ಫ್ಯಾಕ್ಟ್‌ಚೆಕ್ : ಕೈಗವಸು ತೊಟ್ಟಿರುವ ಸ್ಟಾಲಿನ್ ಚಿತ್ರ ಕೋವಿಡ್ ಅವಧಿಯದ್ದು, ಇತ್ತೀಚಿನದ್ದಲ್ಲ
ಎಂ ಕೆ ಸ್ಟಾಲಿನ್ ಅವರು ಕೈಗವಸು ತೊಟ್ಟು ಮಗುವನ್ನು ಎತ್ತಿಕೊಂಡಿರುವುದು ಕೋವಿಡ್ ಸಂದರ್ಭದ್ದು
ತಮಿಳುನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಮತ್ತು ತಮಿಳು ನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಮಗುವೊಂದನ್ನು ಎತ್ತಿಕೊಂಡ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಈ ಚಿತ್ರಗಳಲ್ಲಿ ಸ್ಟಾಲಿನ್ ಕೈಗವಸು ತೊಟ್ಟು ಮಗುವನ್ನು ಎತ್ತಿಕೊಂಡಿದ್ದರೆ, ಅಣ್ಣಾಮಲೈ ಬರಿಗೈಯಲ್ಲಿ ಎತ್ತಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾ ಬಳಕೆದಾರರು ಇದನ್ನು ಜಾತಿ ತಾರತಮ್ಯವೆಂದು ದೂಷಿಸಿದ್ದು, ಎಂ ಕೆ ಸ್ಟಾಲಿನ್ ಕೈಗವಸು ತೊಟ್ಟು ಮಗುವಿನ ವಿರುದ್ಧ ಎಸಗಿದ್ದಾರೆ, ಆದರೆ ಅಣ್ಣಾಮಲೈ ಹಾಗೇ ನಡೆದುಕೊಂಡಿಲ್ಲ ಎಂದು ಪೋಸ್ಟ್ ಹಂಚಿಕೊಳ್ಳಲಾಗಿದೆ.
ಈ ಫೋಟೋಗಳನ್ನು, " ಧರ್ಮವನ್ನು ವಿರೋಧಿಸುವವರು ಮತ್ತು ಧರ್ಮವನ್ನು ಪಾಲಿಸುವವರ ನಡುವಿನ ವ್ಯತ್ಯಾಸ" ಎಂಬ ಅಡಿ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಫ್ಯಾಕ್ಟ್‌ಚೆಕ್
ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಎಂ ಕೆ ಸ್ಟಾಲಿನ್ ಅವರ ಫೋಟೋ 2021ರಲ್ಲಿ ಟ್ವಿಟರ್‍ನಲ್ಲಿ ಪ್ರಕಟವಾಗಿದ್ದನ್ನು ಗುರುತಿಸಿದೆವು. ಸನ್ ಟಿವಿ ನ್ಯೂಸ್ ಮಾಧ್ಯಮ ಸಂಸ್ಥೆಯು ಫೆಬ್ರವರಿ 2021ರಲ್ಲಿ ಈ ಫೋಟೋವನ್ನುಬಿಡುಗಡೆ ಮಾಡಿತ್ತು. ಚುನಾವಣೆಯ ವಿಭಾಗದಲ್ಲಿ ಈ ಫೋಟೋವನ್ನು ಪ್ರಕಟಿಸಲಾಗಿತ್ತು.
ಈ ದಿನಾಂಕವನ್ನು ಗಮನದಲ್ಲಿರಿಸಿಕೊಂಡು ನೋಡಿದಾಗ, ಚಿತ್ರವೂ ಎರಡು ವರ್ಷಗಳ ಹಿಂದಿನಾಗಿದ್ದು ಇತ್ತೀಚಿನದಲ್ಲ ಎಂಬುದು ಸ್ಪಷ್ಟವಾಗುತ್ತದೆ. 2021ರಲ್ಲಿ ತಮಿಳುನಾಡಿನ ಕಾಂಚಿಪುರಂ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಬಹಿರಂಗ ಸಭೆಯ ವೇಳೆ ಮಗುವಿನೊಂದಿಗಿನ ಚಿತ್ರವನ್ನು ಸೆರೆಹಿಡಿಯಲಾಗಿತ್ತು.
