ಫ್ಯಾಕ್ಟ್‌ಚೆಕ್: ರಾಂಪುರದ ರೈಲ್ವೆ ಹಳಿಯ ಮೇಲೆ ಜಿಹಾದಿಗಳು ಕಬ್ಬಿಣದ ಕಂಬವನ್ನು ಇಟ್ಟಿದ್ದಾರೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ
ರಾಂಪುರದ ರೈಲ್ವೆ ಹಳಿಯ ಮೇಲೆ ಜಿಹಾದಿಗಳು ಕಬ್ಬಿಣದ ಕಂಬವನ್ನು ಇಟ್ಟಿದ್ದಾರೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ
ಇತ್ತೀಚಿಗೆ ಪಂಜಾಬ್‌ನ ಬಟಿಂಡಾ ಜಿಲ್ಲೆಯಲ್ಲಿ ಹಳಿಗಳ ಮೇಲೆ ಒಂಬತ್ತು ಕಬ್ಬಿಣದ ರಾಡ್‌ಗಳು ಪತ್ತೆಯಾಗಿದ್ದವು. ಸ್ಥಳದಿಂದ ಒಂಬತ್ತು ಕಬ್ಬಿಣದ ರಾಡ್‌ಗಳನ್ನು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಬಟಿಂಡಾದಿಂದ ಬಿಡಬ್ಲೂಎಲ್ ಕೊರಿ ಕಡೆಗೆ ತೆರಳುತ್ತಿದ್ದ ಗೂಡ್ಸ್ ರೈಲಿನ ಲೋಕೋ ಪೈಲಟ್ ರಾಡ್‌ಗಳನ್ನು ನೋಡಿ ಪಾಯಿಂಟ್‌ಮ್ಯಾನ್ ಮತ್ತು ಸಹಾಯಕ ಸ್ಟೇಷನ್ ಮಾಸ್ಟರ್ ಸಹಾಯದಿಂದ ರಾಡ್‌ಗಳನ್ನು ತೆಗೆಸಿದ್ದರು.
ಇನ್ನು ಸೆಪ್ಟಂಬರ್ 22,2024ರಂದು ಉತ್ತರ ಪ್ರದೇಶದ ಪ್ರೇಮ್ ಪುರ್ ನಿಲ್ದಾಣದ ಬಳಿಯ ರೈಲ್ವೆ ಹಳಿಗಳ ಮೇಲೆ ಎಲ್ಪಿಜಿ ಸಿಲಿಂಡರ್ ಕಂಡು ಬಂದಿದ್ದು, ಗೂಡ್ಸ್ ರೈಲಿನ ಲೋಕೋಪೈಲಟ್ ತುರ್ತು ಬ್ರೇಕ್ ಅನ್ನು ಹಾಕುವ ಮೂಲಕ ಸಮಯ ಪ್ರಜ್ಞೆಯನ್ನು ಮೆರೆದಿದ್ದರು. ರೈಲ್ವೆ ಪೊಲೀಸರು ಈ ಎಲ್ಪಿಜಿ ಸಿಲಿಂಡರ್‌ನ್ನು ತೆರವುಗೊಳಿಸಿ, ಘಟನೆಯ ಕುರಿತು ತನಿಖೆ ಕೈಗೊಂಡಿದ್ದರು. ಹೀಗೆ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಇತ್ತೀಚಿಗೆ ಉತ್ತರಪ್ರದೇಶದ ರೈಲ್ವೆ ಹಳಿ ಮೇಲೆ ಕಬ್ಬಿಣದ ಕಂಬವನ್ನು ಇರಿಸಿ ಕಿಡಿಗೇಡಿಗಳು ರೈಲನ್ನು ಹಳಿ ತಪ್ಪಿಸುವ ಯತ್ನ ಮಾಡಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಪೋಟೋವೊಂದು ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ಕೋಮು ಬಣ್ಣವನ್ನು ಬಳಿದು ಕೆಲವು ಸಾಮಾಜಿಕ ಬಳಕೆದಾರರು ʼಇದು ಮುಸ್ಲಿಂ ಕಾಲೋನಿಯ ಹಿಂದೆ ಹಾದುಹೋಗುವ ರೈಲು" ಎಂದು ಕೆಲವರು ಇನ್ನು ಕೆಲವರು ʼರೈಲು ಜಿಹಾದ್ʼ ಎಂಬ ಪದಗಳನ್ನು ಬಳಸಿ ಕೋಮುದಾದದ ಕೆಲವು ಶೀರ್ಷಿಕೆಯೊಂದಿಗೆ ಪೋಟೋಗಳನ್ನು ಹಂಚಿಕೊಂಡಿದ್ದಾರೆ.
