ಫ್ಯಾಕ್ಟ್‌ಚೆಕ್: ಕಿರಿಕ್ ಕೀರ್ತಿ ಸೌಜನ್ಯ ಪ್ರಕರಣದಲ್ಲಿ ಸಿಸಿಟಿವಿ ಬಗ್ಗೆ ಸುಳ್ಳು ಹೇಳಿದ್ದರೆ
ಕಿರಿಕ್ ಕೀರ್ತಿ ಸೌಜನ್ಯ ಪ್ರಕರಣದಲ್ಲಿ ಸಿಸಿಟಿವಿ ಬಗ್ಗೆ ಸುಳ್ಳು ಹೇಳಿದ್ದರೆ;

ಹದಿನಾಲ್ಕು ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದಿದ್ದ ಕುಮಾರಿ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಪುನಃ ಮುನ್ನೆಲೆಗೆ ಬಂದಿದೆ. ಯೂಟ್ಯೂಬರ್ ಸಮೀರ್ ಎಂಬಾತ ಮಾಡಿದ್ದ ವಿಡಿಯೋ ಭಾರೀ ವೈರಲ್ ಆಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪರ - ವಿರೋಧದ ಚರ್ಚೆ ಹುಟ್ಟಿಕೊಂಡಿದೆ. ಸಮೀರ್ ಎಂ.ಡಿ ಯೂಟ್ಯೂಬರ್ ಮಾಡಿರುವ ವಿಡಿಯೋವಿನ ಪರಿಣಾಮವಾಗಿ ಧರ್ಮಸ್ಥಳದಲ್ಲಿ ನಡೆದಿದ್ದ ಹಲವು ಕೊಲೆಗಳು ಮತ್ತು ಸೌಜನ್ಯ ಪ್ರಕರಣದ ಒಂದಷ್ಟು ಮಾಹಿತಿಗಳು ಜನ ಸಾಮಾನ್ಯರಿಗೆ ಸುಲಭವಾಗಿ ಅರ್ಥ ಮಾಡಿಸಿದೆ. ಇದೀಗ ಪ್ರಭಾವಿ ವ್ಯಕ್ತಿಗಳ ವಿರುದ್ಧ ಸಾರ್ವಜನಿಕರ ವಲಯದಲ್ಲಿ ವ್ಯಾಪಕವಾದ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೆಲವರ ಪರವಾಗಿ ವಕಾಲತ್ತು ವಹಿಸಲು ಕಿರಿಕ್ ಕೀರ್ತಿ ವಿಡಿಯೋ ಮಾಡಿದ್ದು, ಆದೇಶದ ಪ್ರತಿಗಳನ್ನು ಹಿಡಿದುಕೊಂಡು, ತಮಗೆ ಬೇಕಾದ ಅಂಶಗಳನ್ನು ಆಯ್ದು ಜನ ಸಾಮಾನ್ಯರಿಗೆ ತಪ್ಪು ಸಂದೇಶ ರವಾನೆಯಾಗುವಂತೆ ವಿಡಿಯೋದಲ್ಲಿ ಅಲ್ಪ ಪ್ರಮಾಣದ ಮತ್ತು ದೋಷ ಪೂರಿತ ನೀಡಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ.
ಮಾರ್ಚ್ 09, 2025ರಂದು ʼಸ್ಪೀಡ್ ನ್ಯೂಸ್ ಕನ್ನಡʼ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ʼಸೌಜನ್ಯಾಗೆ ನ್ಯಾಯ ಸಿಗೋಕೆ 'ಇವರೇ' ಬಿಡಲ್ಲ.. 'ಸಾಕ್ಷಿ ಸಮೇತ ವರದಿ..' | Kirik Keerthi | Justice for Sowjanyaʼ ಎಂಬ ಶೀರ್ಷಿಕೆಯೊಂದಿಗೆ ಕಿರಿಕ್ ಕೀರ್ತಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. 