ಮುರುಡೇಶ್ವರ ದೇವಸ್ಥಾನಕ್ಕೆ ಬಾಂಬ್ ಹಾಕಲು ಯತ್ನಿಸಿದ ಆತಂಕವಾದಿಗಳನ್ನು ಪೊಲೀಸರು ಬಂಧಿಸಿಲ್ಲ
ಮುರುಡೇಶ್ವರ ದೇವಸ್ಥಾನಕ್ಕೆ ಬಾಂಬ್ ಹಾಕಲು ಯತ್ನಿಸಿದ ಆತಂಕವಾದಿಗಳನ್ನು ಪೊಲೀಸರು ಬಂಧಿಸಿಲ್ಲ
ಕರಾವಳಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಲಾ ತಾಲ್ಲೂಕಿನಲ್ಲಿರುವ ಮುರುಡೇಶ್ವರ ದೇವಾಲಯ ಹಿಂದೂಗಳ ಪ್ರಸಿದ್ಧ ಯಾತ್ರಾ ಕೇಂದ್ರವಾಗಿದೆ. ಚಾಲುಕ್ಯ ಮತ್ತು ಕದಂಬ ಶಿಲ್ಪಕಲೆಗಳನ್ನು ಹೊಂದಿರುವ ಮಹಾದೇವನ ದೇವಾಲಯವಾಗಿದ್ದು, ದ್ರಾವಿಡ ಶೈಲಿಯ ವಾಸ್ತುಶಿಲ್ಪದಲ್ಲಿ ಶುದ್ಧವಾದ ಕಡಲತೀರದಲ್ಲಿ ಅದ್ಭುತವಾದ ಶಿವ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಪೌರಾಣಿಕ ಕಥೆಗಳ ಪ್ರಕಾರ, ಇಲ್ಲಿ ಗಣೇಶನು ಬ್ರಾಹ್ಮಣ ಹುಡುಗನ ಅವತಾರದಲ್ಲಿದ್ದಾಗ ರಾವಣನ ಬೇಡಿಕೆಯಂತೆ ಹಿಡಿದುಕೊಂಡಿದ್ದ ಆತ್ಮಲಿಂಗವನ್ನು ಕೆಳಗಿಟ್ಟ ಸ್ಥಳವಿದು ಎಂದು ಹೇಳಲಾಗಿದೆ. ಮಹಾದೇವನಿಗೆ ಅರ್ಪಿತವಾದ 123 ಅಡಿ ಉದ್ದದ ಶಿವನ ಪ್ರತಿಮೆ ಹಾಗೂ ಶಿವಲಿಂಗವನ್ನೂ ಈ ದೇವಾಲಯದಲ್ಲಿ ನಾವು ಕಾಣಬಹುದು.
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವಿಶ್ವ ಪ್ರಸಿದ್ದ ಪ್ರವಾಸಿ ತಾಣವಾದ ಮುರುಡೇಶ್ವರ ದೇವಸ್ಥಾನಕ್ಕೆ ಬಾಂಬ್ ಹಾಕಿ ಧ್ವಂಸಗೊಳಿಸಲು ಉಗ್ರರು ಸಂಚು ರೂಪಿಸಿದ್ದ ಆರು ಉಗ್ರರರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್ ಆಗಿದೆ.
ಅಕ್ಟೊಬರ್ 31, 2024ರಂದು ವಿನಯ್ ಭಂಗೇರ ಎಂಬ ಫೇಸ್‌ಬುಕ್ ಖಾತೆದಾರರು ಉಗ್ರರನ್ನು ಪೊಲೀಸರನ್ನು ಬಂಧಿಸಿದ್ದ ಫೋಟೋದೊಂದಿಗೆ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯಾಗಿ "ಮುರುಡೇಶ್ವರ ದೇವಸ್ಥಾನಕ್ಕೆ ಬಾಂಬ್ ಹಾಕಿ ಧ್ವಂಸಗೊಳಿಸಲು ಹೊಂಚು ಹಾಕುತ್ತಿರುವ ಆರು ಜನ ಆತಂಕವಾದಿಗಳನ್ನು ಭಟ್ಕಳದಲ್ಲಿ ಸೆರೆ ಹಿಡಿಯಲಾಗಿದೆ" ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದರು.
