ಫ್ಯಾಕ್ಟ್‌ಚೆಕ್: ಶಬರಿಮಲೆ ದೇವಸ್ಥಾನದ ಅರಾವಣ ಪ್ರಸಾದವನ್ನು ಯುಎಇಯ ಅಲ್-ಜಹಾ ಕಂಪೆನಿ ತಯಾರಿಸುತ್ತಿಲ್ಲ
ಶಬರಿಮಲೆ ದೇವಸ್ಥಾನದ ಅರಾವಣ ಪ್ರಸಾದವನ್ನು ಯುಎಇಯ ಅಲ್-ಜಹಾ ಕಂಪೆನಿ ತಯಾರಿಸುತ್ತಿಲ್ಲ
ಭಾರತದಲ್ಲಿರುವ ದೇಗುಲಗಳ ಪೈಕಿ ಶಬರಿಮಲೆ ದೇವಸ್ಥಾನ ಪ್ರಸಿದ್ಧ ದೇವಾಲಯವಾಗಿ ಖ್ಯಾತಿ ಪಡೆದುಕೊಂಡಿದೆ. ಧರ್ಮಸ್ಥಳ, ತಿರುಮಲ ತಿರುಪತಿ ಪ್ರಸಾದಕ್ಕೆ ಅದರದೇ ಆದ ವಿಶೇಷತೆ, ವಿಶಿಷ್ಟ ಗುಣ ಇದೆ. ಅದೇ ರೀತಿ ಶಬರಿಮಲೆ ಅಯ್ಯಪ್ಪ ಸ್ವಾಮಿ ಅರವಣ ಪಾಯಸಕ್ಕೂ ಅಷ್ಟೇ ಪ್ರಾಮುಖ್ಯತೆಯುಂಟು. ಪ್ರತಿ ವರ್ಷ ಲಕ್ಷಾಂತರ ಭಕ್ತರು ಅಯ್ಯಪ್ಪ ಸ್ವಾಮಿ ಮಾಲೆ ಹಾಕಿ ದೇವರ ದರ್ಶನ ಪಡೆದು ಕೃತಾರ್ಥರಾಗುತ್ತಾರೆ. ಶಬರಿಮಲೆ ಯಾತ್ರೆಯನ್ನು ಮುಗಿಸಿಕೊಂಡು ಹಿಂತಿರುಗುವಾಗ ದೇವರ ಪ್ರಸಾದ ಅರವಣ ಪಾಯಸ, ಅಪ್ಪಂ ಕಡ್ಡಾಯವಾಗಿ ತರುತ್ತಾರೆ. ಅಕ್ಕಿ, ತುಪ್ಪ, ಬೆಲ್ಲ ಬಳಸಿ ಅರವಣ ಪಾಯಸ ತಯಾರಿಸುತ್ತಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಪ್ರಸಾದ ಬಗ್ಗೆ ಪೊಸ್ಟ್‌ವೊಂದು ವೈರಲ್ ಆಗುತ್ತಿದೆ.
ಸಂದೀಪ್ ಸಿನ್ಹಾ ಎಂಬ ಎಕ್ಸ್ ಖಾತೆದಾರ ತನ್ನ ಖಾತೆಯಲ್ಲಿ ʼThis is Aravana Payasam a traditional sweet available only in SABRIMALA SANIDHAM, Kerala.
Kerala Devasom Board awarded tender to Muslim, which is HALAL certified. Why Prasad is #HALAL certified? Why Kerala Govt playing with Hindus emotion? @CMOKerala @vijayanpinarayiʼ ಎಂಬ ಶೀರ್ಷಿಕೆಯನ್ನೀಡಿ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼ ಇದು ಅರವಣ ಪಾಯಸಂ ಕೇರಳದ ಶಬರಿಮಲೆ ಸನ್ನಿಧಿಯಲ್ಲಿ ಮಾತ್ರ ಲಭ್ಯವಿರುವ ಸಾಂಪ್ರದಾಯಿಕ ಪ್ರಸಾದ. ಕೇರಳದ ದೇವಸೋಮ್ ಬೋರ್ಡ್ ಮುಸ್ಲಿಮರಿಗೆ ಟೆಂಡರ್ ನೀಡಿದೆ, ಈ ಬೋರ್ಡ್ ಹಲಾಲ್ ಪ್ರಮಾಣೀಕರಿಸಲ್ಪಟ್ಟಿದೆ. ಪ್ರಸಾದಕ್ಕೆ #HALAL ಪ್ರಮಾಣೀಕರಣ ಏಕೆ? ಯಾಕೆ ಕೇರಳ ಸರ್ಕಾರ ಹಿಂದೂಗಳ ಭಾವನೆಗಳೊಂದಿಗೆ ಆಟವಾಡುತ್ತಿದೆ? ಎಂದು ಬರೆದು @CMOKerala @vijayanpinarayiನ್ನು ಟ್ಯಾಗ್ ಮಾಡಿ ಪೊಸ್ಟ್ ಮಾಡಿದ್ದಾರೆ.
ವೈರಲ್ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.
ರತನ್ ಶಾರದಾ ಎಂಬ ಎಕ್ಸ್ ಖಾತೆದಾರ ತನ್ನ ಖಾತೆಯಲ್ಲಿ ಅರವಣ ಪ್ರಸಾದದ ಬಾಟ್‌ನ್ನು ಪೊಸ್ಟ್ ಮಾಡಿ ಅದಕ್ಕೆ ಶೀರ್ಷಿಕೆಯಾಗಿ ʼ@seshadrichari shared this highly disturbing information. No words! Aravana payasam the main prasadan of Sabrimala, is not only now Islamic but halal too, with an Arabic nameʼ ಎಂಬ ಪೊಸ್ಟ್ ಮಾಡಿದ್ದಾರೆ. ಇದನ್ನು ಕನ್ನಡಕ್ಕೆ ಅನುವಾದಿಸಿದಾಗ ʼ@ ಶೇಷಾದ್ರಿಚಾರಿ ಹಂಚಿಕೊಂಡ ಈ ಮಾಹಿತಿ ಗೊಂದಲ ಮೂಡಿಸುತ್ತಿದೆ. ಭಾವನೆಗಳನ್ನು ಹೇಳಲು ಪದಗಳಿಲ್ಲ! ಶಬರಿಮಲೆಯ ಮುಖ್ಯ ಪ್ರಸಾದವಾದ ಅರಾವಣ ಪಾಯಸಂ ಈಗ ಇಸ್ಲಾಮಿಕ್ ಮಾತ್ರವಲ್ಲ, ಹಲಾಲ್ ಕೂಡ, ಅದು ಅರೇಬಿಕ್ ಹೆಸರಿನೊಂದಿಗೆʼ ಎಂದು ಬರೆದಿರುವುದನ್ನು ನೋಡಬಹುದು.
ಅರುಣ್ ಪುದೂರ್ ಎಂಬ ಎಕ್ಸ್ ಖಾತೆದಾರ ತನ್ನ ಖಾತೆಯಲ್ಲಿ ʼThookers making Sabarimala Prasadam now? Anyone can confirm this? ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ.
ವೈರಲ್ ಆದ ಮತ್ತೊಂದು ಪೊಸ್ಟ್‌ನ್ನು ನೀವಿಲ್ಲಿ, ಇಲ್ಲಿ ನೋಡಬಹುದು.
