ಫ್ಯಾಕ್ಟ್‌ಚೆಕ್: ಬಲಾಢ್ಯ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಎಂಟನೇ ಸ್ಥಾನ ಎಂದು ಸುಳ್ಳು ಸುದ್ದಿ ಹಂಚಿಕೆ
ಬಲಾಢ್ಯ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಎಂಟನೇ ಸ್ಥಾನ ಎಂದು ಸುಳ್ಳು ಸುದ್ದಿ ಹಂಚಿಕೆ;

ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳು ಯಾವುವು? ರಾಜಕೀಯ ಪ್ರಭಾವ, ಆರ್ಥಿಕ ಸಂಪನ್ಮೂಲಗಳು ಮತ್ತು ಮಿಲಿಟರಿ ಶಕ್ತಿಯನ್ನು ಗಮನದಲ್ಲಿಟ್ಟುಕೊಂಡು ವಿಶ್ವದ ಟಾಪ್ 10 ಶಕ್ತಿಶಾಲಿ ರಾಷ್ಟ್ರಗಳನ್ನು ಪಟ್ಟಿಯನ್ನು ಯುಎಸ್ ನ್ಯೂಸ್ ಪಟ್ಟಿ ಮಾಡಿದೆ. ಈ ಪಟ್ಟಿಯನ್ನು ತಯಾರಿಸಲು ಯುಎಸ್ ನ್ಯೂಸ್ ಐದು ಅಂಶಗಳನ್ನು ಅನುಸರಿಸಿದ್ದು, ರಾಷ್ಟ್ರದ ನಾಯಕ, ಆರ್ಥಿಕ ಪ್ರಭಾವ, ರಾಜಕೀಯ ಪ್ರಭಾವ, ಶಕ್ತಿಶಾಲಿ ಅಂತಾರಾಷ್ಟ್ರೀಯ ಮೈತ್ರಿಗಳು ಮತ್ತು ಬಲವಾದ ಮಿಲಿಟರಿ ಶಕ್ತಿಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಜಾಗತಿಕ ಮಾರ್ಕೆಟಿಂಗ್ ಸಂವಹನ ಕಂಪನಿ ಡಬ್ಲ್ಯೂಪಿಪಿಯ ಬಿಎವಿ ಗ್ರೂಪ್ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಸ್ಕೂಲ್‌ನ ಪ್ರೊಫೆಸರ್ ಡೇವಿಡ್ ರೀಬ್‌ಸ್ಟೈನ್ ನೇತೃತ್ವದ ಸಂಶೋಧಕರು ಯುಎಸ್ ನ್ಯೂಸ್ ಮತ್ತು ವರ್ಲ್ಡ್ ರಿಪೋರ್ಟ್ ಸಂಯೋಗದೊಂದಿಗೆ ಪಟ್ಟಿ ತಯಾರಿಸಿದ್ದಾರೆ.
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಪತ್ರಿಕಾ ವರದಿಯೊಂದು ವೈರಲ್ ಆಗಿದೆ, ಇದಕ್ಕೆ “ಬಲಾಢ್ಯ ದೇಶಗಳ ಪಟ್ಟಿ, ಭಾರತಕ್ಕೆ ಎಂಟರ ನಂಟು” ಎಂದು ಶೀರ್ಷಿಕೆಯನ್ನು ನೀಡಲಾಗಿದೆ. ಈ ವರದಿಯಲ್ಲಿ ʼಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪ್ರೊಡೇವಿಡ್ ವಿಂಜಿಸೈನ್ ನೇತ್ರತ್ವದ ಸಂಶೋಧಕರ ತಂಡ ಜಗತ್ತಿನ ಬಲಾಡ್ಯ ದೇಶಗಳ ಸರ್ವೆ ಮಾಡಿ ಬ್ಯಾಂಕ್ ನೀಡಿದೆ. ಅದೊಂದು ಅಮೆರಿಕದ ಬ್ಯುಸಿನೆಸ್ ಮ್ಯಾಗಜಿನ್. ಇದರ ಪ್ರಕಾರ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ ಭಾರತ 8ನೇ ಸ್ಥಾನದಲ್ಲಿದೆ. ಆದರೆ ಚೀನಾ ಮಾತ್ರ ಎರಡನೇ ಸ್ಥಾನ ಅಲಂಕರಿಸುತ್ತದೆ. ಹಾಗೇನೇ ಈ ತರಹದ ನಿರ್ಣಯಕ್ಕೆ ಬರಲು ಆ ತಂಡ ವಿವಿಧ ದೇಶಗಳ ಜಿಡಿಪಿಯನ್ನೇ ಮೂಲಾಧಾರವಾಗಿ ತೆಗೆದುಕೊಂಡಿದೆ. ಕೆಳಗಿನ ಕೋಷ್ಟಕವು ಇದನ್ನು ಮನವರಿಕೆ ಮಾಡಿಕೊಡುತ್ತದೆ. ಅದರ ಜತೆಗೆ ನಾಯಕತ್ವ, ಆರ್ಥಿಕ ಪ್ರಭಾವ, ರಾಜಕೀಯ ಇಚ್ಚಾಶಕ್ತಿ, ಅಂತಾರಾಷ್ಟ್ರೀಯ ಮೈತ್ರಿ ಮತ್ತು ಮಿಲಿಟರಿ ಶಕ್ತಿಯನ್ನು ಪರಿಗಣಿಸಿ ಶ್ರೀಯಾಂಕ ನೀಡಿದೆ. ಈ ವರದಿಯಲ್ಲಿ ಬಲಾಢ್ಯ ದೇಶಗಳ ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ಭಾರತಕ್ಕೆ 8ನೇ ಸ್ಥಾನ ಸಿಕ್ಕಿದೆ ಎಂದು ಉಲ್ಲೇಖಿಸಲಾಗಿದೆ. ಹಲವರು ಈ ವರದಿಯನ್ನು ನಿಜವೆಂದು ನಂಬಿ ಪ್ರಧಾನಿ ಮೋದಿ ಸರ್ಕಾರವನ್ನು ಹೊಗಳಿ ವಿವಿಧ ಶೀರ್ಷಿಕೆಯೊಂದಿಗೆ ವರದಿಯನ್ನು ಹಂಚಿಕೊಳ್ಳುತ್ತಿದ್ದಾರೆ.
ವೈರಲ್ ಆದ ವರದಿಯ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.
ಏಪ್ರಿಲ್ 02, 2025ರಂದು ಎಕ್ಸ್ ಖಾತೆದಾರರೊಬ್ಬರು ʼಇಸ್ವಕುರು ಮೋದಿ ನಂಬರ್ 1. ಆದರೆ ಭಾರತ ನಂಬರ್ 8. #why!ʼ ಎಂಬ ಶೀರ್ಷಿಕೆಯೊಂದಿಗೆ ಪತ್ರಕಾ ವರದಿಯ ಕ್ಲಿಪ್‌ನ್ನು ಹಂಚಿಕೊಂಡಿದ್ದಾರೆ.
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಜಗತ್ತಿನ ಬಲಾಢ್ಯ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 8ನೇ ಸ್ಥಾನ ಎಂಬುವುದರಲ್ಲಿ ಸತ್ಯಾಂಶವಿಲ್ಲ. ವಾಸ್ತವವಾಗಿ ಪ್ರಸ್ತುತ ಭಾರತಕ್ಕೆ 12ನೇ ಸ್ಥಾನವಿದೆ.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ವೈರಲ್ ಆದ ಸುದ್ದಿಯ ನ್ಯೂಸ್ ಪೇಪರ್ ಕಟ್ಟಿಂಗ್‌ನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಯಾವುದೇ ವರದಿಯೂ ಕಂಡುಬಂದಿಲ್ಲ. ನಂತರ ವೈರಲ್ ಆದ ಸುದ್ದಿಗೆ ಸಂಬಂಧಿಸಿದ ಕೆಲವು ಪ್ರಮುಖ ಕೀವರ್ಡ್‌ಗಳನ್ನು ಬಳಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಝೀ ನ್ಯೂಸ್ ಕನ್ನಡ ವೆಬ್‌ಸೈಟ್‌ನಲ್ಲಿ ʼForbes 2025: ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಭಾರತಕ್ಕಿಲ್ಲ ಸ್ಥಾನ..!