ಫ್ಯಾಕ್ಟ್‌ಚೆಕ್‌: ರಾಜ್ಯ ಬಿಜೆಪಿ ಸರ್ಕಾರ, ಹಿಮಾಚಲ ಪ್ರದೇಶದಲ್ಲಿ ಎರಡು ಶೌಚಾಲಯ ತೆರಿಗೆ ಪದ್ಧತಿ ಜಾರಿಗೊಳಿಸಿದ್ದಾರೆ ಎಂದು ಸುಳ್ಳು ಸುದ್ದಿ ಹಂಚಿಕೆ

ರಾಜ್ಯ ಬಿಜೆಪಿ ಸರ್ಕಾರ, ಹಿಮಾಚಲ ಪ್ರದೇಶದಲ್ಲಿ ಎರಡು ಶೌಚಾಲಯ ತೆರಿಗೆ ಪದ್ಧತಿ ಜಾರಿಗೊಳಿಸಿದ್ದಾರೆ ಎಂದು ಸುಳ್ಳು ಸುದ್ದಿ ಹಂಚಿಕೆ;

facebooktwitter-grey
Update: 2025-04-06 02:30 GMT
ಫ್ಯಾಕ್ಟ್‌ಚೆಕ್‌: ರಾಜ್ಯ ಬಿಜೆಪಿ ಸರ್ಕಾರ, ಹಿಮಾಚಲ ಪ್ರದೇಶದಲ್ಲಿ ಎರಡು ಶೌಚಾಲಯ ತೆರಿಗೆ ಪದ್ಧತಿ ಜಾರಿಗೊಳಿಸಿದ್ದಾರೆ ಎಂದು ಸುಳ್ಳು ಸುದ್ದಿ ಹಂಚಿಕೆ
  • whatsapp icon

ಹಿಮಾಚಲ ಪ್ರದೇಶದಲ್ಲಿ ಎರಡು ಶೌಚಾಲಯ ಹೊಂದಿದ್ದವರಿಗೆ ಅಲ್ಲಿನ ಕಾಂಗ್ರೆಸ್‌ ಸರ್ಕಾರ ತೆರಿಗೆಯನ್ನು ವಿಧಿಸುತ್ತಿದೆ ಎಂದು ದೇಶಾದ್ಯಂತ ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಟ್ಟಿದೆ.ಈ ಸುದ್ದಿಯನ್ನು ಸಾಂಝಾಇಕ ಜಾಲತಾಣದ ಬಳಕೆದಾರರು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ನೇತೃತ್ವದ ಕಾಂಗ್ರೇಸ್‌ ಸರ್ಕಾರವನ್ನು ಟೀಕೆ ಮಾಡಿದ್ದರು.

ಏಪ್ರಿಲ್‌ 01, 2025ರಂದು ʼಬಿಜೆಪಿ ಕರ್ನಾಟಕʼ ಎಂಬ ಎಕ್ಸ್‌ ಖಾತೆಯಲ್ಲಿ ʼಮೂರನ್ನು ಬಿಟ್ಟವರು ಊರಿಗೆ ದೊಡ್ಡವರು ಎನ್ನುವಂತೆ @INCKarnataka. ಸರ್ಕಾರ ಮೂರನ್ನಷ್ಟೇ ಅಲ್ಲ ನೂರನ್ನು ಬಿಟ್ಟು ಲೂಟಿ ಮಾಡುತ್ತಿದೆ. ರಾಜಧಾನಿ ಜನರೇ, ನಿಮ್ಮ ಮನೆ ಮುಂದೆ ಬೈಕ್‌, ಕಾರು ನಿಲ್ಲಿಸಿದ್ರೆ ಅದಕ್ಕೂ ಟ್ಯಾಕ್ಸ್‌ ಕಟ್ಟಲೇ ಬೇಕಿದೆ. ಮಜಾವಾದಿ @siddaramaiah ಅವರೇ, ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರದಂತೆ ಮನೆಯಲ್ಲಿ ಎರಡು ಟಾಯ್ಲೆಟ್‌ ಇದ್ದರೆ ಅದಕ್ಕೂ ಟ್ಯಾಕ್ಸ್‌ ಹಾಕಿಬಿಡಿ. ಅದೊಂದು ಬಾಕಿ ಏಕೆ ಬಿಟ್ಟಿದ್ದೀರಿ?‌ʼ ಎಂಬ ಶೀರ್ಷಿಕೆಯೊಂದಿಗೆ ಆರ್‌.ಕನ್ನಡ ನ್ಯೂಸ್‌ ವರದಿಯನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಹಿಮಾಚಲ ಪ್ರದೇಶದಲ್ಲಿ ಅಲ್ಲಿನ ಕಾಂಗ್ರೆಸ್‌ ಸರ್ಕಾರ ಎರಡು ಶೌಚಾಲಯ ತೆರಿಗೆ ವಿಧಿಸಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ವೈರಲ್‌ ಆದ ಸುದ್ದಿಯ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.