1:19:53 ನಿಮಿಷಗಳನ್ನೋಳಗೊಂಡ ಈ ವಿಡಿಯೋದಲ್ಲಿ ನಾವು 14.03 ನಿಮಿಷದ ಟೈಮ್ ಸ್ಟ್ರೈಂಪ್‌ನಲ್ಲಿ ಕಿರಿಕ್ ಕೀರ್ತಿ ʼಆಮೇಲೆ ಸಾಕಷ್ಟು ಜನ ಹೇಳೋದನ್ನ ಕೇಳ್ತಾ ಇದ್ದೀನಿ, ಸಿಸಿಟಿವಿ ಫುಟೋಜ್, ಸಿಸಿಟಿವಿ ಫುಟೋಜ್ ಅಂತ ನಿಮ್ಮ ಮಾಹಿತಿಗಾಗಿ ಆ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದ ಆ ಹಾಸ್ಪಿಟಲ್‌ನಲ್‌ಗೆ ಸಿಸಿಟಿವಿಯನ್ನ ಅಳವಡಿಸಿದ್ದು, 2014ರಲ್ಲಿ ಅಲ್ಲಿಯವರೆಗೆ ಅಲ್ಲಿ ಸಿಸಿಟಿವಿ ಇರಲಿಲ್ಲ.. In fact ಪೊಲೀಸ್ ಡಿಪಾರ್ಟ್‌ಮೆಂಟ್ ಸಹಿತ ಈ ಕೇಸ್ ಆದ ಮೇಲೆ, ಧರ್ಮಸ್ಥಳದಲ್ಲಿ ರಿಕ್ವೆಸ್ಟ್ ಮಾಡಿದ್ದಾರೆ ಅಲ್ಲೊಂದು ಸಿಸಿಟಿವಿ ಹಾಕ್ಸಿ ಅಂತ, ಅದಾದ ಮೇಲೆ 2014ರಲ್ಲಿ ಅಲ್ಲಿ ಸಿಸಿಟಿವಿ ಯನ್ನ ಗೇಟ್‌ನ ಮೇಲೆ ಇನ್‌ಸ್ಟಾಲ್ ಮಾಡಲಾಗಿದೆ. ಸಾಕಷ್ಟು ಜನ ಹೇಳಿದ್ರು 360 ಡಿಗ್ರಿ ಸಿಸಿಟಿವಿ ಇತ್ತು ಅಂತ, ಆದರೆ ಆಗ ಅಂತಹ ತಂತ್ರಜ್ಙಾನ ಇರಲಿಲ್ಲ. 2014ರವರೆಗೂ, ಧರ್ಮಸ್ಥಳದ ಅಂಡರ್‌ನಲ್ಲಿ ಬರುವ, ಸಾಕಷ್ಟು ಬೇರೆ ಬೇರೆ ಧರ್ಮಸ್ಥಳದ ಹೊರತಾಗಿ ಬೇರೆಬೇರೆ ಇರುವ ಜಾಗಗಳಲ್ಲಿ ಸಿಸಿಟಿವಿ ಅಳವಡಿಸಿರಲಿಲ್ಲ. 2014ರಲ್ಲಿ ಆ ಜಾಗಕ್ಕೆ ಸಿಸಿಟಿವಿ ಅಳವಡಿಸಲಾಗಿತ್ತು. ಹಾಗಾಗಿ ಸಿಸಿಟಿವಿ ಫುಟೇಜ್ ಇಲ್ಲ” ಎಂದು ಹೇಳಿರುವುದನ್ನು ನಾವಿಲ್ಲಿ ನೋಡಬಹುದು
ವೈರಲ್ ಆದ ವಿಡಿಯೊವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಪ್ರಕೃತಿ ಚಿಕಿತ್ಸಾಲಯದಲ್ಲಿ 2014ರವರೆಗೆ ಯಾವುದೇ ಸಿಸಿಟಿವಿ ಕ್ಯಾಮರಾಗಳು ಇರಲಿಲ್ಲ ಎಂಬುದು ಸುಳ್ಳು.
ಸೌಜನ್ಯ ಪ್ರಕರಣದ ತೀರ್ಪಿನ ಪ್ರತಿಯಲ್ಲಿ ಕೂಡ ಸಿಸಿಟಿವಿ ಇಲ್ಲ ಎಂದು ಎಲ್ಲಿಯೂ ಸಹ ಉಲ್ಲೇಖಿಸಿಲ್ಲ. ಪ್ರಕರಣದ ತನಿಖಾಧಿಕಾರಿ ಭಾಸ್ಕರ್ ರೈ ಅವರು ಸಿಸಿಟಿವಿ ದೃಷ್ಯಾವಳಿಗಳನ್ನು ನಾವು ಸಂಗ್ರಹಿಸಿಲ್ಲ ಎಂದಿದ್ದಾರೆಯೇ ಹೊರತು ಸಿಸಿಟಿವಿ ಇರಲಿಲ್ಲ ಎಂದು ಹೇಳಿಲ್ಲ. ಅದೇ ರೀತಿ ಅಂದಿನ ಎಸ್‌ಪಿ ಕೂಡ ನಾವು ಎರಡು ಕಡೆ ಇದ್ದ ಸಿಸಿಟಿವಿಯನ್ನು ಸಂಗ್ರಹಿಸಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ. ಕಿರಿಕ್ ಕೀರ್ತಿ ಸಿಸಿಟಿವಿ ಸಾಕ್ಷ್ಯದ ಕುರಿತು ಸೌಜನ್ಯ ಪ್ರಕರಣದ ತೀರ್ಪಿನ ಪ್ರತಿಗಳಲ್ಲಿ ಉಲ್ಲೇಖವಾಗಿರುವ ಅಂಶಗಳನ್ನು ಹೇಳದಿರುವುದು ನಮಗೆ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು. ಹೀಗಾಗಿ ನಾವು ಈ ಪ್ರಕರಣಕ್ಕೆ ಸಂಬಂಧಿಸಿದ ವರದಿಗಳಿಗಾಗಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ತೀರ್ಪಿನ 61ನೇ ಪುಟದ 100ನೇ ಅಂಶದಲ್ಲಿ “ಆರೋಪಿಯನ್ನು