21 ಸೆಪ್ಟಂಬರ್ 2024ರಂದು ಆನಂದಗಿರಿ ಎಂಬ ಫೆಸ್‌ಬುಕ್ ಖಾತೆದಾರ ತನ್ನ ಖಾತೆಯಲ್ಲಿ ರೈಲಿನ ಹಳಿಯಮೇಲೆ ಕಬ್ಬಿಣದ ಕಂಬಗಳಿರುವ ಫೋಟೋವನ್ನು ಹಂಚಿಕೊಂಡು "ಉತ್ತರ ಪ್ರದೇಶದ ರಾಂಪುರದಲ್ಲಿ ರೈಲ್ವೇ ಪಲ್ಟಿ ಮಾಡಬೇಕು ಅಂತ ಜೀ ಹಾದಿಗಳು ರೈಲ್ವೆ ಹಳಿ ಮೇಲೆ ಸುಮಾರು 8 ರಿಂದ 9 ಮೀಟರ್ ಉದ್ದದ ಕಬ್ಬಿಣದ ಕಂಬವನ್ನು ಇಟ್ಟಿದ್ದಾರೆ. ಆದರೆ, ಡೆಹ್ರಾಡೂನ್ ಎಕ್ಸ್‌ಪ್ರೆಸ್ ರೈಲಿನ ಲೋಕೋ ಪೈಲಟ್‌ನ ಜಾಣತನದಿಂದ ಅನಾಹುತ ತಪ್ಪಿದೆ. ಲೊಕೊ ಪೈಲಟ್ ಕಬ್ಬಿಣದ ಕಂಬವನ್ನು ನೋಡಿದ ತಕ್ಷಣ ತುರ್ತು ಬ್ರೇಕ್ ಹಾಕುವ ಮೂಲಕ ರೈಲನ್ನು ನಿಲ್ಲಿಸಿದರು. ಆದರೆ ಎಷ್ಟು ಕಾಲ? ಎಲ್ಲಿಯವರೆಗೆ, ಎಲ್ಲಿ ಮತ್ತು ಹೇಗೆ ನಾವು ಉಳಿಸಲ್ಪಡುತ್ತೇವೆ ಏಕೆಂದರೆ ಅವರು ನಮ್ಮನ್ನು ಎಲ್ಲಾ ಕಡೆಯಿಂದ ಸುತ್ತುವರೆದಿದ್ದಾರೆ!" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ಇದೇ ಫೋಟೋವಿಗೆ ಶಶಿ ಶೇಖರ್ ಎಂಬಾತ "ಬಿಲಾಸ್‌ಪುರ ಡೆಹ್ರಾಡೂನ್ ಎಕ್ಸ್‌ಪ್ರೆಸ್‌ನಲ್ಲಿ ಹಾದು ಹೋಗುತ್ತಿದ್ದ ರೈಲ್ವೆ ಹಳಿಯ ಮೇಲೆ 7 ಮೀಟರ್ ಉದ್ದದ ಕಬ್ಬಿಣದ ಕಂಬವನ್ನು ಇಟ್ಟಿರುವುದನ್ನು ನೋಡಿದ ಲೋಕೋ ಪೈಲಟ್ ತುರ್ತು ಬ್ರೇಕ್ ಹಾಕಿದ್ದರಿಂದ ಭಾರೀ ಅನಾಹುತ ಆಗುವುದನ್ನು ತಡೆದಿದ್ದಾರೆ.ಈ ರೈಲಿನಲ್ಲಿ ನಿಮ್ಮ ಮಗ, ಮಗಳು, ಪತ್ನಿ, ಪತಿ, ಸಹೋದರ ರೈಲಿನಲ್ಲಿ ಪ್ರಯಾಣಿಸುತ್ತಿರಬಹುದು # ಜಿಹಾದಿಗಳು ನಿಮ್ಮ ಕುಟುಂಬವನ್ನು ಅಪಾಯಕ್ಕೆ ಸಿಲುಕಿಸುತ್ತಿದ್ದಾರೆ. ಅವರನ್ನು ಸಂಪೂರ್ಣವಾಗಿ ಬಹಿಷ್ಕರಿಸಿ" ಎಂಬ ಕ್ಯಾಪ್ಷನ್‌ನನ್ನು ನೀಡಿ ಪೋಸ್ಟ್ ಮಾಡಲಾಗಿದೆ.
