ಫ್ಯಾಕ್ಟ್‌ಚೆಕ್: ವಿಮಾನದಲ್ಲಿ ಪ್ರಯಾಣಿಕರ ಜಗಳದ ಎರಡು ವರ್ಷದ ಹಿಂದಿನ ವಿಡಿಯೋವನ್ನು ಕೋಮುಕೋನದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ
ವಿಮಾನದಲ್ಲಿ ಪ್ರಯಾಣಿಕರ ಜಗಳದ ಎರಡು ವರ್ಷದ ಹಿಂದಿನ ವಿಡಿಯೋವನ್ನು ಕೋಮುಕೋನದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ;

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವಿಮಾನದಲ್ಲಿ ಕೆಲವು ಪ್ರಯಾಣಿಕರು ಜಗಳವಾಡುತ್ತಿರುವ ದೃಶ್ಯಗಳು ಕಂಡುಬಂದಿದೆ. ವೈರಲ್ ಆದ 44 ಸೆಕೆಂಡ್‌ಗಳನ್ನು ಒಳಗೊಂಡ ಈ ವಿಡಿಯೋದಲ್ಲಿ, ಪ್ರಯಾಣಿಕರು ಹಿಂದಿ ಭಾಷೆಯಲ್ಲಿ ಜಗಳವಾಡುತ್ತಿರುವುದನ್ನು ನಾವಿಲ್ಲಿ ನೋಡಬಹುದು. ಜಗಳದ ಪರಿಸ್ಥಿತಿಯನ್ನು ಶಾಂತಗೊಳಿಸಲು ವಿಮಾನದ ಕ್ಯಾಬಿನ್ ಸಿಬ್ಬಂದಿ ಮಧ್ಯ ಪ್ರವೇಶಿಸಿರುವುದನ್ನು ಸಹ ನಾವೀ ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋವನ್ನು ವಿಮಾನದೊಳಗೆ ಐದು ಮುಸ್ಲಿಂ ಪುರುಷರ ಗುಂಪೊಂದು ಹಿಂದೂ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಸಾಮಾಜಿಕ ಜಾಲತಾಣದ ಬಳಕೆದಾರರು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.
ಮಾರ್ಚ್ 26, 2025ರಂದು ಫೇಸ್‌ಬುಕ್ ಖಾತೆದಾರರೊಬ್ಬರು, ವಿಮಾನದಲ್ಲಿ ಜಗಳವಾಡುತ್ತಿರುವ ಈ ವಿಡಿಯೋವನ್ನು ಹಂಚಿಕೊಂಡು ʼಈ ವಿಡಿಯೋ ಬಹಳ ಮುಖ್ಯ. ಕೇವಲ ಐದು ಜನ ಮುಸ್ಲಿಮರು ಒಬ್ಬ ಹಿಂದೂ ಮೇಲೆ ದಾಳಿ ಮಾಡುತ್ತಿದ್ದರೆ ಆ ವಿಮಾನದ ತುಂಬಾ ಬರಿ ಹಿಂದುಗಳೆ ಕೂತಿದ್ದರು ತಮಾಷೆ ಎಂದು ನೋಡುತ್ತಿದ್ದರು. ಇದೇ ವಿಚಾರ ಉಲ್ಟಾಪಲ್ಟ ಆಗಿದ್ದರೆ ಇಡೀ ವಿಮಾನವೇ ಸ್ಪೋಟವಾಗುತ್ತಿತ್ತೇನೋ. ನೀವು ಸಂಬಂಧ ಹೊಂದಿರುವ ಯಾವುದೇ ದೊಡ್ಡ ಗುಂಪಿಗೆ ಅದನ್ನು ಕಳುಹಿಸಿ ಮತ್ತು ಅದನ್ನು ಕುಟುಂಬದ ಮಕ್ಕಳಿಗೆ ತಿಳಿಸಿ. ಈ ವೀಡಿಯೊವನ್ನು ನೋಡದೆ ಎಂದಿಗೂ ಅಳಿಸಬೇಡಿ, ಇಲ್ಲದಿದ್ದರೆ ನೀವು ಒಳ್ಳೆಯ ಕೆಲಸದಿಂದ ವಂಚಿತರಾಗುತ್ತೀರಿ. ಇದನ್ನು ನಾವು ಮತ್ತು ನಮ್ಮ ಮುಂದಿನ ಪೀಳಿಗೆಗೆ ನೋಡಬೇಕು, ಅವರ ಮಾತುಗಳನ್ನು ನಾವು ಕಾರ್ಯಗತಗೊಳಿಸಬೇಕು ಮತ್ತು ಕನಿಷ್ಠ 5-10 ಗುಂಪುಗಳಲ್ಲಿ ಹಂಚಿಕೊಳ್ಳಬೇಕು. ಪ್ರತಿಯೊಂದು ಕೆಲಸವನ್ನು ಇತರರಿಗೆ ಬಿಟ್ಟುಕೊಡಬೇಡಿ ಮತ್ತು ಕೆಲವು ಕಾರ್ಯಗಳನ್ನು ನೀವೇ ಮಾಡಬೇಕು. ಈಗ ನಾವು ಕೆಲಸಕ್ಕೆ ಇಳಿಯೋಣ, ಹಂಚಿಕೊಳ್ಳಿ ಮತ್ತು ಕ್ರಮ ತೆಗೆದುಕೊಳ್ಳೋಣ. ನಮಗೆ ಹಿಂದೂ ರಾಷ್ಟ್ರ ಬೇಕೋ ಬೇಡವೋ? ಇದನ್ನು ಅವನಿಗಾಗಿ ಮಾಡಬೇಕು, ಸರಿ? ಪ್ರತಿಯೊಂದು ಕಾರಣಕ್ಕೂ ಮತ್ತು ವಿಚಾರಕ್ಕೂ ಸಹಾಯ ಮಾಡಲು ಮೋದಿ ಯೋಗಿ ಅಮಿತ್ ಶಾ ಬರುವುದಿಲ್ಲ. ದೇವರು ಕೊಟ್ಟ ಗಂಡಸ್ತನವನ್ನು ನೀವೇ ಸಮಯ ಬಂದಾಗ ಬಳಸಿಕೊಳ್ಳಿʼ ಎಂಬ ಶೀರ್ಷಿಕೆಯನ್ನೀಡಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ಸುದ್ದಿಯ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಮಾಧ್ಯಮದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ, ವೈರಲ್ ಆದ ಈ ವಿಡಿಯೋ ಎರಡು ವರ್ಷದ ಹಳೆಯದ್ದು. 2022ರಲ್ಲಿ ವೈರಲ್ ಆದ ಘಟನೆ ಬ್ಯಾಂಕಾಕ್- ಕೊಲ್ಕತ್ತಾ ವಿಮಾನದಲ್ಲಿ ಪ್ರಯಾಣಿಕರ ನಡುವೆ ನಡೆದ ಜಗಳದ ವಿಡಿಯೋವನ್ನು, ಐದು ಜನ ಮುಸ್ಲೀಮರು ಒಬ್ಬ ಹಿಂದೂವನ್ನು ಥಳಿಸಿದ್ದಾರೆ ಎಂಬ ಶಿರ್ಷಿಕೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ವಾಸ್ತವವಾಗಿ ಇದರಲ್ಲಿ ಯಾವುದೇ ಕೋಮಿಕೋನವಿಲ್ಲ.
ವೈರಲ್ ಆದ ಸುದ್ದಿಯಲ್ಲಿ ಸತ್ಯಾಂವನ್ನು ತಿಳಿಯಲು ನಾವು ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ʼಎಕನಾಮಿಕ್ಸ್ ಟೈಮ್ಸ್ʼ ವೆಬ್‌ಸೈಟ್‌ನಲ್ಲಿ ʼBangkok-Kolkata Flight Fight: Video of mid-air brawl goes viralʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿದ್ದಾರೆ. ವರದಿಯಲ್ಲಿ ʼಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊವೊಂದರಲ್ಲಿ ಬ್ಯಾಂಕಾಕ್‌ನಿಂದ ಕೋಲ್ಕತ್ತಾಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ದೈಹಿಕವಾಗಿ ಹೊಡೆದಾಡುತ್ತಿರುವುದನ್ನು ವಿಡಿಯೋ ಮಾಡಲಾಗಿದೆ. ಈ ದೃಶ್ಯಗಳಲ್ಲಿ, ಕಾಣುವ ವ್ಯಕ್ತಿಗಳು ಒಬ್ಬರಿಗೊಬ್ಬರು ಪದೇ ಪದೇ ಹೊಡೆದಾಡುವುದನ್ನು ನೋಡಬಹುದು. ವಿಮಾನ ಸಿಬ್ಬಂದಿಯ ಸುರಕ್ಷತಾ ಎಚ್ಚರಿಕೆಗಳನ್ನು ಧಿಕ್ಕರಿಸುವ ಮೂಲಕ ಪ್ರಯಾಣಿಕರಲ್ಲಿ ಒಬ್ಬರು ಜಗಳ ಆರಂಭಿಸಿದರು. ವಿಮಾನ ಹಾರಾಟಕ್ಕೆ ಮುನ್ನ ಪ್ರಯಾಣಿಕರು ತಮ್ಮ ಸೀಟ್‌ಬ್ಯಾಕ್‌ಗಳನ್ನು ಹಾಕಿಕೊಳ್ಳುವಂತೆ ಕ್ಯಾಬಿನ್ ಸಿಬ್ಬಂದಿ ಸೂಚಿಸಿದರು. ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಇದು ಸಾಮಾನ್ಯ ಸುರಕ್ಷತಾ ವಿಧಾನವಾಗಿದೆ. ಥಾಯ್ ಸ್ಮೈಲ್ ಏರ್‌ವೇಸ್ ವಿಮಾನದಲ್ಲಿ, ಒಬ್ಬ ಪ್ರಯಾಣಿಕನು ತನಗೆ ಬೆನ್ನು ನೋವಿದೆ ಹೀಗಾಗಿ ಸೀಟ್ ಬೆಲ್ಟ್ ಹಾಕಲಾಗುವುದಿಲ್ಲ ಎಂದನು. ಕ್ಯಾಬಿನ್ ಸಿಬ್ಬಂದಿಯ ಸೂಚನೆಗಳನ್ನು ಆ ವ್ಯಕ್ತಿ ಪಾಲಿಸದಿದ್ದಾಗ ಮತ್ತೊಬ್ಬ ಪ್ರಯಾಣಿಕನು ಮಧ್ಯಪ್ರವೇಶಿಸಿ ವಾಗ್ವಾದಕ್ಕಿಳಿದನು. ನಂತರ ಇತರ ಪ್ರಯಾಣಿಕರು ಮತ್ತು ಕ್ಯಾಬಿನ್ ಸಿಬ್ಬಂದಿ ಪರಿಸ್ಥಿತಿಯನ್ನು ಶಾಂತಗೊಳಿಸಿದರುʼ ಎಂದು ವರದಿಯಾಗಿರುವುದನ್ನು ನೋಡಬಹುದು.
ಡಿಸಂಬರ್ 29, 2022ರಂದು ಎಕ್ಸ್ ಖಾತೆಯಲ್ಲಿ ʼ#WATCH: Mid-Air fight on #THAISmileAirways Bangkok-Kolkata flight goes viral; netizens reactʼ ಎಂಬ ಶೀರ್ಷಿಎಕಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರ ಪ್ರಕಾರ ಬ್ಯಾಂಕಾಕ್‌ನಿಂದ ಕೋಲ್ಕತಾಕು ಹೋಗುವ ಥಾಯ್ ಸ್ಮೈಲ್ ಏರ್‌ವೇಸ್ ವಿಮಾನದಲ್ಲಿ ಈ ಗದ್ದಲ ನಡೆಯಿತು.
ಡಿಸಂಬರ್ 28, 2022ರಂದು ಎಕ್ಸ್ ಖಾತೆದಾರರೊಬ್ಬರು ʼ#AirRage. Video of a fight between pax that broke out on @ThaiSmileAirway flight Reportedly on a Bangkok-India flight of Dec 27ʼ ಎಂಬ ಶಿರ್ಷಿಕೆಯನ್ನೀಡಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಡಿಸಂಬರ್ 29, 2022ರಂದು ಥಾಯ್ ಸ್ಮೈಲ್ ಇಂಡಿಯಾ ತನ್ನ ಎಕ್ಸ್ ಖಾತೆಯಲ್ಲಿ ʼTHAI Smile Airways feels sorry for this. We reaffirm that the incident has been taken care of as we followed the flight safety procedures in accordance with international standards. Our flight crews have already provided support to the persons affected by an incident.ʼ ಎಂಬ ಕ್ಯಾಪ್ಷನ್‌ನ್ನೀಡಿ ಪೋಸ್ಟ್ ಮಾಡಿದ್ದಾರೆ. ಇಂಗ್ಲೀಷ್‌ನಲ್ಲಿರುವ ಅಕ್ಷರವನ್ನು ಕನ್ನಡಕ್ಕೆ ಅನುವಾದಿಸಿದಾಗ ʼಥಾಯ್ ಸ್ಮೈಲ್ ಏರ್ವೇಸ್ ಇದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತದೆ. ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ನಾವು ವಿಮಾನ ಸುರಕ್ಷತಾ ಕಾರ್ಯವಿಧಾನಗಳನ್ನು ಅನುಸರಿಸಿದ್ದರಿಂದ ಘಟನೆಯನ್ನು ನಿಭಾಯಿಸಲಾಗಿದೆ ಎಂದು ನಾವು ಪುನರುಚ್ಚರಿಸುತ್ತೇವೆ. ನಮ್ಮ ವಿಮಾನ ಸಿಬ್ಬಂದಿ ಈಗಾಗಲೇ ಘಟನೆಯಿಂದ ಪ್ರಭಾವಿತರಾದ ವ್ಯಕ್ತಿಗಳಿಗೆ ಬೆಂಬಲ ನೀಡಿದ್ದಾರೆʼ ಎಂದು ಬರೆದು ಪೊಸ್ಟ್ ಮಾಡಿದ್ದಾರೆ.