2021ರಲ್ಲಿ ಕೋವಿಡ್ ತೀವ್ರವಾಗಿತ್ತು. ಸರ್ಕಾರವು ಕೋವಿಡ್ ಸೋಂಕು ಹರಡದಂತೆ ತಡೆಯಲು ಕೆಲವು ನಿಯಮಗಳನ್ನು ಹೇರಿತ್ತು. ಈ ನಿಯಮಗಳ ಪ್ರಕಾರ ಮಾಸ್ಕ್, ಸ್ಯಾನಿಟೈಸರ್ ಮತ್ತು ಕೈಗವಸು ಕಡ್ಡಾಯವಾಗಿ ಬಳಸಬೇಕಿತ್ತು. ಎಂ ಕೆ ಸ್ಟಾಲಿನ್ ಅವರು ಚುನಾವಣಾ ಪ್ರಚಾರಸಭೆಗಳ ಸಂದರ್ಭದಲ್ಲಿ ಈ ನಿಯಮಗಳನ್ನು ಪಾಲಿಸಿದ್ದರು. ಈ ಸಂದರ್ಭದಲ್ಲಿ ಎಲ್ಲ ನಾಯಕರು, ಮಾಸ್ಕ್ ಮತ್ತು ಕೈಗವಸು ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡುವ ನಿಯಮಗಳನ್ನು ಪಾಲಿಸಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ತಾಣದಲ್ಲಿ ಫೆಬ್ರವರಿ 24, 2021ರಂದು ಕೈಗವಸು ಧರಿಸಿರುವ ಸ್ಟಾಲಿನ್, ಮಗುವನ್ನು ಎತ್ತಿಕೊಂಡ ಚಿತ್ರವು ಪ್ರಕಟವಾಗಿದೆ.
ಮಗುವನ್ನು ಎತ್ತಿಕೊಂಡಿರುವ ಕೆ ಅಣ್ಣಾಮಲೈ ಅವರ ಚಿತ್ರವು ಪೊಲಿಮರ್ ನ್ಯೂಸ್‌ನಲ್ಲಿ ಆಗಸ್ಟ್ 2023ರಂದು ಪ್ರಕಟವಾಗಿದೆ. ಆಗ ಕೋವಿಡ್‌ನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತಿರಲಿಲ್ಲ. ಕೈಗವಸು, ಮಾಸ್ಕ್, ಸ್ಯಾನಿಟೈಸರ್ ಬಳಸುವುದು ಕಡ್ಡಾಯವಾಗಿರಲಿಲ್ಲ. ಅಣ್ಣಾಮಲೈ ಅವರು ತಮಿಳುನಾಡು ಕರಿಯಪಟ್ಟಿಯಲ್ಲಿ ಈ ವಿಡಿಯೋವನ್ನು ಸೆರೆಹಿಡಿಯಲಾಗಿದೆ.
ಈ ಹಿನ್ನೆಲೆಯಲ್ಲಿ ಎಂ ಕೆ ಸ್ಟಾಲಿನ್ ಅವರು ಕೈಗವಸು ತೊಟ್ಟು ಮಗುವನ್ನು ಎತ್ತಿಕೊಂಡಿರುವುದು ಕೋವಿಡ್ ಸಂದರ್ಭದ್ದಾಗಿದ್ದು, ಯಾವುದೇ ರೀತಿಯ ತಾರತಮ್ಯವನ್ನು ಪ್ರದರ್ಶಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹಾಗಾಗಿ ಈ ಪ್ರತಿಪಾದನೆ ತಪ್ಪು.