ʼ ಎಂಬ ಶೀರ್ಷಿಕೆಯೊಂದಿಗೆ ವರದಿಯಾಗಿರುವುದನ್ನು ನೋಡಬಹುದು. ಈ ವರದಿಯಲ್ಲಿ ʼಫೋರ್ಬ್ಸ್ ತನ್ನ 2025 ರ ವಿಶ್ವದ 10 ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಜಾಗತಿಕ ಶ್ರೇಯಾಂಕದಲ್ಲಿ ಯುನೈಟೆಡ್ ಸ್ಟೇಟ್ಸ್ ಮುಂಚೂಣಿಯಲ್ಲಿದೆ, ಚೀನಾ ಎರಡನೇ ಸ್ಥಾನದಲ್ಲಿದೆ ಮತ್ತು ಇಸ್ರೇಲ್ ಹತ್ತನೇ ಸ್ಥಾನದಲ್ಲಿದೆ. ನಾಯಕತ್ವ, ಆರ್ಥಿಕ ಪ್ರಭಾವ, ರಾಜಕೀಯ ಶಕ್ತಿ, ಉತ್ತಮ ಅಂತರರಾಷ್ಟ್ರೀಯ ಮೈತ್ರಿಗಳು ಮತ್ತು ಮಿಲಿಟರಿ ಶಕ್ತಿ ಸೇರಿದಂತೆ ಹಲವಾರು ನಿರ್ಣಾಯಕ ಅಂಶಗಳನ್ನು ಆಧರಿಸಿ ಈ ರ್ಯಾಂಕ್ ನೀಡಲಾಗಿದೆ. ಫೋರ್ಬ್ಸ್ ಪ್ರಕಾರ ಈ ರ್ಯಾಂಕಿನ ವಿಧಾನವನ್ನು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಶಾಲೆಯ ಪ್ರೊಫೆಸರ್ ಡೇವಿಡ್ ರೀಬ್‌ಸ್ಟೈನ್ ನೇತೃತ್ವದ ಬಿಎವಿ ಗ್ರೂಪ್ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. 2025 ರಲ್ಲಿ ವಿಶ್ವದ ಟಾಪ್ 10 ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳು, ಪಟ್ಟಿಯಲ್ಲಿ ಭಾರತದ ಸ್ಥಾನ ಮತ್ತು ಶ್ರೇಯಾಂಕದೊಂದಿಗೆ ಕೆಳಗೆ ನೀಡಲಾಗಿದೆ:
1) ಅಮೆರಿಕಾ 30.34 ಟ್ರಿಲಿಯನ್ ಡಾಲರ್ ಜಿಡಿಪಿ ಮತ್ತು 34.5 ಕೋಟಿ ಜನಸಂಖ್ಯೆಯೊಂದಿಗೆ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದೆ.
2) ಚೀನಾ ಎರಡನೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿದ್ದು, $19.53 ಟ್ರಿಲಿಯನ್ ಜಿಡಿಪಿ ಮತ್ತು 1.419 ಬಿಲಿಯನ್ ಜನಸಂಖ್ಯೆಯನ್ನು ಹೊಂದಿದೆ.
3) 2.2 ಟ್ರಿಲಿಯನ್ ಡಾಲರ್ ಜಿಡಿಪಿ ಮತ್ತು 84 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ರಷ್ಯಾ, ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
4) ಈ ವರ್ಷ ಪಟ್ಟಿಯಲ್ಲಿ ಯುನೈಟೆಡ್ ಕಿಂಗ್‌ಡಮ್ ನಾಲ್ಕನೇ ಸ್ಥಾನದಲ್ಲಿದೆ, $3.73 ಟ್ರಿಲಿಯನ್ ಜಿಡಿಪಿ ಮತ್ತು 69 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ.
5) ಜರ್ಮನಿ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಇದು $4.92 ಟ್ರಿಲಿಯನ್ ಆರ್ಥಿಕತೆಯನ್ನು ಹೊಂದಿದ್ದು, 8.54 ಕೋಟಿ ಜನಸಂಖ್ಯೆಯನ್ನು ಹೊಂದಿದೆ.
