ಫ್ಯಾಕ್ಟ್‌ಚೆಕ್: ತಂದೆ ಇಲ್ಲದ ಮಕ್ಕಳ ಖಾತೆಗೆ ಮಾತ್ರ ಸರ್ಕಾರ ವರ್ಷಕ್ಕೆ 24000 ರೂ. ಗಳ ಸ್ಕಾಲರ್‌ಶಿಪ್ ನೀಡುತ್ತದೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ.
ತಂದೆ ಇಲ್ಲದ ಮಕ್ಕಳ ಖಾತೆಗೆ ಮಾತ್ರ ಸರ್ಕಾರ ವರ್ಷಕ್ಕೆ 24000 ರೂ. ಗಳ ಸ್ಕಾಲರ್‌ಶಿಪ್ ನೀಡುತ್ತದೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ.
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಸುದ್ದಿಯೊಂದು ಹರಿದಾಡುತ್ತಿದೆ. ವೈರಲ್ ಆದ ಪೋಸ್ಟ್‌ನಲ್ಲಿ "ತಂದೆ ಇಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ 24,000 ರೂ.ಗಳ ಸ್ಕಾಲರ್ ಶಿಪ್ ಸೌಲಭ್ಯವನ್ನು ಪಡೆಯಬಹುದು, ಆದುದರಿಂದ ತಮಗೆ ಗೊತ್ತಿರುವ ಯಾರಾದರೂ ತಂದೆ ಇಲ್ಲದ ಮಗು ಇದ್ದಲ್ಲಿ ಅವರ ಪೋಷಕರಿಗೆ ಕೂಡಲೇ ಅರ್ಜಿ ಸಲ್ಲಿಸಲು ತಿಳಿಸಿ. ಇದು ಆನ್ಲೈನ್ ಮೂಲಕ ಅಂದರೆ ಯಾವುದೇ ಸೈಬರ್ ಮೂಲಕ ಸಲ್ಲಿಕೆ ಮಾಡಲಾಗುವುದಿಲ್ಲ. ಮಗುವಿಗೆ 18 ವರ್ಷಕ್ಕಿಂತ ಕಡಿಮೆ ವಯಸ್ಸು ಇರಬೇಕು. ಅರ್ಜಿ ಫಾರಂನ್ನು ಖುದ್ದಾಗಿ ಡಿಸಿ ಕಛೇರಿಯಿಂದ ತಂದು ಬೇಕಾಗುವ ದಾಖಲೆಗಳನ್ನು ಇಟ್ಟು ಶಾಲೆ ಅಥವಾ ಕಾಲೇಜು ಮುಖ್ಯೋಪಾಧ್ಯಾಯ/ ಪ್ರಾಂಶುಪಾಲರ ಸಹಿ ಮತ್ತು ಸೀಲ್ ಮಾಡಿದ ಮೇಲೆ ಪುನಃ ಡಿಸಿ ಆಫೀಸಿಗೆ ಸಲ್ಲಿಸಬೇಕು. ನಂತರ ಅವರ ಸಿಬ್ಬಂದಿಗಳು ಮನೆ ಭೇಟಿ ನೀಡಿ ಪರಿಶೀಲನೆ ಮಾಡಿದ ಮೇಲೆ ಯೋಜನೆ ಪ್ರಾರಂಭವಾಗುತ್ತದೆ" ಎಂಬ ಶೀರ್ಷಿಕೆಯೊಂದಿಗೆ ವಾಟ್ಸ್‌ಪ್‌ನಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ.
ಈ ರೀತಿಯ ಸಂದೇಶಗಳು ವಾಟ್ಸಾಪ್‌ನಲ್ಲಿ ವಿವಿಧ ಜಿಲ್ಲೆಗಳ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಯ ಹೆಸರಿನಲ್ಲಿ ಗ್ರೂಪ್‌ಗಳಲ್ಲಿ ಹರಿದಾಡುತ್ತಿದೆ.
