ಫ್ಯಾಕ್ಟ್‌ಚೆಕ್‌: ಸೌಜನ್ಯ ಪರ ಬ್ಯಾನರ್ ಪ್ರದರ್ಶಿಸಿದ್ದಕ್ಕೆ ಹುಸ್ಕೂರು ಮದ್ದೂರಮ್ಮ ತೇರು ಬಿತ್ತು ಎಂದು ಸುಳ್ಳು ಸುದ್ದಿ ಹಂಚಿಕೆ

ಸೌಜನ್ಯ ಪರ ಬ್ಯಾನರ್ ಪ್ರದರ್ಶಿಸಿದ್ದಕ್ಕೆ ಹುಸ್ಕೂರು ಮದ್ದೂರಮ್ಮ ತೇರು ಬಿತ್ತು ಎಂದು ಸುಳ್ಳು ಸುದ್ದಿ ಹಂಚಿಕೆ;

facebooktwitter-grey
Update: 2025-03-27 03:59 GMT
ಫ್ಯಾಕ್ಟ್‌ಚೆಕ್‌: ಸೌಜನ್ಯ ಪರ ಬ್ಯಾನರ್ ಪ್ರದರ್ಶಿಸಿದ್ದಕ್ಕೆ ಹುಸ್ಕೂರು ಮದ್ದೂರಮ್ಮ ತೇರು ಬಿತ್ತು ಎಂದು ಸುಳ್ಳು ಸುದ್ದಿ ಹಂಚಿಕೆ
  • whatsapp icon

ಬೆಂಗಳೂರಿನ ಆನೇಕಲ್ ತಾಲೂಕಿನಲ್ಲಿ ನಡೆಯುತ್ತಿದ್ದ ಮದ್ದೂರಮ್ಮ ಜಾತ್ರೆಯಲ್ಲಿ ಮಾರ್ಚ್‌ 22, 2025ರಂದು ಭಾರೀ ಅವಘಡ ಸಂಭವಿಸಿದೆ. ತೇರು ಉರುಳಿಬಿದ್ದ ಪರಿಣಾಮ ಗಾಯಗೊಂಡಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ಟ್ರ್ಯಾಕ್ಟರ್ ಹಾಗೂ ನೂರಾರು ಎತ್ತುಗಳ‌‌ ಮೂಲಕ ಈ ತೇರನ್ನು ಎಳೆಯಲಾಗುತ್ತಿತ್ತು. ಸಾಗುತ್ತಿದ್ದ ತೇರು ಧರೆಗುರುಳಿದೆ ತೇರಿನ ಕೆಳಗೆ ಸಿಲುಕಿ ನಾಲ್ವರು ಗಾಯಗೊಂಡಿದ್ದರು, 20ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವರದಿ ಆಗಿದೆ. ಹಾಗೆ ಇತ್ತೀಚಿಗೆ ಸೌಜನ್ಯ ಪ್ರಕರಣ ರಾಜ್ಯದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಇದರ ನಡುವೆ ಸೌಜನ್ಯ ಹೋರಾಟದ ವಿರುದ್ಧ ಇರುವ ಹಲವರು ಹೋರಾಟದ ದಿಕ್ಕು ತಪ್ಪಿಸಲು ಮತ್ತು ಪ್ರಭಾವಿಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ದಿಕ್ಕು ತಪ್ಪಿಸುವುದು ಹಾಗೂ ಸುಳ್ಳು ನಿರೂಪಣೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯಲ್ಲಿ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಕೆಲವೊಂದು ಮುಖ್ಯ ವಾಹಿನಿಯ ಮಾಧ್ಯಮಗಳು ಕೂಡ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿಯ ವರದಿಗಳನ್ನು ಮಾಡುತ್ತಿವೆ.

