ಫ್ಯಾಕ್ಟ್‌ಚೆಕ್ : ಪ್ರಧಾನಿ ಮೋದಿಯ ಈ ಚಿನ್ನದ ಪ್ರತಿಮೆ ಇರುವುದು ಸೂರತ್‌ನಲ್ಲಿ ಸೌದಿಯಲ್ಲಲ್ಲ
ನರೇಂದ್ರ ಮೋದಿಯವರ ಚಿನ್ನದ ಪ್ರತಿಮೆಯ ವಿಡಿಯೋ ಗುಜರಾತಿನ ಸೂರತ್‌ನದ್ದೇ ಹೊರತು ಸೌದಿ ಅರೇಬಿಯಾದ್ದಲ್ಲ. ಹಾಗಾಗಿ ವೈರಲ್ ವಿಡಿಯೋ ಪ್ರತಿಪಾದನೆ ಹಾದಿ ತಪ್ಪಿಸುವಂತಿದೆ.
ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಭಾರತೀಯ ಪ್ರಧಾನಿ ನರೇಂದ್ರ ಮೋದಿಯವರ ಚಿನ್ನದಿಂದ ಮಾಡಿದ ಪ್ರತಿಮೆಯನ್ನು ಸೌದಿ ಅರೇಬಿಯಾದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ ಎಂದು ಪ್ರತಿಪಾದಿಸಲಾಗಿದೆ. ಹಲವು ಯೂಟ್ಯೂಬ್ ಚಾನೆಲ್‌ಗಳು ಹಾಗೂ ಫೇಸ್‌ಬುಕ್ ಬಳಕೆದಾರರು ಈ ವಿಡಿಯೋ ಹಂಚಿಕೊಂಡಿದ್ದಾರೆ.
ಮಲಯಾಳಮ್ ಭಾಷಿಕರೂ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಫ್ಯಾಕ್ಟ್‌ಚೆಕ್
ಈ ಪ್ರತಿಪಾದನೆ, ಹಾದಿ ತಪ್ಪಿಸುವಂತಿದೆ. ವಿಡಿಯೋದಲ್ಲಿರುವುದು, ಗುಜರಾತಿನ ಸೂರತ್ ನಗರದ ಆಭರಣದ ಅಂಗಡಿಯೊಂದರಲ್ಲಿ ಇರಿಸಲಾಗಿರುವ ಮೋದಿಯ ಚಿನ್ನದ ಪ್ರತಿಮೆ.
ವಿಡಿಯೋದ ಕೀ ಫ್ರೇಮ್‌ವೊಂದನ್ನು ಬಳಸಿ, ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ನಮಗೆ ವಿಡಿಯೋ ಸ್ಕ್ರೀನ್ ಶಾಟ್ ಬಳಸಿ ಬರೆದ ವರದಿಗಳು ಗಮನಕ್ಕೆ ಬಂದವು.
ಹಿಂದಿ ಸುದ್ದಿ ತಾಣ ಅಮರ್ ಉಜಲಾ.ಕಾಮ್‌ನಲ್ಲಿ ಈ ವಿಡಿಯೋ ಪ್ರಕಟವಾಗಿದ್ದು, ಇದರಲ್ಲಿ, 'ಸೂರತ್ ನಗರದ ಆಭರಣಕಾರರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರ ಚಿನ್ನದ ಪ್ರತಿಮೆಯನ್ನು ಸಿದ್ಧಪಡಿಸಿದ್ದು, ಇದರ ವಿಡಿಯೋ ಈಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈಪ್ರತಿಮೆಯನ್ನು 18 ಕ್ಯಾರೆಟ್ ಚಿನ್ನದಿಂದ ಮಾಡಲಾಗಿದ್ದು, 156 ಗ್ರಾಮ್ ತೂಕವಿದೆ. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸಾಧನೆಯ ನೆನಪಿಗೋಸ್ಕರ್ ಈ ಪ್ರತಿಮೆಯನ್ನು ಸಿದ್ಧಪಡಿಸಲಾಗಿದೆ' ಎಂಬ ವಿವರಗಳಿವೆ.