​ಮತ್ತೊಬ್ಬ ಎಕ್ಸ್‌ ಖಾತೆದಾರರೊಬ್ಬರು ʼहिमाचल में कॉंग्रेस ने हर विधायक मंत्री कार्यकर्ता को दी ज़िम्मेदारी | हर घर में जाकर टॉयलेट चेक करेंगे सुलभ शौचालय के बाहर टेबल लगाकर बैठेंगे और 25 रुपए चार्ज करेंगे| नाना दादा बाप चले गये बिना टॉयलेट दिये हुए देश को | और बेटा मोदी जी के बनाये हुए टॉयलेट पर टैक्स लगा रहा है |ʼ ಎಂಬ ಶೀರ್ಷಿಕೆಯೊಂದಿಗೆ ಆರ್‌ ಕನ್ನಡ ನ್ಯೂಸ್‌ ವರದಿಯನ್ನು ಹಂಚಿಕೊಂಡಿದ್ದನ್ನು ನಾವಿಲ್ಲಿ ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಹಿಮಾಚಲದಲ್ಲಿ, ಕಾಂಗ್ರೆಸ್ ಪ್ರತಿಯೊಬ್ಬ ಶಾಸಕರು, ಸಚಿವರು ಮತ್ತು ಕಾರ್ಯಕರ್ತರಿಗೆ ಜವಾಬ್ದಾರಿ ನೀಡಿದೆ. ನಾವು ಪ್ರತಿ ಮನೆಗೆ ಹೋಗಿ ಶೌಚಾಲಯಗಳನ್ನು ಪರಿಶೀಲಿಸುತ್ತೇವೆ. ಸುಲಭ್ ಶೌಚಾಲಯದ ಹೊರಗೆ ಮೇಜಿನ ಬಳಿ ಕುಳಿತು 25 ರೂ. ಶುಲ್ಕ ವಿಧಿಸುತ್ತೇವೆ. ಅಜ್ಜ, ಅಜ್ಜ ಮತ್ತು ತಂದೆ ದೇಶಕ್ಕೆ ಶೌಚಾಲಯಗಳನ್ನು ನೀಡದೆ ಬಿಟ್ಟರು. ಮತ್ತು ಮಗ ಮೋದಿ ಜಿ ನಿರ್ಮಿಸಿದ ಶೌಚಾಲಯಗಳ ಮೇಲೆ ತೆರಿಗೆ ವಿಧಿಸುತ್ತಿದ್ದಾರೆ. ವಾವ್……ʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿದ್ದಾರೆ.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಬಿಜೆಪಿ ಕರ್ನಾಟಕ ಹೇಳಿದಂತೆ ಹಿಮಾಚಲ ಪ್ರದೇಶದಲ್ಲಿ ಎರಡು ಶೌಚಾಲಯ ತೆರಿಗೆ ಇದೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ಆಕ್ಟೋಬರ್‌ 2024ರಂದೇ ಹಿಮಾಚಲದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಸ್ಪಷ್ಟನೆಯನ್ನು ನೀಡಿ ಶೌಚಾಲಯ ತೆರಿಗೆ ಇಲ್ಲ ಎಂದಿರುವುದು ಹಲವು ವರದಿಗಳಿಂದ ಸ್ಪಷ್ಟವಾಗಿದೆ.

