ಫ್ಯಾಕ್ಟ್‌ಚೆಕ್: ಅಯೋಧ್ಯೆಯಲ್ಲಿ ಸಾವಿರಾರು ಯಜ್ಞ ಕುಂಡಗಳಿವೆ ಎಂದು ವೈರಲ್ ಆದ ವಿಡಿಯೋವಿನ ಅಸಲಿಯತ್ತೇನು?
ಅಯೋಧ್ಯೆಯಲ್ಲಿ ಸಾವಿರಾರು ಯಜ್ಞ ಕುಂಡಗಳಿವೆ ಎಂದು ವೈರಲ್ ಆದ ವಿಡಿಯೋವಿನ ಅಸಲಿಯತ್ತೇನು?
ಇದೇ ತಿಂಗಳು ಅಂದರೆ 22, ಜನವರಿ,2024ರಂದು ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. ಈ ಸಮಾರಂಭಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಚಾಲಕ್ ಮೋಹನ್ ಭಾಗವತ್, ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್, ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಟ್ರಸ್ಟ್ ಮುಖ್ಯಸ್ಥ ಮಹಂತ್ ನೃತ್ಯ ಗೋಪಾಲ್ ದಾಸ್ ಮತ್ತಷ್ಟು ಗಣ್ಯ ವ್ಯಕ್ತಿಗಳು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಇದೀಗ ರಾಮಮಂದಿರಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೋವಿನಲ್ಲಿ ಯಜ್ಞಕ್ಕೆ ಸಂಬಂಧಿಸಿದ ಸಾವಿರಾರು ಯಜ್ಞ ಕುಂಡಗಳನ್ನು ನಾವು ನೋಡಬಹುದು. ವೈರಲ್ ವಿಡಿಯೋವಿಗೆ ಶೀರ್ಷಿಕೆಯಾಗಿ ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರದಲ್ಲಿ ಪೂಜೆ ಸಲ್ಲಿಸಲು ಯಜ್ಞ ಕುಂಡಗಳು ಸಿದ್ದವಾಗಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
“इन 25000 हजार हवन कुंडो से होगा "राम मंदिर" का उद्घाटन... जय श्री राम” ಎಂಬ ಹಿಂದಿ ಹೇಳಿಕೆಯೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ಫ್ಯಾಕ್ಟ್‌ಚೆಕ್
ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋದಲ್ಲಿ ಕಾಣಿಸುವುದು ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯುತ್ತಿರುವ ಏರ್ಪಾಡಲ್ಲ, ವೈರಲ್ ವಿಡಿಯೊದಲ್ಲಿ ಕಾಣಿಸುವುದು ವಾರಣಾಸಿಯಲ್ಲಿರುವ ಸ್ವರ್ವೇದ್ ಮಹಾಮಂಡಿ ಧಾಮಕ್ಕೆ ಸೇರಿದ್ದು.
ವೈರಲ್ ವೀಡಿಯೋವಿನ ಅಸಲಿಯತ್ತನ್ನು ಹುಡುಕಲು ವೈರಲ್ ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಫ್ರೇಮ್‌ಗಳ ಮೂಲಕ ಹುಡುಕಾಡಲು ಪ್ರಯತ್ನಿಸಿದ್ದಾಗ ನಮಗೆ ಅರುಣ್ ವಿಲೇಜ್ ಬ್ಲಾಗ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಡಿಸಂಬರ್ 16,2023ರಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೋವೊಂದು ಕಾಣಿಸಿತು. ಅಪ್‌ಲೋಡ್ ಆದ ವಿಡಿಯೋವಿಗೆ ಶೀರ್ಷಿಕೆಯಾಗಿ “स्वर्वेद महामंदिर धाम वाराणसी 25 हजार हवन कुंड | एक साथ सभी को जगाया जाएगा ! swarved maha mandir Dham” ಎಂದು ಬರೆದು ಪೋಸ್ಟ್ ಮಾಡಿದ್ದರು.
ಹಿಂದಿಯಲ್ಲಿದ್ದ ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ಸ್ವರ್ವೆದ್ ಮಹಾಮಂದಿರ್ ಧಾಮ್ ವಾರಣಾಸಿಯಲ್ಲಿ 25,000 ಹೋಮಕ್ಕೆ ಬಳಸುವ ಯಜ್ಞ ಕುಂಡಗಳಿವು ಎಲ್ಲಾ ಯಜ್ಞ ಕುಂಡಗಳು ಒಂದೇ ಸಲ ಬೆಳಗುತ್ತದೆ" ಎಂದು ಬರೆದಿದ್ದರು.