ಇದೇ ಚಿತ್ರವನ್ನು ಪದ್ಮನಾಭ ಉಪಾಧ್ಯಾಯ ಎಂಬ ಇನ್‌ಸ್ಟಾಗ್ರಾಮ್ ಖಾತೆದಾರರ "ಮುರ್ಡೇಶ್ವರ ದೇವಸ್ಥಾನಕ್ಕೆ ಬಾಂಬ್ ಹಾಕಿ ಧ್ವಂಸಗೊಳಿಸಲು ಹೊಂಚು ಹಾಕುತ್ತಿರುವ ಆರು ಜನ ಆತಂಕವಾದಿಗಳನ್ನು ಭಟ್ಕಳದಲ್ಲಿ ಸೆರೆ" ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಮುರುಡೇಶ್ವರ ದೇವಸ್ಥಾನಕ್ಕೆ ಬಾಂಬ್ ಹಾಕಲು ಸಂಚು ರೂಪಿಸಿದ್ದ ಆರು ಜನ ಉಗ್ರರನ್ನು ಪೊಲೀಸರು ಬಂಧಿಸಿಲ್ಲ. ಇದು ಕರ್ನಾಟಕ ಕರಾವಳಿ ಕಾವಲು ಪಡೆ ಪೊಲೀಸರು ನಡೆಸಿದ ಅಣಕು ಕಾರ್‍ಯಾಚರಣೆಯ ಭಾಗವಾಗಿದೆ.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಹಲವಾರು ಮಾಧ್ಯಮ ಸಂಸ್ಥೆಗಳು ಕರ್ನಾಟಕ ಕರಾವಳಿ ಕಾವಲು ಪಡೆ ಪೊಲೀಸರು ನಡೆಸಿದ ಅಣಕು ಕಾರ್‍ಯಾಚರಣೆ ನಡೆಸಿದ್ದಾರೆ ಎಂಬ ವರದಿಯಾಗಿರುವುದನ್ನು ನಾವು ಕಂಡುಕೊಂಡೆವು.
ಅಕ್ಟೋಬರ್ 19, 2024ರಂದು ವಿಜಯವಾಣಿ ವೆಬ್‌ಸೈಟ್‌ನಲ್ಲಿ "ಸಾಗರ ಕವಚ ಕಲ್ಪತ ಕಾರ್ಯಾಚರಣೆ - ಆರು ಭಯೋತ್ಪಾದಕರ ಬಂಧನ" ಎಂಬ ಹೆಡ್‌ಲೈನ್‌ನೊಂದಿಗೆ ವರದಿಯಾಗಿರುವುದನ್ನು ಕಂಡುಕೊಂಡೆವು. ವರದಿಯಲ್ಲಿ "ಪ್ರತಿವರ್ಷ ಭದ್ರತಾ ಪಡೆಗಳ ಸಹಯೋಗದಲ್ಲಿ, ಕರಾವಳಿಯಲ್ಲಿ ನಡೆಯುವ ಸಾಗರ ಕವಚ ಕಲ್ಪಿತ ಕಾರ್ಯಾಚರಣೆಯ ಸನ್ನಿವೇಶಗಳಿವು. ಕರಾವಳಿ ಭಾಗದಲ್ಲಿ ರಕ್ಷಣೆ ಮತ್ತು ಭದ್ರತೆಯ ಕುರಿತು ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕ್ರಮಕೈಗೊಳ್ಳುವ ಬಗ್ಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕ್ಟೋಬರ್16 ಮತ್ತು 17ರಂದು ರಕ್ಷಣಾ ವ್ಯವಸ್ಥೆಯ ಕಲ್ಪಿತ ಪ್ರದರ್ಶನ ಸಾಗರ ಕವಚವನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಭಾರತೀಯ ನೌಕಾಪಡೆ, ಕೋಸ್ಟ್ ಗಾರ್ಡ್ ಮತ್ತು ರಾಜ್ಯದ ಕರಾವಳಿ ಕಾವಲು ಪಡೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗುತ್ತದೆ. ಇದರಿಂದ ತಾಲೂಕಿನಲ್ಲಿ ಕರಾವಳಿ ಕಾವಲು ಪೊಲೀಸ್ ಕಟ್ಟೆಚ್ಚರದಿಂದ ತಪಾಸಣೆ ಮಾಡುತ್ತಿದ್ದ ವೇಳೆ ಸಮುದ್ರ ಮಾರ್ಗದಿಂದ ನುಸುಳುತ್ತಿದ್ದ 6 ನಕಲಿ ಭಯೋತ್ಪಾದಕರನ್ನು ಭಟ್ಕಳ ಕರಾವಳಿ ಪೊಲೀಸರು ಗುವರುವಾರ ಬಂಧಿಸಿದ್ದಾರೆ" ಎಂದು ವರದಿಯಾಗಿದೆ.