ನಾವು ವೈರಲ್‌ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ಸುದ್ದಿಗೆ ಸಂಬಂಧಿಸಿದ ಕೆಲವು ಪ್ರಮುಖ ಕೀವರ್ಡ್‌ಗಳ ಮುಖಾಂತರ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಾವು ಹಿಮಾಚಲ ಪ್ರದೇಶ ಸರ್ಕಾರದ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ hptax.gov.in ನಲ್ಲಿ ಎರಡು ಶೌಚಾಲಯಕ್ಕೆ ಯಾವುದಾದರು ತೆರಿಗೆಯನ್ನು ವಿಧಿಸಲಾಗಿದೆಯೇ ಎಂದು ಹುಡುಕಾಟವನ್ನು ನಡೆಸಿದೆವು. ಈ ವೆಬ್‌ಸೈಟ್‌ನಲ್ಲಿ ನಮಗೆ ಯಾವುದೇ ಫಲಿತಾಂಶ ಸಿಗಲಿಲ್ಲ. ಏಪ್ರಿಲ್‌ 02, 2025ರವರೆಗೂ ಸರ್ಕಾರದ ಅಧಿಕೃತ ಮೂಲಗಳು ಅಥವಾ ವಿಶ್ವಾಸಾರ್ಹ ದಾಖಲೆಗಳಲ್ಲಿ ಕೂಡ ಎರಡು ಶೌಚಾಲಯಕ್ಕೆ ತೆರಿಗೆ ವಿಧಿಸಿರುವ ಕುರಿತು ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ.