ಬನಾರಸಿ ಆಕಾಶ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ನಮಗೆ ಮತ್ತೊಂದು ವಿಡಿಯೋ ಕಂಡುಬಂದಿತು. ವಾರಣಾಸಿಯ ಸ್ವರ್ವೇದ್ ಮಹಾ ಮಂದಿರ ಧಾಮ್‌ನಲ್ಲಿ 25000 ಯಜ್ಞ ಕುಂಡಗಳು ಕಾಣಿಸುತ್ತದೆ. "25000 ಕುಂಡಗಳ ಮಹಾಯಜ್ಞ ಇಂದು ಪ್ರಾರಂಭವಾಗುತ್ತದೆ. ಪ್ರಧಾನಿ ಮೋದಿ ಬರುತ್ತಾರೆ" ಯೂಟ್ಯೂಬ್‌ನಲ್ಲಿದ್ದ ವಿಡಿಯೋಗೆ ಶೀರ್ಷಿಕೆಯಾಗಿ "25000 कुण्डीय महायज्ञ आज से शुरू " ಎಂದು ಬರೆದು ಪೋಸ್ಟ್ ಮಾಡಿದ್ದರು.
“25000 havan kund swarved mahamandir dham varanasi” ಎಂಬ ಕೀವರ್ಡ್‌ನ್ನು ಬಳಸಿ ಸರ್ಚ್ ಮಾಡಿದೆವು. ಸ್ವರ್ವೇದ್ ಮಹಾ ಮಂದಿರ ಧಾಮ್‌ನಲ್ಲಿ 25000 ಯಜ್ಞ ಕುಂಡಗಳು ಕಾಣಿಸುವ ವಿಡಿಯೋಗಳನ್ನು ನಾವು ಕಂಡುಕೊಂಡೆವು.
ವಾರಣಾಸಿಯ ಉಮರಹಾದಲ್ಲಿ ಏಳು ಅಂತಸ್ತಿನ ಭವ್ಯ ದೇವಾಲಯವಾದ ಸ್ವರ್ವೇದ್ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿಯವರು ಪ್ರಾರಂಭಿಸಿದರು
ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ವರದಿಯ ಪ್ರಕಾರ ಸ್ವರ್ವೇದ ಮಹಾಮಂದಿರ ದೇಶದಲ್ಲೇ ಅತಿ ದೊಡ್ಡ ಧ್ಯಾನ ಕೇಂದ್ರವೆಂದು ಪರಿಗಣಿಸಲಾಗಿದೆ ಎಂದು ವರದಿ ಮಾಡಿದ್ದಾರೆ. ಸ್ವರ್ವೇದ ಮಹಾಮಂದಿರದಲ್ಲಿ 100 ಅಡಿ ಎತ್ತರದ ಸದ್ ಗುರುದೇವ್ ಪ್ರತಿಮೆಯಿದೆ. 2017ರಲ್ಲಿ ಸ್ವರ್ವೇದ ಮಹಾಮಂದಿರ ಧಾಮದಲ್ಲಿ 21,000 ಕುಂಡಗಳೊಂದಿಗೆ ಮಹಾಯಜ್ಞವು ನಡೆಯಿತು.
ಹೀಗಾಗಿ ವೈರಲ್ ಆದ ವಿಡಿಯೋ ಮತ್ತು ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋವಿಗೂ ಅಯೋಧ್ಯೆಯ ರಾಮಮಂದಿರಕ್ಕೂ ಯಾವುದೇ ಸಂಬಂಧವಿಲ್ಲ.ವೈರಲ್ ಆದ ವಿಡಿಯೋದಲ್ಲಿ ಕಾಣಿಸುವುದು ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯುತ್ತಿರುವ ಏರ್ಪಾಡಲ್ಲ, ವೈರಲ್ ವಿಡಿಯೊದಲ್ಲಿ ಕಾಣಿಸುವುದು ವಾರಣಾಸಿಯಲ್ಲಿರುವ ಸ್ವರ್ವೇದ್ ಮಹಾಮಂಡಿ ಧಾಮಕ್ಕೆ ಸೇರಿದ್ದು.