ಫ್ಯಾಕ್ಟ್‌ಚೆಕ್‌: ಮೋದಿ ಅಧಿಕಾರಕ್ಕೆ ಬರುವ ಮುನ್ನ ಭಾರತ ಒಲಂಪಿಕ್ಸ್‌ನಲ್ಲಿ ಪದಕ ಗೆದ್ದಿಲ್ಲವೆಂದ ಶೋಭಾ ಕರಂದ್ಲಾಜೆ

ಮೋದಿ ಅಧಿಕಾರಕ್ಕೆ ಬರುವ ಮುನ್ನ ಭಾರತ ಒಲಂಪಿಕ್ಸ್‌ನಲ್ಲಿ ಪದಕ ಗೆದ್ದಿಲ್ಲವೆಂದ ಶೋಭಾ ಕರಂದ್ಲಾಜೆ

Update: 2024-08-11 17:38 GMT

Shobha Karandlaje

‘ಸಿಟಿ ಆಫ್‌ಲೈಟ್ಸ್‌’ ಖ್ಯಾತಿಯ ಪ್ಯಾರಿಸ್‌ನಲ್ಲಿ 2024ರ ಸಾಲಿನ ಪ್ರತಿಷ್ಠಿತ ಒಲಿಂಪಿಕ್ಸ್‌ ಕ್ರೀಡಾಕೂಟ ಜುಲೈ 26ರಂದು ಪ್ರಾರಂಭವಾಯಿತು. ಜುಲೈ 26ರಿಂದ ಆಗಸ್ಟ್‌ 11ರವರೆಗೆ ನಡೆದ ಈ ಜಾಗತಿಕ ಕ್ರೀಡಾಹಬ್ಬದಲ್ಲಿ ಈ ಬಾರಿ 10 ಸಾವಿರಕ್ಕೂ ಹೆಚ್ಚು ಅಥ್ಲೀಟ್ಸ್‌ ಪಾಲ್ಗೊಂಡರು. ಭಾರತದ ಕ್ರೀಡಾಪಟುಗಳೂ ಭಾಗವಹಿಸಿ, ಪದಕಗಳನ್ನು ಗೆದ್ದರು.

ಆದರೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇತ್ತೀಚಿಗೆ ಪ್ಯಾರಿಸ್‌ಒಲಂಪಿಕ್ಸ್‌ ಕುರಿತು ಹೇಳಿಕೆ ನೀಡಿದ್ದು, ‘ 2014ಕ್ಕೂ ಮುನ್ನ ಭಾರತ ಒಲಂಪಿಕ್ಸ್‌ನಲ್ಲಿ ಭಾಗವಹಿಸುತ್ತಿತ್ತು. ಆದರೆ ಪದಕಗಳು ಪಟ್ಟಿಯಲ್ಲಿ ಭಾರತ ಇರುತ್ತಿರಲಿಲ್ಲ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕ್ರೀಡಾಪಟುಗಳಿಗೆ ಬೆಂಬಲ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಈ ಬಾರಿ ಒಲಂಪಿಕ್ಸ್‌ನಲ್ಲಿ ಮೊದಲ ಪದಕವನ್ನು ಮಹಿಳೆಯೊಬ್ಬರು ಗೆದ್ದಿರುವುದು ನನಗೆ ತುಂಬಾ ಸಂತೋಷವಾಗುತ್ತಿದೆ. ಈಗಾಗಲೇ ಭಾರತ ಮೂರು ಪದಕವನ್ನು ಗೆದ್ದಿದೆ. ಪ್ಯಾರಿಸ್‌ಒಲಂಪಿಕ್ಸ್‌ನಲ್ಲಿ ಗೆದ್ದ ಕ್ರೀಡಾಪಡುಗಳಿಗೆ ಹೃತ್ಪೂರ್ವಕ ಧನ್ಯವಾದಗಳು" ಎಂದಿದ್ದಾರೆ. ಈ ಹೇಳಿಕೆ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಸಚಿವೆ ಶೋಭಾ ಕರಂದ್ಲಾಜೆ ಕೊಟ್ಟ ಹೇಳಿಕೆಯ ವಿಡಿಯೋ ತುಣುಕನ್ನು AZY ಎಂಬ ಎಕ್ಸ್‌ಖಾತೆದಾರ ತನ್ನ ಖಾತೆಯಲ್ಲಿ ಹಂಚಿಕೊಂಡು "2014 se pahele india ko Olympics me medal nahi milte the ~MoS Shobha Karandlaje waah didi waah" ಎಂದು ಬರೆದು ಪೋಸ್ಟ್‌ ಮಾಡಿದ್ದಾರೆ

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನವೂ ಸಹ ಭಾರತ ಒಲಂಪಿಕ್ಸ್‌ನಲ್ಲಿ ಪದಕಗಳನ್ನು ಗೆದ್ದಿತ್ತು.  

