ಫ್ಯಾಕ್ಟ್‌ಚೆಕ್: ಬಿಜೆಪಿ ಜೆಎನ್‌ಯು ವಿಶ್ವವಿದ್ಯಾನಿಲಯದ ಹೆಸರನ್ನು ಡಾ ಬಿಆರ್ ಅಂಬೇಡ್ಕರ್ ವಿಶ್ವವಿದ್ಯಾಲಯವೆಂದು ಬದಲಾಯಿಸಿಲ್ಲ
ಬಿಜೆಪಿ ಜೆಎನ್‌ಯು ವಿಶ್ವವಿದ್ಯಾನಿಲಯದ ಹೆಸರನ್ನು ಡಾ ಬಿಆರ್ ಅಂಬೇಡ್ಕರ್ ವಿಶ್ವವಿದ್ಯಾಲಯವೆಂದು ಬದಲಾಯಿಸಿಲ್ಲ
ಇತ್ತೀಚಿಗೆ ರಾಜ್ಯಸಭೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಆಡಿರುವ ಅವಹೇಳನಕಾರಿ ಮಾತುಗಳನ್ನು ಖಂಡಿಸಿ ದೇಶದೆಲ್ಲೆಡೆ ಅಮಿತ್ ಶಾ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದೇ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಂಬೇಡ್ಕರ್‌ರವರಿಗೆ ಸಂಬಂಧಿಸಿದ ಕೆಲವು ಪೊಸ್ಟ್‌ಗಳು ವೈರಲ್ ಆಗುತ್ತಿವೆ. 1966ರಲ್ಲಿ ಸಂಸತ್ತಿನ ಕಾಯಿದೆಯೊಂದರಿಂದ ಸ್ಥಾಪಿತವಾದ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು), ಭಾರತದ ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾಗಿದೆ. ಫೇಸ್‌ಬುಕ್ ಮತ್ತು ಎಕ್ಸ್ ಖಾತೆಗಳಲ್ಲಿ ಸಾಮಾಜಿಕ ಮಾಧ್ಯಮದ ಬಳಕೆದಾರರು ಜೆಎನ್‌ಯು ಹೆಸರನ್ನು ಈಗ ಡಾ ಬಿಆರ್ ಅಂಬೇಡ್ಕರ್ ವಿಶ್ವವಿದ್ಯಾಲಯ ಎಂದು ಬದಲಾಯಿಸಲಾಗಿದೆ ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್ ಮಾಡುತ್ತಿದ್ದಾರೆ.
ಡಿಸಂಬರ್ 18,2024ರಂದು ʼಅಂಕಿತ್ ಗುಪ್ತʼ ಎಂಬ ಎಕ್ಸ್ ಖಾತೆದಾರ ತನ್ನ ಖಾತೆಯಲ್ಲಿ ʼBig Breaking.. BJP changed the name of Jawaharlal Nehru University to Dr. B.R. Ambedkar Universityʼ ಎಂದು ಬರೆದು ಪೊಸ್ಟ್ ಮಾಡಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಬಿಜೆಪಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಹೆಸರನ್ನು ಡಾ. ಬಿಆರ್ ಅಂಬೇಡ್ಕರ್ ವಿಶ್ವವಿದ್ಯಾಲಯ ಎಂದು ಬದಲಾಯಿಸಿದೆʼ ಎಂದು ಬರೆದಿರುವುದು ಕಂಡುಬಂದಿತು.