6) ಆರ್ಥಿಕ ಶಕ್ತಿ, ತಾಂತ್ರಿಕ ಪ್ರಗತಿ ಮತ್ತು ಮಿಲಿಟರಿ ಬಲದ ಸಂಯೋಜನೆಯಿಂದಾಗಿ, ದಕ್ಷಿಣ ಕೊರಿಯಾ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಇದರ ಜಿಡಿಪಿ $1.95 ಟ್ರಿಲಿಯನ್ ಮತ್ತು 5.17 ಕೋಟಿ ಜನಸಂಖ್ಯೆಯನ್ನು ಹೊಂದಿದೆ.
7) ಫ್ರಾನ್ಸ್ ವಿಶ್ವದ ಏಳನೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿದ್ದು, 3.28 ಟ್ರಿಲಿಯನ್ ಡಾಲರ್ ಜಿಡಿಪಿ ಮತ್ತು 6.65 ಕೋಟಿ ಜನಸಂಖ್ಯೆಯನ್ನು ಹೊಂದಿದೆ.
8) ಈ ಪಟ್ಟಿಯಲ್ಲಿ ಜಪಾನ್ ಕೂಡ ಸ್ಥಾನ ಪಡೆದಿದ್ದು, 4.39 ಟ್ರಿಲಿಯನ್ ಡಾಲರ್ ಜಿಡಿಪಿ ಮತ್ತು 12.37 ಮಿಲಿಯನ್ ಜನಸಂಖ್ಯೆಯೊಂದಿಗೆ, ಈ ವರ್ಷ ಎಂಟನೇ ಸ್ಥಾನದಲ್ಲಿದೆ.
9) ಸೌದಿ ಅರೇಬಿಯಾ ಒಂಬತ್ತನೇ ಸ್ಥಾನದಲ್ಲಿದ್ದು, 1.14 ಟ್ರಿಲಿಯನ್ ಡಾಲರ್ ಜಿಡಿಪಿ ಮತ್ತು 3.39 ಕೋಟಿ ಜನಸಂಖ್ಯೆ ಹೊಂದಿದೆ.
10) ಈ ವರ್ಷ ಇಸ್ರೇಲ್ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದೆ. ಇದರ ಜಿಡಿಪಿ $550.91 ಬಿಲಿಯನ್ ಮತ್ತು ಜನಸಂಖ್ಯೆ 93.8 ಲಕ್ಷ.
ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಭಾರತವು 12 ನೇ ಸ್ಥಾನದಲ್ಲಿದೆ, ಅದರ GDP $3.55 ಟ್ರಿಲಿಯನ್ ಮತ್ತು 1.43 ಬಿಲಿಯನ್ ಜನಸಂಖ್ಯೆ ಎಂದು ಅಂದಾಜಿಸಲಾಗಿದೆʼ ಎಂದು ವರದಿಯಾಗಿರುವುದನ್ನು ನೋಡಬಹುದು.
ಫೆಬ್ರವರಿ 13, 2025ರಂದು ʼಟೈಮ್ಸ್ ಆಫ್ ಇಂಡಿಯಾʼ ವೆಬ್‌ಸೈಟ್‌ನಲ್ಲಿ ʼ10 most powerful countries in the world; India’s rank is quite a surpriseʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನಾವು ಕಂಡುಕೊಂಡೆವು. ವರದಿಯಲ್ಲಿ ʼಆರ್ಥಿಕ ಶಕ್ತಿ, ಮಿಲಿಟರಿ ಬಲ ಅಥವಾ ಬುದ್ಧಿವಂತ ರಾಜತಾಂತ್ರಿಕತೆಯ ಮೂಲಕ - ರಾಷ್ಟ್ರಗಳು ತಮ್ಮ ಪ್ರಭಾವವನ್ನು ಬಲಪಡಿಸಲು ಹರಸಾಹಸ ಪಡುತ್ತಿವೆ. ಈ ರಾಷ್ಟ್ರಗಳು ಸಾಮಾನ್ಯವಾಗಿ ತಮ್ಮ ದೃಢವಾದ ಆರ್ಥಿಕತೆಗಳು, ಮುಂದುವರಿದ ತಾಂತ್ರಿಕ ಸಾಮರ್ಥ್ಯಗಳು, ಅಸಾಧಾರಣ ಮಿಲಿಟರಿ ಶಕ್ತಿ ಮತ್ತು ಕಾರ್ಯತಂತ್ರದ ಭೌಗೋಳಿಕ ರಾಜಕೀಯ ಸ್ಥಾನಗಳಿಂದ ನಿರೂಪಿಸಲ್ಪಡುತ್ತವೆ. ಅಂತರರಾಷ್ಟ್ರೀಯ ನೀತಿಗಳನ್ನು ರೂಪಿಸುವುದರಿಂದ ಹಿಡಿದು ನಾವೀನ್ಯತೆ ಮತ್ತು ವ್ಯಾಪಾರವನ್ನು ಚಾಲನೆ ಮಾಡುವವರೆಗೆ, ವಿಶ್ವದ ಅತ್ಯಂತ ಶಕ್ತಿಶಾಲಿ ದೇಶಗಳು ಜಾಗತಿಕ ವ್ಯವಹಾರಗಳ ದಿಕ್ಕನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ದೇಶ: ಭಾರತ, ಸ್ಥಾನ: 12, ಜಿಡಿಪಿ: $3.55 ಟ್ರಿಲಿಯನ್, ಜನಸಂಖ್ಯೆ: 1.43 ಬಿಲಿಯನ್. ಭಾರತವು 2025 ರ ವೇಳೆಗೆ ಜಾಗತಿಕ ಶಕ್ತಿಯಲ್ಲಿ 12 ನೇ ಸ್ಥಾನದಲ್ಲಿದೆ, ಅದರ ದೊಡ್ಡ ಜನಸಂಖ್ಯೆ ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗೆ ಧನ್ಯವಾದಗಳು. ಇದು ಇನ್ನೂ ಅಗ್ರ 10 ರಲ್ಲಿ ಸ್ಥಾನ ಪಡೆದಿಲ್ಲವಾದರೂ, ಭಾರತದ ಏರಿಕೆ ಸ್ಪಷ್ಟವಾಗಿದೆ. $3.55 ಟ್ರಿಲಿಯನ್ ಆರ್ಥಿಕತೆ ಮತ್ತು ಬೆಳೆಯುತ್ತಿರುವ, ತಾಂತ್ರಿಕವಾಗಿ ಮುಂದುವರಿದ ಮಿಲಿಟರಿಯೊಂದಿಗೆ, ಭಾರತದ ಪ್ರಭಾವ ಹೆಚ್ಚಾಗಲಿದೆ. ಭಾರತವು ಜಾಗತಿಕವಾಗಿ ತನ್ನ ರಾಜಕೀಯ ಉಪಸ್ಥಿತಿಯನ್ನು ಬಲಪಡಿಸಿದಂತೆ ಮತ್ತು ಬಲವಾದ ಅಂತರರಾಷ್ಟ್ರೀಯ ಮೈತ್ರಿಗಳನ್ನು ರೂಪಿಸಿದಂತೆ, ಭವಿಷ್ಯದ ಶಕ್ತಿ ಶ್ರೇಯಾಂಕಗಳಲ್ಲಿ ಏರಲು ಅದು ಉತ್ತಮ ಸ್ಥಾನದಲ್ಲಿದೆ. ಮುಂದಿನ ದಶಕದಲ್ಲಿ, ಜಾಗತಿಕ ರಾಜಕೀಯ, ವ್ಯಾಪಾರ ಮತ್ತು ಭದ್ರತೆಯನ್ನು ರೂಪಿಸುವಲ್ಲಿ ಭಾರತವು ಹೆಚ್ಚು ಮಹತ್ವದ ಪಾತ್ರವನ್ನು ವಹಿಸುವ ಸಾಧ್ಯತೆಯಿದೆ ಎಂದು ಬರೆದು ಹಂಚಿಕೊಂಡಿದ್ದಾರೆ. ಈ ವರದಿಯಲ್ಲೂ ಸಹ ಭಾರತಕ್ಕೆ 12ನೇ ಸ್ಥಾನ ಇರುವುದು ಕಂಡು ಬಂದಿದೆ ಮತ್ತು 8ನೇ ಸ್ಥಾನದಲ್ಲ ಫ್ರ್ಯಾನ್ಸ್ ಇರುವುದು ಸ್ಪಷ್ಟವಾಗಿದೆ. ಇನ್ನು ವೈರಲ್ ಆಗುತ್ತಿರುವ ಪೋಸ್ಟ್‌ನ ಆಧಾರದಲ್ಲಿ ಮೂಲ ಪೋಸ್ಟ್ ಅನ್ನು ನಾವು ಹುಡುಕಾಟ ನಡೆಸಿದೆವು. ಆದರೆ ಆ ಕುರಿತು ನಮಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ ಹೀಗಾಗಿ ವೈರಲ್ ಪೋಸ್ಟ್ ನಕಲಿಯಾಗಿರುವ ಸಾಧ್ಯತೆ ಹೆಚ್ಚಾಗಿದೆ.