ಮಾರ್ಚ್‌ 24, 2025ರಂದು ʼಏಷ್ಯಾನೆಟ್‌ ಸುವರ್ಣ ನ್ಯೂಸ್‌ʼ ತನ್ನ ಎಕ್ಸ್‌ ಖಾತೆಯಲ್ಲಿ ʼಹುಸ್ಕೂರು ಮದ್ದೂರಮ್ಮ ಜಾತ್ರೆ 100 ರಥ ದುರಂತ: 'ಜಸ್ಟೀಸ್ ಫಾರ್ ಸೌಜನ್ಯ' ಫಲಕ ಪ್ರದರ್ಶನ ಕಾರಣವೇ?ʼ ಎಂಬ ಶೀರ್ಷಿಕೆಯೊಂದಿಗೆ ಫೋಟೋವೊಂದನ್ನು ಹಂಚಿಕೊಂಡಿದೆ. ಫೋಟೋವಿನಲ್ಲಿ ಕ್ಯಾಪ್ಷನ್‌ ಆಗಿ ʼಹುಸ್ಕೂರು ಮದ್ದೂರಮ್ಮ ಜಾತ್ರೆ 100 ರಥ ದುರಂತ: ʼಜಸ್ಟೀಸ್‌ ಫಾರ್‌ ಸೌಜನ್ಯʼ ಫಲಕ ಪ್ರದರ್ಶನ ಎಂದು ಬರೆದಿರುವುದನ್ನು ನೋಡಬಹುದು. ಹದಿಮೂರು ವರ್ಷದಿಂದ ಧರ್ಮಸ್ಥಳದ ಸಮೀಪ, ಉಜಿರೆಯ ಸೌಜನ್ಯಳ ಕೊಲೆಯ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂಬ ಕೂಗು ಮತ್ತೆ ಜೋರು ಸದ್ದು ಮಾಡುತ್ತಿರುವ ಸಂದರ್ಭದಲ್ಲಿ, ಜಾತ್ರಾಮಹೋತ್ಸವದಲ್ಲಿ ಸೌಜನ್ಯಳ ಸಾವಿಗೆ ನ್ಯಾಯಕ್ಕಾಗಿ, ಫಲಕ ಪ್ರದರ್ಶನ ಮಾಡಿದ್ದರಿಂದ ರಥ ಬಿದ್ದಿದೆ ಎಂಬ ಅರ್ಥ ಬರುವಂತೆ ಶೀರ್ಷಿಕೆಯನ್ನೀಡಿ ಸುದ್ದಿ ವರದಿ ಮಾಡಲಾಗಿದೆ.

ವೈರಲ್‌ ಆದ ಸುದ್ದಿಯ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಕನ್ನಡದ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಪ್ರಶ್ನಾರ್ಥಕವಾಗಿ ಜಸ್ಟಿಸ್‌ ಫಾರ್‌ ಸೌಜನ್ಯ ಎಂಬ ಫಲಕ ಪ್ರದರ್ಶಿಸಿದ್ದರಿಂದಲೇ ಹುಸ್ಕೂರು ಮದ್ದೂರಮ್ಮ ಜಾತ್ರೆಯ ತೇರು ನೆಲಕ್ಕೆ ಬಿದ್ದಿದೆ ಎಂದು ಬಿಂಬಿಸಲು ಪ್ರಯತ್ನಿಸಿರುವುದು ಸಾಬೀತಾಗಿದೆ. ಸುವರ್ಣ ನ್ಯೂಸ್‌ ವರದಿಗೆ ಖಂಡನೆ ವ್ಯಕ್ತವಾಗುತ್ತಿದ್ದಂತೆ ಸುದ್ದಿಯನ್ನು ಮತ್ತೊಮ್ಮೆ ಎಡಿಟ್‌ ಮಾಡಿ ಅಪ್‌ಡೇಟ್‌ ಮಾಡಿರುವುದು ಕಂಡುಬಂದಿದೆ. ವಾಸ್ತವವಾಗಿ ದೊಡ್ಡ ನಾಗಮಂಗಲ ಮತ್ತು ರಾಯಸಂದ್ರ ಗ್ರಾಮದ ತೇರು ನೆಲಕ್ಕೆ ಬಿದ್ದಿದ್ದು. ಇಲ್ಲಿನ ತೇರಿಗೂ ಹುಸ್ಕೂರು ಮದ್ದೂರಮ್ಮನ ಜಾತ್ರೆಯ ತೇರಿಗೂ ಯಾವುದೇ ಸಂಬಂಧವಿಲ್ಲ.

ನಾವು ವೈರಲ್‌ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯುಲು ಗೂಗಲ್‌ನಲ್ಲಿ ವೈರಲ್‌ ಆದ ಚಿತ್ರವನ್ನು ರಿವರ್ಸ್‌ ಇಮೇಜ್‌ ಸರ್ಚ್‌ ಮೂಲಕ ಹುಡುಕಾಟ ನಡೆಸಿದೆವು. ಹಾಗೆ ಕೆಲವು ಪ್ರಮುಖ ಕೀವರ್ಡ್‌ ʼಜಸ್ಟೀಸ್ ಫಾರ್ ಸೌಜನ್ಯ, ಹುಸ್ಕೂರು ಮದ್ದೂರಮ್ಮ ತೇರುʼನ್ನು ಬಳಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಬೇರೆ ಯಾವುದೇ ಮಾಧ್ಯಮ ಈ ರೀತಿಯ ವರದಿ ಮಾಡಿರುವುದು ಕಂಡು ಬಂದಿಲ್ಲ.