ವೈರಲ್ ಆದ ಸುದ್ದಿಯ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು
ಡಿಸಂಬರ್ 19, 2024ರಂದು ʼಪ್ರೌಡ್ ಭಾರತೀಯʼ ಎಂಬ ಎಕ್ಸ್ ಖಾತೆದಾರ ತನ್ನ ಖಾತೆಯಲ್ಲಿ ʼRequest to Govt - Change the name of JNU with "Dr. Bhimrao Ramji Ambedkar University (BRAU)ʼ ಎಂಬ ಶೀರ್ಷಿಕೆಯನ್ನೀಡಿ ಯೂನಿವರ್ಸಿಟಿ ಹೆಸರನ್ನು ಬದಲಾಯಿಸಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಸರ್ಕಾರಕ್ಕೆ ವಿನಂತಿ - JNU ಹೆಸರನ್ನು, ಡಾ.ಭೀಮರಾವ್ ರಾಮ್‌ಜಿ ಅಂಬೇಡ್ಕರ್ ವಿಶ್ವವಿದ್ಯಾಲಯ (BRAU) ಎಂದು ಬದಲಾಯಿಸಿʼ ಎಂದು ಬರೆದು ಪೊಸ್ಟ್ ಮಾಡಿದ್ದಾರೆ
ಮರಾಠಾ ಸರ್ದಾರ್ ಎಂಬ ಎಕ್ಸ್ ಖಾತೆದಾರ ತನ್ನ ಖಾತೆಯಲ್ಲಿ ʼJabardast..Now JNU name replace by B R Ambedkar Universityʼ ಎಂದು ಬರೆದು ಪೊಸ್ಟ್ ಮಾಡಿದ್ದಾರೆ. ಕನ್ನಡಕ್ಕೆ ಶೀರ್ಷಿಕೆಯನ್ನು ಅನುವಾದಿಸಿದಾಗ ಜಬರ್ದಸ್ತ್... ಈಗ JNU ಹೆಸರನ್ನು ಬಿಆರ್ ಅಂಬೇಡ್ಕರ್ ವಿಶ್ವವಿದ್ಯಾಲಯದಿಂದ ಬದಲಾಯಿಸಲಾಗಿದೆʼ ಎಂಬ ಶೀರ್ಷಿಕೆಯೊಂದಿಗೆ ಯೂನಿವರ್ಸಿಟಿ ಹೆಸರನ್ನು ಬದಲಾಯಿಸಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ
ಮತ್ತಷ್ಟು ಪೊಸ್ಟ್‌ಗಳನ್ನು ನೀವಿಲ್ಲಿ, ಇಲ್ಲಿ ನೋಡಬಹುದು
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಜೆಎನ್‌ಯು ಹೆಸರನ್ನು ಈಗ ಡಾ ಬಿಆರ್ ಅಂಬೇಡ್ಕರ್ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಿಲ್ಲ. ವೈರಲ್ ಆದ ಫೋಟೋವನ್ನು ಎಐ ಮೂಲಕ ರಚಿಸಲಾಗಿದೆ.
ನಾವು ಸತ್ಯಾಂಶವನ್ನು ತಿಳಿಯಲು ವೈರಲ್ ಆದ ಸುದ್ದಿಯಲ್ಲಿರುವ ಕೆಲವು ಪ್ರಮುಖ ಕೀವರ್ಡ್‌ಗಳನ್ನು ಉಪಯೋಗಿಸಿ ಗೂಗಲ್‌ನಲ್ಲಿ ಹುಡುಕಾಟ ನಡೆಸಿದೆವು. ಬಿಜೆಪಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಹೆಸರನ್ನು ಡಾ. ಬಿಆರ್ ಅಂಬೇಡ್ಕರ್ ವಿಶ್ವವಿದ್ಯಾಲಯ ಎಂದು ಬದಲಾಯಿಸಿದೆಯೇ?" ಹಾಗೂ " Had JNU changed to Ambedkar University?" ಎಂಬ ಕೀವರ್ಡ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದಾಗ ನಮಗೆ ಯಾವುದೇ ವರದಿಗಳು ಕಂಡುಬಂದಿಲ್ಲ. ನಂತರ ನಾವು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ವೈರಲ್ ಸುದ್ದಿಗೆ ಸಂಬಂಧಿಸಿದ ಯಾವುದಾರರೂ ಸುದ್ದಿ ಸಿಗಬಹುದು ಎಂದು ಹುಡುಕಾಟ ನಡೆಸಿದಾಗ ನಮಗೆ ಯಾವುದೇ ಫಲಿತಾಂಶ ಸಿಗಲಿಲ್ಲ.
ನಂತರ ನಾವು ʼಮಿನಿಸ್ಟರಿ ಆಫ್ ಎಡ್ಯುಕೇಷನ್ʼ ಎಂಬ ವೆಬ್‌ಸೈಟ್‌ನಲ್ಲಿ ವಿಶ್ವವಿದ್ಯಾಲಯದ ಹೆಸರು ಬದಲಾವಣೆಗಳ ಬಗ್ಗೆ ಅಧಿಕೃತ ವರದಿಗಳು ಯಾವುದಾದರೂ ಸಿಗಬಹುದೆಂದು ಹುಡುಕಾಟ ನಡೆಸಿದಾಗ ನಮಗೆ ಯಾವುದೇ ಮಾಹಿತಿ ದೊರೆತಿಲ್ಲ.
