ಫ್ಯಾಕ್ಟ್‌ಚೆಕ್: ವಯನಾಡ್‌ನಲ್ಲಿ ಪ್ರಿಯಾಂಕಾ ಗಾಂಧಿಯವರ ನಾಮನಿರ್ದೇಶನ ರ್ಯಾಲಿಯಲ್ಲಿ ಪಾಕಿಸ್ತಾನಿ ಧ್ವಜಗಳನ್ನು ಹಾರಿಸಲಿಲ್ಲ
ವಯನಾಡ್‌ನಲ್ಲಿ ಪ್ರಿಯಾಂಕಾ ಗಾಂಧಿಯವರ ನಾಮನಿರ್ದೇಶನ ರ್ಯಾಲಿಯಲ್ಲಿ ಪಾಕಿಸ್ತಾನಿ ಧ್ವಜಗಳನ್ನು ಹಾರಿಸಲಿಲ್ಲ
ಕೇರಳದ ವಯನಾಡು ಲೋಕಸಭಾ ಉಪಚುನಾವಣೆ 2024 ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಬೃಹತ್ ರೋಡ್ ಶೋ ಮೂಲಕ ಅವರು ಚುನಾವಣಾ ಕಚೇರಿಗೆ ತೆರಳಿ ಅಕ್ಟೋಬರ್ 23ರಂದು ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮೈತ್ರಿಕೂಟವನ್ನು ಪ್ರತಿನಿಧಿಸುತ್ತಿರುವ ಪ್ರಿಯಾಂಕಾ ಗಾಂಧಿ ಪ್ರಮುಖ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ, ಒಕ್ಕೂಟದೊಳಗೆ ಐಯುಎಂಎಲ್ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪ್ರಬಲ ಪಾತ್ರವನ್ನು ವಹಿಸಿದೆ.
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವಯನಾಡಿನಲ್ಲಿ ನಡೆದ ರ್ಯಾಲಿಯಲ್ಲಿ ಕೆಲವರು ಹಸಿರು ಬಣ್ಣದ ಬಾವುಟಗಳನ್ನು ಬೀಸುವುದರ ಜೊತೆಗೆ ಕಾಂಗ್ರೆಸ್ ಬಾವುಟವನ್ನು ಹಿಡಿದಿರುವುದನ್ನು ನಾವು ಕಾಣಬಹುದು. ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿಯವರ ರ್ಯಾಲಿಯಲ್ಲಿ ಪಾಕಿಸ್ತಾನದ ಧ್ವಜಗಳನ್ನು ಬೀಸಲಾಗಿದೆ ಎಂಬ ಶೀರ್ಷಿಕೆಯೊಂದಿಗೆ ಸಾಕಷ್ಟು ಸಾಮಾಜಿಕ ಬಳಕೆದಾರರು ವಿಡಿಯೋವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿರುವುದನ್ನು ನಾವು ಕಾಣಬಹುದು.
ಅಕ್ಟೋಬರ್ 24, 2024ರಂದು ʼದೀಪಕ್ ಶೆಟ್ಟಿʼ ಎಂಬ ಫೇಸ್‌ಬುಕ್ ಖಾತೆದಾರರು ವಿಡಿಯೋವನ್ನು ಹಂಚಿಕೊಂಡು "ಇದು ಪಾಕಿಸ್ತಾನದು ವಿಡಿಯೋ ಅಲ್ಲ, ಇದು ಕೇರಳದ ಕಾಂಗ್ರೆಸ್ ರ್ಯಾಲಿ ನಿನ್ನೆ ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಸುವಾಗ ಸೇರಿದ ಜನಸಮೂಹ" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ
ಜಾಗೃತ ಹಿಂದೂ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಖಾತೆದಾರ ವಿಡಿಯೋವನ್ನು ಹಂಚಿಕೊಂಡು "ಇದೆ, ಪಿಯಾಂಕಾ ಗಾಂದಿ ಸ್ವರ್ಥಿಸುತ್ತಿರುವ ಚುನಾವಣಾ ಕ್ಷೇತ್ರ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಅಕ್ಟೋಬರ್ 28, 2024ರಂದು ಭರತ್ ಪಾಂಡ್ಯ ಎಂಬ ಫೇಸ್‌ಬುಕ್ ಖಾತೆದಾರ ತನ್ನ ಖಾತೆಯಲ್ಲಿ "Being like this in front of Gandhi family is a slap on the face of democracy. The scene you are seeing is not Pakistan, Bangladesh or Afghanistan but India's Wayanad. Here is a crowd of supporters who reached Priyanka Gandhi's nomination, whose tricolor are they hoisting...?" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು.
ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದೆವು "ನೀವು ನೋಡುತ್ತಿರುವ ಈ ದೃಶ್ಯ ಪಾಕಿಸ್ತಾನ, ಬಾಂಗ್ಲಾದೇಶ ಅಥವಾ ಅಫ್ಘಾನಿಸ್ತಾನದಲ್ಲ ಇದು ನಮ್ಮ ಭಾರತದ ವಯನಾಡ್‌ನ ದೃಶ್ಯ. ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಸಲು ಆಗಮಿಸಿದಾಗ ಆಕೆಯ ಬೆಂಬಲಿಗರ ದಂಡೇ ಇಲ್ಲಿದೆ, ಇಲ್ಲಿ ಯಾರ ತ್ರಿವರ್ಣ ಧ್ವಜ ಹಾರಿಸುತ್ತಿದ್ದಾರೆ...?" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪದಾರಿಗೆಳೆಯುವ ಕೆಲಸ ಮಾಡುತ್ತಿದೆ. 2024ರಲ್ಲಿ ಪ್ರಿಯಾಂಕಾ ಗಾಂಧಿ ನಾಮ ಪತ್ರ ಸಲ್ಲಿಸು ಬಂದಾಗ ಚಿತ್ರಿಸಿರುವ ವಿಡಿಯೋವಲ್ಲ. ಈ ವಿಡಿಯೋ ವೈರಲ್ ಆದ ವಿಡಿಯೋ ಐದು ವರ್ಷಗಳಷ್ಟು ಹಳೆಯದ್ದು. ಈ ವಿಡಿಯೋ ಕಾಸರಗೋಡಿನಲ್ಲಿ ರಾಜ್ಮೋಹನ್ ಉನ್ನಿತಾನ್ ಅವರ 2019ರ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ್ದು.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀ ಫ್ರೇಮ್‌ಗಳನ್ನು ಉಪಯೋಗಿಸಿ ಗೂಗಲ್‌ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ 2019 ಜೂನ್‌ನಲ್ಲಿ ಚಿತ್ರಿಸಿದ್ದ ವಿಡಿಯೋವನ್ನು ʼಎಂಟರ್‌ಟೈನ್‌ಮೆಂಟ್ ಮಲಯಾಳಂʼ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ʼಐಯುಎಮ್‌ಎಲ್ ರ್ಯಾಲಿʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ಕಾಣಬಹುದು. ಇದರಿಂದ ಸಾಭಿತಾಗಿದ್ದೇನೆಂದರೆ ಈ ವಿಡಿಯೋ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಸಲು ಆಗಮಿಸಿದಾಗ ಚಿತ್ರಿಸಿರುವ ವಿಡಿಯೋವಲ್ಲ ಎಂದು ಸ್ಪಷ್ಟವಾಗಿ ತಿಳಿಯುತ್ತದೆ.
ವಿಡಿಯೋದಲ್ಲಿ ಹೇಳುತ್ತಿರುವ ಘೋಷಣೆಯನ್ನು ಕೇಳಿಸಿಕೊಂಡಾಗ ಅದರಲ್ಲಿ ʼಸತೀಶ್‌ಚಂದ್ರನ್ʼ, ʼರಾಹುಲ್‌ಗಾಂಧಿʼ, ʼಉನ್ನಿಥಾನ್ʼ ಎಂಬ ಹೆಸರುಗಳ ಜೊತೆಗೆ ʼಸಂಸತ್ತುʼ, ʼಯುಡಿಎಫ್ʼ, ʼಸಿಪಿಐಎಂʼ ಎಂಬ ಘೋಷಣೆಗಳನ್ನು ಕೂಗಿದ್ದರು. ನಾವು ಇದೇ ಕೀವರ್ಡ್‌ಗLನ್ನು ಉಪಯೋಗಿಸಿ ಹುಡುಕಾಟ ನಡೆಸಿದಾಗ ನಮಗೆ ಯೂಟ್ಯೂಬ್‌ನಲ್ಲಿ ಜೂನ್ 10,2019ರಂದು ʼ 'IUML | 2019' ಎಂಬ ಶೀರ್ಡಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ಕಾಣಬಹುದು.