​05, ಅಕ್ಟೋಬರ್‌ 2024ರಂದು ʼಕನ್ನಡ ವೆಬ್‌ದುನಿಯಾʼ ಎಂಬ ವೆಬ್‌ಸೈಟ್‌ನಲ್ಲಿ ʼಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಟಾಯ್ಲೆಟ್ ಗೂ ಟ್ಯಾಕ್ಸ್ ವಿಧಿಸಲಾಗುತ್ತದೆ ಎಂಬ ಸಮಾಚಾರ ಹಬ್ಬಿದ್ದು, ಈ ಬಗ್ಗೆ ಬಿಜೆಪಿ ಭಾರೀ ಟೀಕೆ ಮಾಡಿದೆ. ಆದರೆ ಇದು ಕೇವಲ ರೂಮ‌ರ್ ಅಷ್ಟೇ ಎನ್ನಲಾಗಿದೆ.ʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನೋಡಬಹುದು. ಹಿಮಾಚಲ ಪ್ರದೇಶದ ಕೆಲವು ನಗರ ಪ್ರದೇಶಗಳಲ್ಲಿರುವ ಮನೆಗಳಲ್ಲಿ ಎಷ್ಟು ಟಾಯ್ಲೆಟ್ ಇದೆಯೋ ಅವುಗಳನ್ನು ಲೆಕ್ಕ ಹಾಕಿ ಅವುಗಳಿಗೆ ತೆರಿಗೆ ವಿಧಿಸಲಾಗುತ್ತದೆ ಎಂಬ ಸುದ್ದಿ ಭಾರೀ ಸದ್ದು ಮಾಡಿತ್ತು. ಇದರ ಬಗ್ಗೆ ಬಿಜೆಪಿ ಕಡು ಟೀಕೆ ಮಾಡಿತ್ತು. ಇದರ ಬೆನ್ನಲ್ಲೇ ಸಿಎಂ ಸುಖವಿಂದರ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿ ಇಂಥಹ ಯಾವುದೇ ತೆರಿಗೆ ವ್ಯವಸ್ಥೆ ಇಲ್ಲ. ಯಾರೋ ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಸಿಎಂ ಸ್ಪಷ್ಟನೆ ನೀಡಿದರು. ರಾಜ್ಯದಲ್ಲಿರುವ ಪ್ರತಿ ಶೌಚಾಲಯಕ್ಕೆ 25 ರೂ. ತೆರಿಗೆ ವಿಧಿಸಲಾಗುತ್ತದೆ ಎಂದು ವರದಿಗಳು ಕೇಳಿಬಂದಿದ್ದವು. ಇದು ನಾನಾ ರೀತಿಯ ಕಾಮೆಂಟ್‌ಗಳಿಗೆ ಕಾರಣವಾಗಿತ್ತು. ವಿಶೇಷವೆಂದರೆ ಈ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೂಡಾ ಪ್ರತಿಕ್ರಿಯಿಸಿದ್ದರು. ಮೋದಿ ದೇಶದಲ್ಲಿ ಸ್ವಚ್ಛತೆಗಾಗಿ ಟಾಯ್ಲೆಟ್ ಕಟ್ಟಿಸಿಕೊಟ್ಟರು. ಆದರೆ ಕಾಂಗ್ರೆಸ್ ಟಾಯ್ಲೆಟ್ ಮೇಲೂ ತೆರಿಗೆ ವಿಧಿಸುವ ಕೀಳುಮಟ್ಟಕ್ಕಿಳಿದಿದೆ ಎಂದಿದ್ದರು. ಆದರೆ ಈ ಎಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ಹಿಮಾಚಲಪ್ರದೇಶ ನಿಯಮ ಜಾರಿಗೊಳಿಸದೇ ಇರಲು ತೀರ್ಮಾನಿಸಿತು ಎಂದೂ ಹೇಳಲಾಗುತ್ತಿದೆʼ ಎಂದು ವರದಿ ಮಾಡಿರುವುದನ್ನು ನೋಡಬಹುದು.


