ಫ್ಯಾಕ್ಟ್‌ಚೆಕ್: ಗಗನಯಾತ್ರಿ ದಿರಿಸಿನಲ್ಲಿ ರಸ್ತೆಗುಂಡಿಯ ಮೇಲೆ ನಡೆಯುತ್ತಿರುವ ವಿಡಿಯೋ ಕಾನ್ಪುರದಲ್ಲ, ಬೆಂಗಳೂರಿನದು
ಗಗನಯಾನಿಯಂತೆ ಉಡುಪು ಧರಿಸಿ, ರಸ್ತೆಗುಂಡಿಗಳ ಮೇಲೆ ಚಂದ್ರನ ನಡಿಗೆ ಮಾಡುತ್ತಿರುವ ವಿಡಿಯೋ ಕಾನ್ಫುರ ಅಥವಾ ಬುಂದೇಲ್‌ಖಂಡಾದಲ್ಲ, ಬೆಂಗಳೂರಿನದು.
ಗಗನಯಾತ್ರಿಯಂತೆ ಉಡುಪು ಧರಿಸಿರುವ ವ್ಯಕ್ತಿಯೊಬ್ಬ ಕಾನ್ಪುರ/ಬುಂದೇಲ್‌ಖಂಡದ ರಸ್ತೆಗುಂಡಿಗಳ ಮೇಲೆ ಮೂನ್‌ವಾಕ್ (ಚಂದ್ರನ ಮೇಲೆ ನಡಿಗೆ) ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಕೆಲವರು ಇದನ್ನು ಬುಂದೇಲ್‌ಖಂಡದ್ದು ಎಂದು, ಇನ್ನು ಕೆಲವರು ಇದು ಮುಸಾಫಿರ್ ಖಾನಾದ್ದು ಎಂದು ಪ್ರತಿಪಾದಿಸಿದ್ದಾರೆ. ಆದರೆ ಬಹಳಷ್ಟು ಮಂದಿ ಕಾನ್ಪುರದ್ದು ಎಂದೇ ವಾದಿಸಿದ್ದಾರೆ.
ವಿಡಿಯೋದೊಂದಿಗೆ ಹಿಂದಿಯಲ್ಲಿ ಅಡಿ ಟಿಪ್ಪಣಿ ಇದ್ದು, ಅದು ಹೀಗಿದೆ: “कानपुर के लोग सच में बड़े क्रिएटिव हैं। मुझे पहले लगा कि सच में यह चांद पर चलने का वीडियो है। #chandrayan3 #chandryan3successful #kanpurcity”. ಇದರ ಕನ್ನಡ ಅನುವಾದ ಹೀಗಿದೆ , "ಕಾನ್ಪುರದ ಜನ ನಿಜಕ್ಕೂ ಸೃಜನಶೀಲರು. ನನಗೆ ಮೊದಲು ಇದು ಚಂದ್ರನ ಮೇಲಿನ ನಡಿಗೆಯ ವಿಡಿಯೋ ಎಂದೇ ಅನ್ನಿಸಿತ್ತು".
ಇನ್ನು ಕೆಲವರು ಹೀಗೆ ಬರೆದುಕೊಂಡಿದ್ದಾರೆ: "“ हमारा बुंदेलखंड के लोग सच में बड़े क्रिएटिव हैं। मुझे पहले लगा कि सच में यह चांद पर चलने का वीडियो है।". ಇದರ ಅನುವಾದ ಹೀಗಿದೆ; "ನಮ್ಮ ಬುಂದೇಲ್‌ಖಂಡದ ಜನ ಬಹಳ ಸೃಜನಶೀಲರು. ನನಗೆ ಮೊದಲು ಇದು ಚಂದ್ರನ ಮೇಲಿನ ನಡಿಗೆಯ ವಿಡಿಯೋ ಎಂದೇ ಅನ್ನಿಸಿತ್ತು".
ಇನ್ನು ಕೆಲ ಬಳಕೆದಾರರು, " ಈ ಮುಸಾಫಿರ್‍ಖಾನದ ಜನ ಒಂದು ದಿನ ನಟನೆಯಲ್ಲಿ ಮೋದಿಯವರನ್ನೇ ಹಿಂದಿಕ್ಕಿಬಿಡುತ್ತಾರೆ. ಮೊದಲು ನನಗೆ ಇದು ನಿಜಕ್ಕೂ ಚಂದ್ರನ ಮೇಲಿನ ನಡಿಗೆಯ ವಿಡಿಯೋ ಎಂದು ಎನ್ನಿಸಿತ್ತು." ಎಂದು ಬರೆದುಕೊಂಡಿದ್ದಾರೆ.
ಫ್ಯಾಕ್ಟ್‌ಚೆಕ್
ಇದು ಹಾದಿ ತಪ್ಪಿಸುವ ಪ್ರತಿಪಾದನೆ. ಈ ವಿಡಿಯೋ 2019ರಲ್ಲಿ ಬೆಂಗಳೂರಿನಲ್ಲಿ ಚಿತ್ರಿಸಲಾಗಿತ್ತು.
ವಿಡಿಯೋದಿಂದ ಕೀ ಫ್ರೇಮ್ ಪಡೆದು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ನಮಗೆ ಇದು 2019ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದು ಎಂದು ಹೇಳುವ ಹಲವು ವರದಿಗಳು ದೊರೆತವು.
