ಫ್ಯಾಕ್ಟ್‌ಚೆಕ್: ಕೊಲ್ಕತ್ತಾ ಅತ್ಯಾಚಾರದ ಸಂತ್ರಸ್ತೆಯ ಪಾರ್ಥಿವ ಶರೀರವನ್ನು ತಂದೆ ಆಸ್ಪತ್ರೆಯಿಂದ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ
ಕೊಲ್ಕತ್ತಾ ಅತ್ಯಾಚಾರದ ಸಂತ್ರಸ್ತೆಯ ಪಾರ್ಥಿವ ಶರೀರವನ್ನು ತಂದೆ ಆಸ್ಪತ್ರೆಯಿಂದ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ
ಆಗಸ್ಟ್ 9ರಂದು ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯ ಹಲವು ದಿನಗಳ ನಂತರ, ಪ್ರಮುಖ ಆರೋಪಿ ಸಂಜೋಯ್ ರಾಯ್‌ನನ್ನು
ಬಂಧಿಸಲಾಗಿತ್ತು. ವೈದ್ಯೆ ಮೇಲೆ ಅತ್ಯಾಚಾರ ನಡೆದು ಕೊಲೆಯಾದ ದಿನ ಕರ್ತವ್ಯದಲ್ಲಿದ್ದ ಸಂದೀಪ್ ಘೋಷ್ ಮತ್ತು ಇತರ ನಾಲ್ವರು ವೈದ್ಯರನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಕರೆದೊಯ್ದು ಅವರ ಮೇಲೆ ಸುಳ್ಳು ಪತ್ತೆ ಪರೀಕ್ಷೆಯನ್ನು ನಡೆಸಲು ಅನುಮತಿ ಕೋರಿ ವಿಚಾರಣೆಯನ್ನು ನಡೆಸುತ್ತಿದೆ.
ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋವೊಂದು ಹರಿದಾಡುತ್ತಿದೆ. ಸಂತ್ರಸ್ತೆಯ ತಂದೆ, ತಮ್ಮ ಮಗಳ ಮೃತದೇಹವನ್ನು ಆಸ್ಪತ್ರೆಯಿಂದ ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋವನ್ನು ಗಮನಿಸಿದರೆ, ಆಸ್ಪತ್ರೆಯಲ್ಲಿ ಸ್ಟ್ರೆಚರ್‌ನ ಮುಂದೆ ಒಬ್ಬ ಬ್ಯಕ್ತಿ ನಡೆದುಕೊಂಡು ಹೋಗುವುದನ್ನು ನಾವು ಕಾಣಹುದು. ಆತ ಅಲ್ಲಿ ನೆರೆದಿದ್ದ ಆಸ್ಪತ್ರೆ ಸಿಬ್ಬಂದಿಗೆ ನಮಸ್ಕಾರ ಮಾಡುತ್ತಾ ನಡೆದುಕೊಂಡು ಬರುವುದನ್ನು ನಾವು ಈ ವಿಡಿಯೋದಲ್ಲಿ ನೋಡಬಹುದು.
ಅರುಣ್ ಕುಮಾರ್ ಎಂಬ ಎಕ್ಸ್ ಖಾತೆದಾರ ಆಗಸ್ಟ್ 22, 2024ರಂದು ವಿಡಿಯೋವನ್ನು ಹಂಚಿಕೊಂಡು "ಇದು ಕೋಲ್ಕತ್ತಾ ವೈದ್ಯೆ ಸಂತ್ರಸ್ತೆಯ ತಂದೆ. ಸಾವಿನ ದುಃಖದ ನಡುವೆ ಆ ತಂದೆಯ ಧೈರ್ಯ ನೋಡಿ. ನಮ್ಮ ತಂಗಿಯ ತಂದೆಗೆ ಈ ಹೋರಾಟವನ್ನು ಮಾಡಲು ಆ ದೇವರು ಇನ್ನಷ್ಟು ಶಕ್ತಿ ನೀಡಲಿ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಇದು ಕೋಲ್ಕತ್ತಾ ವೈದ್ಯೆ ಮೌಮಿತಾ ಅವರ ತಂದೆ. ಸಾವಿನ ದುಃಖದ ನಡುವೆ ಆ ತಂದೆಯ ಧೈರ್ಯ ನೋಡಿ. ನಮ್ಮ ತಂಗಿಯ ತಂದೆಗೆ ಈ ಹೋರಾಟವನ್ನು ಮಾಡಲು ಆ ದೇವರು ಇನ್ನಷ್ಟು ಶಕ್ತಿ ನೀಡಲಿ.#justiceformumita https://t.co/uBCHV951W7
— ಅರುಣ್ ಕುಮಾರ್ ಹಿಂದೂ 🚩 (@arukumrhin11669) August 22, 2024
ಇದೇ ವಿಡಿಯೋವನ್ನು ರಾಜ್ ರೌನಿಯಾರ್ ಎಂಬ ಫೇಸ್‌ಬುಕ್ ಖಾತೆದಾರ ಆಗಸ್ಟ್ 21,2024ರಂದು ʼThis is the courage of that father who is alive even after death. Mahadev ji give the strength to sister's father to fight this battle #justiceformoumitaKolkataʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ಕಾಣಬಹುದು
ಇದೇ ವಿಡಿಯೋವನ್ನು ಸಾಕಷ್ಟು ಸಾಮಾಜಿಕ ಮಾಧ್ಯಮದಾರರು ತಮ್ಮ ಖಾತೆಯಲ್ಲಿ ಹಂಚಿಕೊಂಡಿರುವುದನ್ನು ನಾವು ನೋಡಬಹುದು.
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋವಿಗೂ ಮತ್ತು ಕೊಲ್ಕತ್ತಾ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ವೈರಲ್ ಆದ ವಿಡಿಯೋ ಜೂನ್ 2024ರ ವಿಡಿಯೋ.
ವೈರಲ್ ಆದ ಸುದ್ದಿಯಲ್ಲಿನ ಸತ್ಯಾಂಶವನ್ನು ತಿಳಿಯಲು ನಾವು ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಫ್ರೇಮ್‌ಗಳನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಹುಡುಕಾಟದಲ್ಲಿ ನಮಗೆ ಜೂನ್ 19, 2024ರಲ್ಲಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಕಂಡುಬಂದಿತು. ಕೊಲ್ಕತ್ತಾದಲ್ಲಿ ಅತ್ಯಾಚಾರ ಘಟನೆ ನಡೆದದ್ದು ಆಗಸ್ಟ್ ತಿಂಗಳಲ್ಲಿ ಈ ಘಟನೆ ನಡೆಯುವ ಒಂದೂವರೆ ತಿಂಗಳ ಮುನ್ನವೇ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಜೂನ್ 19, 2024ರಂದು its_mdhaka ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋ ಮೇಲೆ ಕ್ಯಾಪ್ಷನ್ ಇರುವುದನ್ನು ನಾವು ಗಮನಿಸಿದೆವು. ‘28 ವರ್ಷದ ವಿಪಿನ್ ಮೆಹ್ತಾ, ರಸ್ತೆ ಅಪಘಾತದಲ್ಲಿ ಎರಡು ದಿನ ಆಸ್ಪತ್ರೆಯಲ್ಲಿದ್ದು ಸಾವನ್ನಪ್ಪಿದ್ದಾರೆ. ಬಳಿಕ ಇವರ ದೇಹವನ್ನು ದಾನ ಮಾಡಲಾಗಿದೆ. ಮೆಹ್ತಾ ಅವರು ಮೂಲತಃ ರಾಜಸ್ಥಾನದ ಜಲೋರ್‌ನವರಾಗಿದ್ದರು ಆದರೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ವಾಸಿಸುತ್ತಿದ್ದರು’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಇದೇ ಮಾಹಿತಿಯನ್ನು ನಾವು ಸುಳಿವಾಗಿ ತೆಗೆದುಕೊಂಡು ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ನಮಗೆ ನ್ಯೂಸ್18 ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದ ವರದಿಯೊಂದು ಕಾಣಿಸಿತು. ವರದಿಯಲ್ಲಿ ʼವಿಶಾಖಪಟ್ಟಣಂನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ವಿಪಿನ್ ಮೆಹ್ತಾ ತಲೆಗೆ ಗಂಭೀರ ಗಾಯವಾಗಿದೆ. ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ವಿಪಿನ್ ಸಾವಿನ ನಂತರ ಆತನ ತಂದೆ ಪ್ರವೀಣ್ ಮೆಹ್ತಾ ತನ್ನ ಮಗನ ದೇಹವನ್ನು ಇತರರ ಜೀವವನ್ನು ಕಾಪಾಡಲು ದಾನ ಮಾಡಿದರು. ಪ್ರವೀಣ್‌ರವರ ಈ ಕೆಲಸಕ್ಕೆ ಶ್ಲಾಘನೀಯವಾಗಿ ಆಸ್ಪತ್ರೆಯ 300 ಸದಸ್ಯರು ಗೌರವ ರಕ್ಷೆ ನೀಡುವ ಮೂಲಕ ವಿಪಿನ್ ಮೆಹ್ತಾರ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಹೊರ ಕಳುಹಿಸಿದರುʼ ಎಂದು ವರದಿ ಮಾಡಲಾಗಿತ್ತು.
ಇದೇ ಸುದ್ದಿಯನ್ನು ದೈನಿಕ್ ಭಾಸ್ಕರ್ ಎಂಬ ವೆಬ್‌ಸೈಟ್‌ನಲ್ಲೂ ಪ್ರಕಟಿಸಲಾಗಿತ್ತು. ವಿಡಿಯೋಗೆ ʼಇದು ವಿಶಾಖಪಟ್ಟಣಂನ ಪಿನಾಕಲ್ ಆಸ್ಪತ್ರೆಯ ವಿಡಿಯೋ.300 ಸದಸ್ಯರು ಗೌರವ ರಕ್ಷೆ ನೀಡುವ ಮೂಲಕ ವಿಪಿನ್ ಮೆಹ್ತಾರ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಹೊರ ಕಳುಹಿಸಿದರು" ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಹೀಗಾಗಿ ವೈರಲ್ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸಾಭಿತಾಗಿದೆ. ವೈರಲ್ ಆದ ವಿಡಿಯೋದಲ್ಲಿ ಕಾಣುವ ವ್ಯಕ್ತಿ ಕೋಲ್ಕತ್ತಾದ ಅತ್ಯಾಚಾರ ಕೊಲೆ ಪ್ರಕರಣದ ಸಂತ್ರಸ್ತೆಯ ತಂದೆಯಲ್ಲ. ಈ ವಿಡಿಯೋ 2024ರದ್ದು.