ಸುವರ್ಣ ನ್ಯೂಸ್‌ನ ಫೋಟೋವನ್ನು ಬಳಸಿಕೊಂಡು ನಾವು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು ಹುಟುಕಾಟದಲ್ಲಿ ನಮಗೆ ಕರ್ನಾಟಕ ವಾಣಿ ಎಂಬ ಫೇಸ್‌ಬುಕ್‌ ಖಾತೆಯಲ್ಲಿ “ಜಸ್ಟೀಸ್‌ ಫಾರ್‌ ಸೌಜನ್ಯ ಫಲಕ ಗಟ್ಟಹಳ್ಳಿ ರಥ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಪೋಸ್ಟ್‌ ಮಾಡಿರುವುದು ಕಂಡು ಬಂದಿದೆ.

ಇನ್ನು ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ರಥದಲ್ಲಿ ಕೂಡ ಗಟ್ಟಹಳ್ಳಿ ಎಂದು ಬರೆದಿರುವುದು ಕೂಡ ಕಂಡು ಬಂದಿದೆ.

ಸುವರ್ಣ ನ್ಯೂಸ್‌ ಮಾಡಿರುವ ವರದಿಗೆ ತೀಕ್ಷಣವಾಗಿ ಪ್ರತಿಕ್ರಿಯಿಸಿ ಚೇತನ್ ಕೃಷ್ಣ ಎಂಬ ಎಕ್ಸ್‌ ಬಳಕೆದಾರರು ವಿಡಿಯೋ ಪೋಸ್ಟ್‌ವೊಂದನ್ನು ಹಂಚಿಕೊಂಡು ಧರೆಗುರುಳಿದ ರಥಕ್ಕೂ, ಸೌಜನ್ಯ ಪರ ನ್ಯಾಯಕ್ಕೆ ಆಗ್ರಹಿಸಿದ ರಥಕ್ಕೂ ಸಂಬಂಧವಿಲ್ಲ, ಸುವರ್ಣ ನ್ಯೂನ್ ಈ ವಿಷಯದಲ್ಲಿ ಜನರನ್ನು ದಿಕ್ಕುತಪ್ಪಿಸಿ, ದೇವರ ಹೆಸರಿನಲ್ಲಿ ಜನರನ್ನು ಬೀತಿಗೊಳಿಸಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.


ಟೆಂಪಲ್ ಕ್ರೀವ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದ ವಿಡಿಯೋ ಲಭ್ಯವಾಗಿದೆ. 30 ನಿಮಿಷದ ಈ ವಿಡಿಯೋದ 17ನೇ ನಿಮಿಷದ ಅವದಿಯಲ್ಲಿ ಸೌಜನ್ಯ ಪರ ಪೋಸ್ಟ್‌ರ್‌ಗಳನ್ನು ಪ್ರದರ್ಶಿಸಿರುವುದನ್ನು ನೋಡಬಹುದು. ಗಟ್ಟಹಳ್ಳಿ ರಥ ಯಾವುದೇ ತೊಂದರೆ ಇಲ್ಲದೆ ಮೆರವಣಿಗೆಯನ್ನು ಕ್ಷೇಮವಾಗಿ ಮುಗಿಸಿದೆ. ಅತಿಯಾದ ಮಳೆ ಮತ್ತು ಗಾಳಿಯೇ ದೊಡ್ಡನಾಗಮಂಗಲ ಮತ್ತು ರಾಯಸಂದ್ರ ಗ್ರಾಮದ ರಥಗಳು ಬೀಳಲು ಕಾರಣ ಎಂದು ಸ್ಥಳೀಯರು ಹೇಳಿದ್ದಾರೆ. ಮತ್ತೊಂದು ವಿಷಯ ಎಂದರೆ 2024 ರಲ್ಲಿ, ರಾಯಸಂದ್ರ ಗ್ರಾಮದ ರಥವೂ ಉರುಳಿಬಿದ್ದಿತ್ತು. ಆದರೆ ಆಗ ಯಾವುದೇ ಸಾವಿಗೂ ನ್ಯಾಯವನ್ನು ಕೇಳಿ ಪೋಸ್ಟ್‌ರ್ ಪ್ರದರ್ಶನ ಮಾಡಲಾಗಿರಲಿಲ್ಲ.