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಅಲ್ ಜಹಾ ಕಂಪೆನಿಯು ಯುಎಇಯಲ್ಲಿ ಮಾರಾಟ ಮಾಡುವ ಅರಾವಣ ಪಾಯಸದ ಬಾಟಲಿಯ ಫೋಟೋವನ್ನು ಹಂಚಿಕೊಂಡು ಶಬರಿಮಲೆ ದೇವಸ್ಥಾನದ ‘ಅರಾವಣ ಪ್ರಸಾದ‘ವನ್ನು ಯುಎಇಯ ಅಲ್-ಜಹಾ ಕಂಪೆನಿ ತಯಾರಿಸುತ್ತದೆ ಎಂದು ತಪ್ಪು ಮಾಹಿತಿಯನ್ನು ಪ್ರಚಾರ ಮಾಡುತ್ತಿದ್ದಾರೆ
ವೈರಲ್ ಅದ ಸುದ್ದಿಯಲ್ಲಿನ ಸತ್ಯಾಂಶವನ್ನು ತಿಳಿಯಲು ನಾವು ವೈರಲ್ ಆದ ಚಿತ್ರಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಕೀವರ್ಡ್‌ಗಳನ್ನು ಬಳಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ನವಂಬರ್ 18, 2021ರಲ್ಲಿ ʼಸಮಯ ಮಲಯಾಳಂʼ ಎಂಬ ಯೂಟ್ಯೂಬ್ ಚಾನಲ್‌ನಲ್ಲಿ ʼഹലാൽ അരവണ എന്ന് പ്രചാരണം സത്യം എന്താണ്? |Aravana Payasamʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಹಲಾಲ್ ಅರವಣ ಸುದ್ದಿಯ ಸತ್ಯಾಂಶವೇನುʼ ಎಂದು ಬರೆದು ವಿಡಿಯೋವನ್ನು ಪೊಸ್ಟ್ ಮಾಡಿದ್ದಾರೆ.
ನಾವು ʼAI Zahaa Sweetsʼ ಎಂಬ ಕೀವರ್ಡ್‌ನೊಂಡಿಗೆ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಈ ಕಂಪನಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಜ್ಮಾನ್‌ನಲ್ಲಿದೆ ಎಂದು ತಿಳಿದು ಬಂದಿತು. ನಂತರ ನಾವು ಗೂಗಲ್‌ನಲ್ಲಿ ಅಲ್ ಜಹಾ ಸ್ವೀಟ್ಸ್ ಎಂಬ ಕೀವರ್ಡ್‌ನಿಂದ ಹುಡುಕಾಟ ನಡೆಸಿದಾಗ ನಮಗೆ ʼಡಿಲಿಜೆನ್ಸಿಯಾʼ ವೆಬ್‌ಸೈಟ್‌ನಲ್ಲಿರುವ ಬಯೋ ಕಾಣಿಸಿತು. ಬಯೋವಿನಲ್ಲಿ ʼಯುನೈಟೆಡ್ ಅರಬ್ ಎಮಿರೈಟ್ಸ್‌ನ ಅಜ್ಮಾಲ್‌ನಲ್ಲಿರುವ ಪ್ರೈವೇಟ್ ಕಂಪನಿಯೆಂದು ತಿಳಿದು ಬಂದಿತು. ಈ ಕಂಪನಿ ಆಹಾರ ಉತ್ಪತ್ತಿಗಳನ್ನು ತಯಾರಿಸುತ್ತದೆ ಎಂದು ಬಯೋವಿನಲ್ಲಿ ಬರೆದಿದ್ದಾರೆ.
ಅಲ್ ಜಹಾ ಸ್ವೀಟ್ಸ್‌ಗಾಗಿ ಹುಡುಕುತ್ತಿರುವಾಗ ರಷ್ಯಾದ ಮ್ಯಾಪ್ ಲಿಂಕ್‌ವೊಂದು ನಮಗೆ ಕಾಣಿಸಿತು.
ನಾವು ಆಲ್‌ಜಹಾ ಕಂಪನಿಯ ಮಾಲೀಕರಲ್ಲಿ ಒಬ್ಬರಾದ ರಶೀಕ್‌ರನ್ನು ಸಂಪರ್ಕಿಸಿದಾಗ ನಾವು ನಮ್ಮ ಉತ್ಪನ್ನವನ್ನು ಕೇವಲ ಅರಾವಣ ಪಾಯಸಂ ಎಂದು ಪ್ಯಾಕ್ ಮಾಡಿ ಬ್ರ್ಯಾಂಡ್ ಮಾಡುತ್ತೇವೆ ಅಷ್ಟೇ. ಇದನ್ನು ನಾವು ಪ್ರಸಾದವಾಗಿ ಲೆಬಲ್ ಮಾಡಿ ಮಾರಾಟ ಮಾಡುತ್ತಿಲ್ಲ. ನಮ್ಮ ಬ್ರ್ಯಾಂಡ್ ಅರಾವಣ ಪಾಯಸಂಗೆ ಧರ್ಮ, ಜಾತಿ ಅಥವಾ ಪಂಥದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದರು.