ಸೆಪ್ಟಂಬರ್ 5, 2024ರಂದು ಯಾಸ್ಮೀನ್ ಮೂಡಬಿದರಿ ಎಂಬ ಯೂಟ್ಯೂಬ್ ಚಾನೆಲ್‌ಲ್ಲೂ ಇಂತಹದ್ದೊಂದು ಸುದ್ದಿಯನ್ನು ಹಂಚಿಕೊಳ್ಳಲಾಗಿದೆ. ವಾಟ್ಸ್‌ಪ್ ಸಂದೇಶದಲ್ಲಿರುವ ರೀತಿಯೇ ಶೀರ್ಷಿಕೆಯನ್ನೀಡಿ ಜೊತೆಗೆ ವಿಳಾಸ ಮತ್ತು ಸಂಪರ್ಕಿಸಲು ದೂರವಾಣಿ ಸಂಖ್ಯೆಯ ಜೊತೆಗೆ ಇಮೇಲ್ ಐಡಿಯನ್ನು ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕಛೇರಿಯನ್ನು ಕಚೇರಿ ಕೆಲಸದ ಸಮಯದ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ. ದೂರವಾಣಿ : 0824-2440004 +918495078320 dcpu.mnglr@gmail.com ಎಂದು ವಿಡಿಯೋಗೆ ಕ್ಯಾಪ್ಷನ್‌ನ್ನೀಡಿ ಹಂಚಿಕೊಳ್ಳಲಾಗಿದೆ.
ಕನ್ನಡ ವಿದ್ಯಾ ಎಂಬ ವೆಬ್‌ಸೈಟ್‌ನಲ್ಲಿ "ತಂದೆ ಅಥವಾ ತಾಯಿ ಇಲ್ಲದ ಮಕ್ಕಳಿಗೆ 24,000 ವಿದ್ಯಾರ್ಥಿ ವೇತನ.?" ಎಂಬ ಶೀರ್ಷಿಕೆಯೊಂದಿಗೆ ವರದಿಯನ್ನು ಮಾಡಲಾಗಿದೆ. ವರದಿಯಲ್ಲಿ "ಕರ್ನಾಟಕ ರಾಜ್ಯ ಸರ್ಕಾರವು ತಂದೆ ಅಥವಾ ತಾಯಿ ಇಲ್ಲದ ಮಕ್ಕಳಿಗೆ ವಿದ್ಯಾರ್ಥಿ ವೇತನ ಸೌಲಭ್ಯವನ್ನು ನೀಡುತ್ತಿದೆ, ಸಾಮಾನ್ಯವಾಗಿ ತಂದೆ ಅಥವಾ ತಾಯಿ ಇಲ್ಲದ ಮಕ್ಕಳು ಮನೆಯ ಎಲ್ಲಾ ಭಾರವನ್ನು ಹೊತ್ತಿರುತ್ತಾರೆ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಮುಂದಿನ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲು ಈ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದು, ಈ ವಿದ್ಯಾರ್ಥಿ ವೇತನಕ್ಕೆ ಯೋಜನೆ ನಿಯಮದಂತೆ ತಂದೆ ಅಥವಾ ತಾಯಿ ಇಲ್ಲದ ವಿದ್ಯಾರ್ಥಿಯು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಿ 24,000 ಸ್ಕಾಲರ್‌ಶಿಪ್ ಸೌಲಭ್ಯವನ್ನು ಪಡೆಯಬಹುದಾಗಿದೆ. ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್‌ನ್ನು ಪಡೆಯಲು ನೀಡಬೇಕಾದ ದಾಖಲೆಗಳು. ಅರ್ಜಿ ಸಲ್ಲಿಸಲು ಪಾಲಿಸ ಬೇಕಾದ ವಿಧಾನ ಮತ್ತು ಮುಖ್ಯ ನಿಯಮಗಳು. ಹೆಚ್ಚಿನ ಮಾಹಿತಿಗಾಗಿ 6364335848 ನಂಬರಿಗೆ ಕರೆ ಮಾಡಿ ಮಾಹಿತಿಯನ್ನು ಪಡೆಯಿರಿ ಎಂದು ಬರೆದು ಪೋಸ್ಟ್ ಮಾಡಿರುವುದನ್ನು ನಾವು ಕಂಡುಕೊಂಡೆವು.
ಫ್ಯಾಕ್ಟ್‌ಚೆಕ್
ವೈರಲ್ ಸುದ್ದಿಯಲ್ಲಿ ಪೂರ್ತಿ ಸತ್ಯಾಂಶವಿಲ್ಲ. ತಂದೆಯಿಲ್ಲದ ಮಕ್ಕಳಿಗೆ ಮಾತ್ರ ಈ ಯೋಜನೆಯ ಫಲಾನುಭವಿಗಳಲ್ಲ. ಹಲವು ಅರ್ಹರು ಯೋಜನೆಯ ಲಾಭ ಪಡೆಯಬಹುದು. ವೈರಲ್ ಸುದ್ದಿ ಹೇಳುವ ಹಾಗೆ ವಾರ್ಷಿಕವಾಗಿ 24ಸಾವಿರ ಅಲ್ಲ, 48 ಸಾವಿರ ರೂ. ಧನ ಸಹಾಯ ಸಿಗುತ್ತದೆ.
ನಾವು ವೈರಲ್ ಆದ ವಿಡಿಯೋವಿನ ಶೀರ್ಷಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಛೇರಿಯನ್ನು ಕಚೇರಿ ಕೆಲಸದ ಸಮಯದ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಬರೆದಿರುವುದನ್ನು ನಾವು ಕಂಡುಕೊಂಡೆವು. ಹೀಗಾಗಿ ನಾವು ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳ ರಕ್ಷಣಾಧಿಕಾರಿಗಳಾದ ಶ್ರೀಮತಿ ಗಟ್ರೂಡ್ ವೇಗಸ್ ಅವರನ್ನು ಸಂಪರ್ಕಿಸಿ ಸ್ಪಷ್ಟೀಕರಣವನ್ನು ಪಡೆದೆವು.
ಗಟ್ರೂಡ್ ವೇಗಸ್ ಅವರು ನೀಡಿರುವ ಮಾಹಿತಿಯ ಪ್ರಕಾರ, "ಕೇಂದ್ರ ಸರ್ಕಾರ ಶೇ.60 ಅನುದಾನ ಮತ್ತು ರಾಜ್ಯ ಸರ್ಕಾರದ ಶೇ. 40 ಅನುದಾನೊಂದಿಗೆ ಪ್ರಾಯೋಜಕತ್ವ ಯೋಜನೆಯೊಂದು ಜಾರಿಯಲ್ಲಿದೆ. ಪ್ರಾಯೋಜಕತ್ವ ಕಾರ್ಯಕ್ರಮ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ರಾಜ್ಯದಾದ್ಯಂತ 18 ವರ್ಷದೊಳಗಿನ ಮಕ್ಕಳು ದುಡಿಮೆಗೆ ಹೋಗುವುದನ್ನು ತಪ್ಪಿಸಿ ಶಿಕ್ಷಣವನ್ನು ಮುಂದುವರೆಸುವುದನ್ನು ಉತ್ತೇಜಿಸಲು ಅನುಷ್ಠಾನಗೊಂಡ ಕಾರ್ಯಕ್ರಮವಿದು. ಈ ಯೋಜನೆಯಡಿ ಅನಾಥ ಮಕ್ಕಳು, ಪೋಷಕರು ಜೈಲಿನಲ್ಲಿರುವ ಮಕ್ಕಳು, ಲೈಂಗಿಕ ಕಾರ್ಯಕರ್ತೆಯರು, ದೇವದಾಸಿ ಪದ್ಧತಿಯಲ್ಲಿರುವ ಮಕ್ಕಳು, ಒಬ್ಬ ಪೋಷಕರಿರುವ ಮಕ್ಕಳು , ಲೈಂಗಿಕ ದೌರ್ಜನ್ಯಕ್ಕೊಳಗಾದ ಮಕ್ಕಳು, ಭಿಕ್ಷುಕರ ಮಕ್ಕಳು ಮತ್ತು ರೈತರ ಮಕ್ಕಳು, ಲೈಂಗಿಕ ದೌರ್ಜನ್ಯ, ಆತ್ಮಹತ್ಯೆ ಮಾಡಿಕೊಂಡವರು ಮತ್ತು ಶಿರೂರು ದುರಂತದಂತಹ ನೈಸರ್ಗಿಕ ವಿಕೋಪಗಳಿಂದ ಸಂತ್ರಸ್ತರಾದ ಜನರ ಮಕ್ಕಳಿಗೆ, ಬಾಲಕಾರ್ಮಿಕರು, ಬಾಲ್ಯವಿವಾಹ ಸಂತ್ರಸ್ಥ ಮಕ್ಕಳು, ಕಳ್ಳಸಾಗಣಿಕೆಗೆ ಒಳಗಾದ ಮಕ್ಕಳು ಕಾಣೆಯಾದ ಅಥವಾ ಓಡಿಹೋದ ಮಕ್ಕಳು ಬಾಲ ಬಿಕ್ಷುಕರು, ಬೀದಿ ಬದಿ ಮಕ್ಕಳು ದೈಹಿಕ ಅಂಗವಿಕಲತೆವುಳ್ಳ ಪುನರ್ವಸತಿ ಅಗತ್ಯವಿರುವ ಶೋಷಿತ ಮಕ್ಕಳು ಈ ಯೋಜನೆಯಡಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಬಹುದು.