ಮತ್ತಷ್ಟು ಹುಡುಕಾಟ ನಡೆಸಿದಾಗ ನಮಗೆ ಫೆಬ್ರವರಿ 18, 2021ರಂದು ʼಎಕನಾಮಿಕ್ ಟೈಮ್ಸ್ʼ ನ ವೆಬ್‌ಸೈಟ್‌ನಲ್ಲಿ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಈ ವರದಿಗೆ ಶೀರ್ಷಿಕೆಯಾಗಿ ʼNo proposal for JNU name change: Ramesh Pokhriyal Nishankʼ ಎಂಬ ಹೆಡ್‌ಲೈನೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ಆಗಿನ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅವರು JNU ಅನ್ನು ಮರುನಾಮಕರಣ ಮಾಡುವ ಬಗ್ಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವರದಿಯ ಪ್ರಕಾರ, 2020ರಲ್ಲಿ, ಆಗಿನ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿರವರು ಜೆಎನ್‌ಯು ಹೆಸರನ್ನು ಸ್ವಾಮಿ ವಿವೇಕಾನಂದ ಎಂದು ಬದಲಾಯಿಸಲು ಪ್ರಸ್ತಾಪಿಸಿದ್ದರು ಎಂದು ವರದಿಯಾಗಿದೆ.
ನಾವು ವೈರಲ್ ಆದ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಮಗೆ ಇದು ಎಡಿಟೆಡ್ ಎಂದು ಅನಿಸಿ ನಾವು ಚಿತ್ರವನ್ನು ನಾವು ಚಿತ್ರವನ್ನು ಎಐ ಇಮೇಜ್ ಡಿಟೆಕ್ಷನ್ ಟೂಲ್ ʼಹೈವ್ ಮಾಡರೇಶನ್ʼ ನಲ್ಲಿ ಫೊಟೋವನ್ನು ಪರಿಶೀಲಿಸಿದೆವು. ಪರಿಶೀಲನೆಯಲ್ಲಿ ನಮಗೆ ಈ ಚಿತ್ರ 98.4 ಪ್ರತಿಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ತಿಳಿದುಬಂದಿತು.
ಮತ್ತೋಂದು ಎಐ ಇಮೇಜ್ ಡಿಟೆಕ್ಷನ್ ಟೂಲ್ ಆದ ʼಟ್ರೂ ಮಿಡಿಯಾʼದಲ್ಲಿ ಪರಿಶೀಲಿಸಿದೆವು. ನಮಗೆ ಈ ಫೋಟೋವು 99 ಪ್ರತಿಶತ AI- ರಚಿತವಾಗಿದೆ ಎಂದು ಕಂಡುಬಂದಿದೆ ಮತ್ತು ವಿಶ್ಲೇಷಣೆಯು ಸ್ಟೇಬಲ್ ಡಿಫ್ಯೂಷನ್, ಮಿಡ್‌ಜರ್ನಿ, DALL·E 2ಯಿಂದ ಚಿತ್ರವನ್ನು ರಚಿಸಲಾಗಿದೆ ಎಂದು ತಿಳಿದುಬಂದಿದೆ.
Wasitai.com ನಲ್ಲಿ ಚಿತ್ರವನ್ನು ಪರೀಶಿಲಿಸಿದಾಗ ಅಲ್ಲಿಯೂ ಸಹ ಈ ಚಿತ್ರ ಎಐ ಬಳಸಿ ರಚಿಸಿರುವುದು ಎಂದು ಸಾಭಿತಾಯಿತು.
ಇದರಿಂದ ಸಾಭೀತಾಗಿರುವುದೇನೆಂದರೆ, ವೈರಲ್ ಆದ ಚಿತ್ರವನ್ನು ಎಐ ಮೂಲಕ ರಚಿಸಲಾಗಿದೆ. ವಾಸ್ತವಾಗಿ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯವನ್ನು ಡಾ. ಬಿ.ಆರ್. ಅಂಬೇಡ್ಕರ್ ವಿಶ್ವವಿದ್ಯಾನಿಲಯ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಪ್ರತಿಪಾದಿಸುವ ವೈರಲ್ ಪೋಸ್ಟರ್ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ.