ಫ್ಯಾಕ್ಟ್‌ಚೆಕ್ : ಕರ್ನಾಟಕ ಸರ್ಕಾರ ಸ್ವಾವಲಂಬಿ ಸಾರಥಿ ಯೋಜನೆ ಜಾರಿ ಮಾಡಿರುವುದು ಮುಸ್ಲಿಮರಿಗಷ್ಟೇ ಅಲ್ಲ
ಕರ್ನಾಟಕ ರಾಜ್ಯ ಸರ್ಕಾರವು ಸ್ವಾವಲಂಬಿ ಸಾರಥಿ ಯೋಜನೆಯಡಿ ನೀಡುತ್ತಿರುವ ಸಬ್ಸಿಡಿಯು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳು, ಎಸ್‌ಟಿ,ಎಸ್‌ಟಿ ಯುವಕರಿಗೆ ಲಭ್ಯವಿದೆ
ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವು ಮುಸ್ಲಿಮರ ಅಭಿವೃದ್ಧಿಗೆ ಸಬ್ಸಿಡಿ ಯೋಜನೆಯನ್ನು ಉಡುಗೊರೆಯಾಗಿ ಘೋಷಿಸಿರುವುದಾಗಿ ಹೇಳುವ ಪೋಸ್ಟ್‌ವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಟೋ, ಟ್ಯಾಕ್ಸಿ ಅಥವಾ ಗೂಡ್ಸ್ ವಾಹನ ಖರೀದಿಗೆ 3 ಲಕ್ಷ ರೂ. ಸಬ್ಸಿಡಿಯನ್ನು ಈ ಯೋಜನೆಯ ಮೂಲಕ ಒದಗಿಸಲಾಗುತ್ತಿದೆ ಎಂದು ಪೋಸ್ಟ್ ವಿವರಿಸುತ್ತದೆ.
ಈ ಸೋಷಿಯಲ್ ಮೀಡಿಯಾ ಪೋಸ್ಟರ್‍ನಲ್ಲಿ, ಯಾರು ಈ ಸೌಲಭ್ಯ ಪಡೆಯಲು ಅರ್ಹರು, ಯಾವ ದಾಖಲೆಗಳು ಒದಗಿಸಬೇಕು ಎಂಬ ವಿವರಗಳನ್ನು ನೀಡಲಾಗಿದೆ. ಈ ವಿವರಗಳು ಯೋಜನೆಯು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತವೆ.
ಸಂಸದ ತೇಜಸ್ವಿ ಸೂರ್ಯ, ಸಚಿವ ರಾಜೀವ್ ಈ ಯೋಜನೆ ಕುರಿತು ಟ್ವೀಟ್ ಮಾಡಿದ್ದು, ಇದರನ್ನು ಒಲೈಕೆಯ ರಾಜಕಾರಣ ಎಂದು ಕರೆದಿದ್ದಾರೆ. ಟ್ವೀಟ್‌ನಲ್ಲಿ ಹೀಗಿದೆ: " 6 ಲಕ್ಷ ರೂ.ಗೆ ವಾಹನ ಖರೀದಿಸಿ, 50% ಸಬ್ಸಿಡಿ ಪಡೆಯಿರಿ. ಮರುದಿನವೇ 5 ಲಕ್ಷ ರೂ.ಗೆ ಮಾರಾಟ ಮಾಡಿ. 2 ಲಕ್ಷ ರೂ ಲಾಭ! ಈ ಯೋಜನೆ ಕೇವಲ ಹಿಂದುಯೇತರರಿಗೆ ಮಾತ್ರ ಲಭ್ಯ ಮತ್ತು ಬಡ, ಅವಕಾಶವಂಚಿತ ಹಿಂದು ಸಮುದಾಯಗಳು ಯೋಜನೆಯ ವ್ಯಾಪ್ತಿಯಲ್ಲಿಲ್ಲ."
ಇದೇ ಪೋಸ್ಟ್ ಫೇಸ್‌ಬುಕ್‌ನಲ್ಲೂ ವೈರಲ್ ಆಗಿದೆ.