ಅಷ್ಟೇ ಅಲ್ಲ, ವರ್ಷಕ್ಕೆ 24ಸಾವಿರ ರೂ ಸ್ಕಾಲರ್‌ಶಿಪ್ ಸಿಗುತ್ತದೆ ಎಂದು ವೈರಲ್ ಆದ ವಿಡಿಯೋ ಮತ್ತು ವಾಟ್ಸಪ್ ಸಂದೇಶದಲ್ಲಿ ಹೇಳಲಾಗಿದೆ, ಆದರೆ ಈ ಮಾಹಿತಿ ತಪ್ಪು. ತಿಂಗಳಿಗೆ ನಾಲ್ಕು ಸಾವಿರ ಎಂದರೆ ವರ್ಷಕ್ಕೆ ನಲವತ್ತೆಂಟು ಸಾವಿರ ರೂಪಾಯಿ ಸ್ಕಾಲರ್‌ಶಿಪ್ ದೊರೆಯುತ್ತದೆ. ಈ ಯೋಜನೆಯನ್ನು ಪಡೆಯಲು ಹದಿನೆಂಟು ವರ್ಷದ ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರೂ ಅರ್ಹರು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳ ರಕ್ಷಣಾಧಿಕಾರಿಗಳಾದ ಶ್ರೀಮತಿ ಗಟ್ರೂಡ್ ವೇಗಸ್ ಅವರು ಹೇಳಿದ್ದಾರೆ.
ಈ ಅರ್ಜಿಗಳನ್ನು ನೇರವಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಗೆ ಅಥವಾ ತಾಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ವ್ಯವಸ್ಥೆಯಿಲ್ಲ, ಕೇವಲ ಆಫ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಈ ಯೋಜನೆಯನ್ನು ಪಡೆಯಲು ಕೆಲವು ದಾಖಲಾತಿಗಳನ್ನು ಸಲ್ಲಿಸಬೇಕು.