ಪ್ಯಾರಿಸ್‌ ಒಲಂಪಿಕ್ಸ್‌ 2024ರಲ್ಲಿ ಭಾರತ ಇಲ್ಲಿಯವರೆಗೆ ಆರು ಪದಕಗಳನ್ನು ಗೆದ್ದಿದೆ. ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಭಾರತದ ಮೊದಲ ಕ್ರೀಡಾಪಟು ಮನು ಭಾಕರ್‌. 2024 ಪ್ಯಾರಿಸ್‌ಒಲಂಪಿಕ್ಸ್‌ನಲ್ಲಿ ಭಾರತಕ್ಕಾಗಿ ಪದಕ ಗೆದ್ದವರು:

  • ಮನು ಭಾಕರ್ ಮಹಿಳೆಯರ 10 ಮೀ ಏರ್ ಪಿಸ್ತೂಲ್‌ನಲ್ಲಿ ಕಂಚು ಪದಕವನ್ನು ಗೆದ್ದಿದ್ದಾರೆ.
  • ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ 10 ಮೀ ಏರ್ ಪಿಸ್ತೂಲ್ (ಮಿಶ್ರ ತಂಡ)ದಲ್ಲಿ ಕಂಚು ಪದಕವನ್ನು ಗೆದ್ದಿದ್ದಾರೆ.
  • ಸ್ವಪ್ನಿಲ್ ಕುಸಾಲೆ 50 ಮೀ ರೈಫಲ್‌ನಲ್ಲಿ ಕಂಚು ಪದಕವನ್ನು ಗೆದ್ದಿದ್ದಾರೆ
  • ಟೀಮ್ ಇಂಡಿಯಾ ಪುರುಷರ ಹಾಕಿ ತಂಡ ಕಂಚು ಪದಕವನ್ನು ಗೆದ್ದಿದೆ
  • ನೀರಜ್ ಚೋಪ್ರಾ ಪುರುಷರ ಜಾವೆಲಿನ್ ಥ್ರೋನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ
  • ಅಮನ್ ಸೆಹ್ರಾವತ್ ಪುರುಷರ 57 ಕೆ.ಜಿ ಕುಸ್ತಿ ಫ್ರೀಸ್ಟೈಲ್ ಸ್ಪರ್ಥೆಯಲ್ಲಿ ಕಂಚು ಪದಕವನ್ನು ಗೆದ್ದಿದ್ದಾರೆ.

ಆದರೆ ಈ ನಡುವೆ ವೈರಲ್ ಆಗಿರುವ ಸಚಿವೆ ಶೋಭಾ ಕರಂದ್ಲಾಜೆ ನೀಡಿರುವ ಹೇಳಿಕೆಯ ಪ್ರಕಾರ ಇದೇ ಮೊದಲು ಕ್ರೀಡಾಪಟುಗಳು ಇಷ್ಟು ಪದಕಗಳನ್ನು ಗೆದ್ದಿದ್ದಾರೆ. 

ವೈರಲ್‌ ವಿಡಿಯೋವಿಗೆ ಸಂಬಂಧಿಸಿದ ಕೆಲವು ಕೀವರ್ಡ್‌ಗಳನ್ನು ಉಪಯೋಗಿಸಿಕೊಂಡು ನಾವು ಹುಡುಕಾಟ ನಡೆಸಿದೆವು. ಹುಡಕಾಟದಲ್ಲಿ ನಾವು ಒಲಂಪಿಕ್ಸ್‌ನ ಅಧಿಕೃತ ವೆಬ್‌ಸೈಟ್‌ನ್ನು ಕಂಡುಕೊಂಡೆವು. https://olympics.com/en/paris-2024/medals ಈ ವೆಬ್‌ಸೈಟ್‌ನಲ್ಲಿ ಇಲ್ಲಿಯವರೆಗೂ ಒಲಂಪಿಕ್ಸ್‌ನಲ್ಲಿ ಗೆದ್ದಿರುವ ತಂಡಗಳ ಪದಕಗಳ ಪಟ್ಟಿಯನ್ನು ನಾವು ನೋಡಬಹುದು. ಭಾರತ 1900ನೇ ಇಸವಿಯಲ್ಲಿ ಮೊದಲ ಪದಕವನ್ನು ಗೆದ್ದಿತ್ತು. 1900-2024ರವರೆಗೆ ಭಾರತದ ಕ್ರೀಡಾಪಟುಗಳು ಹಲವಾರು ಪದಕಗಳನನ್ನು ಪಡೆದಿದ್ದಾರೆ. ಈ ಕುರಿತ ಮಾಹಿತಿ ನಮಗೆ ಇಂಟರ್‌ನೆಟ್‌ನಲ್ಲಿ ಲಭ್ಯವಿದೆ. 