ಫ್ಯಾಕ್ಟ್‌ಚೆಕ್
ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ಮಂಡಳಿ ನಿಯಮಿತದ ಅಧಿಕೃತ ವೆಬ್‌ತಾಣವನ್ನು ಪರಿಶೀಲಿಸಿದಾಗ, ನಮಗೆ ಸ್ವಾವಲಂಬಿ ಸಾರಥಿ ಹೆಸರಿನ ಯೋಜನೆಯಡಿಯಲ್ಲಿ ವಿವರಗಳು ಲಭ್ಯವಾದವು. ಕರ್ನಾಟಕ ಸರ್ಕಾರವು, ಅಲ್ಪಸಂಖ್ಯಾತ, ಎಸ್ ಸಿ ಮತ್ತು ಎಸ್ ಟಿ ಸಮುದಾಯಗಳ ನಿರುದ್ಯೋಗ ಯುವಕರಲ್ಲಿ ಸ್ವಉದ್ಯೋಗ ಪ್ರೋತ್ಸಾಹಿಸಲೆಂದು ಈ ಯೋಜನೆಯನ್ನು ಪರಿಚಯಿಸಿದೆ.
ಕರ್ನಾಟಕ ಸರ್ಕಾರದ ಪ್ರಕಾರ ಅಲ್ಪಸಂಖ್ಯಾತ ಎಂದರೆ, ಮುಸ್ಲಿಂ, ಕ್ರೈಸ್ತ, ಬುದ್ಧ, ಜೈನ, ಸಿಖ್ ಮತ್ತು ಪಾರ್ಸಿ ಧಾರ್ಮಿಕ ಸಮುದಾಯಗಳು.
ಕೆಎಂಡಿಸಿಎಲ್ ಪ್ರಕಟಣೆಯಂತೆ ಯೋಜನೆಯು ರಾಷ್ಟ್ರೀಯ ಬ್ಯಾಂಕ್‌ಗಳ ಸಹಯೋಗದಲ್ಲಿ ಅನುಷ್ಠಾನಕ್ಕೆ ಬರುತ್ತಿದೆ. ಬ್ಯಾಂಕ್‌ನಿಂದ ಸಾಲ ಮಂಜುರಾದ ಬಳಿಕ, ಆಟೋರಿಕ್ಷ, ಗೂಡ್ಸ್ ವಾಹನ ಅಥವಾ ಟ್ಯಾಕ್ಸಿ ಖರೀದಿಸಲು ಫಲಾನುಭವಿಗಳಿಗೆ ವಾಹನದ ಒಟ್ಟು ಮೊತ್ತದ 50% ಅಥವಾ ಗರಿಷ್ಟ 3 ಲಕ್ಷ ರೂ ಸಬ್ಸಿಡಿ ದೊರೆಯಲಿದೆ.
ಸ್ವಾವಲಂಬಿ ಸಾರಥಿ ಯೋಜನೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಕರಿಗೂ ಲಭ್ಯವಿದೆ ಎಂಬ ಯೋಜನೆಯ ವಿವರಗಳನ್ನು ಟಿವಿ9ಕನ್ನಡ.ಕಾಂ ವರದಿ ಮಾಡಿದೆ.
ಇಂಡಿಯಾಹೆರಾಲ್ಡ್.ಕಾಂ, ಕರ್ನಾಟಕ ಸರ್ಕಾರ ಬಜೆಟ್‌ನಲ್ಲಿ ಸ್ವಾವಲಂಬಿ ಸಾರಥಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೂ ಲಭ್ಯವಿದೆ ಎಂದು ಉಲ್ಲೇಖಿಸಿ ವರದಿ ಮಾಡಿದೆ. ಸಿಎನ್‌ಬಿಸಿಟಿವಿ18.ಕಾಂ ವರದಿ ಕೂಡ ಇದನ್ನು ಉಲ್ಲೇಖಿಸಿದೆ.
ಹಾಗಾಗಿ ಕರ್ನಾಟಕ ರಾಜ್ಯ ಸರ್ಕಾರವು ವಾಣಿಜ್ಯ ವಾಹನಗಳ ಖರೀದಿಗೆ, ಸ್ವಾವಲಂಬಿ ಸಾರಥಿ ಯೋಜನೆಯಡಿ ನೀಡುತ್ತಿರುವ ಸಬ್ಸಿಡಿಯು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಕರಿಗೆ ಲಭ್ಯವಿದ್ದು, ಕೇವಲ ಮುಸ್ಲಿಮರಿಗೆ ಸೀಮಿತ ಎಂಬ ಪ್ರತಿಪಾದನೆ ಸುಳ್ಳು.