⦁ ಜನನ ಪ್ರಮಾಣ ಪತ್ರ
⦁ ವಿಚ್ಛೇದಿತರಾಗಿದ್ದರೆ ನ್ಯಾಯಾಲಯದ ಆದೇಶ
⦁ ಕುಟುಂಬದಿಂದ ಪರಿತೃಗಳಾಗಿದ್ದರೆ ಪರಿತ್ಯಕ್ತ ಪ್ರಮಾಣ ಪತ್ರ
⦁ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದರೆ / ದೈಹಿಕ ಅಸಮರ್ಥರಾಗಿದ್ದರೆ ವೈದ್ಯಕೀಯ ಪ್ರಮಾಣ ಪತ್ರ
⦁ ನೈಸರ್ಗಿಕ ವಿಕೋಪಕ್ಕೆ ಒಳಾಗಾಗಿದ್ದರೆ ಸಕ್ಷಮ ಪ್ರಾಧಿಕಾರದಿಂದ ದೃಢೀಕರಣ ಪ್ರಮಾಣ ಪತ್ರ
⦁ ಆದಾಯ ಹಾಗೂ ಜಾತಿ ಪ್ರಮಾಣ ಪತ್ರ ಸದರಿ ಫಲಾನುಭವಿಯ ಆದಾಯವು ಗ್ರಾಮೀಣ ಪ್ರದೇಶದಲ್ಲಿದ್ದರೆ 72,000 ಹಾಗೂ ನಗರ ಪ್ರದೇಶದವರಾಗಿದ್ದರೆ ರೂ. 96,000/-ಕ್ಕೆ ನಿಗದಿಪಡಿಸಲಾಗಿದೆ
⦁ ಶಾಲಾ ವ್ಯಾಸಂಗ ಪ್ರಮಾಣ ಪತ್ರ
⦁ ಮರಣ ಪ್ರಮಾಣ ಪತ್ರ
⦁ ಮಗುವಿನ ಭಾವಚಿತ್ರ
⦁ ಮಗು ಮತ್ತು ಪೋಷಕರ ಆಧಾರ್ ಕಾರ್ಡ್ ಪ್ರತಿ
⦁ ಮಗುವಿನ ಬ್ಯಾಂಕ್ ಖಾತೆ ಪ್ರತಿಯನ್ನು ಸಲ್ಲಿಸಬೇಕು
ಅರ್ಜಿ ಸ್ವೀಕರಿಸಿದ ನಂತರ ಸಂಬಂಧಿಸಿದ ಇಲಾಖೆಯಿಂದ ಅಧಿಕಾರಿಗಳು ಫಲಾನುಭವಿಗಳನ್ನು ಗುರುತಿಸಿ, ಗೃಹ ತನಿಖೆ ನಡೆಸಿ ವರದಿಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಸಮಿತಿಯಲ್ಲಿ ತ್ರೈಮಾಸಿಕಗೊಮ್ಮೆ ಅನುಮೋದನೆ ಪಡೆದು ಆರ್ಥಿಕ ಸಹಾಯಧನ ಡಿಬಿಟಿ ಮುಖಾಂತರ ಕಲ್ಪಿಸಲಾಗುತ್ತದೆ. ಹಾಗೆ ಈಗಾಗಲೇ ಈ ಯೋಜನೆಯಡಿ ಸೌಲಭ್ಯವನ್ನು ಪಡೆಯುತ್ತಿದ್ದರೆ ಪುನಃ ಅವರನ್ನು ಅರ್ಹರಾಗಿ ಪರಿಗಣಿಸುವುದಿಲ್ಲ.
ಆಗಸ್ಟ್ 8,2024ರಂದು, ನಮ್ಮ ಗೌರಿಬಿದನೂರು ಎಂಬ ಫೇಸ್‌ಬುಕ್ ಖಾತೆಯಲ್ಲಿ ತಂದೆ ಇಲ್ಲದ ಅಥವಾ ತಂದೆ , ತಾಯಿ ಇಲ್ಲದ ಮಕ್ಕಳಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಸಿಗುವ ಆರ್ಥಿಕ ಸಹಾಯಧನ ಎಂಬ ಶೀರ್ಷಿಕೆಯಡಿ ಫೋಟೋವೊಂದನ್ನು ಹಂಚಿಕೊಳ್ಳಲಾಗಿದೆ
ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ತಂದೆಯಿಲ್ಲದ ಮಕ್ಕಳಿಗೆ ಮಾತ್ರ ಈ ಯೋಜನೆಯ ಫಲಾನುಭವಿಗಳಲ್ಲ. ಹಲವು ಅರ್ಹರು ಯೋಜನೆಯ ಲಾಭ ಪಡೆಯಬಹುದು. ವೈರಲ್ ಸುದ್ದಿ ಹೇಳುವ ಹಾಗೆ ವಾರ್ಷಿಕವಾಗಿ 24ಸಾವಿರ ಅಲ್ಲ, 48 ಸಾವಿರ ರೂ. ಧನ ಸಹಾಯ ಸಿಗುತ್ತದೆ.