ಜನವರಿ 14, 2023ರಂದು ʼಟೈಮ್ಸ್ ಆಫ್ ಇಂಡಿಯಾʼ ವೆಬ್‌ಸೈಟ್‌ನಲ್ಲಿ ʼThai flight brawl accused miss first Kolkata airport police summons deadlineʼ ಎಂಬ ಹೆಡ್‌ಲೈನ್‌ನೊಂದಿಗೆ ವರದಿ ಮಾಡಲಾಗಿದೆ. ವರದಿಯಲ್ಲಿ ʼಟೇಕಾಫ್ ವೇಳೆ ಕ್ಯಾಬಿನ್ ಸಿಬ್ಬಂದಿ ಅವರ ಸುರಕ್ಷತಾ ಮಾನದಂಡಗಳನ್ನು ಪಾಲಿಸದ ಪ್ರಯಾಣಿಕರೊಬ್ಬರು ತಮ್ಮ ಸೀಟನ್ನು ಮುಂಬದಿಗೆ ಬರುವಂತೆ ಮಾಡಿರಲಿಲ್ಲ. ತಾವು ಬೆನ್ನು ನೋವಿನಿಂದ ಬಳಲುತ್ತಿರುವುದಾಗಿ ಹೇಳಿದ್ದರು. ಇದು ಸಿಬ್ಬಂದಿಯೊಂದಿಗೆ ಮಾತಿಗೆ ಕಾರಣವಾಗಿದ್ದು, ಈ ವೇಳೆ ಇತರ ಪ್ರಯಾಣಿಕರು ಅವರ ಮೇಲೆ ದಾಳಿ ಮಾಡಿದ್ದಾರೆ. ವೀಡಿಯೊದಲ್ಲಿ ಹಿಂದಿನ ಸೀಟಿನ ಪ್ರಯಾಣಿಕರು ಮುಂದಿನ ಸೀಟಿನ ವ್ಯಕ್ತಿಯೊಂದಿಗೆ ವಾದಿಸಿ ಅವರಿಗೆ ಹೊಡೆಯುವುದು ಮತ್ತು ಅವರ ಕನ್ನಡಕ ತೆಗೆದು ಪದೇ ಪದೇ ಮುಖಕ್ಕೆ ಹೊಡೆಯುವುದು ಕಾಣಬಹುದುʼ ಎಂದು ವರದಿಯಾಗಿದೆ.