ಬಂಧಿಸಿದಾಗ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ತಾನು ವಿಚಾರಣೆ ನಡೆಸಿಲ್ಲ. ಪ್ರಕೃತಿ ಚಿಕಿತ್ಸಾಲಯದಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿಲ್ಲ ಮತ್ತು ಶಂಕಿತ ವ್ಯಕ್ತಿಗಳ ಮೊಬೈಲ್ ಫೋನ್‌ಗಳ ಸಿಡಿಆರ್‌ಗಳನ್ನು ನೀಡಿಲ್ಲ ಎಂದು ಎಂದು PW.33 ಒಪ್ಪಿಕೊಂಡರು. ಆರೋಪಿ ಮಾನಸಿಕ ಅಸ್ವಸ್ಥ ವ್ಯಕ್ತಿಯಾಗಿದ್ದು, ಅವರು ದೇವಸ್ಥಾನಕ್ಕೆ ಬಂದಿದ್ದಾಗ ದೇವಸ್ಥಾನದ ಸಿಬ್ಬಂದಿ ಅವರನ್ನು ತಪ್ಪಾಗಿ ಹಿಡಿದಿದ್ದಾರೆ ಎಂಬುದನ್ನು PW.33 ನಿರಾಕರಿಸಿದರು” ಎಂದು ಉಲ್ಲೇಖವಾಗಿರುವುದು ಕಂಡು ಬಂದಿದೆ.
ಒಂದು ವೇಳೆ ಪ್ರಕೃತಿ ಚಿಕಿತ್ಸಾಲಯದಲ್ಲಿ ಸಿಸಿಟಿವಿ ಕ್ಯಾಮರಗಳು ಇಲ್ಲದಿದ್ದರೆ, ಅಲ್ಲಿ ಕ್ಯಾಮರನೇ ಇರಲಿಲ್ಲ ಎಂದು ಭಾಸ್ಕರ್ ರೈರವರು ಹೇಳಬೇಕಿತ್ತು. ಆದರೆ ಅವರು ತಮ್ಮ ಹೇಳಿಕೆಯಲ್ಲಿಯೇ ಸ್ಪಷ್ಟವಾಗಿ ನಾನು ಪ್ರಕೃತಿ ಚಿಕಿತ್ಸಾಲಯದಿಂದ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿಲ್ಲ ಎಂದಿದ್ದಾರೆ. ಇದರಲ್ಲಿ ಗೊತ್ತಾಗೋದೇನೆಂದರೆ, ಪ್ರಕೃತಿ ಚಿಕಿತ್ಸಾಲಯದಲ್ಲಿ ಸಿಸಿಟಿವಿ ಇತ್ತು ಎಂಬರ್ಥ.
ಇದನ್ನೇ ನಾವು ಸುಳಿವಾಗಿ ತೆಗೆದುಕೊಂಡು ಕೆಲವು ಪ್ರಮುಖ ಕೀ ವರ್ಡ್‌ಗಳ ಮುಖಾಂತರ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಕಿರಿಕ್ ಕೀರ್ತಿ ವಿಡಿಯೋಗೆ ಪ್ರತಿಕ್ರಿಯೆ ನೀಡುವ ನಿಟ್ಟಿನಲ್ಲಿ, ಸೌಜನ್ಯ ಪ್ರಕರಣದ ಕುರಿತು ನಿರಂತರವಾಗಿ ವರದಿ ಮಾಡುತ್ತಾ ಬಂದಿರುವ ಕುಡ್ಲ ರಾಂಪೇಜ್ ಯೂಟ್ಯೂಬ್ ಚಾನೆಲ್‌ನಲ್ಲಿ ʼಕಿರಿಕ್ ಕೀರ್ತಿ ಸೌಜನ್ಯ ವಿಡಿಯೋ ಅಸಲಿಯತ್ತು.! ಇಂತವರಿದ್ದರೆ ಹೆಣ್ಣು ಮಗಳಿಗೆ ನ್ಯಾಯ ಸಿಗಲು ಸಾಧ್ಯವೇ.?ʼ ಎಂಬ ಶೀರ್ಷಿಕೆಯೊಂದಿಗಿರು ವಿಡಿಯೋವೊಂದು ಕಂಡುಬಂದಿತು. 29.51 ನಿಮಿಷಗಳನ್ನು ಒಳಗೊಂಡಿರುವ ಈ ವಿಡಿಯೋದಲ್ಲಿ ನಾವು 11.05 ನಿಮಿಷದ ಟೈಮ್ ಸ್ಟ್ಯಾಪ್‌ನಲ್ಲಿ ಆಗಿನ ಪಿಎಸ್ ಅಭಿಷೇಕ್ ಗೋಯಲ್ ನೀಡಿರುವ ಹೇಲಿಕೆಯನ್ನು ನಾವಿಲ್ಲಿ ನೋಡಬಹುದು. ವಿಡಿಯೋದಲ್ಲಿ ʼCCTV ಇರೋದು ಎರಡೇ ಕಡೆ ಅಷ್ಟೇ, ಒಂದು ಟೆಂಪಲ್ ಮೇನ್ ಗೇಟ್‌ಗೆ ಮತ್ತು ಸ್ನಾನಘಟ್ಟದಲ್ಲಿ, ಅದನ್ನು ನಾವು ತಗೊಂಡಿದ್ದೀವಿʼ ಎಂದು ಪಿಎಸ್ ಅಭಿಷೇಕ್ ಗೋಯಲ್ ನೀಡಿರುವ ಹೇಳಿಕೆಯನ್ನು ನೋಡಬಹುದು.