ಔಟ್‌ಲುಕ್ ಇಂಡಿಯಾದ ವೆಬ್‌ಸೈಟ್‌ನಲ್ಲಿ 2019ರ ಸೆಪ್ಟೆಂಬರ್‍ನಲ್ಲಿ ಪ್ರಕಟವಾದ ಲೇಖನದ ಪ್ರಕಾರ, ಈ ವಿಡಿಯೋವನ್ನು ಬೆಂಗಳೂರಿನ ಕಲಾವಿದ ಬಾದಲ್ ನಂಜುಂಡಸ್ವಾಮಿ, ಸೋಷಿಯಲ್ ಮಿಡಿಯಾದಲ್ಲಿ ಪ್ರಕಟಿಸಿದ್ದರು. ಇದರಲ್ಲಿ ವ್ಯಕ್ತಿಯೊಬ್ಬರು ಗಗನಯಾನಿಯ ದಿರಿಸು ಧರಿಸಿ, ರಸ್ತೆ ಗುಂಡಿಗಳ ಮೇಲೆ, ನಡೆದಿದ್ದನ್ನು ಚಂದ್ರನ ಮೇಲ್ಮೈನಂತೆ ಚಿತ್ರಿಸಲಾಗಿತ್ತು. ಒಂದು ನಿಮಿಷದ ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ವ್ಯಕ್ತಿಯು ಬೆಂಗಳೂರಿನ ತುಂಗಾನಗರ ಮುಖ್ಯರಸ್ತೆಯಲ್ಲಿ ಹೆಜ್ಜೆ ಹಾಕುತ್ತಿರುವುದನ್ನು ಗಮನಿಸಬಹುದು. ಝೂಮ್ ಔಟ್ ಮಾಡಿ ನೋಡಿದರೆ ರಸ್ತೆಗುಂಡಿಗಳಿಂದ ತುಂಬಿರುವ ಬೆಂಗಳೂರಿನ ರಸ್ತೆಗಳನ್ನು ನೋಡಬಹುದು.
ನಂಜುಂಡಸ್ವಾಮಿ ಸಾಮಾಜಿಕ ಸಂದೇಶ ನೀಡಲು ಸೃಜನಶೀಲತೆಯನ್ನು ಬಳಸಿದ್ದು ಇದೇ ಮೊದಲೇನದಲ್ಲ. ಜೂನ್‌ನಲ್ಲಿ ಮೊಸಳೆಯ ಪ್ರತಿಕೃತಿಯನ್ನು ನೀರು ತುಂಬಿದ ರಸ್ತೆಯ ಮಧ್ಯದಲ್ಲಿ ಇರಿಸಿ, ಸ್ಥಳೀಯ ಆಡಳಿತದ ಗಮನ ಸೆಳೆದಿದ್ದರು. 2018ರಲ್ಲಿ ರಸ್ತೆಯ ಗುಂಡಿಯ ಮೇಲೆ ಜೇಡ ಬಲೆಯನ್ನು ಚಿತ್ರಿಸುವ ಮೂಲಕ ಸ್ಥಳೀಯ ಆಡಳಿತದ ಗಮನ ಸೆಳೆದಿದ್ದರು.
ಸ್ವತಃ ಬಾದಲ್ ನಂಜುಂಡಸ್ವಾಮಿಯವರು ಸೆಪ್ಟೆಂಬರ್ 2, 2019ರಂದು ಎಕ್ಸ್ ತಾಣದಲ್ಲಿ( ಈ ಮೊದಲು ಟ್ವಿಟರ್) ಪ್ರಕಟಿಸಿದ್ದನ್ನು ನಾವು ಪತ್ತೆ ಹಚ್ಚಿದೆವು. ಈ ಪೋಸ್ಟ್‌ನಲ್ಲಿ ನಂಜುಂಡಸ್ವಾಮಿಯವರು ವಿಡಿಯೋ ಚಿತ್ರಿಸಿದ ಸ್ಥಳವನ್ನು ಬೆಂಗಳೂರು ಎಂದು ಲೊಕೇಶ್ ಟ್ಯಾಗ್ ಮಾಡಿದ್ದಾರೆ.
ಈ ವಿಡಿಯೋ ಬಿಬಿಸಿ.ಕಾಮ್ ಪ್ರಕಟಿಸಿದ ಲೇಖನದಲ್ಲಿ ಪ್ರಕಟಿಸಲಾಗಿದೆ.
ಬೂಮ್‌ಲೈವ್.ಇನ್ ಈ ಕುರಿತು ಫ್ಯಾಕ್ಟ್‌ಚೆಕ್ ಮಾಡಿದೆ.
ಹಾಗಾಗಿ ಗಗನಯಾನಿಯಂತೆ ಉಡುಪು ಧರಿಸಿ, ರಸ್ತೆಗುಂಡಿಗಳ ಮೇಲೆ ಚಂದ್ರನ ನಡಿಗೆ ಮಾಡುತ್ತಿರುವ ವಿಡಿಯೋ ಕಾನ್ಫುರ ಅಥವಾ ಬುಂದೇಲ್‌ಖಂಡಾದಲ್ಲ, ಬೆಂಗಳೂರಿನದು. ಹಾಗಾಗಿ ವಿಡಿಯೋ ಹಾದಿ ತಪ್ಪಿಸುವ ಪ್ರತಿಪಾದನೆಯಾಗಿದೆ.