Full View

ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ನಮಗೆ ʼಥರ್ಡ್‌ ಐʼ ಯೂಟ್ಯುಬ್‌ ಚಾನಲ್‌ನ ಮುಖ್ಯಸ್ಥರು ಹಾಗೂ ಪತ್ರಕರ್ತರಾದ ಸುಬ್ರಮಣ್ಯ ಎಸ್‌ ಹಂಡಿಗೆರವರು ವಿಡಿಯೋ ವರದಿಯೊಂದನ್ನು ಮಾಡಿದ್ದು ಅದರಲ್ಲಿ ಗಟ್ಟಹಳ್ಳಿ ಗ್ರಾಮಸ್ಥರನ್ನು ಮಾತನಾಡಿಸಿದ್ದಾರೆ, ಇದರಲ್ಲಿ ಗ್ರಾಮಸ್ಥ ಶ್ರೀನಿವಾಸ್‌ ತಮ್ಮ ಗ್ರಾಮ ಗಟ್ಟಹಳ್ಳಿಯ ರಥದಲ್ಲಿ ಜಸ್ಟೀಸ್‌ ಫಾರ್‌ ಸೌಜನ್ಯ ಫಲಕವನ್ನು ಪ್ರದರ್ಶಿಸಲಾಗಿದೆ. ನಮ್ಮ ತೇರು ನೆಲಕ್ಕೆ ಬಿದ್ದಿಲ್ಲ. ನೆಲಕ್ಕೆ ಬಿದ್ದಿರುವುದು ದೊಡ್ಡ ನಾಗಮಂಗಲ ಮತ್ತು ರಾಯಸಂದ್ರ ಗ್ರಾಮದ ತೇರು ಎಂಬುದನ್ನು ಸ್ಪಷ್ಟ ಪಡಿಸಿರುವುದು ಕೂಡ ಕಂಡು ಬಂದಿದೆ. ಇದರ ಜೊತೆಗೆ ಸೌಜನ್ಯ ಪ್ರಕರಣದ ಕುರಿತು ಎದ್ದಿರುವ ಹಲವು ಪ್ರಶ್ನೆಗಳಿಗೆ ಕೂಡ ಸುಬ್ರಮಣ್ಯ ಎಸ್‌ ಹಂಡಿಗೆ ಅವರು ಸ್ಪಷ್ಟ ಉತ್ತರವನ್ನು ನೀಡಿರುವುದು ಕಂಡು ಬಂದಿದೆ.

Full View

ಇದರಿಂದ ಸಾಭೀತಾಗಿದ್ದೇನೆಂದರೆ, ಸುವರ್ಣ ನ್ಯೂಸ್ ಇಂತಹ ಸುದ್ದಿಗಳ ಮೂಲಕ ದೇವರು , ಧರ್ಮ ಎಂಬ ವಿಚಾರಗಳನ್ನು ಮುನ್ನಲೆಗೆ ತಂದು ಜನರು ನ್ಯಾಯ ಕೇಳಿದರೆ ಈ ರೀತಿ ಅವಘಡಗಳು ಸಂಭವಿಸುತ್ತವೆ ಎಂದು ಆತಂಕ ಸೃಷ್ಟಿಸುವುದು ಜೊತೆಗೆ ಮೌಢ್ಯಗಳನ್ನು ಬಿತ್ತುವ ಹುನ್ನಾರ ಇರಬಹುದೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಹಾಗೆ ಸುವರ್ಣ ನ್ಯೂಸ್‌ ವರದಿಗೆ ಖಂಡನೆ ವ್ಯಕ್ತವಾಗುತ್ತಿದ್ದಂತೆ ಸುದ್ದಿಯನ್ನು ಮತ್ತೊಮ್ಮೆ ಎಡಿಟ್‌ ಮಾಡಿ ಅಪ್‌ಡೇಟ್‌ ಮಾಡಿರುವುದು ಕಂಡುಬಂದಿದೆ. ವಾಸ್ತವವಾಗಿ ದೊಡ್ಡ ನಾಗಮಂಗಲ ಮತ್ತು ರಾಯಸಂದ್ರ ಗ್ರಾಮದ ತೇರು ನೆಲಕ್ಕೆ ಬಿದ್ದಿದ್ದು. ಇಲ್ಲಿನ ತೇರಿಗೂ ಹುಸ್ಕೂರು ಮದ್ದೂರಮ್ಮನ ಜಾತ್ರೆಯ ತೇರಿಗೂ ಯಾವುದೇ ಸಂಬಂಧವಿಲ್ಲ.

Claim :  ಸೌಜನ್ಯ ಪರ ಬ್ಯಾನರ್ ಪ್ರದರ್ಶಿಸಿದ್ದಕ್ಕೆ ಹುಸ್ಕೂರು ಮದ್ದೂರಮ್ಮ ತೇರು ಬಿತ್ತು ಎಂದು ಸುಳ್ಳು ಸುದ್ದಿ ಹಂಚಿಕೆ
Claimed By :  Social Media Users
Fact Check :  False
Tags:    

Similar News