ತಿರುವಾಂಕೂರ್ ದೇವಸಂ ಬೋರ್ಡ್‌ನ ಪ್ರೆಸಿಡೆಂಟ್ ಪಿ.ಎಸ್ ಪ್ರಶಾಂತ್‌ರವರೊಂದಿಗೆ ನಾವು ಮಾತನಾಡಿದಾಗ ಅವರು ಹೇಳಿದ್ದೇನೆಂದರೆ ʼಶಬರಿಮಲೆ ದೇವಸ್ಥಾನದಲ್ಲಿ ಮಾರಾಟ ಮಾಡುವ ಅರುವಣ ಪ್ರಸಾದವನ್ನು ದೇವಸ್ಥಾನದ ನೌಕರರೆ ತಯಾರಿಸುತ್ತಾರೆ. ಯಾರಿಗೂ ಗುತ್ತಿಗೆ ನೀಡಿ ಪ್ರಸಾದವನ್ನು ನಾವು ತಯಾರಿಸುವುದಿಲ್ಲʼ ಎಂದು ಹೇಳಿಕೆಯನ್ನು ನೀಡಿದರು.
ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಕೊಡುವ ಮತ್ತು ವೈರಲ್ ಆದ ಅರುವಣ ಪ್ರಸಾದದ ಡಬ್ಬವನ್ನು ನಾವು ಸೂಕ್ಷ್ಮವಾಗಿ ಗಮನಿಸಿದೆವು. ದೇವಸ್ಥಾನದಲ್ಲಿ ಕೊಡುವ ಪ್ರಸಾದದ ಮೇಲೆ ʼಅರವಣ ಪ್ರಸಾದಂʼ ಎಂದಿದೆ. ವೈರಲ್ ಆದ ಪೊಸ್ಟ್‌ನಲ್ಲಿ ಕಾಣುವ ಡಬ್ಬದ ಮೇಲೆ ʼಅರವಣ ಪಾಯಸಂʼ ಎಂದಿರುವುದನ್ನು ನೋಡಬಹುದು.
ಅಕ್ಟೋಬರ್ 3, 2021ರಂದು ʼನಿಶಾ ಶಿಬುಮನ್ʼ ಎಂಬ ಯೂಟ್ಯೂಬ್ ಖಾತೆಯಲ್ಲಿ ʼദുബായിലെ അരവണ പായസം കഴിച്ചിട്ടുണ്ടോ? എവിടെ കിട്ടുമെന്ന് അറിയാമോ? ARAVANA PAYASAM MADE IN DUBAIʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ನಿರೂಪಕಿ ಅರವಣ ಖಾದ್ಯದ ಮೇಲಿನ ಪ್ರೀತಿಯನ್ನು ವಿವರಿಸುತ್ತಾಳೆ. ಮತ್ತು ಈ ಸಿಹಿಯನ್ನು ಯುಎಇಯಲ್ಲಿ ತಯಾರಿಸಿ ಮಾರಾಟ ಮಾಡಲಾಗುತ್ತದೆ ಎಂದು ವಿವರಿಸಿರುವುದನ್ನು ನಾವು ನೋಡಬಹುದು.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಅಲ್ ಜಹಾ ಕಂಪೆನಿಯು ಯುಎಇಯಲ್ಲಿ ಮಾರಾಟ ಮಾಡುವ ಅರಾವಣ ಪಾಯಸದ ಬಾಟಲಿಯ ಫೋಟೋವನ್ನು ಹಂಚಿಕೊಂಡು ಶಬರಿಮಲೆ ದೇವಸ್ಥಾನದ ‘ಅರಾವಣ ಪ್ರಸಾದ‘ವನ್ನು ಯುಎಇಯ ಅಲ್-ಜಹಾ ಕಂಪೆನಿ ತಯಾರಿಸುತ್ತದೆ ಎಂದು ತಪ್ಪು ಮಾಹಿತಿಯನ್ನು ಪ್ರಚಾರ ಮಾಡುತ್ತಿದ್ದಾರೆ.