ಪಬ್ಲಿಕ್‌ ಟಿವಿ ಕನ್ನಡ ವೆಬ್‌ಸೈಟ್‌ನಲ್ಲಿ ʼಗ್ಯಾರಂಟಿ ಹೊಡೆತಕ್ಕೆ ತತ್ತರ – ಹಿಮಾಚಲ ಪ್ರದೇಶದಲ್ಲಿ ಶೌಚಾಲಯಕ್ಕೂ ಬೀಳುತ್ತಾ ಟ್ಯಾಕ್ಸ್‌?ʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಲಾಗಿದೆ. ವರದಿಯಲ್ಲಿ ʼಉಚಿತ ಗ್ಯಾರಂಟಿಗಳಿಂದ ಆರ್ಥಿಕ ಬಿಕ್ಕಟು ಎದುರಿಸುತ್ತಿರುವ ಹಿಮಾಚಲ ಪ್ರದೇಶ ಸರ್ಕಾರ ಇದೀಗ ಶೌಚಾಲಯಳಿಗೆ ತೆರಿಗೆ ವಿಧಿಸಲು ಮುಂದಾಗಿದೆ ಎಂಬ ವದಂತಿ ಹರಿದಾಡುತ್ತಿದೆ. ರಂಟಿಗಳ ಹೊಡೆತದಿಂದ ಕಂಗೆಟ್ಟಿರುವ ಹಿಮಾಚಲ ಸರ್ಕಾರ ಈಗಾಗಲೇ ಕ್ಯಾಬಿನೆಟ್‌ ಸಚಿವರಿಗೆ 2 ತಿಂಗಳ ವೇತನ ಕಡಿತಗೊಳಿಸಿದೆ. ಗಾಂಜಾ ಕೃಷಿಯನ್ನು ಕಾನೂನು ಬದ್ಧಗೊಳಿಸಿದೆ. ಪಕ್ಷಾಂತರ ಮಾಡುವ ಶಾಸಕರಿಗೆ ಪಿಂಚಣಿ ಕಡಿತಗೊಳಿಸುವ ಮಸೂದೆಯನ್ನೂ ಅಂಗೀಕರಿಸಿದೆ. ಈ ಬೆನ್ನಲ್ಲೇ ಶೌಚಾಲಯ ಆಸನಗಳನ್ನು ಆಧರಿಸಿ ತೆರಿಗೆ ವಿಧಿಸಲು ಮುಂದಾಗಿದೆ ಎಂಬ ವದಂತಿ ಹರಡಿದೆ. ಈ‌ ನಡುವೆ ಶೌಚಾಲಯಗಳ ಮೇಲೆ ಯಾವುದೇ ಹೆಚ್ಚುವರಿ ಸೆಸ್ ವಿಧಿಸಿಲ್ಲ, ಅಂತಹ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸಿಎಂ ಸುಖ್ವಿಂದರ್‌ ಸಿಂಗ್‌ ಸುಖು ಸ್ಪಷ್ಟನೆ ನೀಡಿದ್ದಾರೆ. ನೀರಿಗೆ ವಿಧಿಸುವ ತೆರಿಗೆಯಲ್ಲೇ ಶೇ.25 ಶೌಚಾಲಯ ತೆರಿಗೆಯೂ ಸೇರಿರುತ್ತದೆ. ಅದಕ್ಕೆ ಪ್ರತ್ಯೇಕವಾಗಿ ವಿಧಿಸುವುದಿಲ್ಲ ಎಂದು ಹೇಳಿದ್ದಾರೆ.


ಎನ್‌ಡಿಟಿವಿ ವೆಬ್‌ಸೈಟ್‌ನಲ್ಲಿ ʼA "Toilet Tax" In Himachal Pradesh? Chief Minister Clarifies Amid Uproarʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನಾವಿಲ್ಲಿ ನೋಡಬಹುದು. ವರದಿಯಲ್ಲಿ “ಹಿಮಾಚಲ ಪ್ರದೇಶದಲ್ಲಿ ಶೌಚಾಲಯ ತೆರಿಗೆ ಇಲ್ಲ” ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಸ್ಪಷ್ಟ ಪಡಿಸಿರುವುದು ಕಂಡು ಬಂದಿದೆ.


​ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್‌ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಬಿಜೆಪಿ ಕರ್ನಾಟಕ ಹೇಳಿದಂತೆ ಹಿಮಾಚಲ ಪ್ರದೇಶದಲ್ಲಿ ಎರಡು ಶೌಚಾಲಯ ತೆರಿಗೆ ಇದೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ಆಕ್ಟೋಬರ್‌ 2024ರಂದೇ ಹಿಮಾಚಲದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಸ್ಪಷ್ಟನೆಯನ್ನು ನೀಡಿ ಶೌಚಾಲಯ ತೆರಿಗೆ ಇಲ್ಲ ಎಂದಿರುವುದು ಹಲವು ವರದಿಗಳಿಂದ ಸ್ಪಷ್ಟವಾಗಿದೆ.

Claim :  ರಾಜ್ಯ ಬಿಜೆಪಿ ಸರ್ಕಾರ, ಹಿಮಾಚಲ ಪ್ರದೇಶದಲ್ಲಿ ಎರಡು ಶೌಚಾಲಯ ತೆರಿಗೆ ಪದ್ಧತಿ ಜಾರಿಗೊಳಿಸಿದ್ದಾರೆ ಎಂದು ಸುಳ್ಳು ಸುದ್ದಿ ಹಂಚಿಕೆ
Claimed By :  Social Media Users
Fact Check :  False
Tags:    

Similar News