ಜನವರಿ 20, 2023ರಂದು ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾದ ಲೇಖನದ ಪ್ರಕಾರ, ರಾಜಸ್ಥಾನ ಮೂಲದ ಆಭರಣಕಾರ ಬಸಂತ ಬೋಹ್ರಾ 20 ವರ್ಷಗಳಿಂದ ಸೂರತ್‌ನಲ್ಲೇ ನೆಲೆಸಿದ್ದು ರಾಧಿಕಾ ಚೈನ್ಸ್‌ನ ಮಾಲೀಕರು. ಇದು ವೆಲಿಬೆಲಿಯ ಬ್ಯ್ರಾಂಡ್‌ನ ಉತ್ಪನ್ನ. ಪ್ರತಿಮೆಯು 4.5 ಇಂಚ್ ಎತ್ತರ, 3 ಇಂಚ್ ಅಗಲವಿದ್ದು, 156 ಗ್ರಾಮ್ ತೂಕಿದೆ. ಬೋಹ್ರಾ ಅವರ ಪ್ರಕಾರ, ಇತ್ತೀಚಿನ ಗುಜರಾತಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 156 ಸ್ಥಾನಗಳನ್ನು ಗೆದ್ದ ನೆನಪಿನಲ್ಲಿ ಈ ಪ್ರತಿಮೆಯನ್ನು ಸಿದ್ಧಪಡಿಸಲಾಗಿದೆ.
ಎನ್‌ಡಿಟಿವಿ ಕೂಡ ಈಕುರಿತು ವರದಿ ಮಾಡಿದ್ದು, ಕಳೆದ ವರ್ಷ ಡಿಸೆಂಬರ್‍ನಲ್ಲಿ ಬಿಜೆಪಿ 182 ಸ್ಥಾನಗಳ ಪೈಕಿ 156ರ ಸ್ಥಾನಗಳಲ್ಲಿ ಜಯಗಳಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ಪ್ರತಿಮೆಯನ್ನು 156 ಗ್ರಾಮ್ ತೂಕದಲ್ಲಿ ಸಿದ್ಧಪಡಿಸಲಾಗಿದೆ ಎಂದು ಆಭರಣ ತಯಾರಿಕಾ ಸಂಸ್ಥೆ ರಾಧಿಕಾ ಚೈನ್ಸ್ ಮಾಲಿಕ ಬಸಂತ್ ಬೋಹ್ರಾ ತಿಳಿಸಿದ್ದಾರೆ ಎಂದು ಹೇಳಿದೆ.
ಪ್ರತಿಮೆಯು ಸಾರ್ವಜನಿಕರ ಗಮನ ಸೆಳೆದಿದ್ದು, ಹಲವರು ಖರೀದಿಸುವ ಆಸಕ್ತಿಯನ್ನೂ ತೋರಿದ್ದಾರೆ. ಆದರೆ ಬಸಂತ್ ಅವರು ಮಾರಾಟ ಮಾಡದಿರಲು ನಿರ್ಧರಿಸಿದ್ದಾರೆ.
ಹಾಗಾಗಿ ನರೇಂದ್ರ ಮೋದಿಯವರ ಚಿನ್ನದ ಪ್ರತಿಮೆಯ ವಿಡಿಯೋ ಗುಜರಾತಿನ ಸೂರತ್‌ನದ್ದೇ ಹೊರತು ಸೌದಿ ಅರೇಬಿಯಾದ್ದಲ್ಲ. ಹಾಗಾಗಿ ವೈರಲ್ ವಿಡಿಯೋ ಪ್ರತಿಪಾದನೆ ಹಾದಿ ತಪ್ಪಿಸುವಂತಿದೆ.