ಫ್ಯಾಕ್ಟಚೆಕ್: ಕೇಂದ್ರ ಸರ್ಕಾರ ನೌಕರರ ನಿವೃತ್ತಿ ವಯಸ್ಸು 62ಕ್ಕೆ ಹೆಚ್ಚಿಸಲು ನಿರ್ಧರಿಸಿಲ್ಲ
ಕೇಂದ್ರ ಸರ್ಕಾರ ನೌಕರರ ನಿವೃತ್ತಿ ವಯಸ್ಸು 62ಕ್ಕೆ ಹೆಚ್ಚಿಸಲು ನಿರ್ಧರಿಸಿಲ್ಲ
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನಿವೃತ್ತಿ ವಯಸ್ಸು 62ಕ್ಕೆ ಹೆಚ್ಚಳ ಮಾಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ವೈರಲ್ ಆದ ನ್ಯೂಸ್ ಪೇಪರ್‌ನ ವರದಿಯಲ್ಲಿ ʼಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ. ನೌಕರರ ಒತ್ತಾಯಕ್ಕೆ ಪ್ರಧಾನಿ ಮೋದಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60ರಿಂದ 62 ವರ್ಷಕ್ಕೆ ಹೆಚ್ಚಿಸುವ ಮಹತ್ವದ ನಿರ್ಧಾರವನ್ನ ಕೇಂದ್ರ ಸಚಿವ ಸಂಪುಟ ಕೈಗೊಂಡಿದೆ ಎನ್ನಲಾಗಿದೆ. ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆಗೂ ಮುನ್ನ ನೌಕರರ ನಿವೃತ್ತಿ ವಯೋಮಿತಿ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಮುಂದಿನ ವರ್ಷ ಏಪ್ರಿಲ್‌ನಿಂದ ಅನ್ವಯವಾಗಲಿದೆ ಎಂದು ತಿಳಿದುಬಂದಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಿದ್ದರೂ ನೇಮಕಾತಿ ಬದಲು ನಿವೃತ್ತಿ ವಯಸ್ಸು ಹೆಚ್ಚಳಕ್ಕೆ ಚಿಂತನೆ ನಡೆಸಿರುವುದು ಯುವ ಸಮುದಾಯದ ಆಕ್ಷೇಪಕ್ಕೆ ಗುರಿಯಾಗಿದೆʼ ಎಂದು ವರದಿಯಲ್ಲಿ ಉಲ್ಲೇಖಿಸಿರುವುದನ್ನು ನಾವು ನೋಡಬಹುದು.
ನವಂಬರ್ 20,2024ರಂದು ʼಅನಿಲ್ ಕುಮಾರ್ ನಂಜನಗೂಡುʼ ಎಂಬ ಎಕ್ಸ್ ಖಾತೆದಾರ ತನ್ನ ಖಾತೆಯಲ್ಲಿ ನ್ಯೂಸ್ ಪೇಪರ್‌ನ ಕ್ಲಿಪ್ಪಿಂಗನ್ನು ಹಂಚಿಕೊಂಡು ʼಕೇಂದ್ರ ಸರ್ಕಾರದ ವಿವಿಧ ಇಲಾಖೆಯ ಸುಮಾರು 9 ವರೆ ಲಕ್ಷ ಹುದ್ದೆಗಳು ಖಾಲಿಯಿದೆ.ಈ ಸಮಯದಲ್ಲಿ ಅಲ್ಪ ಪ್ರಮಾಣದ ಹುದ್ದೆಗಳನ್ನು ಭರ್ತಿ ಮಾಡದೆ ಸರ್ಕಾರವು ಈಗ "ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60-62ಕ್ಕೆ ಹೆಚ್ಚಳ ಮಾಡಲು ಹೊರಟಿದಿಯಂತೆ "ಇದೆ ನಾಟಕ ಮುಂದುವರಿದರೆ? ಉದ್ಯೋಗಾಕಾಂಕ್ಷಿಗಳು ಪಾಡೇನು?ಇದನ್ನೆಲ್ಲ,ಅಚ್ಚೆ ದಿನ್ ಅನ್ನಬೇಕೆ.ʼ ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.
ನವಂಬರ್ 15, 2024ರಂದು ಎಸ್‌ಆರ್ ಮೀನಾ ಎಂಬ ಎಕ್ಸ್ ಖಾತೆದಾರ ʼನಿವೃತ್ತ ವಯಸ್ಸು ಹೆಚ್ಚಳ 2024ʼಎಂಬ ಹೆಡ್‌ಲೈನ್ ಉರುವ ಚಿತ್ರವೊಂದನ್ನು ಹಂಚಿಕೊಂಡು ಶೀರ್ಷಿಕೆಯಾಗಿ "रिटायरमेंट आयु में 2 वर्ष की बढ़ोतरी, कैबिनेट बैठक में मिली मंजूरी" ಎಂದು ಬರೆದು ಪೊಸ್ಟ್ ಮಾಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼನಿವೃತ್ತ ವಯಸ್ಸು ಹೆಚ್ಚಳ, ಸಂಪುಟ ಸಭೆಯಲ್ಲಿ ಅನುಮೋದನೆ" ಎಂದು ಬರೆದಿರುವುದನ್ನು ನಾವು ಕಂಡುಕೊಂಡೆವು.