ಸೆಪ್ಟಂಬರ್ 20, 2024ರಂದು ಶ್ರೇಯ ಎಂಬ ಎಕ್ಸ್ ಖಾತೆದಾರರೂ ಸಹ ರೈಲಿನ ಹಳಿಯ ಮೇಲೆ ಕಂಬಿಯ ಫೋಟೋವನ್ನು ಹಂಚಿಕೊಂಡು :ಉತ್ತರ ಪ್ರದೇಶದ ರಾಂಪುರದಲ್ಲಿ ರೈಲ್ವೇ ಪಲ್ಟಿ ಮಾಡಬೇಕು ಅಂತ ಜೀಹಾದಿಗಳು ರೈಲ್ವೆ ಹಳಿ ಮೇಲೆ ಸುಮಾರು 8 ರಿಂದ 9 ಮೀಟರ್ ಉದ್ದದ ಕಬ್ಬಿಣದ ಕಂಬವನ್ನು ಇಟ್ಟಿದ್ದಾರೆ.ಆದರೆ,ಡೆಹ್ರಾಡೂನ್ ಎಕ್ಸ್‌ಪ್ರೆಸ್ ರೈಲಿನ ಲೋಕೋ ಪೈಲಟ್‌ನ ಜಾಣತನದಿಂದ ಅನಾಹುತ ತಪ್ಪಿದೆ.ಕಬ್ಬಿಣದ ಕಂಬವನ್ನು ನೋಡಿದ ತಕ್ಷಣ ತುರ್ತು ಬ್ರೇಕ್ ಹಾಕುವ ಮೂಲಕ ರೈಲನ್ನು ನಿಲ್ಲಿಸಿದರು" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನೋಡಬಹುದು.
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಇದರಲ್ಲಿ ಯಾವುದೇ ಕೋಮು ಕೋನವಿಲ್ಲ. ಕಬ್ಬಿಣದ ಕಂಬಗಳನ್ನು ಕಳ್ಳತನ ಮಾಡುತ್ತಿದ್ದ ಸಂದೀಪ್ ಮತ್ತು ವಿಜೇಂದ್ರ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ನಾವು ವೈರಲ್ ಆದ ಸುದ್ದಿಯಲ್ಲಿನ ಸತ್ಯಾಂಶವನ್ನು ತಿಳಿಯಲು ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್ ಆದ ಸುದ್ದಿಗೆ ಸಂಬಂಧಿಸಿದ ಸಾಕಷ್ಟು ವರದಿಗಳು ಕಂಡುಬಂದವು.
ನಾವು ಎಬಿಪಿ ನ್ಯೂಸ್ ವೆಬ್‌ಸೈಟ್‌ನಲ್ಲಿ ವರದಿಯೊಂದನ್ನು ಕಂಡುಕೊಂಡೆವು. ವರದಿಯಲ್ಲಿ "ಸೆಪ್ಟೆಂಬರ್ 18 ರಂದು ಬಿಲಾಸ್‌ಪುರ ರಸ್ತೆ ಮತ್ತು ರುದ್ರಾಪುರ ಸಿಟಿ ರೈಲು ನಿಲ್ದಾಣಗಳ ನಡುವಿನ ಹಳಿಯಲ್ಲಿ ಆರು ಮೀಟರ್ ಉದ್ದದ ಕಬ್ಬಿಣದ ಕಂಬವನ್ನು ಇಟ್ಟು ನೈನಿ ಜನ ಶತಾಬಿ ಎಕ್ಸ್‌ಪ್ರೆಸ್ ಹಳಿ ತಪ್ಪಿದ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ರಾಂಪುರದ ಜಿಆರ್‌ಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಗೆ ತಂಡವನ್ನು ರಚಿಸಲಾಗಿದೆ. ಇಂದು ರಾಂಪುರ ಜಿಲ್ಲೆಯ ನಿವಾಸಿಗಳಾದ ಸನ್ನಿ ಅಲಿಯಾಸ್ ಸಾನಿಯಾ ಅಲಿಯಾಸ್ ಸಂದೀಪ್ ಚೌಹಾಣ್ ಮತ್ತು ಬಿಜೇಂದರ್ ಅಲಿಯಾಸ್ ಟಿಂಕು ಅವರನ್ನು ಬಂಧಿಸಲಾಗಿದೆ. ಕುಡಿದ ಮತ್ತಿನಲ್ಲಿದ್ದ ಆರೋಪಿಗಳು ಅಲ್ಲೇ ಇದ್ದ ಕಂಬವನ್ನು ಕದಿಯಲು ಯತ್ನಿಸಿದ್ದಾಗ, ರೈಲಿನ ಲೈಟ್ ಮತ್ತು ಹಾರ್ನ್ ಕೇಳಿ ಭಯಭೀತರಾಗಿ ಕಂಬವನ್ನು ಹಳಿಯ ಮೇಲೆ ಇಟ್ಟು ಓಡಿಹೋಗಿದ್ದರು ಎಂದು ಪೊಲೀಸರ ವಿಚಾರಣೆಯಲ್ಲಿ ಆರೋಪಿಗಳು ಹೇಳಿದ್ದಾರೆಂದು ವರದಿಯಾಗಿದೆ.