2022ರ ಡಿಸೆಂಬರ್ 26 ರಂದು ʼನೆಕ್ಸ್ಟ್ ಶಾರ್ಕ್ʼ ಎಂಬ ವೆಬ್‌ಸೈಟ್‌ನಲ್ಲಿ ಬ್ಯಾಂಕಾಕ್‌ನಿಂದ ಕೋಲ್ಕತ್ತಾಗೆ ಹೊರಟ ಥಾಯ್ ಸ್ಮೈಲ್ ಏರ್‌ವೇಸ್ ವಿಮಾನದಲ್ಲಿ ಈ ಘಟನೆ ಸಂಭವಿಸಿದೆ. 37C ಸೀಟಿನಲ್ಲಿ ಕುಳಿತಿದ್ದ ಅಮಿದ್ ಮೊಹಮ್ಮದ್ ಹುಸೇನ್ ಎಂಬಾತನಿಗೆ ಬೆನ್ನು ನೋವು ಕಾಣಿಸಿಕೊಂಡಿದ್ದರಿಂದ ತಮ್ಮ ಆಸನವನ್ನು ನೇರಗೊಳಿಸುವುದು ಮತ್ತು ಸೀಟ್‌ಬೆಲ್ಟ್ ಧರಿಸುವುದು ಮುಂತಾದ ಸುರಕ್ಷತಾ ಕ್ರಮಗಳನ್ನು ಪಾಲಿಸಲು ನಿರಾಕರಿಸಿದ್ದ. ಆಗ ವಿಮಾನದ ಸಿಬ್ಬಂದಿ ಎಷ್ಟೇ ಮನವಿ ಮಾಡಿಕೊಂಡರೂ ಮೊಹಮ್ಮದ್ ಹುಸೇನ್ ಸಹಕರಿಸಲಿಲ್ಲ. ಇದನ್ನು ವೀಕ್ಷಿಸುತ್ತಿದ್ದ ವಿಮಾನದ ಪ್ರಯಾಣಿಕರಲ್ಲಿ ಎಸ್.ಕೆ.ಅಜರುದ್ದೀನ್ ಎಂಬಾತ ಉದ್ರೇಕಗೊಂಡು ಹುಸೇನ್‌ನಿಗೆ ಕಪಾಳಮೋಕ್ಷ ಮಾಡುವ ಮೂಲಕ ಜಗಳಕ್ಕೆ ಮುಂದಾದ. ಇನ್ನೂ ಈ ವಾಗ್ವಾದದಲ್ಲಿ ಇತರ ಹಲವಾರು ಪ್ರಯಾಣಿಕರು ಸೇರಿಕೊಂಡಿದ್ದರು. ಏರ್‌ಲೈನ್ಸ್ ಸಿಬ್ಬಂದಿ ಮಧ್ಯಪ್ರವೇಶಿಸಿ ತಾರಕಕ್ಕೇರಿದ ಪರಿಸ್ಥಿತಿಯನ್ನು ಶಾಂತಗೊಳಿಸಲು ಎಷ್ಟೇ ಪ್ರಯತ್ನ ಪಟ್ಟರೂ ಯಾರೊಬ್ಬರೂ ಸಹಕರಿಸಲಿಲ್ಲ. ಜಗಳದಲ್ಲಿ ಪಾಲ್ಗೊಂಡ ಪ್ರಯಾಣಿಕರ ವಿರುದ್ಧ ದೂರು ದಾಖಲಿಸಲಾಯಿತು’’ಎಂದು ವರದಿ ಮಾಡಲಾಗಿದೆ.
ಡಿಸಂಬರ್ 29, 2022ರಂದು ʼಎನ್‌ಡಿಟಿವಿʼ ವೆಬ್‌ಸೈಟ್‌ನಲ್ಲಿ ವೈರಲ್ ಆದ ವಿಡಿಯೋವನ್ನು ಹಂಚಿಕೊಂಡು ʼVideo: Free-For-All Between Passengers On Flight To India From Bangkok |ʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು.
ಮತ್ತಷ್ಟು ವೆಬ್‌ಸೈಟ್‌ನಲ್ಲಿ ಹಂಚಿಕೊಂಡ ವರದಿಯನ್ನು ನೀವಿಲ್ಲಿ, ಇಲ್ಲಿ ನೋಡಬಹುದು.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ಈ ವಿಡಿಯೋ ಎರಡು ವರ್ಷದ ಹಳೆಯದ್ದು. 2022ರಲ್ಲಿ ವೈರಲ್ ಆದ ಘಟನೆ ಬ್ಯಾಂಕಾಕ್- ಕೊಲ್ಕತ್ತಾ ವಿಮಾನದಲ್ಲಿ ಪ್ರಯಾಣಿಕರ ನಡುವೆ ನಡೆದ ಜಗಳದ ವಿಡಿಯೋವನ್ನು, ಐದು ಜನ ಮುಸ್ಲೀಮರು ಒಬ್ಬ ಹಿಂದೂವನ್ನು ಥಳಿಸಿದ್ದಾರೆ ಎಂಬ ಶಿರ್ಷಿಕೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ವಾಸ್ತವವಾಗಿ ಇದರಲ್ಲಿ ಯಾವುದೇ ಕೋಮಿಕೋನವಿಲ್ಲ.