ಏಪ್ರಿಲ್ 02, 2025ರಂದು ʼಇಂಡಿಯನ್ ಎಕ್ಸ್‌ಪ್ರೆಸ್ʼ ವೆಬ್‌ಸೈಟ್‌ನಲ್ಲಿ ʼTop 10 most powerful countries in the world 2025: Where does India rank?ʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರಿವುದನ್ನು ನಾವು ಕಾಣಬಹುದು. ವರದಿಯಲ್ಲಿ ́2025 ರ ವರ್ಷಕ್ಕೆ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳನ್ನು ಗುರುತಿಸಿ, ಐದು ಅಗತ್ಯ ಮಾನದಂಡಗಳ ಆಧಾರದ ಮೇಲೆ ದೇಶಗಳನ್ನು ಮೌಲ್ಯಮಾಪನ ಮಾಡಲಾಯಿತು: ನಾಯಕತ್ವ , ಆರ್ಥಿಕ ಶಕ್ತಿ , ರಾಜಕೀಯ ಪ್ರಭಾವ , ಬಲವಾದ ಅಂತರರಾಷ್ಟ್ರೀಯ ಮೈತ್ರಿಗಳು ಮತ್ತು ಮಿಲಿಟರಿ ಸಾಮರ್ಥ್ಯಗಳು. ಇನ್ನು ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಒಂದಾದ, ಬಲವಾದ ರಾಜಕೀಯ ಪ್ರಭಾವ ಮತ್ತು ಗಮನಾರ್ಹ ಜಾಗತಿಕ ಪಾಲುದಾರಿಕೆ ಮತ್ತು ಮಿಲಿಟರಿ ಸಾಮರ್ಥ್ಯಗಳೊಂದಿಗೆ ಜಾಗತಿಕ ಆರ್ಥಿಕತೆಯ ವಿಷಯದಲ್ಲಿ ಐದನೇ ಅತಿದೊಡ್ಡ ದೇಶವಾದ ಭಾರತವು ಈ ವರ್ಷ ಅಗ್ರ 10 ಶ್ರೇಯಾಂಕಗಳಲ್ಲಿ ಸ್ಥಾನ ಕಳೆದುಕೊಂಡಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗಿಂತ ಹಿಂದುಳಿದಿರುವ ಭಾರತವು, 2025 ರಲ್ಲಿ ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ 12 ನೇ ಸ್ಥಾನದಲ್ಲಿದೆ , ಅದರ ಜಿಡಿಪಿ $3.55 ಟ್ರಿಲಿಯನ್ ಮತ್ತು 1.43 ಬಿಲಿಯನ್ ಜನಸಂಖ್ಯೆ ಎಂದು ಅಂದಾಜಿಸಲಾಗಿದೆʼ ಎಂದು ವರದಿಯಾಗಿರುವುದನ್ನು ನೋಡಬಹುದು.
ಇನ್ನಷ್ಟು ಮಾಧ್ಯಮ ವರದಿಗಳು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಜಗತ್ತಿನ ಬಲಾಢ್ಯ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 8ನೇ ಸ್ಥಾನ ಎಂಬುವುದರಲ್ಲಿ ಸತ್ಯಾಂಶವಿಲ್ಲ. ವಾಸ್ತವವಾಗಿ ಪ್ರಸ್ತುತ ಭಾರತಕ್ಕೆ 12ನೇ ಸ್ಥಾನವಿದೆ.