2004ರ ಅಥೆನ್ಸ್‌ ಒಲಂಪಿಕ್ಸ್‌ನಲ್ಲಿ ಕರ್ನಲ್‌ ರಾಜ್ಯವರ್ಥನ್‌ ಸಿಂಗ್‌ ರಾಥೋಡ್‌ ಶೂಟಿಂಗ್‌ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು.


2008ರ ಬೀಜಿಂಗ್‌ ಒಲಂಪಿಕ್ಸ್‌ನಲ್ಲಿ ಪುರುಷರ 10 ಮೀಟರ್ ಏರ್ ರೈಫಲ್ ಶೂಟಿಂಗ್‌ನಲ್ಲಿ ಅಭಿನವ್ ಬಿಂದ್ರಾ ಚಿನ್ನದ ಪದಕವನ್ನು, ಪುರುಷರ ಫ್ರೀಸ್ಟೈಲ್ 66 ಕೆಜಿ ಕುಸ್ತಿಯಲ್ಲಿ ಸುಶೀಲ್ ಕುಮಾರ್ ಕಂಚಿನ ಪದಕ ಮತ್ತು ವಿಜೇಂದರ್ ಸಿಂಗ್ ಮಿಡಲ್ ವೇಟ್ 75 ಕೆಜಿ ಬಾಕ್ಸಿಂಗ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.


2012ರಲ್ಲಿ ನಡೆದ ಲಂಡನ್‌ ಒಲಂಪಿಕ್ಸ್‌ನಲ್ಲಿ ಭಾರತವು ಒಟ್ಟು ಎರಡು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನು ಗೆದ್ದಿತ್ತು. ಪುರುಷರ 25 ಮೀಟರ್ ರ್ಯಾಪಿಡ್ ಫೈರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ವಿಜಯ್ ಕುಮಾರ್ ಮತ್ತು ಪುರುಷರ ಫ್ರೀಸ್ಟೈಲ್ 66 ಕೆಜಿ ಕುಸ್ತಿಯಲ್ಲಿ ಸುಶೀಲ್ ಕುಮಾರ್ ಬೆಳ್ಳಿ ಪದಕವನ್ನು, 10 ಮೀ ಏರ್‌ ಫೈಯರ್‌ನಲ್ಲಿ ಗಗನ್‌ ನಾರಂಗ್‌ ಕಂಚು ಪದಕವನ್ನು, ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಸೈನಾ ನೆಹ್ವಾಲ್, ಮಹಿಳೆಯರ ಫ್ಲೈವೇಟ್ ಬಾಕ್ಸಿಂಗ್‌ನಲ್ಲಿ ಮೇರಿ ಕೋಮ್ ಮತ್ತು ಪುರುಷರ ಫ್ರೀಸ್ಟೈಲ್ 60 ಕೆಜಿ ಕುಸ್ತಿಯಲ್ಲಿ ಯೋಗೇಶ್ವರ್ ದತ್ ಕಂಚಿನ ಪದಕವನ್ನು ಗೆದ್ದಿದ್ದರು.


ಹೀಗಾಗಿ, ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಭಾರತ ಒಲಿಂಪಿಕ್ಸ್‌ಪದಕಗಳ ಪಟ್ಟಿಯಲ್ಲಿ ಇರಲಿಲ್ಲ ಎಂಬ ಸಚಿವೆ ಶೋಭಾ ಕರಂದ್ಲಾಜೆ ನೀಡಿರುವ ಹೇಳಿಕೆಯಲ್ಲಿ ಸುಳ್ಳು ಎಂದು ಸಾಬೀತಾಗುತ್ತದೆ.

Claim :  ಮೋದಿ ಅಧಿಕಾರಕ್ಕೆ ಬರುವ ಮುನ್ನ ಭಾರತ ಒಲಂಪಿಕ್ಸ್‌ನಲ್ಲಿ ಪದಕ ಗೆದ್ದಿಲ್ಲವೆಂದ ಶೋಭಾ ಕರಂದ್ಲಾಜೆ
Claimed By :  Social Media Users
Fact Check :  False
Tags:    

Similar News