರಿ ಜಿಲ್ಲೆಯ ಹರನಗಿ ಗ್ರಾಮದ ರುದ್ರಪ್ಪ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹಾವೇರಿ ರೈತರು ಆರೋಪಿಸಿದ್ದಾರೆ. ಸದ್ಯ ರೈತರು ವಕ್ಫ್ ನೋಟಿಸ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. 

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಹಾವೇರಿ ಜಿಲ್ಲೆಯ ಹರನಗಿ ಗ್ರಾಮದ ರುದ್ರಪ್ಪ ಎಂಬ ರೈತ ಸಾಲದಿಂದ ಹಾಗೂ ಅತಿಯಾದ ಮಳೆಯಿಂದಾಗಿ ಬೆಳೆ ಹಾನಿಯಾಗಿದ್ದರಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ

ನಾವು ವೈರಲ್‌ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ಕೆಲವು ಪ್ರಮುಖ ಕೀವರ್ಡ್‌ಗಲನ್ನು ಬಳಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಯಾವುದೇ ವರದಿಗಳು ಕಂಡುಬಂದಿಲ್ಲ. ಆದರೆ ನಮಗೆ ಎಕ್ಸ್‌ ಖಾತೆಯಲ್ಲಿ ಹಾವೇರಿ ಎಸ್‌ಪಿ ಹಂಚಿಕೊಂಡಿದ್ದ ಪತ್ರಿಕಾ ಪ್ರಕಟಣೆ ಲಭ್ಯವಾಯಿತು.

ನವಂಬರ್‌ 7, 2024ರಂದು ಹಾವೇರಿ ಎಸ್‌ಪಿ ಎಂಬ ಅಧಿಕೃತ ಎಕ್ಸ್‌ ಖಾತೆಯಲ್ಲಿ "The news shared is false. No such incident reported. The farmer mentioned here, Rudrappa Channappa Balikai suicide case was reported on 06/01/2022 and it was reported to be due to loan and crop loss. Case was registered u/s 174 CrPC in Adur PS. Final report was already submitted" ಎಂಬ ಶೀರ್ಷಿಕೆಯೊಂದಿಗೆ ಹಾವೇರಿ ಜಿಲ್ಲಾ ಪೊಲೀಸರು ಹೊರಡಿಸಿರುವ ಪತ್ರಿಕಾ ಪ್ರಕಟಣೆಯನ್ನು ಹಂಚಿಕೊಂಡಿದ್ದಡು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ದಿನಾಂಕ 06/01/2022 ರಂದು ರೈತ ರುದ್ರಪ್ಪ ಚನ್ನಪ್ಪ ಬಾಳಿಕಾಯಿ ಆತ್ಮಹತ್ಯೆ ಪ್ರಕರಣ ವರದಿಯಾಗಿದೆ. ಸಾಲ ಮತ್ತು ಬೆಳೆ ನಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಆಡೂರು ಪಿಎಸ್‌ನಲ್ಲಿ 174 ಸಿಆರ್‌ಪಿಸಿ ಪ್ರಕಾರ ಯುಡಿಆರ್‌ ದಾಖಲಾಗಿದೆ. ಈಗಾಗಲೇ ಸಾಕ್ಷಾಧಾರಗಳನ್ನು ಸಂಗ್ರಹಿಸಿ, ಅಂತಿಮ ವರದಿಯನ್ನು ತಹಶೀಲ್ದಾರ ಹಾನಗಲ್‌ರವರಿಗೆ ಸಲ್ಲಿಸಲಾಗಿದೆ" ಎಂದು ವರದಿಯಾಗಿದೆ.