ಸೆಪ್ಟಂಬರ್ 23, 2024ರಂದು ಸಿಈಎನ್ ನ್ಯೂಸ್ ಯೂಟ್ಯೂಬ್ ಚಾನೆಲ್‌ನಲ್ಲಿ "रामपुर में रेल पटरी पर खंभा रखने वाले सन्नी उर्फ संदीप चौहान और विजेंद्र उर्फ टिंकू पकड़े गए।" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ನೋಡಬಹುದು.
ಈಟಿವಿ ಭಾರತ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ವರದಿಯ ಪ್ರಕಾರ "ಮೊರಾದಾಬಾದ್ ವಿಭಾಗದ ಪೊಲೀಸ್ ಅಧಿಕಾರಿ ಅನಿಲ್ ಕುಮಾರ್ ವರ್ಮಾ ನೀಡಿದ್ದ ಮಾಹಿತಿಯನ್ನು ಉಲ್ಲೀಖಿಸಿದ್ದರು. ಉಲ್ಲೇಖಿಸಿದ್ದ ಮಾಹಿತಿಯ ಪ್ರಕಾರ ಮಧ್ಯಪಾನವನ್ನು ಕುಡಿದಿದ್ದ ಸಂದೀಪ್ ಮತ್ತು ವಿಜೇಂದ್ರ ಎಂಬವರು ಹಣಕ್ಕಾಗಿ ಕಂಬವನ್ನು ಕಳ್ಳತನ ಮಾಡಿ ತರುತ್ತಿದ್ದಾಗ, ಅಲ್ಲಿ ರೈಲು ಬರುವುದನ್ನು ಕಂಡು ಕಂಬವನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದಾರೆ" ಎಂದು ವರದಿ ಮಾಡಿದ್ದಾರೆ.
ನಾವು ರಾಂಪುರದ ಪೊಲೀಸರು ಹೊರಡಿಸಿರುವ ಪ್ರೆಸ್ ನೋಟ್‌ನ್ನು ನಾವು ನೋಡಬಹುದು
ಹೀಗಾಗಿ ವೈರೆಲ್ ಆದ ಸುದ್ದಿ ಓದುಗರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ ಎಂಬುವುದು ಸಾಭೀತಾಗಿದೆ. ವೈರಲ್ ಆದ ಸುದ್ದಿಯಲ್ಲಿ ಹೇಳಿರುವ ಹಾಗೆ ಆರೋಪಿಗಳಿಬ್ಬರು ಜಿಹಾದಿಗಳಲ್ಲ, ಹಿಂದೂಗಳು ಎಂಬುವುದು ಅವರ ಹೆಸರುಗಳಿಂದ ಸ್ಪಷ್ಟವಾಗುತ್ತದೆ. ಅಷ್ಟೇ ಅಲ್ಲ ರೈಲನ್ನು ಆಕ್ಸಿಡೆಂಟ್ ಮಾಡುವ ಉದ್ದೇಶದಿಂದ ಆರೋಪಿಗಳು ರೈಲ್ವೆ ಹಳಿಯ ಮೇಲೆ ಕಬ್ಬಿಣದ ಕಂಬವನ್ನು ಇಡಲಿಲ್ಲ.