ಕನ್ನಡವಾಣಿ ವೆಬ್‌ಸೈಟ್‌ನಲ್ಲಿ "ಆರು ಜನ ಭಯೋತ್ಪಾದಕರ ಬಂಧನ| ಮುರುಡೇಶ್ವರದಲ್ಲಿ ಬಾಂಬ್ ಇಡಲು ಬಂದವರು ಸಹ ವಶಕ್ಕೆ" ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿದ್ದಾರೆ. "ಅಕ್ಟೋಬರ್ 16 ಮತ್ತು 17ರಂದು ಕೋಸ್ಟ್ ಗಾರ್ಡ್ ಹಾಗೂ ಕೋಸ್ಟಲ್ ಪೋಲಿಸ್ ವತಿಯಿಂದ ನಡೆಸಿದ ಸಾಗರ ಕವಚ ಅಣುಕು ಕಾರ್ಯಾಚರಣೆಯಲ್ಲಿ ಸಮುದ್ರವಾಗಿ ನುಸುಳುತ್ತಿರುವ ಹತ್ತು ಜನ ಭಯೋತ್ಪಾದಕರನ್ನು ಬಂದಿಸುವಲ್ಲಿ ಭಟ್ಕಳ ಕರಾವಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರತಿವರ್ಷ ಕರಾವಳಿ ಭಾಗದಲ್ಲಿ ಭದ್ರತೆ ಕುರಿತು ಅವಲೋಕನ ನಡೆಸಲು ಅಣಕು ಕಾರ್ಯಾಚರಣೆ ನಡೆಸಲಾಗುತ್ತದೆ" ಎಂದು ವರದಿ ಮಾಡಿದ್ದಾರೆ.
ಗೋಮಾಂತಕ್ ಟಿವಿಯ ವೆಬ್‌ಸೈಟ್‌ನಲ್ಲಿ ಅಕ್ಟೋಬರ್ 18, 2024ರಂದು ವರದಿಯೊಂದು ಪ್ರಕಟವಾಗಿತ್ತು. ವರದಿಯಲ್ಲಿ ‘‘ಕರಾವಳಿ ಕಾವಲು ಪಡೆ ಪೊಲೀಸರು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಸಾಗರ ರಕ್ಷಾ ಕವಚ ಕಾರ್ಯಾಚರಣೆ ಆಯೋಜಿಸಿದ್ದಾರೆ, ಭಟ್ಕಳದ ಮುರುಡೇಶ್ವರ ದೇವಸ್ಥಾನದ ಮೇಲೆ ಯಾವುದೇ ಭಯೋತ್ಪಾದಕರ ಭೀತಿ ಇಲ್ಲ ಎಂದು ಮರಾಠಿಯಲ್ಲಿ ವರದಿಯನ್ನು ಪ್ರಕಟಿಸಿತ್ತು.
ಇದರಿಂದ ಸಾಭೀತಾಗಿದ್ದೇನೆಂದರೆ ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ, ವಾಸ್ತವವಾಗಿ ಇದು ಕರ್ನಾಟಕ ಕರಾವಳಿ ಕಾವಲು ಪಡೆ ಪೊಲೀಸರು ನಡೆಸಿದ ಅಣಕು ಕಾರ್‍ಯಾಚರಣೆಯ ಭಾಗವಾಗಿದೆ.