ನವಂಬರ್‌ 8,2024 ರಂದು ʼಕರ್ನಾಟಕ ವಾರ್ತೆʼ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ "ಹಾವೇರಿ ಜಿಲ್ಲೆಯ ಹರಣಗಿ ಗ್ರಾಮದ ರೈತ ಚನ್ನಪ್ಪ ಅವರ ಪುತ್ರ ರುದ್ರಪ್ಪ ಎಂಬವರು ಜಮೀನಿನ ಪಹಣಿಯಲ್ಲಿ ವಕ್ಫ್‌ ಹೆಸರು ನಮೂದು ಆಗಿರುವುದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ 2024, ನವೆಂಬರ್‌ 11 ರಂದು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ಈ ಬಗ್ಗೆ ಹಾವೇರಿ ಜಿಲ್ಲಾ ಪೊಲೀಸ್‌ ಅಧಿಕಾರಿಗಳು ತನಿಖೆ ನಡೆಸಿದ ವೇಳೆ ಇದು ಸುಳ್ಳು ಸುದ್ದಿಯೆಂದು ಸ್ಪಷ್ಟವಾಗಿದೆ. ವಾಸ್ತವವಾಗಿ ರುದ್ರಪ್ಪ ಅವರ ತಂದೆ ಚನ್ನಪ್ಪ ಅವರು ಐಸಿಐಸಿಐ ಬ್ಯಾಂಕ್‌ ಹಾವೇರಿ ಶಾಖೆಯಲ್ಲಿ 3 ಲಕ್ಷ ರೂ. ಹಾಗೂ ಖಾಸಗಿಯಾಗಿ 4 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು ಅದರ ಜೊತೆಗೆ ಅತಿಯಾದ ಮಳೆಯಿಂದಾಗಿ ಬೆಳೆ ಹಾನಿಯಾಗಿದ್ದರಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರವನ್ನು ನೀಡಲಾಗಿರುತ್ತದೆ. ಈ ಬಗ್ಗೆ ರುದ್ರಪ್ಪ ಅವರ ತಂದೆ ಚನ್ನಪ್ಪ ಅವರೇ ಸ್ಪಷ್ಟಪಡಿಸಿರುವುದಾಗಿ ಹಾವೇರಿ ಜಿಲ್ಲಾ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ"

ಈ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್‌ ಪ್ರತಿಯನ್ನು ʼನ್ಯೂಸ್‌ ಚಕ್ಕರ್‌ʼ ಹಾವೇರಿ ಸೆನ್ ಕ್ರೈಂ ಪೊಲೀಸರಿಂದ ಪಡೆದುಕೊಂಡು ವರದಿ ಮಾಡಿರುವುದನ್ನು ನಾವು ಕಂಡಿಕೊಂಡೆವು.

ಕನ್ನಡ ಮಾಧ್ಯಮ ಸಂಸ್ಥೆ ಟಿವಿ9 ಹಾಗೂ ಪ್ರಜಾವಾಣಿ ವರದಿಯಲ್ಲಿ ʼಹಾವೇರಿಯಲ್ಲಿ ರೈತನ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ಹರಡಿದ ಆರೋಪದ ಮೇಲೆ ಹಾವೇರಿಯ ಸಿಇಎನ್ ಠಾಣೆಯಲ್ಲಿ ತೇಜಸ್ವಿ ಸೂರ್ಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ರೈತ ರುದ್ರಪ್ಪ ಆತ್ಮಹತ್ಯೆಗೆ ವಕ್ಫ್ ನೋಟಿಸ್ ಕಾರಣ ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದರು. ಆದರೆ, ಜಿಲ್ಲಾಡಳಿತ ಮತ್ತು ಪೊಲೀಸರು ಸಾಲಬಾಧೆಯೇ ಆತ್ಮಹತ್ಯೆಗೆ ಕಾರಣ ಎಂದು ಸ್ಪಷ್ಟಪಡಿಸಿದ್ದವು" ಎಂದು ವರದಿಯಾಗಿದೆ.

ಹೀಗಾಗಿ ವೈರಲ್‌ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ ಎಂದು ಸಾಭೀತಾಗಿದೆ. ರೈತ ರುದ್ರಪ್ಪ ಆಸ್ತಿ ದಾಖಲೆಯಲ್ಲಿ ವಕ್ಫ್ ಹೆಸರು ನಮೂದಾಗಿರುವುದಕ್ಕೆ ರೈತ ಆತ್ಮಹತ್ಯೆ ಮಾಡಿಕೊಂಡಿಲ್ಲ ಬದಲಿಗೆ ಬೆಳೆ ಹಾನಿಯಾಗಿದ್ದರಿಂದ ಸಾಲ ಮಾಡಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Claim :  ಜಮೀನು ಪಹಣಿಯ ದಾಖಲೆಯಲ್ಲಿ ವಕ್ಫ್ ಹೆಸರು ನಮೂದಾಗಿರುವುದಕ್ಕೆ ರೈತ ಆತ್ಮಹತ್ಯೆ ಮಾಡಿಕೊಂಡಿಲ್ಲ
Claimed By :  Mainstream Media
Fact Check :  False
Tags:    

Similar News