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ಈ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ನೌಕರರ ನಿವೃತ್ತಿ ವಯಸ್ಸು ಹೆಚ್ಚಿಸುವ ಬಗ್ಗೆ ಯಾವುದೇ ಪ್ರಸ್ತಾವನೆ ನೀಡಿಲ್ಲ
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್‌ನಲ್ಲಿ ವೈರಲ್ ಸುದ್ದಿಗೆ ಸಂಬಂಧಿಸಿದ ಕೆಲವು ಪ್ರಮುಖ ಕೀವರ್ಡ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಯಾವುದೇ ಅಧಿಕೃತ ಮಾಹಿತಿ ಸಿಗಲಿಲ್ಲ. ಭಾರತ ಸರ್ಕಾರ ಕೇಂದ್ರ ನೌಕರರಿಗೆ ನಿವೃತ್ತದ ವಯಸ್ಸನ್ನು 62ಕ್ಕೆ ಏರಿಸಿದ ಬಗ್ಗೆಯಾಗಲಿ ಅಥವಾ ಕೇಂದ್ರ ಕ್ಯಾಬಿನೇಟ್‌ನಲ್ಲಾಗಲಿ ಈ ಪ್ರಸ್ತಾವನೆ ಬಂದಿರುವ ಬಗ್ಗೆ ಯಾವುದೇ ಸುದ್ದಿ ನಮಗೆ ಸಿಗಲಿಲ್ಲ. ಯಾವುದೇ ನಿರ್ಧಾರ ಅಥವಾ ಅನುಮೋದನೆ ಮಾಡಿದರೆ ಖಚಿತವಾಗಿ ಮಾಧ್ಯಮಗಳಲ್ಲಿ ವರದಿಯಾಗುತ್ತದೆ ಆದರೆ ನಮಗೆ ಯಾವ ಮಾಹಿತಿಯೂ ಸಿಗಲಿಲ್ಲ.
ಸೆಪ್ಟಂಬರ್ 27, 2017ರಂದು ಪಿಐಬಿ ಪತ್ರಿಕಾ ಹೇಳಿಕೆಯಲ್ಲಿ ವೈಜ್ಞಾನಿಕ ತಜ್ಞರಿಗೆ ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ ನಿಗದಿಗೊಳಿಸಿರುವ ಬಗ್ಗೆ ಪ್ರಸ್ತಾವಿಸಿರುವುದನ್ನು ನೋಡಬಹುದು. ಈ ಪತ್ರದಲ್ಲಿ "ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ವಿವಿಧ ಇಲಾಖೆಗಳು, ಸಚಿವಾಲಯಗಳು, ಸ್ವಾಯತ್ತ ಸಂಸ್ಥೆಗಳ ಅಡಿಯಲ್ಲಿ ಬರುವ ಎಲ್ಲಾ ಕೇಂದ್ರ ಆರೋಗ್ಯ ಸೇವೆಗಳ ವೈದ್ಯರನ್ನು ಬಿಟ್ಟು ಉಳಿದ ವೈದ್ಯರ ನಿವೃತ್ತಿ ವಯಸ್ಸು 62ಕ್ಕೆ ಹೆಚ್ಚಿಸಬೇಕು ಎಂದು ಅನುಮೋದಿಸಿರುವ ಪಿಡಿಎಫ್‌ನ್ನು ನಾವಿಲ್ಲಿ ನೋಡಬಹುದು.
ಡಿಸಂಬರ್ 1, 2022ರಂದು ಕೇಂದ್ರ ಸರ್ಕಾರದ ಸಿಬ್ಬಂದಿ ಇಲಾಖೆಯ ಅಧಿಕೃತ ಹೇಳಿಕೆಯಲ್ಲಿ ನಾವು ನೋಡುವುದಾದರೆ, ಈ ಹೇಳಿಕೆಯಲ್ಲಿ ಕೇಂದ್ರ ಸರ್ಕಾರದ ಸಿಬ್ಬಂದಿಗಳ ನಿವೃತ್ತಿ ವಯಸ್ಸು 60 ವರ್ಷಗಳು ಎಂದಿರುವುದನ್ನು ನಾವು ನೋಡಬಹುದು. ಆದರೆ ಇದಾದ ನಂತರ ಕೇಂದ್ರ ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಹೊರಬಂದಿಲ್ಲ.
ನಾವು ಈ ಪೊಸ್ಟ್‌ಗೆ ಸಂಬಂಧಿಸಿ ಗೂಗಲ್‌ನಲ್ಲಿ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ನಮಗೆ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (ಪಿಐಬಿ)ನ ಪೊಸ್ಟ್‌ವೊಂದು ದೊರಕಿತು. ನವಂಬರ್ 19, 2024ರಂದು ʼಪಿಐಬಿ ಫ್ಯಾಕ್ಟ್‌ಚೆಕ್ʼ ಎಕ್ಸ್ ಖಾತೆಯಲ್ಲಿ "सोशल मीडिया पर वायरल हो रहे खबरों में दावा किया जा रहा है कि भारत सरकार ने केंद्रीय कर्मचारियों की रिटायरमेंट आयु में 2 साल की वृद्धि करने का निर्णय लिया है| यह दावा फर्जी है| भारत सरकार ने ऐसा कोई निर्णय नहीं लिया है| बिना सत्यता जांचे खबरें साझा न करें| ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆದ ಪತ್ರವನ್ನು ಫ್ಯಾಕ್ಟ್‌ಚೆಕ್ ಮಾಡಿರುವುದನ್ನು ನಾವು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ಸಾಮಾಜಿಕ ಜಾಲತಾಣದಲ್ಲಿ ಬರುವ ಎಲ್ಲಾ ಸುದ್ದಿಯನ್ನು ನಂಬಬೇಡಿ. ವೈರಲ್ ಆಗುತ್ತಿರುವ ಸುದ್ದಿಯಲ್ಲಿ ಕೇಂದ್ರ ಸರ್ಕಾರ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು 2 ವರ್ಷಗಳವರೆಗೆ ಹೆಚ್ಚಿಸಲು ಭಾರತ ಸರ್ಕಾರ ನಿರ್ಧರಿಸಿದೆ, #PIBFactCheck ಈ ಸುದ್ದಿಲ್ಲಿ ಯಾವುದೇ ಸತ್ಯಾಂಶವಿಲ್ಲ, ಭಾರತ ಸರ್ಕಾರವು ಇಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಸುದ್ದಿಗಳನ್ನು ಹಂಚಿಕೊಳ್ಳಬೇಡಿʼ ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಹಂಚಿಕೊಂಡಿರುವುದನ್ನು ನಾವು ಕಾಣಬಹುದು.
ಮತ್ತಷ್ಟು ಮಾಹಿತಿಯನ್ನು ಸಂಗ್ರಹಿಸಲು ನಾವು ಹುಡುಕಾಟ ನಡೆಸುವಾಗ ನಮಗೆ ಆಗಸ್ಟ್ 9, 2024ರಂದು ʼಎಐಆರ್ʼ ವೆಬ್‌ಸೈಟ್‌ನಲ್ಲಿ ʼGovernment has no proposal under consideration to change retirement age of Central Government employees: Union Minister Dr. Jitendra Singhʼ ಎಂಬ ಶೀರ್ಷಿಕೆಯೊಂದಿಗಿರುವ ವರದಿಯೊಂದನ್ನು ಕಂಡುಹಿಡಿದೆವು. ಮೊದಲು ನಾವು ಶೀರ್ಷಿಕೆಯನ್ನು ಅನುವಾದಿಸಿದೆವು ವರದಿಯಲ್ಲಿ "ಕೇಂದ್ರ ಸಿಬ್ಬಂದಿ ಸಚಿವ ಜಿಂತೇಂದ್ರ ಸಿಂಗ್ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ನಿವೃತ್ತಿ ವಯಸ್ಸನ್ನು 62 ವರ್ಷಕ್ಕೇರಿಸುವ ಯಾವುದೇ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದಿಲ್ಲ" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನಾವು ನೋಡಬಹುದು.
ನವಂಬರ್ 6, 2024ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷ್ಯತೆಯಲ್ಲಿ ʼಪಿಎಂ ವಿದ್ಯಾಲಕ್ಷ್ಮಿʼ ಸ್ಕೀಮನ್ನು ಅನುಮೋದಿಸಿತು. ಈ ಸ್ಕೀಮ್ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡಲು ಗುರಿಯಾಗಿಸಿರುವುದು ಕೇಂದ್ರ ಸರ್ಕಾರದ ಹೊಸ ಯೋಜನೆಯಾಗಿದೆ.
ಇದರಿಂದ ಗೊತ್ತಾಗಿದ್ದೇನೆಂದರೆ ವೈರಲ್ ಆದ ಸುದ್ದಿ ಸಾಮಾಜಿಕ ಮಾಧ್ಯಮದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತದೆ ಎಂದು ಸಾಭೀತಾಗಿದೆ. ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62ಕ್ಕೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಹರಿದಾಡುತ್ತಿರುವ ಸುದ್ದಿಯಲ್ಲಿ ನಿಜಾಂಶವಿಲ್ಲ. ಕೇಂದ್ರ ಸರ್ಕಾರ ಅಂತಹ ಯಾವುದೇ ಪ್ರಸ್ತಾಪವನ್ನು ಮಾಡಿಲ್ಲ.