ಇದೇ ವಿಡಿಯೋವಿನ 11.24 ಟೈಮ್ ಸ್ಟ್ಯಾಂಪ್‌ನಲ್ಲಿ ಯೂಟ್ಯುಬರ್ ಅಜಯ್ ʼಅಲ್ಲೊಂದು ಬಸ್ ಸ್ಟ್ಯಾಂಡ್ ಇತ್ತು, 360 ಡಿಗ್ರಿ ಸಿಸಿಟಿವಿ ಇದ್ದಂತಹ ಬಸ್ ಸ್ಟ್ಯಾಂಡ್ ಇತ್ತು, ಈ ಬಸ್‌ಸ್ಟ್ಯಾಂಡ್ ಅನ್ನು ಈ ಪ್ರಕರಣ ಆದ ನಂತರ ಸಂಪೂರ್ಣವಾಗಿ ನೆಲಸಮ ಮಾಡಿದ್ದಾರೆ” ಎಂದು ಬಸ್ ಸ್ಟ್ಯಾಂಡ್‌ನ ದೃಶ್ಯವನ್ನು ತೋರಿಸಿದ್ದಾರೆ
ಇದರಿಂದ ತಿಳಿಯುವುದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಪ್ರಕೃತಿ ಚಿಕಿತ್ಸಾಲಯದಲ್ಲಿ 2014ರವರೆಗೆ ಯಾವುದೇ ಸಿಸಿಟಿವಿ ಕ್ಯಾಮರಾಗಳು ಇರಲಿಲ್ಲ ಎಂಬುದು ಸುಳ್ಳು. ಸೌಜನ್ಯ ಪ್ರಕರಣದ ತೀರ್ಪಿನ ಪ್ರತಿಯಲ್ಲಿ ಕೂಡ ಸಿಸಿಟಿವಿ ಇಲ್ಲ ಎಂಬ ಅಂಶ ಇಲ್ಲಿಯೂ ಉಲ್ಲೇಖಿಸಿಲ್ಲ. ಪ್ರಕರಣದ ತನಿಖಾಧಿಕಾರಿ ಭಾಸ್ಕರ್ ರೈ ಸಹ ಸಿಸಿಟಿವಿ ದೃಷ್ಯಾವಳಿಗಳನ್ನು ನಾವು ಸಂಗ್ರಹಿಸಿಲ್ಲ ಎಂದಿದ್ದಾರೆಯೇ ಹೊರತು ಸಿಸಿಟಿವಿ ಇರಲಿಲ್ಲ ಎಂದು ಹೇಳಿಲ್ಲ. ಅದೇ ರೀತಿ ಅಂದಿನ ಎಸ್‌ಪಿ ಕೂಡ ನಾವು ಎರಡು ಕಡೆ ಇದ್ದ ಸಿಸಿಟಿವಿಯನ್ನು ಸಂಗ್ರಹಿಸಿದ್ದೇವೆ ಎಂದು ಹೇಳಿರುವುದು ಕಂಡು ಬಂದಿದೆ. ಇದನೆಲ್ಲಾ ಪರಿಗಣಿಸಿದರೆ, ಕಿರಿಕ್ ಕೀರ್ತಿ ಸೌಜನ್ಯ ಪ್ರಕರಣದ ಸಿಸಿಟಿವಿ ಸಾಕ್ಷ್ಯದ ಕುರಿತು ಸುಳ್ಳು ಹೇಳಿದ್ದಾರೆ ಎಂದು ಸಾಭೀತಾಗಿದೆ.