ವೈರಲ್ ಆದ ವಿಡಿಯೋದಲ್ಲಿ ಕಾಣುವ ಧ್ವಜವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅದು ಪಾಕಿಸ್ತಾನ್, ಆಫ್ಘಾನಿಸ್ತಾನ್, ಇಸ್ಲಾಮಿಕ್ ಅಥವಾ ಬಾಂಗ್ಲಾದೇಶದ ಧ್ವಜಗಳಲ್ಲ. ಇದು ಕೇರಳದಲ್ಲಿನ ರಾಜಕೀಯ ಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಮ್‌ಎಲ್)ನ ಅಧಿಕೃತ ಧ್ವಜ.
ಅಷ್ಟೇ ಅಲ್ಲ ನಾವು ವಿಡಿಯೋದಲ್ಲಿ ಕಾಣುವ ʼಅರಮನಾ ಸಿಲ್ಕ್ಸ್ʼ ಅಂಗಡಿಯನ್ನು ಗೂಗಲ್ ಮ್ಯಾಪ್‌ನಲ್ಲಿ ಹುಡುಕಿದೆವು. ಹುಡುಕಾಟದಲ್ಲಿ ನಮಗೆ ಈ ಅಂಗಡಿ ಕಾಸರಗೋಡಿನಲ್ಲಿರುವ ಎಂಜಿ ರಸ್ತೆಯ, ಹಳೆಯ ಮಸೀದಿ ಹತ್ತಿರ ಇರುವ ಬಸ್ ನಿಲ್ದಾಣದ ವಿಡಿಯೋವೊಂದು ಖಚಿತವಾಯಿತು. ಈ ಸ್ಥಳ ವಯನಾಡ್‌ನಿಂದ ಇನ್ನೂರು ಕಿಮೀ ದೂರದಲ್ಲಿದೆ.
ಈ ಎಲ್ಲಾ ಮಾಹಿತಿಯ ಆಧಾರವನ್ನು ಪರಿಗಣಿಸಿದರೆ, ವೈರಲ್ ಆದ ವೀಡಿಯೊ ಕಾಸರಗೋಡು ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಜ್ಮೋಹನ್ ಉನ್ನಿತಾನ್ 2019ರ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ್ದು ಎಂದು ಸಾಭೀತಾಗುತ್ತದೆ. ಅಲ್ಲದೆ, ಅಕ್ಟೋಬರ್ 23, 2024ರಂದು ವಯನಾಡಿನಲ್ಲಿ ನಡೆದ ಪ್ರಿಯಾಂಕಾ ಗಾಂಧಿಯ ನಾಮನಿರ್ದೇಶನ ರ್ಯಾಲಿಗೆ ಸಂಬಂಧಿಸಿದ ವೀಡಿಯೊಗಳು ಇಲ್ಲಿದೆ.
ಇದರಿಂದ ಸಾಭೀತಾಗಿದ್ದೇನೆಂದರೆ ವೈರಲ್ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತದೆ. ವೈರಲ್ ಆದ ವಿಡಿಯೋ 2019ರದ್ದು. 23 ಅಕ್ಟೋಬರ್ 2024 ರಂದು ವಯನಾಡ್‌ನಲ್ಲಿ ಪ್ರಿಯಾಂಕಾ ಗಾಂಧಿಯವರ ನಾಮನಿರ್ದೇಶನ ರ್ಯಾಲಿಗೆ ಸಂಬಂಧಿಸಿಲ್ಲ. ಹಾಗೆ ಈ ವಿಡಿಯೋದಲ್ಲಿ ಕಾಣುವ ಧ್ವಜಗಳು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷದ್ದು.